ದೇವರೇ ಯಾಕೆ?!
ಪರಸ್ಪರ ವಾದಗಳಲ್ಲಿ ಮುಳುಗಿರುತ್ತಾರೆ. ಇಬ್ಬರೂ ಜಾಣರು. ಕೂಲಂಕಷವಾಗಿ ಪ್ರತಿಯೊಂದನ್ನೂ ಯೋಚಿಸುತ್ತಾರೆ, ವಾದಿಸುತ್ತಾರೆ. ಸಾಧಾರಣವಾಗಿ ಈ ತರಹದ ವಾದಗಳು ಒಂದು ಹಂತದಲ್ಲಿ ನಾನು ಸರಿ, ನೀನು ತಪ್ಪು -ಎಂದು ಮುಖ್ಯ ವಿಷಯದಿಂದ ಕವಲೊಡೆಯುವುದೇ ಹೆಚ್ಚು. ಆದರಿವರು ವಾದಕ್ಕಾಗಿ ವಾದ ಮಾಡುತ್ತಿಲ್ಲ, ತಿಳುವಳಿಕೆಗಾಗಿ ವಾದ. ಕಾದಾಡುತ್ತಿಲ್ಲ, ಇಬ್ಬರೂ ಸೇರಿ ಕೆದಕಾಡುತ್ತಿದ್ದಾರೆ. ಏನಿದು? ಇದೇಕೆ ಹೀಗೆ? ಇತ್ಯಾದಿ. ನನ್ನ ನಂಬಿಕೆ ನನಗೆ, ನೀನು ಕಳಚಿಕೊಳ್ಳಯ್ಯಾ ಎಂದು ದೈವಭಕ್ತನು ಹೇಳುವುದಿಲ್ಲ. ಎಲ್ಲಿ ನಿನ್ನ ದೇವರು, ತೋರಿಸು, ಎಂದು ನಾಸ್ತಿಕನು ವಾದಿಸುವುದಿಲ್ಲ. ಇಬ್ಬರಿಗೂ ತಿಳುವಳಿಕೆ ಇದೆ. ಕೆದಕುತ್ತಾರೆ, ಇನ್ನೂ ಕೆದಕುತ್ತಾರೆ.
ಮಾತು, ನನ್ನ ಬ್ರೈನ್ ಯಾಕೆ ಹೀಗೆ ಯೋಚಿಸುತ್ತದೆ, ಇನ್ನೊಬ್ಬನ ಬ್ರೈನ್ ಇನ್ನೊಂದು ಥರದಲ್ಲಿ ಯಾಕೆ ಯೋಚಿಸುತ್ತದೆ, ಎನ್ನುವ ವಿಷಯದತ್ತ ಹೊರಳುತ್ತದೆ. ಚಿಕ್ಕವರಿರುವಾಗ ನಮ್ಮ ಮೇಲೆ ಪ್ರಭಾವ ಬೀರುವ ಧರ್ಮದ ಪ್ರಭಾವವೇ, ಅಥವಾ, ಬೆಳೆದಂತೆ ನಮ್ಮ ತಿಳುವಳಿಕೆಗೆ ಅನುಗುಣವಾಗಿ ನಾವು ಬೆಳೆಸಿಕೊಳ್ಳುವ ಯೋಚನಾ ಲಹರಿಯ ಪ್ರಭಾವವೇ? ಇತ್ಯಾದಿ ಚರ್ಚೆಗಳು ನಡೆಯುತ್ತವೆ. ಜಿನ್ಯೂನ್ ಆಗಿ.
ಒಂದು ಹಂತದಲ್ಲಿ ಯಾವುದು ಹೆಚ್ಚು ಓಪನ್ ಆಗಿರುವ ಯೋಚನಾ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎನ್ನುವತ್ತ ಮಾತು ಹೊರಳುತ್ತದೆ. ಇದು calculus ಗೂ ಬಾದರಾಯಣನಿಗೂ ಇರುವ ಸಂಬಂಧದಂತೆ ಗೋಚರಿಸುತ್ತದೆ ಇಬ್ಬರಿಗೂ. ತಾವು ಓದಿರುವ ಪುಸ್ತಕಗಳು, ಸುತ್ತ ಮುತ್ತ ಇರುವ ಜನರು, ಫ್ರೆಂಡ್ಸ್.. ಇವರುಗಳ ನಡುವೆ ತಾನು ಶ್ರೇಷ್ಠನೆಂದೋ, ಡಿಫ್ರೆಂಟ್ ಎಂದೋ ಅಥವಾ likewise ಭಾವನೆಗಳಿಗೆ ಇಂಬು ಕೊಡಲಷ್ಟೇ ಅಲ್ಲವೇ ನಮ್ಮ ಬ್ರೈನ್ ಯಾವದ್ರೀತಿ ಆಲೋಚಿಸುವುದು? ಸುತ್ತಮುತ್ತಲೂ ದೈವಭಕ್ತರೋ, ಅಥವಾ ಅವರಂಥವರೋ, ಇರುವಾಗ ನಾನು ಈ ಸಂಬಂಧೀ ವಿಷಯಗಳನ್ನು ಅಭ್ಯಾಸ ಮಾಡಿದರೆ ನನಗೆ ಬೆಲೆ ಜಾಸ್ತಿ, ಅಂಡ್ ದಿ ಅದರ್ ವೇ ರೌಂಡ್ ಅಲ್ಲವೇ? ಇತ್ಯಾದಿ ಇತ್ಯಾದಿ ಯೋಚಿಸುತ್ತಾರೆ.