ದೇವರು - ಪೂಜೆ

ದೇವರು - ಪೂಜೆ

ಸಾಮಾನ್ಯವಾಗಿ ಹಳೆಯ ಸಂಪ್ರದಾಯಗಳೆಲ್ಲ ಸ್ವಚ್ಛತೆ ಆಧಾರದ ಮೇಲೆ ನಿಂತಿದೆ. ಹಾಗೆ ಸುಮ್ಮನೆ ಹೇಳಿದರೆ ಯಾರೂ ಅನುಸರಿಸುವುದಿಲ್ಲ. ಅದಕ್ಕೆ ದೇವರು ಹಾಗೆ ಹೀಗೆ ಎಂದು ಕಥೆ ಕಟ್ಟಿದ್ದಾರೆ ಅನಿಸುತ್ತದೆ.  ಸ್ವಚ್ಛತೆ  ಜನ ಅನುಸರಿಸಲಿ ಎಂದು.  ಮಡಿ ಮೈಲಿಗೆ ಆಚಾರ ವಿಚಾರ ಜಾತಿ ಪದ್ಧತಿ ಇವೆಲ್ಲ ಮನುಷ್ಯನೆ ಮಾಡಿದ್ದು ತಾನೆ. ದೇವರಲ್ಲವಲ್ಲ.?  ಹಾಗೆ ಇದು. ಇಲ್ಲಿ ನಂಬಿಕೆಯಿಂದ ಮಾಡಿದ ಕೆಲಸದಲ್ಲಿ  ಸ್ವಚ್ಛತೆಯಿದೆ ; ಇದರಿಂದ ಶಾಂತಿ ಸಿಗುತ್ತದೆ. ದೇವರು ಒಂದು ಕಲ್ಪನೆ. ಜಾತಿಗೆ ತಕ್ಕಂತೆ ಅವನ ಸ್ವರೂಪದ ವಿಮಷೆ೯.  ಆದರೆ ದೇವರು ಒಬ್ಬನೇ. ಅದೊಂದು ಶಕ್ತಿ.. ಅದು ಎಲ್ಲೂ ಇಲ್ಲ. ನಮ್ಮ ಮನಸ್ಸಿನ ಒಳ್ಳೆಯ ನಡೆ ನುಡಿ ನಮ್ಮ ನಿತ್ಯದ ಜೀವನ ಶೈಲಿ ನಮ್ಮ ಜೀವನದ ಕನ್ನಡಿ. ಮನಸ್ಸು ಬುದ್ಧಿ ಸರಿಯಾಗಿದ್ದರೆ ದೇವರೆನ್ನುವ ಶಕ್ತಿ ನಮ್ಮಲ್ಲೆ ಕಾಣಬಹುದು.ಆದುದರಿಂದ ಅನಾದಿ ಕಾಲದ ಆಚರಣೆ ಅನುಸರಿಸುತ್ತ ನಮ್ಮ ಮನೆ ಸುತ್ತ ಮುತ್ತಲಿನ ವಾತಾವರಣ ಸುಂದರವಾಗಿರಿಸುವುದರಲ್ಲಿ ತಪ್ಪಿಲ್ಲ.  
 
ಆದರೆ ಎಷ್ಟೋ ಮನೆಗಳಲ್ಲಿ ಮಡಿ ಮಾಡುತ್ತಾರೆ.  ಸ್ವಚ್ಛತೆ ಇರೋದಿಲ್ಲ..  ಆದರೂ ಅಲ್ಲಿ ದೇವರು ಇರುತ್ತಾನಾ? ನನಗೆ ಯಾವಾಗಲೂ ಕಾಡುವ ಪ್ರಶ್ನೆ.  ಇನ್ನೂ ಸೂರ್ಯ ಅಡಿಯಿಟ್ಟಿರೋದಿಲ್ಲ ಆಗಲೇ ಕೆಲವರ ಮನೆಯಲ್ಲಿ ಪೂಜೆಯ ಘಂಟಾನಾದ ಕೇಳಿಸುತ್ತದೆ. ಅಂದರೆ ಅಷ್ಟು ಬೇಗ ಮನೆ ಶುಚಿಗೊಳಿಸಿರುತ್ತಾರೊ?  ಎಷ್ಟೋ ಮನೆಗಳಲ್ಲಿ ಕೆಲಸದವರಿಂದಲೆ ಮನೆ ಕೆಲಸ ಆಗಬೇಕು. ಇದು ಈಗಿನ ಕಾಲದಲ್ಲಿ ಸ್ವಾಭಾವಿಕ ಕೂಡಾ.  ಹಾಗಾದರೆ ಪೂಜೆಗೂ ಮನೆ ಸ್ವಚ್ಛತೆಗೂ ಸಂಬಂಧ ಇಲ್ಲವೆ?
 
ಯಾರನ್ನೊ ಒಂದಿನ ಕುತೂಹಲಕ್ಕೆ ಕೇಳಿದೆ " ಎಷ್ಟು ಬೇಗ ನಿಮ್ಮನೆಯಲ್ಲಿ ಪೂಜೆ ಆಗೋಗುತ್ತೆ. ಬಹಳ ಬೇಗ ಕೆಲಸ ಎಲ್ಲ ಮುಗಿಸ್ತೀರಪ್ಪಾ" "ಹೌದು. ನಮ್ಮನೆ ಕೆಲಸವದವಳು ಬರುವ ಹೊತ್ತಿಗೆ ನಮ್ಮನೆಯಲ್ಲಿ ತಿಂಡಿ ಕೂಡಾ ಆಗೋಗಿರುತ್ತೆ. ಆಮೇಲೆ ಅವಳ ಪಾಡಿಗೆ ಒರೆಸಿ ಗುಡಸಿ ಮಾಡಿಕೊಂಡು ಹೋಗುತ್ತಾಳೆ."
 
ಮತ್ತೆ ಶಾಸ್ತ್ರದಲ್ಲಿ ಹೇಳುತ್ತಾರೆ ಪೂಜೆಗೆ ಮುನ್ನ ಮನೆಯೆಲ್ಲ ಶುಚಿಭೂ೯ತಗೊಳಿಸಿ ಮನೆ ಮುಂದೆ ನೀರಾಕಿ ರಂಗೋಲಿ ಇಟ್ಟು ಸ್ನಾನ ಸಂಧ್ಯಾವಂದನೆಗಳೊಂದಿಗೆ ಪೂಜೆ ಮಾಡ ಬೇಕು. ಪೂಜೆ ಆದ ಮೇಲೆ ಗುಡಿಸಬಾರದು ; ಸಾಯಂಕಾಲ ಗೋ ಧೂಳಿ ಮುಹೂತ೯ದಲ್ಲಿ  ಲಕ್ಷ್ಮಿ ಬರೊ ಹೊತ್ತಿಗೆ ಮುಂಚೆ ಮನೆ ಕಸ ಗುಡಿಸ ಬೇಕು. ಕಸ ಹೊರಗೆ ಹಾಕಬಾರದು.  ಇಷ್ಟೆಲ್ಲಾ ಶಾಸ್ತ್ರ ಇದ್ದರೂ ಮೊದಲು ಪೂಜೆ ಮಾಡಿ ಆಮೇಲೆ ಮನೆ ಶುಚಿಗೊಳಿಸೋದು ಎಷ್ಟು ಸರಿ?  ಹಾಗಾದರೆ ಢಂಬಾಚಾರದ ಮಾತೇಕೆ?
 
ಹಾಗೆ ಇನ್ನೊಬ್ಬರು ಪಾರಾಯಣ ಮಾಡುವ ಹೆಂಗಸು.  "ನಾನು ಬೆಳಗಿನ ಜಾವ ಬ್ರಾಹ್ಮೀ ಮುಹೂತ೯ದಲ್ಲಿ ಎದ್ದು ಪ್ರತಿನಿತ್ಯ ಪೂಜೆ ಮಾಡುತ್ತೇನೆ. ಬೆಳಗಿನ ಆರು ಗಂಟೆಯ ಒಳಗೆ ಪೂಜೆ ಮುಗಿಯುತ್ತದೆ. ಮೂರು ತಾಸು ಪೂಜೆ ಮಾಡುತ್ತೇನೆ.  ಆಮೇಲೆ ಬಿಸಿ ಬಿಸಿ ಕಾಫೀ ಕುಡಿದು ಮನೆ ಮುಂದೆ ನೀರಾಕಿ ರಂಗೋಲಿ ಹಾಕುತ್ತೇನೆ.  ಕೆಲಸದವಳು ಎಂಟಕ್ಕೆಲ್ಲ ಬರುತ್ತಾಳೆ. ಅವಳು ಮುಂದಿನ ಕೆಲಸ ಮಾಡುತ್ತಾಳೆ"  ನನಗೆ ಅನಿಸಿತು ಅಬ್ಬಾ! ಆಚಾರ ಅಂದರೆ ಹೀಗೂ ಮಾಡಬಹುದಾ?
 
ಬರೀ ಸ್ನಾನವೊಂದೆ ಸ್ವಚ್ಛತೆಯ ಸಾಲಿಗೆ ಸೇರಿತೆ.  ಇದರ ಹಿಂದೆ ಸ್ವಚ್ಛ ಮಾಡುವ ಕೆಲಸ ಎಷ್ಟಿರೋದಿಲ್ಲ. ಅವುಗಳನ್ನೆಲ್ಲ ಸ್ನಾನ ಪೂಜೆ ಆದ ಮೇಲೆ ಮಾಡುತ್ತಾರಾ? ಯಾವಾಗ ಮಾಡುತ್ತಾರೆ? ಹೇಗೆ ಕೆಲಸವನ್ನೆಲ್ಲ ನಿಭಾಯಿಸುತ್ತಾರೆ? ನಾನೂ ತಿಳಿದುಕೊಳ್ಳಬೇಕೆನ್ನುವ ಕುತೂಹಲ. 
 
ಅದು ಅತ್ಯಂತ ಸಂಪ್ರದಾಯಸ್ಥರ ಕುಟುಂಬ. ಒಮ್ಮೆ ಹಾಗೆ ಸುಮ್ಮನೆ ಹೋದಾಗ ಗಮನಿಸಿದೆ.  ಮನೆಯ ಪ್ರವೇಶದಲ್ಲಿಯೆ ಗೊತ್ತಾಯಿತು ಸ್ವಲ್ಪ ಮೂಗಿಗೆ ಅಡರಿದ ಗಂಧ.  ಒಂದು ರೀತಿ ಮನಸ್ಸಿಗೆ ಕಸಿವಿಸಿ ವಾತಾವರಣ.  ಯಾವ ಕಡೆ ನೋಡಿದರು ಹರಡಿಕೊಂಡು ಬಿದ್ದ ವಸ್ತುಗಳು.  ಒಮ್ಮೆ ತಲೆ ಗಿರ್ ಎಂದಿತು. ಬಡವರ ಗುಡಿಸಲ್ಲಾದರೂ ಸ್ವಲ್ಪ ಅಚ್ಚುಕಟ್ಟುತನ ಇರುತ್ತೊ ಏನೊ ಆದರೆ ಈ ಮನೆಯಲ್ಲಿ?
 
ನಿಜ. ಇದನ್ನು ಉತ್ಕ್ರೇಶ್ಚೆ ಮಾಡಿ ಹೇಳುತ್ತಿಲ್ಲ.  ದಿನ ಬೆಳಗಿನ ವಾಕಿಂಗ್ ನನ್ನ ಶೋನೂನ ಜೊತೆ ಬೀದಿಗುಂಟ ಹೋಗುವುದು. ಅವನೊ ಮೂಸಿ ಮೂಸಿ ಕಾಲೆತ್ತಿ ತನ್ನ ಕಾಯ೯ದಲ್ಲಿ ಮಗ್ನವಾದರೆ ನಾನು ಪ್ರಕೃತಿಯ ಸೌಂದರ್ಯ ಕಣ್ಣಿಗೆ ಕಾಣುವುದೇನೊ ಅನ್ನುವ ನಿರೀಕ್ಷೆಯಲ್ಲಿ ಬೆಳಗಿನ ಆಹ್ಲಾದಕರ ವಾತಾವರಣ ಹೀರುತ್ತ ಸಾಗುವುದು ಪರಿಪಾಠವಾಗಿದೆ. ಅಲ್ಲೊಂದು ದೊಡ್ಡ ಕಾಂಕ್ರೀಟ್ ಕಟ್ಟಡ ನಿಮಾ೯ಣ ಹಂತದಲ್ಲಿದೆ.  ಪಕ್ಕದಲ್ಲಿ ತಾಡಪತ್ರೆ ಶೀಟಿಂದ ನಿಮಾ೯ಣವಾದ ಕಟ್ಟಡ ಕಾಮಿ೯ಕರ ಚಿಕ್ಕ ಗುಡಿಸಲು.  ಆ ಗುಡಿಸಲಿನ ಹೆಂಗಸು ಆಗಲೇ ರೊಟ್ಟಿ ತಟ್ಟುತ್ತಿದ್ದಾಳೆ. ಗುಡಿಸಲ ಮುಂದೆ ಒಪ್ಪವಾದ ರಂಗೋಲಿ. ಸುತ್ತಲೂ  ಗುಡಿಸಿ ಸ್ನಾನ ಪೂಜೆ ಮಾಡಿ ತನ್ನ ಕಾಯಕದಲ್ಲಿ ತೊಡಗಿರುವುದು ರಸ್ತೆಯಲ್ಲಿ ಇರುವ ನನಗೆ ಕಾಣಿಸುತ್ತಿದೆ.  ದಿನವೂ ನೋಡುತ್ತೇನೆ.  ಇನ್ನೂ ಬೆಳಗಿನ ಆರೂ ಮೂವತ್ತರ ವೇಳೆಯಲ್ಲಿ.  ಒಮ್ಮೆ ನಗುತ್ತಾಳೆ ನನ್ನ ಶೋನೂ ಮರಿ ಕಂಡು ಪ್ರೀತಿಯ ನಗೆ. ಆಗ ನನ್ನ ಮನಸ್ಸಿಗೆ ಅನಿಸುವುದು "ಕಾಯಕವೇ ಕೈಲಾಸ" ಬಸವಣ್ಣನವರ ವಚನ ನೆನಪಾಗಿ ಮಡಿ ಮೈಲಿಗೆ ಆಚಾರ ವಿಚಾರ ಕೇವಲ ಆಡಿಕೊಂಡು ಓಡಾಡುವವರ ಮುಂದೆ ಇವರನ್ನು ನಿವಾಳಿಸಬೇಕು.  ನಿಜವಾಗಿಯೂ ಆ ಒಂದು ಶಕ್ತಿ ಇಂಥವರ ನಿಮ೯ಲ ಮನಸ್ಸಿನ ಗುಡಿಸಲಿನಲ್ಲಿ ಕಾಣಬಹುದೇನೊ! 
 
ಈಗ ಮಾಧ್ಯಮಗಳಲ್ಲಿ ಎಷ್ಟು ಹೊತ್ತಿಗೆ ನೋಡಿದರೂ ಒಂದಲ್ಲಾ ಒಂದು ವಾಹಿನಿಯಲ್ಲಿ ಜ್ಯೋತಿಷ್ಯ ಆಚಾರ ವಿಚಾರ, ಶಕುನವಂತೆ, ವಾಸ್ತು ಹೀಗೆ ಒಂದಾ ಎರಡಾ.  ಜನರ ಮನಸ್ಸು ದಿಕ್ಕು ತಪ್ಪಿಸಲು ಬೇಕಾದಷ್ಟು ಪ್ರಚಾರವಾಗುತ್ತಿದೆ. ಜನರೂ ಅವುಗಳನ್ನು ನಂಬುತ್ತಿದ್ದಾರೆ.  ಏಕೆಂದರೆ ಭವಿಷ್ಯದ ಕನಸು ನನಸಾಗಿಸಿಕೊಳ್ಳುವ ಆಸೆ.  ಮನಸ್ಸಿನ ಮುಗ್ಧತೆ ಕಣ್ಣು ಕಟ್ಟಿಬಿಟ್ಟಿದೆ.  ದಿನ ದಿನಕ್ಕೂ ಇದು ಹೆಚ್ಚಾಗುತ್ತಲೆ ಇದೆ.  
 
ದೇವರ‌ ಹೆಸರಲ್ಲಿ ದುಡ್ಡು ಮಾಡುವುದು, ಜನರೂ ಆಡಂಬರದ ಪೂಜೆಗೆ ಒಲಿದಿರೋದು, ಹಳೆಯ ಕಾಲದ ಸಂಪ್ರದಾಯ ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಶಾಸ್ತ್ರವನ್ನು ಅನುಸರಿಸೋದು ಎಲ್ಲ ನೋಡಿದರೆ ಪೂಜೆ  ಅಥ೯ವನ್ನು ಕಳೆದುಕೊಂಡು ದೇವರು ಆಡಂಬರದ ವಸ್ತುವಾಗಿದ್ದಾನೆ ಅನಿಸುತ್ತದೆ.  ಮಾಡಿದರೆ ಕಟ್ಟು ನಿಟ್ಟಿನಲ್ಲಿ ಸಂಪ್ರದಾಯ ಆಚರಿಸಿದರೆ ಒಂದು ಅಥ೯. ಅದಿಲ್ಲದೆ ಮಾಡಿದ ಪೂಜೆ ವ್ಯಥ೯ ಅನಿಸುತ್ತದೆ. 
 
ಗುರು ಚರಿತ್ರೆಯಲ್ಲಿ ಪಾಪ ಪುಣ್ಯ, ಪೂಜೆ ಪುನಸ್ಕಾರದ ಕುರಿತು ಚೆನ್ನಾಗಿ ವಿವರಿಸಿದ್ದಾರೆ.  ಅದರಲ್ಲಿ ಒಂದು ಅಧ್ಯಾಯದಲ್ಲಿ ಹೇಳುತ್ತಾರೆ.  ಪೂಜೆ ಮಾಡುವಾಗ ಮನಸ್ಸು ನಿಮ೯ಲವಾಗಿರಬೇಕು. ಯಾವುದೆ ಒತ್ತಡವಿರಬಾರದು.  ಹಸಿದು ಪೂಜೆ ಮಾಡಬಾರದು.  ಹಣ್ಣು ಹಾಲನ್ನಾದರೂ ಸೇವಿಸಿ ಪೂಜೆಗೆ ಅಣಿಯಾಗಿ. ಹಿಂದಿನ ದಿನ ತಂಗಳು ಪೂಜೆಗೂ ಮೊದಲು ತಿನ್ನಬೇಡಿ.  ಇದು ತಾಮಸ ಗುಣವನ್ನು ಹೆಚ್ಚಿಸುತ್ತದೆ. ಆದಷ್ಟೂ ಶುಚಿಯಾದ ಆಹಾರ ಸೇವಿಸಿ. ದಿನದ ಮೂರು ಗಳಿಗೆಯಲ್ಲೂ ಅಂದರೆ ಬೆಳಗ್ಗೆ, ಮಧ್ಯಾಹ್ನ ಅಥವಾ ಸಾಯಂಕಾಲದಲ್ಲಿ ಪೂಜೆ ಮಾಡಬಹುದು.  ಆದರೆ ಭ್ರಾಹ್ಮೀ ಮೂಹೂತ೯ದಲ್ಲಿ ಪೂಜೆ ಮಾಡಿದರೆ ವಿಶೇಷ. ಆಗ ದೇವಾನು ದೇವತೆಗಳು ಸಂಚರಿಸುತ್ತಿರುತ್ತಾರೆ. ಇತ್ಯಾದಿ ಇತ್ಯಾದಿ.  
 
ನಿಜಕ್ಕೂ ಗುರು ಚರಿತ್ರೆ ಒಮ್ಮೆ ಪ್ರತಿಯೊಬ್ಬರೂ ಓದಲೇ ಬೇಕಾದ ಕೃತಿ.  ಆದರೆ ಈ ಕೃತಿ ಓದಲು ಕಟ್ಟು ನಿಟ್ಟಿನ ಆಚರಣೆ ಬೇಕು.  ಏಳು ದಿನದ ಸಪ್ತಾಹದಾಚರಣೆಯಲ್ಲಿ ಮನಸ್ಸು ಕಳೆದು ಹೋದ ಅನುಭವ ಕಾಣಬಹುದು.   
 
ಆದುದರಿಂದ ದೇವರ ಹೆಸರಲ್ಲಿ ಢಂಬಾಚಾರ ಮಾಡುವುದು ಬಿಟ್ಟು ಮಾಡಬೇಕಾದ ಆಚಾರ ವಿಚಾರ ಆದಷ್ಟು ಸಮಪ೯ಕವಾಗಿ ಅನುಸರಿಸಿ ಭಕ್ತಿಯಿಂದ ಮನಸ್ಸು, ಹೃದಯ,ಚಿತ್ತ ಏಕಾಗ್ರತೆಗೊಳಿಸಿಕೊಂಡು ತದೇಕವಾಗಿ ಪೂಜೆಯಲ್ಲಿ ಮಗ್ನವಾಗಿ ಪೂಜೆ ಮಾಡುವುದೇ ಶ್ರೇಷ್ಠ ಪೂಜೆ ಅಲ್ಲವೆ?
 
20-12-2016. 1.51pm