ದೇವರು ಉಳಿಸುತ್ತಾನೆ!
ನದಿ ಕಿನಾರೆಯಲ್ಲಿ ಸುಂದರ ಹಳ್ಳಿಯೊಂದಿತ್ತು. ಅಲ್ಲಿನ ಜನರೆಲ್ಲರೂ ಶಾಂತಿ-ಬಾಂಧವ್ಯತೆಯಿಂದ, ಅನ್ಯೋನ್ಯತೆಯಿಂದ್ದಿರು. ಆ ಹಳ್ಳಿಯ ಮಧ್ಯದಲ್ಲೊಂದ ದೇವಸ್ಥಾನವಿತ್ತು. ಊರಿನ ಜನರೆಲ್ಲಾ ಪ್ರತಿನಿತ್ಯ ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆ ದೇವಸ್ಥಾನದಲ್ಲಿ ಒಬ್ಬ ಅರ್ಚಕನಿದ್ದ. ಆತ ಪೂಜೆ-ಪುನಸ್ಕಾರ ಮಾಡಿಕೊಂಡು ಅಲ್ಲೇ ವಾಸವಾಗಿದ್ದ. ಅವನನ್ನೂ ಅಲ್ಲಿನ ಜನರು ಬಹಳ ಭಕ್ತಿಪೂರ್ವಕವಾಗಿ ನೋಡಿಕೊಳ್ಳುತ್ತಿದ್ದರು.
ಇಂತಹ ಹಳ್ಳಿಯಲ್ಲಿ ಒಂದು ವರ್ಷ ಧಾರಾಕಾರ ಮಳೆ ಸುರಿಯಿತು. ಆ ಊರಿನ ಜೀವನದಿ ಉಕ್ಕಿ ಹರಿದು ಪ್ರವಾಹ ಉಂಟಾಯಿತು. ಇಡೀ ಗ್ರಾಮ ನೀರಿನಿಂದ ತುಂಬಿಹೋಯಿತು. ಪ್ರವಾಹದಿಂದ ಪಾರಾಗಲು ಜನರೆಲ್ಲ ಗಂಟು ಮೂಟೆ ಕಟ್ಟಿ ಬೇರೆ ಹಳ್ಳಿಯ ಕಡೆ ಹೊರಡಲು ಪ್ರಾರಂಭಿಸಿದರು.
ಅವರಲ್ಲೊಬ್ಬ ದೇವಸ್ಥಾನದ ಕಡೆಗೆ ಓಡಿ ಬಂದು ಅರ್ಚಕನನ್ನು ತಮ್ಮೊಂದಿಗೆ ಬರಲು ಬೇಡಿಕೊಂಡ. ಗ್ರಾಮಕ್ಕೆ ಪ್ರವಾಹದ ನೀರು ಬರುತ್ತಿದೆ, ಮನೆಯ ಮೇಲ್ಛಾವಣಿಯವರೆಗೂ ನೀರು ಇದೆ, ಪರಿಸ್ಥಿತಿ ಅಪಾಯಕಾರಿಯಾಗಿದೆ. ನಾವೆಲ್ಲರೂ ಊರು ಬಿಡುತ್ತಿದ್ದೇವೆ, ನೀವೂ ನಮ್ಮೊಂದಿಗೆ ಬನ್ನಿ.... ಎಂದು ಆತ ಅರ್ಚಕರನ್ನು ಭಿನ್ನವಿಸಿಕೊಂಡ. ಆದರೆ ಅರ್ಚಕ ಶಾಂತವಾಗಿ ನನ್ನ ಬಗ್ಗೆ ಚಿಂತಿಸಬೇಡ, ನಾನು ನಿತ್ಯ ಸೇವೆ ಮಾಡುವ ನನ್ನ ದೇವರು ನನ್ನನ್ನು ರಕ್ಷಿಸುತ್ತಾನೆ. ನೀನು ಹೋಗು..." ಎಂದು ಹೇಳಿ ಆತನನ್ನು ಕಳುಹಿಸಿಕೊಟ್ಟ.
ಸ್ವಲ್ಪ ಸಮಯದ ನಂತರ ನೀರು ಸೊಂಟದವರೆಗೂ ತಲುಪಿತು. ಅರ್ಚಕ ಇನ್ನೂ ದೇವರ ಪೂಜೆಯಲ್ಲಿ ಮಗ್ನವಾಗಿದ್ದ. ಅಷ್ಟರಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಕುದುರೆ ಗಾಡಿ ಬಂದು ನಿಂತಿತು. ಅದರಲ್ಲಿದ್ದ ಜನರು ಅರ್ಚಕರನ್ನು ತಮ್ಮೊಂದಿಗೆ ಬರಲು ಬಿನ್ನವಿಸಿಕೊಂಡರು. ಆದರೆ ಪೂಜಾರಿ "ದೇವರು ನನ್ನನ್ನು ರಕ್ಷಿಸುತ್ತಾನೆ! ನೀವು ಹೋಗಿ" ಎಂದು ದೃಢಸಂಕಲ್ಪ ಮಾಡಿ ದೇವಸ್ಥಾನದಲ್ಲಿಯೇ ಉಳಿದುಕೊಂಡು.
ಸ್ವಲ್ಪ ಸಮಯದ ನಂತರ ನೀರು ಕುತ್ತಿಗೆಯವರೆಗೂ ತಲುಪಿತು. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ದೇವಸ್ಥಾನದ ಕಡೆ ಬಂದು "ನೀವಿನ್ನೂ ಇಲ್ಲೇ ಇದ್ದೀರಾ! ಇಲ್ಲಿ ಇರುವುದು ತುಂಬಾ ಅಪಾಯಕಾರಿ, ನೀರು ತುಂಬಾ ವೇಗವಾಗಿ ಬರುತ್ತಿದೆ, ನೀವು ನಮ್ಮೊಂದಿಗೆ ಬನ್ನಿ! ಎಂದು ತಮ್ಮೊಂದಿಗೆ ಬರುವಂತೆ ಅರ್ಚಕನಲ್ಲಿ ಬೇಡಿಕೊಂಡರೂ, ಅರ್ಚಕ ಅವರಿಗೂ "ನೀವು ಹೋಗಿ, ದೇವರು ನನ್ನನ್ನು ರಕ್ಷಿಸುತ್ತಾನೆ" ಎಂದು ಹೇಳಿದರು.
ಚಳಿಯಿಂದ ನಡುಗುತ್ತಿದ್ದ ಪೂಜಾರಿ ಮೂಗಿಗೆ ನೀರು ಬಂದಾಗ ಇನ್ನಷ್ಟು ಗಾಬರಿಯಾದರು. ಅಷ್ಟರಲ್ಲಾಗಲೇ ಇಡೀ ದೇವಸ್ಥಾನ ನೀರಿನಿಂದ ತುಂಬಿತ್ತು. ಅರ್ಚಕರು ದೇವರ ಧ್ಯಾನ ಮಾಡುತ್ತಾ ದೇವಸ್ಥಾನದ ಗೋಪುರದ ಮೇಲೆ ಕುಳಿತರು. ಸ್ವಲ್ಪ ಹೊತ್ತಿನ ನಂತರ ಕತ್ತಲು ಆವರಿಸತೊಡಗಿತು. ಮಳೆ ನಿಲ್ಲಲೇ ಇಲ್ಲ, ಚಳಿ, ನೀರಿನ ಹರಿವು ಎಲ್ಲೂ ನಿಲ್ಲುವಂತೆ ಕಾಣುತ್ತಿಲ್ಲ.
ದೇವರೇ! ನಾನು ನಿನಗೆ ಏನು ಕಡಿಮೆ ಮಾಡಿದೆ, ಹಗಲು-ರಾತ್ರಿ ಶ್ರದ್ಧೆಯಿಂದ ನಿನ್ನ ಸೇವೆ ಮಾಡಿದ್ದೆ. ನಾನು ನಿನ್ನನ್ನೇ ನಂಬಿದ್ದೆ! ಆದರೆ ನನ್ನನ್ನು ಉಳಿಸಲು ಏಕೆ ಬರುವುದಿಲ್ಲ... ಎಂದು ಬೇಡಿಕೊಂಡ ಮಾತ್ರವಲ್ಲ ತನ್ನ ಈ ಸ್ಥಿತಿಗೆ ದೇವರೇ ಕಾರಣ ಎಂದು ದೇವರನ್ನು ದೂರಲು ಪ್ರಾರಂಭಿಸಿದ.
ತಕ್ಷಣ ಪ್ರತ್ಯಕ್ಷರಾದ ದೇವರು, "ನೀನು ಮೂರ್ಖ! ನಾನು ನಿನಗಾಗಿ ಪ್ರಥಮವಾಗಿ ಒಬ್ಬನನ್ನು ಕಳುಹಿಸಿದ್ದೆ, ನಂತರ ಕುದುರೆಗಾಡಿಯನ್ನು ಕಳುಹಿಸಿದ್ದೆ, ದೋಣಿಯನ್ನೂ ಕಳುಹಿಸಿದ್ದೆ.... ಆದರೆ ನೀನು ಎಲ್ಲರನ್ನೂ ನಿರ್ಲಕ್ಷಿಸಿದ್ದೆ. ನಿನ್ನ ಸಹಾಯಕ್ಕಾಗಿ ಬಂದವರನ್ನು ನಿರ್ಲಕ್ಷಿಸಿ ಈಗ ನನ್ನನ್ನು ದೂರೋದು ಸರೀನಾ.... ಇದು ನನ್ನ ತಪ್ಪಾ... ಎಂದಾಗ, ಅರ್ಚಕನಿಗೆ ತನ್ನ ತಪ್ಪಿನ ಅರಿವಾಗಿ, ದೇವರಲ್ಲಿ ಕ್ಷಮೆಯಾಚಿಸಿದ.
ಇದಾಗಿ ಸ್ವಲ್ಪ ಸಮಯದ ನಂತರ ಕೆಲವು ಜನರು ಮತ್ತೊಂದು ದೋಣಿಯಲ್ಲಿ ಕಾಣಿಸಿಕೊಂಡರು. "ಅರ್ಚಕರೇ...! ನೀವು ಇನ್ನೂ ಇಲ್ಲೇ ಇರುತ್ತೀರಾ ಎಂದು ನಮಗೆ ತಿಳಿದಿದೆ, ನಮ್ಮೊಂದಿಗೆ ಬನ್ನಿ, ಇಲ್ಲಿ ಇರುವುದು ಒಳ್ಳೆಯದಲ್ಲ! ಎಂದು ಅರ್ಚಕನನ್ನು ಒತ್ತಾಯ ಮಾಡಿದರು. ಅರ್ಚಕ ಮರುಮಾತನಾಡದೆ ದೋಣಿ ಹತ್ತಿ ಪ್ರಾಣ ಉಳಿಸಿಕೊಂಡ.
ತೆಲುಗು ಮೂಲ: ಅನಾಮಿಕ, ಕನ್ನಡ ಸಂಗ್ರಹ : ಮನು ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ