ದೇವರು ಮತ್ತು ಭಕ್ತಿ

ದೇವರು ಮತ್ತು ಭಕ್ತಿ

ದೇವರು ಮತ್ತು ಭಕ್ತಿ ಎಂಬುದು ಒಂದು ಶಕ್ತಿ. ಸರ್ವಂತರಾಮಿಯಾದ, ಅಣುರೇಣು, ತೃಣ ಕಾಷ್ಟಗಳಲ್ಲೂ ನೆಲೆಸಿದ ‘ಭಗವಂತನ’ ನೆಲೆ ಬೆಲೆ ಕಂಡವರಾರೂ ಇಲ್ಲ. ನಮ್ಮ ಮನದಲ್ಲೊಂದು ಕಲ್ಪನೆ ’ದೇವರ’ ಬಗ್ಗೆ, ಹೀಗಿರಬಹುದು, ಹಾಗಿರಬಹುದು ಎಂಬುದಾಗಿ ಅಷ್ಟೆ. ನಮಗೆ ಆತನ ನಿಲುವನ್ನು ಪೂಜಿಸಲೋ, ಇನ್ನಾವುದಕ್ಕೋ ಬೇಕಾಗಿ ‘ಮೂರ್ತಸ್ವರೂಪ’ವನ್ನು ಮನದಲ್ಲಿ ಗ್ರಹಿಸಿ ಭಜಿಸುತ್ತೇವೆ. ಕಲ್ಲಿನ ಮೂರ್ತಿಯೇ ಆಗಲಿ, ಭಾವಚಿತ್ರವೇ ಇರಲಿ, ಬೇಡ ಪ್ರಜ್ವಲಿಸುತಿರುವ ಒಂದು ದೀಪವೇ ಆಗಲಿ, ಪ್ರಕೃತಿಯ ಯಾವುದೇ ವಸ್ತುವಾಗಲಿ ದೇವರನ್ನು ಅದರಲ್ಲಿ ಕಲ್ಪಿಸಿ, ಭಕ್ತಿಯಿಂದ ಆರಾಧಿಸುತ್ತೇವೆ

ಭಕ್ತಿ ಹೇಗಿರಬೇಕೆಂದರೆ ಜನರು ಸಾವಿರ ಹೇಳಬಹುದು. ಶೃದ್ಧೆ, ಏಕಾಗ್ರತೆ, ತಲ್ಲೀನತೆ, ಶುದ್ಧಮನಸ್ಸು, ಸ್ವಚ್ಛ, ನಿಷ್ಕಲ್ಮಶ, ನಿಷ್ಕಳಂಕ ಹೃದಯ, ಮೌನ, ನಿಗರ್ವದಿಂದ ಕೂಡಿದ ಭಜನೆ, ಪ್ರಾರ್ಥನೆ ದೇವರ ತಟ್ಟುವಂತಿರಬೇಕು, ಮುಟ್ಟುವಂತಿರಬೇಕು. ನಮ್ಮದು ನಿಜವಾದ ಭಕ್ತಿಯಾದರೆ, ನಿರಾಶೆ ಸಲ್ಲದು.ಎಂತಹ ವಿಘ್ನಗಳು ಬಂದರೂ ಹೆದರಬಾರದು, ಸೋಲು-ಗೆಲುವು, ನಿಂದನೆ, ಅವಹೇಳನೆ, ಅಸಹನೆ ಯಾವುದಕ್ಕೂ ಜಗ್ಗದ ಕುಗ್ಗದ ಭಕ್ತಿ ಭಗವಂತನ  ಹತ್ತಿರಕ್ಕೆ ನಮ್ಮನ್ನು ಒಯ್ಯಲು ಸಹಕಾರಿ.

ಭಕ್ತಿಯಲ್ಲಿ ಎರಡು ವಿಧ-ಸುಗುಣ, ನಿರ್ಗುಣ ಎಂಬುದಾಗಿ. ತೋರಿಕೆಯ ಆಡಂಬರದ ಭಕ್ತಿಗೆ, ಇನ್ನೊಬ್ಬರನ್ನು ಓಲೈಸಲು ಕೈಗೊಳ್ಳುವ ವ್ರತ, ಉಪವಾಸ ಇತ್ಯಾದಿಗಳಿಗೆ ಹಿಂಬಾಲಕರು ‘ಸೈ ಸೈ’ಎನ್ನಬಹುದು. ಆದರೆ ಅದು ದೇವರನ್ನು ತಲುಪಲಾರದು. ನಮ್ಮ ಭಕ್ತಿ ದೇವರಿಗೆ ಕೇಳಬೇಕು. ಆಗ ನಮ್ಮ ಮನಸ್ಸು ಹಗುರವಾಗುತ್ತದೆ, ಮುಂದಿನ ಕೆಲಸಕ್ಕೆ ಪ್ರೇರೇಪಣೆ ಸಿಕ್ಕಂತಾಗುತ್ತದೆ.

ಎಳೇ ಸಸಿಗೆ ಹೇಗೆ ರಕ್ಷಣೆ ಬೇಕೋ, ಹಾಗೆ ಭಕ್ತಿಯ ಸುತ್ತ ಒಂದು ರಕ್ಷಣಾ ಬೇಲಿಯ ನಿರ್ಮಾಣ ಮಾಡಿಕೊಳ್ಳಬೇಕು. ಇಲ್ಲವಾದರೆ ಚಂಚಲ ಚಿತ್ತ ನಾಲ್ದೆಸೆಯಲ್ಲೂ ದೃಷ್ಟಿ ಹರಿಸಿ, ಭಗವಂತನ ಧ್ಯಾನ ಕೇವಲ ತೋರಿಕೆಯದಾದೀತು. ಸಂಪೂರ್ಣವಾದ ಶರಣಾಗತಿ ದೇವರೆದುರು ನಾವು ಆದಾಗ ಮಾತ್ರ ಭಕ್ತಿಗೆ ಬೆಲೆ ಸಿಗುತ್ತದೆ. ನಮ್ಮ ಎರಡೂ ಕಾಲುಗಳಲ್ಲಿ ಏಕಕಾಲಕ್ಕೆ ನಡೆಯಲಾಗುವುದಿಲ್ಲ, ಒಂದು ಕಾಲನ್ನು ಊರಿದಾಗ, ಇನ್ನೊಂದು ಕಾಲನ್ನು ಎತ್ತಿ ಮುಂದಕ್ಕೆ ಇಡುವಂತೆ, ಸುಗುಣ ಭಕ್ತಿ ಮುಂದೆ, ನಿರ್ಗುಣ ಭಕ್ತಿ ಹಿಂದೆ ಇರುತ್ತದೆ. ದೇವರ ದೃಷ್ಟಿ ನಮ್ಮ ಭಕ್ತಿಯನ್ನು ಹೊಂದಿಕೊಂಡಿರುತ್ತದೆ, ಪ್ರತಿಯೊಂದು ಕರ್ಮಕ್ಕೂ ಪ್ರತಿಫಲವಿದೆ. ದೇವರು ಕರ್ಮಫಲದಾತನೇ ಆಗಿದ್ದಾನೆ.

ಧ್ರುವನು ಕಾಡಿನಲ್ಲಿ ಭಗವಂತನ ಅರಸಿ ಹೊರಟಾಗ ‘ಮಹಾವಿಷ್ಣು’ ಪ್ರತ್ಯಕ್ಷನಾದ, ಪ್ರಹ್ಲಾದನಿಗೆ ಮೈದೋರಿದ. ಪಾಂಚಾಲಿ ತನ್ನ ಮನದಲ್ಲಿ 'ನನ್ನ ಮಾನ ನನ್ನ ಸೆರಗಿಂದ ಕಾಪಾಡಿಕೊಳ್ಳಬಲ್ಲೆ' ಎಂದು ಯೋಚಿಸಿ ಸೆರಗನ್ನು ಭದ್ರವಾಗಿ ಹಿಡಿದಳು, ದೇವರು ಬಂದನೇ ? ಇಲ್ಲ, ಕೊನೆಗೆ ಎರಡೂ ಕೈಗಳನ್ನು ಮೇಲೆತ್ತಿ *ಕೃಷ್ಣಾ ನೀನೇ ಗತಿ, ನೀನೇ ಮತಿ, ರಕ್ಷಿಸು* ಎಂದಾಗ ಅಕ್ಷಯಾಂಬರವನ್ನೇ ನೀಡಿದನಲ್ಲವೇ? ಒಂದು ಸಣ್ಣ ಅಹಂ ಆಕೆಯಲ್ಲಿದ್ದಾಗ ಆತ ಒಲಿಯಲಿಲ್ಲ, ಹಾಗೆಯೇ ಹೃದಯದಲ್ಲಿ ಏನನ್ನೂ ಇರಗೊಡದೆ ಭಕ್ತಿಯಿಂದ ಭಗವಂತನ ಧ್ಯಾನ ಮಾಡಿದಾಗ. ಒಲಿದೇ ಒಲಿಯುತ್ತಾನೆ, ನಮ್ಮ ಬೆನ್ನ ಹಿಂದೆಯೇ ಇರುತ್ತಾನೆ.

ಹೆತ್ತವರನ್ನು  ಹೊರತಳ್ಳಿ, ಸ್ವಲ್ಪವೂ ಗೌರವ ಕೊಡದೆ, ಗುರು ಹಿರಿಯರ ಕಡೆಗಣಿಸಿ, ಭಕ್ತಿಯಿಂದ ದೇವರ ಪೂಜೆ ಮಾಡಿದರೆ *ಗೋರ್ಕಲ್ಲ ಮೇಲೆ ನೀರು ಸುರಿದಂತಾದೀತು*. ಅವರಲ್ಲಿಯೇ ದೇವರನ್ನು ಕಾಣಲಿ, ಆಗ ದೇವರ ಕೃಪೆ ಇದೆ. ಹೇಗೆ ಕಡಲಿನಾಳಕ್ಕೆ ಮುಳುಗಿ ಮುತ್ತು ರತ್ನ ಹವಳಗಳನ್ನು ತೆಗೆಯುತ್ತೇವೆಯೋ, ಹಾಗೆ ದೇವರ ಬಗ್ಗೆ ಹೃದಯದಾಳಕ್ಕಿಳಿದು ಭಕ್ತಿಯಿಂದ ಬೇಡಿಕೊಂಡರೆ ನೆನೆಸಿದ್ದು ಸಿಗಬಹುದು.

ಕಾಯಿಲೆ ಬಿದ್ದಾಗ, ಕಷ್ಟ ಬಂದಾಗ ಮಾತ್ರ ದೇವರ ನೆನಪು ಆದರೆ ಹೇಗೆ? ಇದು ಬರೇ ತೋರಿಕೆಯ ನಟನೆಯಾದೀತು. ಲೋಕದಡೊಂಕ ತಿದ್ದಲು ಸಾಧ್ಯವಾಗದಿದ್ದರೆ ಬೇಡ, ನಮ್ಮನ್ನು ನಾವು ತಿದ್ದಿಕೊಳ್ಳೋಣ. ದೇವರು ಬದಲಾಗದ, ಬಿಡಲಾಗದ ಅವಿನಾಭಾವದ ಒಡನಾಟದ ನಂಟು ಮತ್ತು ನಂಟ. ಬಹಿರಂಗದಿಂದ ಅಂತರಂಗದೆಡೆಗೆ ಸಾಗೋಣ. ಕ್ಷಮೆ, ದಯೆ, ಆರಾಧನೆ, ತಪಸ್ಸು, ಶಾಂತಿ, ಸತ್ಯ, ಇಂದ್ರಿಯ ನಿಗ್ರಹ, ಅಹಿಂಸೆ, ಪರೋಪಕಾರ, ಆರ್ದ್ರತೆ, ಮರುಗುವಿಕೆ, ಸಾಂತ್ವನ, ಪ್ರೀತಿ, ಮಮಕಾರ ಮುಂತಾದ ಪುಷ್ಪಗಳಿಂದ ದೇವರನ್ನು ಭಕ್ತಿಯಿಂದ ಧ್ಯಾನಿಸಿ ಕೃತಾರ್ಥರಾಗೋಣ. ದೈವಭಕ್ತಿ ಇಲ್ಲದ ಜೀವನ ಸವಕಲು ನಾಣ್ಯದಂತೆ. ಪಂಚಭೂತಗಳಿಂದಾದ ಈ ದೇಹವನ್ನು, ನಮಗೆ ಕರುಣಿಸಿದ ಆ ದೇವರಿಗೆ ಭಕ್ತಿಯಿಂದ ಕೃತಜ್ಞತೆಗಳನ್ನು ಸಮರ್ಪಿಸೋಣ. ದೇಹ ಚಲಿಸುವ ದೇವಾಲಯದಂತೆ, ಜೊತೆಗೆ ದೇವನೂ ಚಲಿಸುತ್ತಾನೆ.

*ಶ್ರವಣಂ, ಕೀರ್ತನಂ, ವಿಷ್ಣುಸ್ಮರಣಂ, ಪಾದಸೇವನಂ, ಅರ್ಚನಂ, ವಂದನಂ, ದಾಸ್ಯಂ, ಸಖ್ಯಂ, ಆತ್ಮನಿವೇದನಂ* ಈ ಎಲ್ಲಾ ರೀತಿಯ ಭಕ್ತಿಯಲ್ಲಿ ದೇವರನ್ನು ಕಾಣೋಣ. ಭಕ್ತನೇ ಭಗವಂತನ ಸೃಷ್ಟಿಕರ್ತ-- *ಸಾಕ್ಷಾತ್ ಆಕಾರಂ--ಸಾಕ್ಷಾತ್ಕಾರಂ*. ಭಕ್ತಿ ಭಗವಂತನ ತೃಪ್ತಿಗಾಗಿ ಹೊರತು ಸಮಾಜದ ಮೆಚ್ಚುಗೆಗಾಗಿ ಬೇಡ.*ಶರೀರ ಮಾದ್ಯಂ ಖಲು ಧರ್ಮ ಸಾಧನಂ*, ಈ ದೇಹದಿಂದ ಕೈಗೊಳ್ಳುವ ಪ್ರತಿಯೊಂದು ಕರ್ಮವೂ ಭಗವಂತನಿಗೆ ಅರ್ಪಿತವಾದಾಗ ಮಾತ್ರ ನಾವು ಆತನನ್ನು ನಮ್ಮ ಹೃದಯದಲ್ಲಿ ಸ್ಥಾಪಿಸಬಹುದು.ನಾವು--ದೇವರು--ಭಕ್ತಿ ಒಂದಕ್ಕೊಂದು ಎರಕ, ಪೂರಕ.

-ರತ್ನಾಭಟ್ ತಲಂಜೇರಿ

ಚಿತ್ರ ೧. ರೂಪದರ್ಶಿ: ವಿಹಾನಿ, ಬೋಂದೇಲ್ ಕಂಬ್ಳ

ಚಿತ್ರ ೨, ಇಂಟರ್ನೆಟ್ ಸಂಗ್ರಹಿತ