ದೇವರು ಮತ್ತು ಸರ್ಕಾರ : ಯಾರು ಹೊಣೆ?

ತುಂಬಾ ಆಶ್ಚರ್ಯವಾಗುವ ವಿಷಯವೆಂದರೆ, ಸಾಮಾನ್ಯವಾಗಿ ಬಹುತೇಕ ಜನ ಪ್ರತಿಕ್ಷಣ ತಮ್ಮ ಎಲ್ಲಾ ಕೆಲಸ ಕಾರ್ಯಗಳು, ಪರಿಣಾಮಗಳು, ಫಲಿತಾಂಶಗಳು, ಪ್ರತಿ ಚಟುವಟಿಕೆಗಳಿಗೂ ದೇವರೇ ಕಾರಣ ಎಂದು ನಂಬುತ್ತಾರೆ, ಪೂಜಿಸುತ್ತಾರೆ. ತಮ್ಮೆಲ್ಲಾ ಯಶಸ್ಸು, ಕಷ್ಟ ಸುಖಗಳು, ಸೋಲು ಗೆಲುವುಗಳು ಎಲ್ಲವನ್ನು ಆ ದೇವರೇ ನಿರ್ಧರಿಸುವುದು ಎಂದೇ ಭಾವಿಸುತ್ತಾರೆ.
ದೇವರಿಗಾಗಿ ಬೆಳಗ್ಗೆ, ಸಂಜೆ ಪೂಜೆ ಮಾಡುವುದಲ್ಲದೆ ದೇವಸ್ಥಾನಗಳಿಗೆ ಹೋಗುತ್ತಾರೆ. ತೀರ್ಥಕ್ಷೇತ್ರಗಳಿಗೂ ಭೇಟಿ ಕೊಡುತ್ತಾರೆ. ಪೂಜೆ, ಹೋಮ ಹವನಗಳನ್ನು ಮಾಡಿಸುತ್ತಾರೆ. ಅಂದರೆ ಅವರ ಪ್ರತಿ ಚಟುವಟಿಕೆಯಲ್ಲೂ ದೇವರಂತು ಇದ್ದೇ ಇರುತ್ತಾರೆ. ಆದರೆ ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭ್ರಮದ ಆಚರಣೆ ಸಂದರ್ಭದಲ್ಲಿ ಕಾಲ್ತುಳಿತದಿಂದ 11 ಜನ ಸತ್ತು 45ಕ್ಕೂ ಹೆಚ್ಚು ಜನ ಗಾಯಾಳುವಾದ ಘಟನೆಗೆ ಪ್ರತಿಯೊಬ್ಬರೂ ಸರ್ಕಾರವನ್ನು, ಪೊಲೀಸರನ್ನು, ಕೆ ಎಸ್ ಸಿ ಎ ಅನ್ನೋ, ಐಪಿಎಲ್ ಅನ್ನೋ ದೂರುತ್ತಾರೆ. ಆದರೆ ಯಾರೊಬ್ಬರೂ ದೇವರನ್ನು ಮಾತ್ರ ಪ್ರಶ್ನಿಸುತ್ತಿಲ್ಲ. ಇದೇ ಆಶ್ಚರ್ಯದ ವಿಷಯ.
ನಿಜಕ್ಕೂ ಸರ್ಕಾರ, ಕಾನೂನು, ಪೊಲೀಸ್ ಎಲ್ಲವೂ ಮಾನವ ನಿರ್ಮಿತ. ಅವರಿಗೆ ಅವರದೇ ಆದ ಮಿತಿಗಳಿವೆ, ಭ್ರಷ್ಟಾಚಾರವಿದೆ, ಜಾತಿವಾದವಿದೆ, ಕೋಮುವಾದವಿದೆ, ನಿರ್ಲಕ್ಷವಿದೆ, ಸೋಮಾರಿತನವಿದೆ, ಅರಿವಿನ ಕೊರತೆ ಇದೆ, ತಂತ್ರಗಾರಿಕೆ ಇದೆ. ಆದರೆ ದೇವರಿಗೆ ಇದು ಯಾವುದೂ ಇಲ್ಲ. ಆತ ಸರ್ವ ಶಕ್ತ, ಸರ್ವಾಂತರ್ಯಾಮಿ. ಆತ ಈ ಘಟನೆಯನ್ನು ಏಕೆ ತಡೆಯಲಿಲ್ಲ ಎಂದು ಯಾರೊಬ್ಬರೂ ಕೇಳುವುದಿಲ್ಲ.
ಪ್ರತಿನಿತ್ಯದ ಪೂಜೆ ಪುನಸ್ಕಾರಗಳನ್ನು ಮಾಡುವುದಾದರೂ ಏತಕ್ಕೆ. ಇಂತಹ ದುರ್ಘಟನೆಯನ್ನು ದೇವರಿಂದ ತಡೆಯಲು ಸಾಧ್ಯವಿಲ್ಲ ಎನ್ನುವುದಾದರೆ, ಇದು ಪೂರ್ವಾಫಲ ಎನ್ನುವುದಾದರೆ, ಮಾನವನ ಕಪಿಚೇಷ್ಟೆಗಳಿಗೆ ಆತ ಹೊಣೆಯಲ್ಲ ಎನ್ನುವುದಾದರೆ ಆತನ ಅಸ್ತಿತ್ವಕ್ಕೆ ಬೆಲೆ ಎಲ್ಲಿದೆ. ಹಾಗೆಯೇ ಎಲ್ಲವೂ ಅವನೇ ಕಾರಣವಾಗುವುದಾದರೆ ಸರ್ಕಾರದ ಮೇಲೆಯೋ, ಪೊಲೀಸರ ಮೇಲೆಯೋ ಫ್ರಾಂಚೈಸಿ ಮೇಲೆಯೋ ತಪ್ಪು ಹೊರಿಸುವುದಾದರೂ ಏಕೆ? ಇದೆಲ್ಲವೂ ದೇವರ ಆಟ ಎಂದು ಸುಮ್ಮನಿರಬಹುದಲ್ಲವೇ. ವಿಚಿತ್ರ ನಡವಳಿಕೆ.
ಇತರರನ್ನು ಬಿಡಿ, ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರಲ್ಲಿ ಸಹ ಯಾರೊಬ್ಬರೂ ದೇವರನ್ನು ಟೀಕಿಸುತ್ತಿಲ್ಲ, ಪ್ರಶ್ನಿಸುತ್ತಿಲ್ಲ. ಎಲ್ಲಕ್ಕೂ ಸರ್ಕಾರವನ್ನೇ ಹೊಣೆ ಮಾಡುತ್ತಿದ್ದಾರೆ. ಹಾಗಾದರೆ ಸರ್ಕಾರವೇ ಅತಿ ಮುಖ್ಯ, ಅತಿ ಮಹತ್ವದ್ದು, ರಕ್ಷಣೆ ನೀಡಬೇಕಾದ ಜವಾಬ್ದಾರಿ ಹೊಂದಿರುವುದು ಎಂದಾಯಿತಲ್ಲವೇ? ಅಂದರೆ ಒಟ್ಟಾರೆಯಾಗಿ ಈ ದೇಶ ನೆಡೆಯುತ್ತಿರುವುದು, ನಮ್ಮನ್ನು ನಿಯಂತ್ರಿಸುತ್ತಿರುವುದು ದೇವರ ನಂಬಿಕೆಯಲ್ಲ, ಸಂವಿಧಾನದಿಂದ ಎಂದಾಯಿತಲ್ಲವೇ. ದೇವರ ಭಕ್ತಿ ಎಂಬುದು ಒಂದು ಭ್ರಮಾತ್ಮಕ, ಭಾವನಾತ್ಮಕ, ಕಾಲ್ಪನಿಕ, ಭಯಾತ್ಮಾಕ ನಂಬಿಕೆ ಮಾತ್ರ, ವಾಸ್ತವ ಅಲ್ಲ ಎಂದೇ ಅರ್ಥೈಸಬೇಕಾಗುತ್ತದೆ.
ತಾವು ಅಧಿಕಾರ ಹೊಂದಲು ಯಡಿಯೂರಪ್ಪ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮುಂತಾದವರು ಯಾವು ಯಾವುದೋ ದೇವಸ್ಥಾನಗಳನ್ನು ಸುತ್ತುತ್ತಾರೆ. ಹೋಮ ಮಾಡಿಸುತ್ತಾರೆ. ಅಂದರೆ ದೇವರು ಅವರಿಗೆ ಮಾತ್ರ ಇರುವುದೇ. ದೇವರು ಅವರಿಗೆ ಆಶೀರ್ವಾದ ಮಾಡುವುದೇ ಆದರೆ ದೇವರು ಎಂಬ ಸ್ಥಾನಕ್ಕೆ ಅರ್ಥವಿದೆಯೇ. ದೇವರಿಗೆ ಅವರು ಮಾತ್ರ ಪ್ರಿಯವೇ. ಅಂತಿಮವಾಗಿ ಅವರನ್ನು ಗೆಲ್ಲಿಸುವುದು ಸಾಮಾನ್ಯ ಜನರು ಮತ್ತು ಶಾಸಕರೇ ಅಲ್ಲವೇ. ಮತ್ತೆ ಇಲ್ಲಿ ಮನುಷ್ಯರೇ ಮುಖ್ಯವಾಗುತ್ತಾರೆ. ಹಾಗಾದರೆ ದೇವರ ಅಸ್ತಿತ್ವ ಹುಸಿ ಅನಿಸುವುದಿಲ್ಲವೇ. ಒಮ್ಮೆ ಯಾವುದೇ ಪೂರ್ವಾಗ್ರಹ ಇಲ್ಲದೇ ಆಳವಾಗಿ ಯೋಚಿಸಿ ನೋಡಿ. ಏಕೆಂದರೆ,
ಯಾವ ದೇಶಭಕ್ತಿಯೂ ನನ್ನನ್ನೆಂದೂ ಅಷ್ಟಾಗಿ ಕಾಡಲಿಲ್ಲ,
ದೇಶ ಉಳಿಸಲು ಕೋಟ್ಯಂತರ ಜನರಿದ್ದಾರೆ.
ಯಾವ ದೇವರೂ ನನ್ನನ್ನು ಕಾಡಲಿಲ್ಲ,
ಅವನನ್ನು ಉಳಿಸಲು ಕೋಟ್ಯಾಂತರ ಭಕ್ತರಿದ್ದಾರೆ.....
ಯಾವ ಧರ್ಮವೂ ನನ್ನನ್ನು ಕಾಡಲಿಲ್ಲ,
ಅದನ್ನು ಉಳಿಸಲು ಕೋಟ್ಯಾಂತರ ಹಿಂಬಾಲಕರಿದ್ದಾರೆ......
ಯಾವ ಗ್ರಂಥಗಳೂ ನನ್ನನ್ನು ಕಾಡಲಿಲ್ಲ,
ಅದನ್ನು ಓದಿ ಪ್ರವಚಿಸಲು ಕೋಟ್ಯಾಂತರ ಜ್ಞಾನಿಗಳಿದ್ದಾರೆ.......
ಯಾವ ಭಾಷೆಯೂ ನನ್ನನ್ನು ಅಷ್ಟಾಗಿ ಕಾಡಲಿಲ್ಲ,
ಅದನ್ನು ಉಳಿಸಲು ಕೋಟ್ಯಾಂತರ ಜನರಿದ್ದಾರೆ....
ಯಾವ ನಟನೂ, ಯಾವ ರಾಜಕಾರಣಿಯು, ಯಾವ ಉದ್ಯಮಿಯೂ, ಯಾವ ಸಾಹಿತಿಯೂ ನನ್ನನ್ನು ಕಾಡಲಿಲ್ಲ,
ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.. ಆದರೆ...
ರಸ್ತೆಯಲ್ಲಿ ನಡೆದು ಹೋಗುವಾಗ 6 ವರ್ಷದ ಹರಿದ ಲಂಗದ ಪುಟ್ಟ ಬಾಲಕಿ, ಗೊಣ್ಣೆ ಸುರಿಸುವ 2 ವರ್ಷದ ತನ್ನ ತಮ್ಮನನ್ನು ಎತ್ತಿಕೊಂಡು ನನ್ನ ಬಳಿ, ಭಿಕ್ಷೆ ಬೇಡುವ ದೃಶ್ಯ ಸದಾ ಕಾಡುತ್ತದೆ. ರಾತ್ರಿ ಹೋಟೆಲ್ ನಲ್ಲಿ ಊಟ ಮಾಡುವಾಗ 11 ಗಂಟೆಯಾದರೂ ನಾವು ತಿಂದ ಎಂಜಲು ತಟ್ಟೆ ಎತ್ತಲು ನಿದ್ದೆಗಣ್ಣಿನಲ್ಲಿ ದೈನೇಸಿಯಾಗಿ ನೋಡುತ್ತಾ, ನಿಂತಿರುವ 11 ವರ್ಷದ ಬಾಲಕ ಸದಾ ಕಾಡುತ್ತಾನೆ. ಟ್ರಾಪಿಕ್ ನಲ್ಲಿ ಸಿಗ್ನಲ್ ಗಾಗಿ ಕಾಯುತ್ತಿರುವಾಗ 5 ವರ್ಷದ ಎಳೆ ಕಂದ, ಮೈಮುರಿಯುವಂತೆ ಸರ್ಕಸ್ ಮಾಡುತ್ತಾ ಬಂದು ನನ್ನನ್ನು, ಹಣ ಕೇಳುವ ದೃಶ್ಯ ಸದಾ ಕಾಡುತ್ತದೆ. ಬಸ್ ನಿಲ್ದಾಣದಲ್ಲಿ ನಿಂತಿರುವಾಗ ೧೫ ವರ್ಷದ ಯುವಕ ಚಿಂದಿ ಆಯುತ್ತಾ, ಲಿಪ್ ಸ್ಟಿಕ್, ಪೆನ್ಸಿಲ್, ಗಮ್ ತಿನ್ನುತ್ತಾ, ಮತ್ತೇರಿಸಿಕೊಳ್ಳುವ ದೃಶ್ಯ ಸದಾ ಕಾಡುತ್ತದೆ.
ಆ, ನೀವು ಹೇಳಬಹುದು, ಮಲಿನ ಮನಸ್ಥಿತಿಯವರಿಗೆ ಇಂತಹ ದೃಶ್ಯಗಳೇ ಕಾಣುತ್ತವೆ ಎಂದು. ಹೌದು, ಕಲ್ಲನ್ನು ದೇವರೆಂದು, ಜಾತಿಯನ್ನು ಶ್ರೇಷ್ಠವೆಂದು ಭ್ರಮಿಸುವ ಜನರು, ಭಿಕ್ಷುಕನನ್ನು ರಮ್ಯವಾಗಿ, ಅಸಹ್ಯವನ್ನು ಅಮೃತವೆಂದು ಕಲ್ಪಿಸಿಕೊಳ್ಳಬಲ್ಲರು. ಭ್ರಮೆಗಳನ್ನು ಸೃಷ್ಟಿಸುತ್ತಾ ವಾಸ್ತವವನ್ನು ಮರೆಮಾಚಬಲ್ಲರು. ಕನಿಷ್ಠ ತಿಳಿದವರಾದರೂ, ಅಂತಃಕರಣ ಉಳಿಸಿಕೊಂಡಿರುವವರಾದರೂ, ಸಮಾಜದ ಈ ಕಟ್ಟ ಕಡೆಯ ಜನರ ಸಮಸ್ಯೆಗಳಿಗೆ ಸ್ಪಂದಿಸೋಣ.
ಈ ಪರಿಸ್ಥಿತಿಯಲ್ಲಿ ನಾವು ಎಷ್ಟೇ ಅಭಿವೃದ್ಧಿ ಹೊಂದಿದರು ಇದನ್ನು ಮಾನವೀಯತೆ ಇರುವ ನಾಗರಿಕ ಸಮಾಜ ಎನ್ನಲು ಸಾಧ್ಯವಿಲ್ಲ. ಮತ್ತೊಮ್ಮೆ ಯೋಚಿಸಿ ನೋಡಿ...
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ