ದೇವರೇ ನೀ "ಸ್ವಾರ್ಥಿ"

ದೇವರೇ ನೀ "ಸ್ವಾರ್ಥಿ"

ಕಪ್ಪು ಬಿಳುಪು ಚಿತ್ರಗಳು ಬರುತ್ತಿರುವ ಕಾಲ ಅದು. ಆಗ ಇನ್ನೂ ಚಿಕ್ಕ ವಯಸ್ಸು ನನಗೆ. ದಿನಕಳೆದಂತೆ ಪ್ರಪಂಚದ ಅಭಿವೃದ್ಧಿಯೂ ಆಗುತ್ತಿತ್ತು. ನನಗೆ ಬುದ್ಧಿ ಬಂದಾಗ ಕಪ್ಪು -ಬಿಳುಪು ಚಿತ್ರಗಳು ಹೋಗಿ ಕಲರ್ಸ್ ಚಿತ್ರಗಳು ಬೆಳಕಿಗೆ ಬಂದಿದ್ದವು. ತಿಳುವಳಿಕೆ ಬಂದಾಗಿನಿಂದಲೂ ನಾನು ಇಷ್ಟ ಪಟ್ಟಿದ್ದು, ಭೇಟಿ ಮಾಡಬೇಕೆಂಬ ಕನಸು ಹೊತ್ತಿದ್ದ ವ್ಯಕ್ತಿ ನಮ್ಮ ನಾಡ ಹೆಮ್ಮೆ, ವರನಟರ ಕಿರಿಯ ಪುತ್ರ ಪುನೀತ್ ರಾಜಕುಮಾರ್. ಎಲ್ಲರೂ ಪ್ರೀತಿಯಿಂದ ಕರೆಯುವ ನಮ್ಮ "ಅಪ್ಪು"...

ಅವರ ಚಿಕ್ಕಂದಿನ ಚಿತ್ರಗಳನ್ನೆಲ್ಲಾ ನೋಡುತ್ತಾ ಬೆಳೆದಿರುವ ನನಗೆ, ಅವರು ನನಗಿಂತ ದೊಡ್ಡವರಾದರೂ ಕಣ್ಣ ಮುಂದೇ ಬೆಳೆದ ಮಗು ಅನ್ನಿಸುತ್ತದೆ. ಮೊದಮೊದಲು ಅವರ ಚಿತ್ರಗಳನ್ನಷ್ಟೇ ನೋಡಿ ಖುಷಿ ಪಡುತ್ತಿದ್ದ ನನಗೆ ಬೆಳೆಯುತ್ತಾ ಅವರನ್ನು ಭೇಟಿ ಮಾಡುವ ಆಸೆಯೂ ಹುಟ್ಟಿತು. ಆ ಆಸೆಯಿತ್ತಾದರೂ "ಅವರನ್ನೆಲ್ಲಾ ನಾವು ನೋಡುವುದಾ.. ಅದು ಸಾಧ್ಯನೇ ಇಲ್ಲ. ಅವರೆಲ್ಲಾ ಬಹಳ ಬ್ಯುಸಿ ಇರ್ತಾರೆ" ಅಂದುಕೊಂಡು ಸುಮ್ಮನಾಗಿಬಿಡುತ್ತಿದ್ದೆ. ಕೆಲವು ಚಿತ್ರಗಳ ಪೋಸ್ಟರ್ ಗಳನ್ನೆಲ್ಲಾ ನೋಡಿದಾಗ ನನ್ನ ಮೊಗದಲ್ಲೊಂದು ಮಂದಹಾಸ ಮೂಡುತ್ತಿತ್ತು. ಜೊತೆಗೇ ನೋಡಲಾಗುವುದಿಲ್ಲ ಎನ್ನುವ ಬೇಸರ. ನನಗೇ ನನ್ನ ಮೇಲೆ ಕಾನ್ಫಿಡೆನ್ಸ್ ಹುಟ್ಟಿದ ಈ ದಿನಗಳಲ್ಲಿ(ಕಳೆದ ನಾಲ್ಕೈದು ವರ್ಷಗಳು) ಅಪ್ಪುರವರ ಚಿತ್ರ ನೋಡಿದಾಗಲೆಲ್ಲಾ ಖಂಡಿತಾ ಒಮ್ಮೆಯಾದರೂ ಇವರನ್ನು ಭೇಟಿ ಮಾಡೇ ಮಾಡುತ್ತೇನೆ. ಮಾತನಾಡುತ್ತೇನೆ. ಇವರ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತೇನೆ. ಎನ್ನುವ ಹಂಬಲಗಳೆಲ್ಲಾ ದಿನಕಳೆದಂತೆ ಜಾಸ್ತಿಯಾಗತೊಡಗಿದ್ದವು.

ಇದೇ ದಿನಗಳಲ್ಲಿ  ನಾನು ಅಲ್ಪ ಸ್ವಲ್ಪ ಕವನಗಳನ್ನ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದೆ. ಅಪ್ಪುವಿಗಾಗಿ ಒಂದು ಕವನ ಬರೆದು ಓದಬೇಕು. ನನ್ನಿಂದಾಗಿ ಅವರ ಮೊಗದಲ್ಲಿ ಆ ನಗುವನ್ನು ನೋಡಬೇಕೆಂಬ ಆಸೆಯೂ ಇತ್ತು. ನನ್ನ ಜೊತೆ ಮಾತನಾಡುವಷ್ಟು ಸಮಯ ಅವರಿಗಿಲ್ಲವಾದರೂ ಒಂದು 'ಶೇಕ್ ಹ್ಯಾಂಡ್'(ಹಸ್ತಲಾಘವ)... ಅದೇ ನನ್ನ ಪಾಲಿಗೆ ಸಾಕಾಗಿತ್ತು.

ಅಪ್ಪು ಜೊತೆಗೆ ಒಂದು ನಿಮಿಷವಾದರೂ ಕಳೆಯಬೇಕೆನ್ನುವ ಹಂಬಲ ಬಹಳಷ್ಟು ಜನರ ಮನದಲ್ಲಿ ಮನೆಮಾಡಿತ್ತು. ಅಷ್ಟೆಲ್ಲಾ ಕನಸುಗಳ ಮೂಟೆ ಹೊತ್ತು ಸಾಗುತ್ತಿದ್ದ ಎಲ್ಲರಿಗೂ ಸಿಕ್ಕಿದ್ದು ನಂಬಲೇ ಬೇಕಾದ ಕಹಿ ಸತ್ಯ. ಅಂದು ಹೊತ್ತ ಕನಸಿನ ಮೂಟೆ ಕಳಚಿ, ಹೊತ್ತಿ ಉರಿಯುತ್ತಿತ್ತು. ನಗುಮುಖದ ಒಡೆಯನ ನಗುವ ನೋಡುವ ಆಸೆ ನುಚ್ಚು ನೂರಾಯಿತು. ಅಪ್ಪುವಿನ ಮುಂದೇ, ಅಪ್ಪುವಿಗಾಗಿ ಬರೆದ ಸಾಲುಗಳನ್ನು ಓದುವ ಹಂಬಲ... ಎಲ್ಲವೂ ಆ ಕನಸಿನ ಮೂಟೆಯೊಂದಿಗೆ ಬೂದಿಯಾಯಿತು. ಅಂದು ಅಪ್ಪುವಿಗಾದ ಹೃದಯಾಘಾತ ಇಂದಿಗೂ ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲವಾಗಿಸುತ್ತಿದೆ.

ಅಪ್ಪುವಿಗಾಗಿ ಬರೆದ ಸಾಲುಗಳು ಸಂತಸದಿಂದ ನಲಿಬೇಕಿತ್ತು. ಆದರೆ, ವಿಧಿಯ ಆ ಕ್ರೌರ್ಯದಿಂದ, ಒಳಿತೆಲ್ಲಾ ತನ್ನದೆನ್ನುವ ಸ್ವಾರ್ಥದಿಂದಾಗಿ, ನಾ ಬರೆದ ಸಾಲುಗಳೂ ಶೋಕದಿಂದ ಕಣ್ಣೀರಿಡುತ್ತಿವೆ.

-ಭಾರತಿ ಗೌಡ. ಶಿರಸಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ