ದೇವರು ಯಾವ ರೂಪದಲ್ಲಿದ್ದಾನೆ..?

ದೇವರು ಯಾವ ರೂಪದಲ್ಲಿದ್ದಾನೆ..?

ಅದೊಂದು ಚಿಕ್ಕ ಹೋಟೆಲ್, ಹತ್ತರ ಹರೆಯದ ಹುಡುಗ ಕೈಯಲ್ಲಿ ಬಟ್ಟಲನ್ನು ಹಿಡಿದುಕೊಂಡು ಹೊಟೇಲ್ ಮಾಲಿಕನಿಗೆ "ಅಣ್ಣಾ....  ಹತ್ತು ಇಡ್ಲಿ ಕೊಡಿ, ಅಮ್ಮ ನಾಳೆ ಹಣ ಕೊಡುತ್ತೇನೆಂದು ಹೇಳಿದ್ದಾಳೆ" ಎಂದನು.

ಹೋಟೆಲ್ ಮಾಲೀಕರು,-- ಅಮ್ಮನಿಗೆ ಹೇಳು ಈಗಾಗಲೇ ಬಹಳಷ್ಟು ಬಾಕಿ ಇದೆ ಎಂದೆನ್ನುತ್ತಾ ಬಟ್ಟಲನ್ನು  ಕೊಡು,  ಸಾಂಬಾರ್ ಹಾಕುತ್ತೇನೆ” ಎಂದನು. ಅವನು ಇಡ್ಲಿ ಪ್ಯಾಕೆಟ್ ಕಟ್ಟಿ, ಮಗುವಿನ ಕೈಗೆ ಕೊಟ್ಟನು.

"ಸರಿ, ಅಮ್ಮನಿಗೆ ಹೇಳುತ್ತೇನೆ!" ಎನ್ನುತ್ತಾ  ಆ ಹುಡುಗ ಹೊರಟು ಹೋದನು.  ಎಲ್ಲವನ್ನೂ ಗಮನಿಸುತ್ತಿದ್ದ ವ್ಯಕ್ತಿಯೊಬ್ಬ ಮಾಲೀಕನ ಬಳಿ ಹೋಗಿ ಈಗಾಗಲೇ ಬಾಕಿ ಇದೆ ಎಂದಿರಿ,  ಮತ್ತೆ ಯಾಕೆ ಕೊಟ್ಟು ಕಳುಹಿಸಿದಿರಿ? ಎಂದು ಕೇಳಿದನು. 

ಆ ಮಾಲೀಕ... "ನಾನು ಆಹಾರವನ್ನು ತಾನೇ ಕೊಟ್ಟಿರುವುದು.. ಅಂಥಹ ಚಿಕ್ಕ ಮಕ್ಕಳು ಬಂದು ಕೇಳಿದರೆ ಇಲ್ಲ ಎನ್ನಲು ಮನಸ್ಸು ಬಾರದು! ಇವತ್ತಲ್ಲದಿದ್ದರೆ ನಾಳೆ ನನ್ನ ಹಣ ಸಿಗುತ್ತದೆ.  ಅಥವಾ ಸ್ವಲ್ಪ ತಡವಾಗಿ ಬರಬಹುದು.  ಹಣವು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಮಗುವಿಗೆ ಹಸಿವಾಗಿರಬಹುದು ಅದಕ್ಕೆ ಅವರ ತಾಯಿ ನನ್ನಲ್ಲಿಗೆ ಕಳುಹಿಸಿರಬಹುದು. ನಾನು ಕೊಡುತ್ತೇನೆ ಎಂಬ ನಂಬಿಕೆಯಿಂದ ಕಳುಹಿಸಿದ್ದಾರೆ.  ನಾನು ಆ ನಂಬಿಕೆಯನ್ನು ಹುಸಿ ಮಾಡಲಾರೆ. ಇದು ನನ್ನ ಕಷ್ಟಪಟ್ಟು ದುಡಿದ ಹಣ, ಹೇಗಿದ್ದರೂ ನನಗೆ ಬರುತ್ತದೆ, ನಾನು ಮೋಸ ಹೋಗಿಲ್ಲ, ಆದರೆ ಈಗ ಸಧ್ಯ ಅವರ ಹಸಿವು ನೀಗುವುದು ಮುಖ್ಯವೆನಿಸಿತು!

ನಾನು ಈಗ ಕೊಡದಿದ್ದರೆ… ಮಗು ತಾಯಿಗಾಗಿ ಕದಿಯಬಹುದು! ಅಥವಾ ತಾಯಿ ಮಗುವನ್ನು ಭಿಕ್ಷೆಗೆ ಕಳುಹಿಸಬಹುದು!  ಅಥವಾ ಮಗುವಿನ ಹಸಿವು ನೀಗಿಸಲು ತಾಯಿಯು ತಪ್ಪು ದಾರಿಯನ್ನು ಆರಿಸಿಕೊಳ್ಳಬಹುದು! ಈಗ ನನಗೆ ನಷ್ಟವಾಗಿರಬಹುದು, ಆದರೆ ಸಮಾಜದಲ್ಲಿ ಆಗಬಹುದಾದ ಮೂರು ತಪ್ಪು ಪ್ರಯತ್ನಗಳನ್ನು ನಿಲ್ಲಿಸಿದ್ದೇನೆ! ಅಥವಾ ತಡೆದಿದ್ದೇನೆ ಎನ್ನುವ ತೃಪ್ತಿ ನನಗಿದೆ, ಅಷ್ಟು ಸಾಕು..."

ಈ ರೀತಿ ಯೋಚಿಸಿದ ಆ ಮಾಲೀಕನಿಗೆ ಮನಸಿನಲ್ಲೇ ಪ್ರಣಾಮಗಳನ್ನು ಅರ್ಪಿಸಿದ ಆ ವ್ಯಕ್ತಿ. ದೇವರು ಇಲ್ಲ ಎಂದು ಯಾರು ಹೇಳುವರು?  ಇoತಹ ಜನರ ಮನಸ್ಸಿನಲ್ಲಿದ್ದಾನೆ, ಖಂಡಿತವಾಗಿ ಇದ್ದಾನೆ !!

"ಯಾರಾದರೂ ನಮ್ಮನ್ನು ಹುಡುಕಿಕೊಂಡು ಬಂದರೆ ಖಂಡಿತಾ ಕೊಡುತ್ತೇವೆ ಎಂಬ ನಂಬಿಕೆಯಿಂದ ಬರುತ್ತಾರೆ.. ನಮ್ಮ ಶಕ್ತಿಮೀರಿ ಸಹಾಯ ಮಾಡಿ ಎಂದು ನಾನು ಹೇಳುತ್ತಿಲ್ಲ... ನಮ್ಮ ಕೈಲಾದ ಸಹಾಯ ಮಾಡಬಹುದಲ್ಲವೇ.. ನಮ್ಮಲ್ಲಿರುವುದರಲ್ಲಿಯೇ ಸ್ವಲ್ಪವನ್ನಾದರೂ ಕೊಡಬಹುದಲ್ಲವೇ..?" ಏನಂತೀರಿ...? 

(ಸ್ನೇಹಿತರೊಬ್ಬರು ಕಳುಹಿಸಿದ ಚಿಂತನಾರ್ಹ ಸಂದೇಶ)

ಸಂಗ್ರಹ : ಲೇಖಾ ಜಯಕರ್, ಚಿತ್ರಾಪುರ

ಚಿತ್ರಕೃಪೆ: ಇಂಟರ್ನೆಟ್ ತಾಣ