ದೇವರೆಂಬ ಕಲ್ಪನೆಯ ಸುತ್ತಾ...
ಇಸ್ರೋ ಚಂದ್ರಯಾನ - ತಿರುಪತಿ ವೆಂಕಟೇಶ್ವರ - ನಂಬಿಕೆ - ವಾಸ್ತವ ಮತ್ತು ಅಭಿಪ್ರಾಯ ಸ್ವಾತಂತ್ರ್ಯ. ಯಾರು ವೆಂಕಟೇಶ್ವರ - ಚಂದ್ರಯಾನಕ್ಕೂ ಅವರಿಗೂ ಏನು ಸಂಬಂಧ, ಭಾರತೀಯ ಜನತೆಗೆ ಅವರಿಂದಾದ ಸಹಾಯ ಏನು, ಪ್ರಜಾಪ್ರಭುತ್ವದಲ್ಲಿ ಅವರ ಪಾತ್ರವೇನು? ಇಸ್ರೋ ಎಂಬ ಅತ್ಯಂತ ವೈಜ್ಞಾನಿಕ ಸಂಸ್ಥೆಯ ಮುಖ್ಯಸ್ಥರು ವಿಶ್ವವೇ ಆಶ್ಚರ್ಯ ಪಡುವಂತ ಮಹತ್ಸಾಧನೆ ಮಾಡುವ ಭಾರತದ ಉಪಗ್ರಹ ಉಡಾವಣೆ ಚಂದ್ರಯಾನ - 3 ಸಂದರ್ಭದಲ್ಲಿ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು. ಅದು ಅವರ ವೈಯಕ್ತಿಕ ನಂಬಿಕೆ ಇರಬಹುದು. ಆ ಸ್ವಾತಂತ್ರ್ಯ ಅವರಿಗಿದೆ. ಹಾಗೆಯೇ ಅದನ್ನು ವೈಚಾರಿಕ ಹಿನ್ನಲೆಯಲ್ಲಿ ವಿಮರ್ಶಿಸುವ ನಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸುತ್ತಾ...
ವೆಂಕಟೇಶ್ವರ ಆಶೀರ್ವಾದಿಸಿದರೆ. ಆಶೀರ್ವಾದದ ಪ್ರಮಾಣ ಏನು, ಇಸ್ರೋ ನಡೆಯುತ್ತಿರುವುದು ವೆಂಕಟೇಶ್ವರರ ಆಶೀರ್ವಾದದಿಂದಲೇ. ಚಂದ್ರಯಾನಕ್ಕೆ ಖರ್ಚಾಗುವ ಹಣವನ್ನು ಅವರೇ ನೀಡುತ್ತಿದ್ದಾರೆಯೇ, ಚಂದ್ರಯಾನ - 2 ವಿಫಲವಾಗಲು ಅವರು ಸರಿಯಾಗಿ ಆಶೀರ್ವಾದ ಮಾಡಲಿಲ್ಲವೇ, ಶಬರಿಮಲೆ ಅಯ್ಯಪ್ಪ, ಧರ್ಮಸ್ಥಳದ ಮಂಜುನಾಥ, ಕಾಶಿ ವಿಶ್ವೇಶ್ವರರ ಆಶೀರ್ವಾದ ಏಕೆ ಪಡೆಯಲಿಲ್ಲ. ಇದರ ಜೊತೆಗೆ ಅಲ್ಲಾ ಮತ್ತು ಯೇಸು ಆಶೀರ್ವಾದ ಪಡೆದಿದ್ದರೆ ಮತ್ತಷ್ಟು ವೇಗವಾಗಿ ಚಂದ್ರನಲ್ಲಿಗೆ ಹೋಗಬಹುದಿತ್ತಲ್ಲವೇ. ದೇವರೇ ಎಲ್ಲವನ್ನೂ ಸೃಷ್ಟಿಸಿ ಸರ್ವಾಂತರ್ಯಾಮಿಯಾಗಿರುವಾಗ ಚಂದ್ರನಲ್ಲಿಗೆ ಉಪಗ್ರಹ ಕಳುಹಿಸಿ ಹಣ ಸಮಯ ಖರ್ಚು ಮಾಡುವುದು ಏಕೆ. ದೆಹಲಿ ಹಿಮಾಚಲ ಪ್ರದೇಶ ಮಳೆಯ ಪ್ರವಾಹದಿಂದಾಗಿ ಜನ ಜಾನುವಾರುಗಳ ಕೊಚ್ಚಿಕೊಂಡು ಹೋಗುತ್ತಿರುವಾಗ ಅದನ್ನು ನಿರ್ವಹಿಸದೆ ವೆಂಕಟೇಶ್ವರರು ಚಂದ್ರಯಾನಕ್ಕೆ ಆಶೀರ್ವಾದ ಮಾಡುವುದು ಪ್ರಶ್ನಾರ್ಹವಲ್ಲವೇ..?.
ದೇವರೆಂಬ ಕಲ್ಪನೆಯ ಸುತ್ತಾ… ನೋಡಿ, ಈ ಜಗತ್ತಿನ ಆದಿಯಿಂದ ಇಲ್ಲಿಯವರೆಗೆ ಎಷ್ಟೋ ಅನ್ಯಾಯಗಳು ನಡೆದಿವೆ. ಯಾವ ದೇವರು ಅದನ್ನು ತಡೆಯಲಿಲ್ಲ. ಏಕೆಂದರೆ ಆತನ ಅಸ್ತಿತ್ವವೇ ಇಲ್ಲ. ಎಲ್ಲವೂ ಪ್ರಾಕೃತಿಕ ಸಹಜ ನಿಯಮಗಳು. ಎಷ್ಟೊಂದು ಯುದ್ದಗಳಾದವು, ಎಷ್ಟೊಂದು ಆಕ್ರಮಣಗಳಾದವು ಎಷ್ಟೊಂದು ಅಮಾಯಕ ಜೀವಗಳು ಬಲಿಯಾದವು. ಆಗಲೂ ದೇವರು ಕಾಪಾಡಲಿಲ್ಲ. ಎಷ್ಟೊಂದು ನೈಸರ್ಗಿಕ ವಿಕೋಪಗಳಾದವು ಆಗಲೂ ದೇವರು ಪ್ರತ್ಯಕ್ಷವಾಗಲಿಲ್ಲ. ಏಕೆಂದರೆ ಎಲ್ಲವೂ ಬಲಿಷ್ಠರ ಗೆಲುವಿನ ನ್ಯಾಯ ಮಾತ್ರ.
ಎರಡು ಮಹಾ ಯುದ್ದಗಳು, ಹಿರೋಷಿಮಾ ನಾಗಸಾಕಿ ಅಣು ಬಾಂಬುಗಳು, ಹಿಟ್ಲರ್ ನ ಯಾತನಾ ಶಿಬಿರಗಳಲ್ಲಿ ಲಕ್ಷ ಲಕ್ಷ ಜನ ಸತ್ತಾಗಲೂ ಯಾವ ಜೀಸಸ್ ಸಹ ಸಹಾಯ ಮಾಡಲೇ ಇಲ್ಲ. ಮಧ್ಯಪ್ರಾಚ್ಯದ ದೇಶಗಳಲ್ಲಿ ಮುಖ್ಯವಾಗಿ ಸಿರಿಯಾ ಇರಾಕ್ ಇರಾನ್ ಯೆಮೆನ್ ಜೊತೆಗೆ ಪಾಕಿಸ್ತಾನ ಆಫ್ಘನಿಸ್ಥಾನ ದೇಶಗಳಲ್ಲಿ ಲಕ್ಷಾಂತರ ಜನರು ಕೊಲೆಯಾಗುತ್ತಿರುವಾಗ ಯಾವ ಅಲ್ಲಾ ಸಹ ನೆರವು ನೀಡಲಿಲ್ಲ. ಬರ್ಮಾದ ರೋಹಿಂಗ್ಯಾ ಸಮುದಾಯವನ್ನು ರಕ್ಷಿಸಲಿಲ್ಲ. ತುಂಬಾ ದೂರ ಬೇಡ. ಮೊಗಲ್ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಿದಾಗ, ಬ್ರಿಟೀಷರು ಹಲವಾರು ವರ್ಷ ಇಲ್ಲಿ ಜಲಿಯನ್ ವಾಲಾಬಾಗ್ ಸೇರಿ ಅನೇಕ ಹತ್ಯಾಕಾಂಡಗಳನ್ನು ನಡೆಸಿದಾಗ, ಭಗತ್ ಸಿಂಗ್ ಅವರು ನೇಣುಗಂಭ ಏರುವಾಗ, ಸಾರ್ವಕರ್ 20 ವರ್ಷಗಳಷ್ಟು ದೀರ್ಘಕಾಲ ಅತ್ಯಂತ ಯಾತನಾಮಯ ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುವಾಗ, ಅಷ್ಟೇ ಏಕೆ ಕೆಲವೇ ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು, ಗುಜರಾತಿನಲ್ಲಿ ನಡೆದ ಮುಸ್ಲಿಂ ಹತ್ಯಾಕಾಂಡವನ್ನು ಯಾವ ದೇವರು ತಡೆಯಲಿಲ್ಲ. ಮೊನ್ನೆ ಒರಿಸ್ಸಾದಲ್ಲಿ ರೈಲು ಅಪಘಾತವಾಗಿ ಅನೇಕರು ಸತ್ತಾಗ ಹತ್ತಿರದಲ್ಲೇ ಇದ್ದ ಪೂರಿ ಜಗನ್ನಾಥ ರಕ್ಷಿಸಲಿಲ್ಲ.
ದೇವರೆಂಬುವವರು ಜೀವ ಜಗತ್ತನ್ನು ರಕ್ಷಿಸಲು ವಿಫಲವಾದ ನಂತರವೇ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆ ರೂಪಗೊಂಡಿದ್ದು. ಅದರ ನೆರಳಿನಲ್ಲಿಯೇ ನಾವು ಅಷ್ಟೋ ಇಷ್ಟೋ ಸುರಕ್ಷಿತವಾಗಿ ಜೀವನ ಸಾಗಿಸುತ್ತಿದ್ದೇವೆ. ವೆಂಕಟೇಶ್ವರರಾಗಲಿ, ಜೀಸಸ್ ಆಗಲಿ, ಅಲ್ಲಾ ಆಗಲಿ ಒಂದು ಇಡೀ ಸಮುದಾಯವನ್ನು ಊರ ಹೊರಗೆ ಇಟ್ಟು ಅಸ್ಪೃಶ್ಯತೆ ಆಚರಿಸುವಾಗಲು ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಇಡೀ ದೇಶ ಭ್ರಷ್ಟಾಚಾರದಿಂದ ಮುಳಗಿರುವಾಗ ಯಾವ ದೇವರು ಭ್ರಷ್ಟರನ್ನು ಶಿಕ್ಷಿಸುತ್ತಿಲ್ಲ.
ದೇವರೆಂಬುದು ಒಂದು ನಂಬಿಕೆ. ಆ ನಂಬಿಕೆಗಳು ಸಹ ವೈಚಾರಿಕ ನೆಲೆಯಲ್ಲಿ ಇದ್ದರೆ ಅದಕ್ಕೆ ಬಲವಿರುತ್ತದೆ. ಮೌಡ್ಯದ ನಂಬಿಕೆಯಾದರೆ ಅದೇ ಶೋಷಣೆಯ ಮಾರ್ಗ ಮತ್ತು ಅಪಾಯಕಾರಿ. ತಂದೆ ತಾಯಿ ಎಂಬ ನಂಬಿಕೆಗೆ ಸಾಂದರ್ಭಿಕ ಸಂಬಂಧದ ಹಿನ್ನೆಲೆ ಇರುತ್ತದೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬುದಕ್ಕೆ ಘಟನೆಗಳ ಇತಿಹಾಸ ಇರುತ್ತದೆ. ದೇವರ ಆಶೀರ್ವಾದದಿಂದ ಒಳ್ಳೆಯದೇ ಆಗುತ್ತದೆ ಎಂಬುದಕ್ಕೆ ಕಾಕತಾಳೀಯ ಯಶಸ್ಸು ಹೊರತುಪಡಿಸಿ ವಾಸ್ತವದ ಕಾರಣ ಇಲ್ಲ. ಜೊತೆಗೆ ಅದರಿಂದ ಇತರರು ಶೋಷಿಸುವುದೇ ಹೆಚ್ಚು.
ತುಂಬಾ ಆಶ್ಚರ್ಯಕರ ಮತ್ತು ದೌರ್ಬಾಗ್ಯದ ಸಂಗತಿಯೆಂದರೆ ಪತ್ರಕರ್ತರ ವೇಷದ ಕೆಲವು ಮೂಲಭೂತವಾದಿಗಳು ಒಂದು ಭಿನ್ನ ವೈಚಾರಿಕ ಧ್ವನಿಯನ್ನು ಸುದ್ದಿಯಾಗಿ ಪ್ರಕಟಿಸದೆ ಅದನ್ನು ಅಪಹಾಸ್ಯ ಮಾಡಿರುವುದು. ಯಾವ ಸಂವಿಧಾನಾತ್ಮಕ ಹಕ್ಕುಗಳ ಅಡಿಯಲ್ಲಿ ತಾವು ಸುರಕ್ಷಿತವಾಗಿದ್ದಾರೋ ಅದೇ ಮೌಲ್ಯಗಳನ್ನು ನಾಶ ಮಾಡುವ ಮೂರ್ಖ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾನವೀಯ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ವರ್ಗಾಯಿಸಬೇಕಾದ ಅಥವಾ ಶೈಕ್ಷಣಿಕ ಮಾಹಿತಿ ನೀಡಬೇಕು ಮಾಧ್ಯಮಗಳು ರೋಚಕತೆ ಮತ್ತು ವ್ಯಾಪಾರೀಕರಣಗೊಂಡು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯನ್ನೇ ನಾಶ ಮಾಡುತ್ತಿದ್ದಾರೆ. ಪ್ರಶ್ನಿಸುವ ಮನೋಭಾವವನ್ನೇ ಹತ್ತಿಕ್ಕಿ ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ವೈರಸ್ ಮತ್ತು ರೋಗಗಳ ಬಗ್ಗೆ, ಖಗೋಳಶಾಸ್ತ್ರದ ಬಗ್ಗೆ ವೈದ್ಯರು, ವಿಜ್ಞಾನಿಗಳಿಗಿಂತ ಭವಿಷ್ಯಕಾರರ ಬಳಿ ಮಾತನಾಡಿಸಿ ಇಡೀ ವಿಜ್ಞಾನ ಲೋಕಕ್ಕೆ ಅವಮಾನ ಮಾಡುತ್ತಿದ್ದಾರೆ.
ದೇವರು ಜೀವ ಜಗತ್ತಿಗೆ ಉಪಕಾರಿಯಾಗಿರಬೇಕು. ನ್ಯಾಯಪರವಾಗಿರಬೇಕು, ಇಲ್ಲದವರ ಧ್ವನಿಯಾಗಿರಬೇಕು. ಅಸಹಾಯಕರಿಗೆ ಸಹಾಯ ಮಾಡುವಂತಿರಬೇಕು. ಅದಿಲ್ಲದೆ ದೇವಸ್ಥಾನ ಮಂದಿರ ಮಸೀದಿ ಚರ್ಚುಗಳಲ್ಲಿ ಕುಳಿತು ಜನರಿಂದ ಪೂಜೆ ನಮಾಜು ಪ್ರಾರ್ಥನೆ ಸ್ವೀಕರಿಸುತ್ತಾ ತಟಸ್ಥವಾಗಿದ್ದರೆ ಪ್ರಯೋಜನವೇನು. ಅದೇ ಸಂವಿಧಾನ ನೋಡಿ. ಅದು ಬಹುತೇಕ ಎಲ್ಲರಿಗೂ ಸಮಾನ ನ್ಯಾಯ ಒದಗಿಸುತ್ತದೆ. ಅಸಹಾಯಕರಿಗೆ ಪರಿಹಾರ ಒದಗಿಸುತ್ತದೆ. ಚಂದ್ರಯಾನ ಸಂಶೋಧನೆ ಮಾಡಲು ಹಣವನ್ನು ನೀಡುತ್ತದೆ.
ನಾವು ನಿಷ್ಟರಾಗಬೇಕಾಗಿರುವುದು ಸಂವಿಧಾನಕ್ಕೋ ಮಸೀದಿ ಚರ್ಚು ದೇವಸ್ಥಾನಗಳಿಗೋ ಆಯ್ಕೆಯ ಸ್ವಾತಂತ್ರ್ಯ ನಿಮ್ಮದು. ನಂಬಿಕೆ ಇರಲಿ, ಭಾವನೆ ಇರಲಿ, ಭಕ್ತಿ ಇರಲಿ ಆದರೆ ದೇವರ ಆಶೀರ್ವಾದದಿಂದ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗುತ್ತದೆ ಎಂಬ ಮೌಡ್ಯ ಬೇಡ. ಧರ್ಮ ಮತ್ತು ವಿಜ್ಞಾನ ಪರಸ್ಪರ ವಿರೋಧಿಗಳಲ್ಲ. ಅಸಲಿಗೆ ವಿಜ್ಞಾನ ಎಂಬುದು ಯಾವುದೋ ಜಾತಿ ಧರ್ಮ ಪ್ರದೇಶಗಳ ಸೃಷ್ಟಿಯಲ್ಲ. ಅದೊಂದು ಸಿದ್ದಾಂತವೂ ಅಲ್ಲ. ಅದು ಪ್ರಕೃತಿಯ ಮತ್ತು ಮನುಷ್ಯ ಅನುಭವ - ಅಧ್ಯಯನದ ಸಾರ್ವತ್ರಿಕ ಸತ್ಯಗಳ ಒಂದು ಪ್ರಕ್ರಿಯೆ - ಫಲಿತಾಂಶ ಹಾಗು ಸದಾ ಕಾಲ ಸಮಯಕ್ಕೆ ತಕ್ಕಂತೆ ಪ್ರಗತಿಪರ ಅನುಕೂಲವಾಗಿ ಬದಲಾಗುತ್ತಲೇ ಇರುತ್ತದೆ. ಧರ್ಮದಂತೆ ಕೊಳೆಯುವ ಕುರುಡು ನಂಬಿಕೆಯಲ್ಲ.
ವಿಶ್ವದ ಸುಮಾರು 90% ಜನರಿಗೆ ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ಇದೆ. ಅದು ಅವರವರ ಸ್ವಾತಂತ್ರ್ಯ ಮತ್ತು ತಿಳುವಳಿಕೆ. ಹಾಗೆಯೇ ನಮ್ಮ ಸ್ವಾತಂತ್ರ್ಯ ಮತ್ತು ತಿಳಿವಳಿಕೆಯ ಮಟ್ಟದಲ್ಲಿ ಅದನ್ನು ವಿಮರ್ಶಿಸುವುದು ಒಂದು ಪ್ರಕಿಯೆ. ಇದು ಪುರಾತನ ಕಾಲದಿಂದಲೂ ಚರ್ಚೆಯ ರೂಪದಲ್ಲಿ ಇದೆ. ಎರಡು ಅಭಿಪ್ರಾಯಗಳನ್ನು ಗೌರವಿಸುವ ಮತ್ತು ವಿರೋಧಿಸುವ ಸೌಹಾರ್ದ ಮನಸ್ಥಿತಿ ನಮ್ಮದಾಗಲಿ...
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ