ದೇವರು ಎಲ್ಲಿದ್ದಾನೆ?
ಭಜನ ಪೂಜನ ಸಾಧನ ಆರಾಧನಾ :
ಬಿಡು ಇದನ್ನೆಲ್ಲ, ಏಳು
ರುದ್ಧದ್ವಾರದ ದೇವಾಲಯದ
ಕೋಣೆಯಲ್ಲಿ ಏಕೆ ಕುಳಿತಿರುವೆ?
ನೀನಾಗಿ ಕತ್ತಲೆಯನ್ನು ಮಾಡಿಕೊಂಡು
ಯಾರನ್ನು ನೀನು ಹೀಗೆ ಗೌಪ್ಯವಾಗಿ ಪೂಜಿಸುತ್ತಿರುವುದು?
ಕಣ್ಣು ತೆರೆದು ನೋಡು, ದೇಗುಲದ ಒಳಗಡೆ
ನಿನ್ನ ಎದುರಿನಲ್ಲಿ ದೇವರಿಲ್ಲ.
ಎಲ್ಲಿ ಕೃಷಿಕನು ಮಣ್ಣು ಅಗೆದು ಕೃಷಿ ಮಾಡುತ್ತಿದ್ದಾನೋ
ಅಲ್ಲಿಗೆ ಅವನು ಹೋಗಿದ್ದಾನೆ ;
ವರ್ಷವೆಲ್ಲಾ ಕಲ್ಲನ್ನು ಒಡೆಯುತ್ತಾ ದಾರಿಯನ್ನು
ಕಡೆಯುತ್ತಾ ಇರುವಲ್ಲಿಗೆ ಅವನು ಹೋಗಿದ್ದಾನೆ.
ಬಿಸಿಲು ಮಳೆಯಲ್ಲಿ ಎಲ್ಲರ ಜೊತೆ ಇದ್ದಾನೆ,
ಎರಡೂ ಕೈಗಳನ್ನು ಧೂಳು ಮಾಡಿಕೊಂಡಿದ್ದಾನೆ ;
ಶುಚಿಯಾದ ನಿನ್ನ ವಸ್ತ್ರಗಳನ್ನು ಕಿತ್ತೊಗೆ ;
ಅವನಂತೆ ಧೂಳಿಗೆ ಬಾ.
ಮುಕ್ತಿ ಎಲ್ಲಾ ಎಲ್ಲಿ ಕಂಡೆ?
ಎಲ್ಲಿದೆ ಮುಕ್ತಿ?
ಎಲ್ಲಿದೆ ಮುಕ್ತಿ?
ಜಗತ್ತನ್ನು ಸೃಷ್ಟಿಸಿದ ಪ್ರಭು ಎಲ್ಲರೊಳಗಿರುವಾಗ.
ಸಾಕು ಮಾಡು ನಿನ್ನ ಧ್ಯಾನವನು, ಎಸೆ ಹೂವಿನ ಬುಟ್ಟಿಯನು ;
ಧೂಳಿನಿಂದ ಮಲಿನವಾದ ಚಿಂದಿಯನ್ನು ಧರಿಸು ;
ಕರ್ಮಯೋಗದಲ್ಲಿ ಬೆವರನ್ನು ಹೊಮ್ಮಿಸು ;
ಪ್ರಭುವಿನ ಜೊತೆ ನೇರವಾಗಿ ನಿಲ್ಲು.
~ ರವೀಂದ್ರನಾಥ ಟಾಗೋರ್.
( ಸೌಜನ್ಯ : ನೊಬೆಲ್ ಪುರಸ್ಕೃತ ಕವನ ಸಂಕಲನ ‘ಗೀತಾಂಜಲಿ’ )