ದೇವರು ನಕ್ಕುಬಿಟ್ಟ

ದೇವರು ನಕ್ಕುಬಿಟ್ಟ

ಬರಹ

ಇದು ಓಷೋ ಹೇಳಿದ ಕಥೆ.

ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ ಬರಬಹುದಿತ್ತು. ಆದರೆ ನಾನು ನಿಮಗೆ ಹೇಳಲು ಮರೆತಿದ್ದೆ. ಅದು ಸಿರಿವಂತರ ಗುಡಿಯಾಗಿತ್ತು. ಬಡವರಿಗೆ ಅಲ್ಲಿ ಪ್ರವೇಶ ನಿಷಿದ್ಧವಿತ್ತು. ನಮ್ಮ ದೇಶದ ಗುಡಿಗಳ ಜಾಯಮಾನವೇ ಹಾಗೆ. ಗುಡಿಗಳ ನಿರ್ಮಾಣಕ್ಕೆ ಹಣ ಒದಗಿಸುವವರು ಸಿರಿವಂತರು. ದುಡಿಮೆ ಬಡವರದು. ಭಕ್ತಿಭಾವದಿಂದ ತನ್ಮಯತೆಯಿಂದ ಬಡವರು ಗುಡಿಕಟ್ಟಿ ಅದರ ಅಂದ ಹೆಚ್ಚಿಸುತ್ತಾರೆ. ಗುಡಿ ಪೂರ್ಣಗೊಂಡ ನಂತರ ಸಿರಿವಂತರು ಅದರಲ್ಲಿ ತುಂಬಿ ಬಡವರಿಗೆ ಪ್ರವೇಶ ನಿರಾಕರಿಸುತ್ತಾರೆ.

ಬಡವರು ತಮ್ಮದೇ ಆದ ಗುಡಿ ಕಟ್ಟಿಕೊಳ್ಳಲಿ ಎಂದು ನೀವು ವಾದಿಸಬಹುದು. ಆದರೆ ಕೇಳಿ, ಅವರು ತಮ್ಮ ಜೀವನ ನಡೆಸುವುದೇ ಕಷ್ಟವಿರುವಾಗ ಗುಡಿಯನ್ನೆಂತು ಕಟ್ಟಬಲ್ಲರು? ಅವರಿಗೆ ಹೊಟ್ಟೆಯೇ ದೇವರು, ಸಿರಿವಂತರು ಮಾತ್ರ ಅನೇಕ ಗುಡಿಗಳನ್ನು ಕಟ್ಟಬಲ್ಲರು. ಅದರಲ್ಲೂ ಅತಿ ದೊಡ್ಡ ಅತಿ ಎತ್ತರದ ಅತಿ ವಿಸ್ತಾರದ ಗುಡಿಗಳು. ಅವರಿಗೆ ದೇವರಿಗಿಂತಲೂ ದೇವಾಲಯದ ಗಾತ್ರ ಮುಖ್ಯ. ಅವರ ಹಣದ ತೂಕದಷ್ಟೇ ಗುಡಿಯ ಗಾತ್ರವು ಇರುತ್ತದೆ. ಇನ್ನೊಂದು ವಿಷಯ ಗಮನಿಸಿದ್ದೀರಾ? ಇಂದು ದೇವರು ಸಹ ಮಾರುಕಟ್ಟೆಯಲ್ಲಿ ಕೊಳ್ಳುವ ವಸ್ತುವಾಗಿದ್ದಾನೆ. ಸಿರಿವಂತರ ದೇವರು ದೊಡ್ಡದಾಗಿದ್ದರೆ ಬಡವರ ದೇವರು ಚಿಕ್ಕದಾಗಿರುತ್ತಾನೆ.
ಇರಲಿ ಇನ್ನು ನಮ್ಮ ಬಡವನ ವಿಷಯಕ್ಕೆ ಬರೋಣ. ಆತ ಬಹುಶಃ ರಾತ್ರಿ ಹೊತ್ತಿನಲ್ಲಿ ಯಾರೂ ಇಲ್ಲದಿದ್ದಾಗ ಪೂಜಾರಿ ದಯೆತೋರಿ ಗುಡಿಯ ಬಾಗಿಲು ತೆರೆಯಬಹುದೆಂದು ಭಾವಿಸಿದ್ದ. ತನ್ನ ವಿನಂತಿಯನ್ನು ಕೇಳಿ ಅಥವಾ ತನ್ನ ದಯಾರ್ದ್ರ ಗೋಳಿಗೆ ಪೂಜಾರಿಯ ಮನ ಕರಗಬಹುದೆಂದು ಅವ ಭಾವಿಸಿದ್ದ. ಗುಡಿಯೊಳಗಿನ ದೇವರು ಕಲ್ಲಾಗಿದ್ದ ನಿಜ, ಆದರೆ ಅದಕ್ಕಿಂತ ಕಠಿಣತಮ ಮನಸ್ಸು ಪೂಜಾರಿಯದಾಗಿತ್ತು. ಆ ಪೂಜಾರಿ ಕತ್ತಲೆಯಲ್ಲೂ ಮನುಷ್ಯರ ಚರ್ಮದ ಬಣ್ಣವನ್ನು ತಿಳಿಯಬಲ್ಲ ಚಾಣಾಕ್ಷನೂ ಆಗಿದ್ದ. ಬಂದಿದ್ದವನು ಬಡವನೆಂದು ಅವನಿಗೆ ತಿಳಿದುಹೋಯಿತು. ಬಡವ ನಿಧಾನವಾಗಿ ವಿನಂತಿ ಮಾಡಿದ 'ಸ್ವಾಮಿ ಗುಡಿಯ ಬಾಗಿಲು ತೆರೆಯಿರಿ, ನಾನು ದೇವರನ್ನು ನೋಡಲು ಬಂದಿದ್ದೇನೆ.'
ಹಿಂದಿನ ಕಾಲವಾಗಿದ್ದರೆ ಆ ಪೂಜಾರಿ 'ಎಲೈ ದುಷ್ಟನೇ! ತೊಲಗಿಲ್ಲಿಂದ, ಈ ಗುಡಿ ಪರಮಪಾವನಾತ್ಮನದು, ನಿನ್ನ ಅಪವಿತ್ರ ಗಾಳಿ ಇಲ್ಲಿ ಸುಳಿಯಬಾರದು, ನಡಿಯಾಚೆ' ಎನ್ನುತ್ತಿದ್ದನೇನೋ? ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗೆ ಹೊರಗಟ್ಟುವುದು ನಾಗರೀಕ ಲಕ್ಷಣವಲ್ಲ. ಆತ ಸುರಕ್ಷಿತ ಮಾರ್ಗ ಅನುಸರಿಸಿದ. ನಾನು ಮೊದಲೇ ಹೇಳಿದಂತೆ ಪೂಜಾರಿ ಪುರೋಹಿತರೆಲ್ಲರೂ ಬಲು ಚಾಣಾಕ್ಷ ಮಂದಿ, ಮಿಕ್ಕವರು ಅಕ್ಕಿ ಬೇಳೆ ಮಾರಿದರೆ ಇವರು ದೇವರನ್ನೇ ಮಾರುವವರು.
ಆ ಕಿಲಾಡಿ ಪೂಜಾರಿ ಹೇಳಿದ 'ಸೋದರನೇ, ಗುಡಿಯೊಳಕ್ಕೆ ನೀನು ಬರುವುದರಿಂದ ಆಗುವ ಪ್ರಯೋಜನವಾದರೂ ಏನು? ಎಲ್ಲಿಯ ತನಕ ನಿನ್ನ ಮನಸ್ಸು ಶುದ್ಧವಾಗುವುದಿಲ್ಲವೋ, ಎಲ್ಲಿಯ ತನಕ ನಿನ್ನ ಮನಸ್ಸು ಶಾಂತವಾಗುವುದಿಲ್ಲವೋ ಅಲ್ಲಿಯ ತನಕ ಮಂದಿರದೊಳಗೆ ಪ್ರವೇಶಿಸಿ ಏನೂ ಲಾಭವಿಲ್ಲ, ದೇವರ ದರ್ಶನವೂ ಆಗುವುದಿಲ್ಲ.'
ತನ್ನ ಮನಸ್ಸು ಶಾಂತವಾಗಿಲ್ಲ ಎಂಬುದು ಆಗ ಬಡವನಿಗೆ ಅರಿವಾಯಿತು. ತನ್ನ ಮನದ ತಳಮಳ, ದುಃಖ ದುಗುಡ ಆತಂಕ ಅತಂತ್ರಸ್ಥಿತಿಗೆ ಪರಿಹಾರ ಅದನ್ನು ಶಾಂತವಾಗಿಸುವುದು ಎಂಬ ಸತ್ಯವನ್ನು ಕೇವಲ ಒಂದೇ ಮಾತಿನಲ್ಲಿ ಪೂಜಾರಿ ತಿಳಿಸಿಕೊಟ್ಟದ್ದು, ಅವನಿಗೆ ಪೂಜಾರಿಯ ಬಗ್ಗೆ ಅಪಾರ ಗೌರವ ತಳೆಯುವಂತೆ ಮಾಡಿತು. ಮನಸ್ಸನ್ನು ಶಾಂತವಾಗಿಸಿಕೊಂಡು ಮರಳಿ ಬರುವೆ ಎಂದುಕೊಂಡ. ಆದರೆ ಪೂಜಾರಿಯ ಮುಖದಲ್ಲಿ ಕಿರುನಗೆ ಸುಳಿದುಹೋದದ್ದು ಅವನಿಗೆ ಗೊತ್ತಾಗಲೇ ಇಲ್ಲ.
ಮೂರು ತಿಂಗಳಾಯಿತು, ಆರು ತಿಂಗಳಾಯಿತು, ಬಡವ ಮರಳಿ ಬರಲಿಲ್ಲ. ಒಂದು ದಿನ ಪೂಜಾರಿ ಅವನನ್ನು ರಸ್ತೆಯಲ್ಲಿ ಕಂಡ. ಆ ಬಡವನ ಮುಖದಲ್ಲಿ ಅನಿರ್ವಚನೀಯ ತೇಜಸ್ಸಿತ್ತು. ಅವನ ಕಣ್ಣುಗಳಲ್ಲಿ ಅನುಪಮ ಕಾಂತಿಯಿತ್ತು. ಆತ ಮತ್ಯಾರೋ ಹೊಸ ವ್ಯಕ್ತಿಯಾದಂತೆ ತೊರುತ್ತಿತ್ತು. ಪುಜಾರಿ ಅವನನ್ನು ತಡೆದು ಕೇಳಿದ 'ಗೆಳೆಯನೇ, ನೀನು ಮತ್ತೆ ಬರಲೇ ಇಲ್ಲವಲ್ಲ?'
ಬಡವ ಉತ್ತರಿಸಿದ 'ಸ್ವಾಮೀ, ನಾ ಹೇಗೆ ತಾನೇ ಬರಲಿ, ಮನಸ್ಸನ್ನು ಶಾಂತಗೊಳಿಸುವ ಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನನಗೆ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿಗಳಲ್ಲಿ ಕಣ್ಣೀರಿಡುತ್ತಾ ದೇವಪ್ರಾರ್ಥನೆಯಲ್ಲಿ ಕಳೆಯುತ್ತಿದ್ದೆ. ಒಂದು ರಾತ್ರಿ ಕನಸಿನಲ್ಲಿ ದೇವರು ಬಂದು 'ಏಕೆ ಅಳುತ್ತಿರುವೆ?' ಎಂದು ಕೇಳಿದ. ಅದಕ್ಕೆ ನಾನು 'ದೇವರೇ, ಆ ಗುಡಿಯೊಳಕ್ಕೆ ನಾನು ಹೋಗಬೇಕು, ಅಲ್ಲಿ ನಿನ್ನನ್ನು ಕಾಣಬೇಕು' ಎಂದೆ. ಅದಕ್ಕೆ ದೇವರು ನಕ್ಕುಬಿಟ್ಟ. ನಗುತ್ತಾ ಆತ ಹೇಳಿದ 'ನಿಜಕ್ಕೂ ನೀನೊಬ್ಬ ಹುಚ್ಚ, ಆ ಗುಡಿಯೊಳಕ್ಕೆ ನೀನು ಹೋಗಲಾರೆ, ಸ್ವತಃ ನಾನೇ ಹತ್ತಾರು ವರ್ಷಗಳಿಂದ ಅದರೊಳಕ್ಕೆ ಹೋಗಲು ಪ್ರಯತ್ನಿಸಿ ಸೋತಿದ್ದೇನೆ. ನಾನೇ ಸೋತಿದ್ದೇನೆ ಎಂದ ಮೇಲೆ ನೀನು ಹೇಗೆ ತಾನೇ ಹೋಗಬಲ್ಲೆ, ನಾನು ಬೇಕಾದರೆ ನಿನ್ನ ಹೃದಯ ಮಂದಿರದಲ್ಲಿ ನಿಲ್ಲಬಹುದು, ಆದರೆ ಆ ಗುಡಿಯೊಳಗೆ ಹೋಗುವುದು ಬಲು ಕಷ್ಟ.'
ನಿಜ ಹೇಳಬೇಕೆಂದರೆ ಹತ್ತಾರು ವರ್ಷಗಳಿಂದ ಅಲ್ಲ, ನೂರಾರು ವರ್ಷಗಳಿಂದ ದೇವರಿಗೆ ಮಾನವರು ಕಟ್ಟಿದ ಗುಡಿಗಳೊಳಗೆ ಹೋಗಲಾಗಿಲ್ಲ, ಗುಡಿಗಳು ದಿವ್ಯ ಭವ್ಯ ವಿರಾಟ್ ಸ್ವರೂಪಿಯದಾಗಿದ್ದರೂ ದೇವರಿಗೆ ಅವು ಚಿಕ್ಕವು, ಆದರೆ ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ.