ದೇವರೊಡನೆ ಸಂದರ್ಶನ - 13

ದೇವರೊಡನೆ ಸಂದರ್ಶನ - 13

    ಬೆಳಿಗ್ಗೆ ಏಳುವಾಗಲೇ ಒಳ್ಳೆಯ ಮೂಡಿನಲ್ಲಿದ್ದ ಗಣೇಶರು ಟೀ ಕುಡಿಯುತ್ತಲೇ, 'ಹಗುರಾದ ಹಾಗಿದೇ . , ತೇಲಾಡುವಂತಿದೇ . . ' ಎಂದು ಹಾಡು ಗುಣುಗುಣಿಸುತ್ತಿದ್ದರು.  ಸುಮ್ಮನಿದ್ದ ಪತ್ನಿಯನ್ನು ಕುರಿತು, "ಇವತ್ತೇಕೆ ಏನೂ ಹೇಳದೇ ಸುಮ್ಮನಿರುವೆ? ವಾಕಿಂಗಿಗೆ ಹೋಗಬೇಡಿ, ಹೋದರೂ ರತ್ನಗಿರಿ ಬೋರೆ ಕಡೆಗೆ ಹೋಗಬೇಡಿ ಅಂತ ಹೇಳಲ್ಲವಾ?" ಎಂದು ಕೆಣಕಿದರು. "ನೀವು ನನ್ನ ಮಾತು ಕೇಳೋ ಜಾತಿ ಅಲ್ಲವಲ್ಲಾ, ಸುಮ್ಮನೆ ಏಕೆ ಮಾತನಾಡಿ ಬಾಯಿ ನೋಯಿಸಿಕೋಬೇಕು" ಎಂಬ ಉತ್ತರಕ್ಕೆ ನಸುನಕ್ಕ ಗಣೇಶರು ಸವಾರಿ ಹೊರಟರು. ಪೂರ್ವದಲ್ಲಿ ಉದಯಿಸಿದ ಸೂರ್ಯ ಬಿಡಿಸಿದ ಚೆಲುವಿನ ಚಿತ್ತಾರವನ್ನು ಸವಿಯುತ್ತಾ ಕಲ್ಲುಬೆಂಚಿನ ಮೇಲೆ ಕುಳಿತುಕೊಳ್ಳುತ್ತಲೇ ಮಾತು ಪ್ರಾರಂಭಿಸಿದರು.

ಗಣೇಶ: ದೇವರೇ, ಒಂದಕ್ಕಿಂತ ಒಂದು ದೊಡ್ಡದು ಅಂತ ಹೇಳುತ್ತಾ ಆಕಾಶದವರೆಗೆ ಬಂದಾಯಿತು. ಇಡೀ ಬ್ರಹ್ಮಾಂಡವೇ ಆಕಾಶದಲ್ಲಿದೆ ಅಂದ ಮೇಲೆ ಆಕಾಶಕ್ಕಿಂತ ಯಾವುದೂ ದೊಡ್ಡದು ಇರಲು ಸಾಧ್ಯವಿಲ್ಲ. ನೀನೂ ಸಹ ಆಕಾಶಕ್ಕಿಂತ ದೊಡ್ಡವನಾಗಿರಲಿಕ್ಕಿಲ್ಲ. ಏನು ಹೇಳುತ್ತೀಯಾ?
ದೇವರು: (ನಗುತ್ತಾ) ಆಕಾಶಕ್ಕಿಂತ ದೊಡ್ಡದಾದುದು ಇದೆ ಗಣೇಶಾ,  ದೊಡ್ಡದಾದುದು ಇದೆ! 
ಗಣೇಶ: ಹಾಂ?? ಏನೆಂದೆ? ಆಕಾಶಕ್ಕಿಂತ ದೊಡ್ಡದಾ? ಹೇಗೆ ಸಾಧ್ಯ? ಅಂತಹ ದೊಡ್ಡದಾದ ಸಂಗತಿಯಾದರೂ ಯಾವುದು?
ದೇವರು: ನೀನೇ!
ಗಣೇಶ: (ಗಹಗಹಿಸಿ ನಗುತ್ತಾ) ಏನು ತಮಾಷೆ ಮಾಡುತ್ತಿದ್ದೀಯಾ? ಇದುವರೆವಿಗೂ ಈ ರೀತಿ ಮಾತಾಡದಿದ್ದವನು ಈಗ ಹೀಗೆ ಮಾತಾಡುತ್ತಿದ್ದೀಯಾ ಅಂದರೆ ನನಗೇನೋ ಅನುಮಾನ! ನಾನೇನು ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದೀನಿ ಅಂದುಕೊಂಡಿದ್ದೀಯಾ? ನೀನು ನಿಜವಾಗಿಯೂ ದೇವರಾ? ನನಗೇ ತಲೆ ಕೆಟ್ಟಿದೆಯೋ, ನಿನಗೇ ಕೆಟ್ಟಿದೆಯೋ ಒಂದೂ ಗೊತ್ತಾಗುತ್ತಿಲ್ಲ.
ದೇವರು: ಗಣೇಶಾ, ಗಣೇಶಾ, ನಿಧಾನ. ನಿನಗೆ ವಿವೇಚನಾಶಕ್ತಿ ಇದೆ ಅಲ್ಲವಾ? ಸ್ವಲ್ಪ ಉಪಯೋಗಿಸು. ಈ ಆಕಾಶ ಅನ್ನುವುದು ದೊಡ್ಡದು ಅಂತ ನಿನಗೆ ಹೇಗೆ ಗೊತ್ತಾಯಿತು? ಆಕಾಶ ದೊಡ್ಡದು ಅಂತ ಗೊತ್ತಾಗಬೇಕಾದರೆ ಮೊದಲು ನೀನು ಇರಬೇಕು. ಹೌದೋ, ಅಲ್ಲವೋ? ನೀನೇ ಇಲ್ಲದಿದ್ದರೆ ಆಕಾಶ ಇದೆಯೋ, ಇಲ್ಲವೋ ಅನ್ನುವುದು ಹೇಗೆ ಗೊತ್ತಾಗುತ್ತದೆ?
ಗಣೇಶ: ನಾನು ಇಲ್ಲದಿದ್ದರೂ ಈ ಭೂಮಿ, ಸೂರ್ಯ, ಆಕಾಶ ಎಲ್ಲಾ ಇದ್ದೇ ಇರುತ್ತೆ ಅಲ್ಲವಾ?
ದೇವರು: ನೀನು ಇರುವುದರಿಂದ ಇವೆಲ್ಲಾ ಇದೆ! ಕಲ್ಪನೆ ಮಾಡಿಕೋ, ನೀನು ಇಲ್ಲ ಅಂದುಕೋ. ನೀನೇ ಇಲ್ಲದಿದ್ದ ಮೇಲೆ ನಿನಗೆ ಈ ಆಕಾಶ, ಭೂಮಿ ಇವೆಲ್ಲವನ್ನೂ ಕಾಣಲು ಸಾಧ್ಯವಿದೆಯಾ? ಹಾಗೆ ಕಾಣಲು ಸಾಧ್ಯವಿಲ್ಲ ಅಂತಾದ ಮೇಲೆ ಅವು ಯಾವುವೂ ಇಲ್ಲವೇ ಇಲ್ಲ! ನೀನು ಇರುವುದರಿಂದ ಮಾತ್ರ ಅವನ್ನು ಕಾಣಲು, ಗುರುತಿಸಲು ಸಾಧ್ಯ. ನೀನೇ ಇಲ್ಲದಿದ್ದರೆ ಅವು ಯಾವುವೂ ಇಲ್ಲ. ಅವುಗಳು ಇವೆ ಅಂತಾಗಲೀ, ಇಲ್ಲವೆಂದಾಗಲೀ ಇರುವುದೇ ಇಲ್ಲ. ಆದ್ದರಿಂದ ನಿನ್ನ ಅಸ್ತಿತ್ವ ದೊಡ್ಡದೋ, ಆಕಾಶ ದೊಡ್ಡದೋ ನೀನೇ ನಿರ್ಧಾರ ಮಾಡು.
ಗಣೇಶ: ನಾನು ಇಲ್ಲದಿದ್ದರೆ ಆಕಾಶ, ಭೂಮಿ ಯಾವುದೂ ಇರಲ್ಲ ಅಂತೀಯಲ್ಲಾ, ನೀನೂ ಸಹ ಇರಲ್ಲ, ಒಪ್ಪುತ್ತೀಯಾ? 
ದೇವರು: ಸರಿಯಾಗಿಯೇ ಹೇಳಿರುವೆ. ನೀನು ಇಲ್ಲದಿದ್ದರೆ ನಾನೂ ಇರುವುದಿಲ್ಲ. 
ಗಣೇಶ: ಇಷ್ಟು ಸುಲಭವಾಗಿ ಒಪ್ಪಿಕೊಂಡುಬಿಟ್ಟರೆ ನನಗೆ ಗಲಿಬಿಲಿ ಆಗುತ್ತೆ, ಸರಿಯಾಗಿ ಹೇಳು ಮಾರಾಯ.
ದೇವರು: ಮಾನಸಿಕ ಸ್ಥಿಮಿತ ಇಲ್ಲದವರಿಗೆ, ಸ್ವಪ್ರಜ್ಞೆ ಇಲ್ಲದವರಿಗೆ, ತಮ್ಮ ಅಸ್ತಿತ್ವದ ಅರಿವನ್ನು ಕಳೆದುಕೊಂಡವರಿಗೆ, ಅಂದರೆ ತಾವು ಯಾರು ಎಂಬುದರ ಅರಿವೂ ಸಹ ಇಲ್ಲದವರಿಗೆ ಈ ಜಗತ್ತಿನ ಬಗ್ಗೆ ತಿಳಿದುಕೊಳ್ಳಲಾಗಲೀ, ಹೇಳಲಾಗಲೀ, ಕೇಳಲಾಗಲೀ, ಯೋಚಿಸಲಾಗಲೀ ಸಾಧ್ಯವಿರುವುದಿಲ್ಲ. ಯಾರಿಗೆ ಸ್ವಪ್ರಜ್ಞೆ ಜಾಗೃತವಾಗಿರುತ್ತದೋ ಅವರಲ್ಲಿ ಯೋಚಿಸುವ ಶಕ್ತಿ ಇರುತ್ತದೆ, ಅರ್ಥ ಮಾಡಿಕೊಳ್ಳುತ್ತಾರೆ, ಕೇಳುವ, ತಿಳಿಯುವ ಕೆಲಸ ಸಾಧ್ಯವಿರುತ್ತದೆ. ನಮ್ಮ ಎಲ್ಲಾ ಚಟುವಟಿಕೆಗಳು ಏನಿವೆ ಅವೆಲ್ಲವೂ ನಮ್ಮ ಸ್ವಂತ ಅಸ್ತಿತ್ವದ ಅರಿವಿನ ಫಲವಾಗಿವೆ. ಸ್ವಪ್ರಜ್ಞೆ ಇಲ್ಲದಿದ್ದರೆ ಚಟುವಟಿಕೆಯೂ ಶೂನ್ಯ, ಜಗತ್ತೂ ಶೂನ್ಯ!
ಗಣೇಶ: ಹೌದಲ್ವಾ! ನಾನಿದ್ದರೆ ಎಲ್ಲವೂ ಇರುತ್ತೆ, ನಾನಿಲ್ಲದಿದ್ದರೆ ಯಾವುದೂ ಇಲ್ಲ!! ಅಹಾ, ನಾನೇ ಗ್ರೇಟ್ ಹಾಗಾದರೆ!೧ ದೇವರೇ, ನಿನಗಿಂತಲೂ ನಾನೇ ಗ್ರೇಟ್!
ದೇವರು: ಈ ತಿಳುವಳಿಕೆ ಬರೋದಕ್ಕೆ ನಿನಗೆ ಹೇಗೆ ಸಾಧ್ಯವಾಯಿತು? ನೀನು ನಿನ್ನೊಳಗೇ ಚಿಂತನೆ ಮಾಡಿದ್ದರ, ನಿನ್ನ ವಿವೇಚನಾಶಕ್ತಿ ಬಳಸಿದ್ದರ ಫಲ. ಒಂದು ಸಲ ಹಾಗೇ ಯೋಚಿಸು. ನೀನು ಗಾಢ ನಿದ್ರೆಯಲ್ಲಿರುತ್ತಿಯಲ್ಲಾ, ಆಗ ನಿನ್ನ ಸ್ಥಿತಿ ಹೇಗಿರುತ್ತದೆಯೆಂಬುದನ್ನು ಕಲ್ಪಿಸಿಕೋ. ನಿನಗೆ ನಿನ್ನ ಅರಿವೇ ಇರುವುದಿಲ್ಲ. ಇನ್ನು ದೇವರು, ಜಗತ್ತು, ಆಕಾಶ ಮುಂತಾದವುಗಳು ಸಹ ಇವೆಯೋ, ಇಲ್ಲವೋ ಎಂಬುದರ ಯೋಚನೆ ಸಹ ಬರುವುದಿಲ್ಲ. ಆಗ ಸುಖ-ದುಃಖ, ಲಾಭ-ನಷ್ಟ, ನೋವು-ನಲಿವುಗಳ ಸುಳಿವೂ ಇರುವುದಿಲ್ಲ. ಯಾವ ಜಂಜಾಟವೂ ಇರುವುದೇ ಇಲ್ಲ. ನಿದ್ದೆಯಿಂದ ಎಚ್ಚರವಾದ ತಕ್ಷಣದಲ್ಲಿ ನಿನ್ನ ನಾನು ಎದ್ದುಬಿಡುತ್ತದೆ! ನಾನು ಗಣೇಶ, ನಾನು ಇಂತಹವನು, ಹಾಗೆ, ಹೀಗೆ ಜಾಗೃತವಾಗಿಬಿಡುತ್ತದೆ. ಸುತ್ತಮುತ್ತಲ ಪ್ರಪಂಚವೂ ಎದ್ದುಬಿಡುತ್ತದೆ! 
ಗಣೇಶ: ನನಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ನಾನು ಇದ್ದರೆ ಜಗತ್ತು, ಇಲ್ಲದಿದ್ದರೆ ಇಲ್ಲ ಎಂಬುದನ್ನು ನೆನೆಸಿಕೊಂಡರೆ ನಾನು ದೊಡ್ಡವನು ಎಂಬ ಭಾವದಿಂದ ಜಂಭ ಬರುತ್ತದೆ. ಆದರೆ ಇನ್ನೂ ಏನೋ ಕೊರತೆ, ಗೊಂದಲ ಕಾಡುತ್ತದೆ. 
ದೇವರು: ಇದು ತಿಳಿಯುವ ಕುತೂಹಲವಿರುವ ಎಲ್ಲರಿಗೂ ಆಗುವ ಸಹಜವಾದ ಅನುಭವ, ಕ್ರಮೇಣ ನಿನಗೇ ಅರ್ಥವಾಗುತ್ತಾ ಹೋಗುತ್ತದೆ. ಇವತ್ತಿಗೆ ಇಷ್ಟು ಸಾಕು ಎಂದು ನಿನಗೆ ಅನ್ನಿಸುತ್ತಿರುವುದು ನನಗೆ ಗೊತ್ತಾಗುತ್ತಿದೆ. ಹೋಗಿಬಾ, ಶುಭವಾಗಲಿ.
     ಉಲ್ಲಸಿತ ಭಾವದಿಂದ ಗಣೇಶರು ಮನೆಗೆ ಬಂದು ಆರಾಮಕುರ್ಚಿಯಲ್ಲಿ ಕುಳಿತು ಸವಿಯಾದ ಟೀ ಗುಟುಕರಿಸುತ್ತಿದ್ದರು. ಟಿವಿಯಲ್ಲಿ ಮೂಢ ಉವಾಚದ ವ್ಯಾಖ್ಯಾನ ಬರುತ್ತಿತ್ತು. ವ್ಯಾಖ್ಯಾನಕಾರರು ಹೇಳುತ್ತಿದ್ದರು: 
     "ನಾವು ಮಹತ್ತಾದ ಸಂಗತಿಗಳು ನಮ್ಮ ಹೊರಗೆ ಇವೆ ಎಂದು ಭಾವಿಸಿ ಹೊರಗಿನ ಸಂಗತಿಗಳಲ್ಲಿ ಹುಡುಕಾಟ, ತಡಕಾಟ ನಡೆಸುತ್ತಿರುತ್ತೇವೆ. ನಾವು ಯಾವುದನ್ನು ದೊಡ್ಡದು ಎಂಬುದಾಗಿ ಭಾವಿಸಿರುತ್ತೇವೋ ವಾಸ್ತವವಾಗಿ ಅವುಗಳಿಗೆ ನಾವೇ ಆಧಾರವಾಗಿರುತ್ತೇವೆ. ನಾವು ಏನನ್ನು ಹುಡುಕುತ್ತಿದ್ದೇವೋ ಅವೆಲ್ಲವೂ ನಮ್ಮೊಳಗೇ ಇವೆ. ಈ ಅರಿವನ್ನು ಮೂಡಿಸಿಕೊಳ್ಳಬೇಕು ಎಂದು ಈ ಉವಾಚ ಹೇಳುತ್ತೆ, ಕೇಳಿ:
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||  . . ." 
-ಕ.ವೆಂ.ನಾಗರಾಜ್.

Comments

Submitted by Palahalli Vishwanath Fri, 02/26/2016 - 17:09

"ನೀನೇ ಇಲ್ಲದಿದ್ದರೆ ಆಕಾಶ ಇದೆಯೋ, ಇಲ್ಲವೋ ಅನ್ನುವುದು ಹೇಗೆ ಗೊತ್ತಾಗುತ್ತದೆ?
ಗಣೇಶ: ನಾನು ಇಲ್ಲದಿದ್ದರೂ ಈ ಭೂಮಿ, ಸೂರ್ಯ, ಆಕಾಶ ಎಲ್ಲಾ ಇದ್ದೇ ಇರುತ್ತೆ ಅಲ್ಲವಾ?
ದೇವರು: ನೀನು ಇರುವುದರಿಂದ ಇವೆಲ್ಲಾ ಇದೆ! ಕಲ್ಪನೆ ಮಾಡಿಕೋ, ನೀನು ಇಲ್ಲ ಅಂದುಕೋ. ನೀನೇ ಇಲ್ಲದಿದ್ದ ಮೇಲೆ ನಿನಗೆ ಈ ಆಕಾಶ, ಭೂಮಿ ಇವೆಲ್ಲವನ್ನೂ ಕಾಣಲು ಸಾಧ್ಯವಿದೆಯಾ? ಹಾಗೆ ಕಾಣಲು ಸಾಧ್ಯವಿಲ್ಲ ಅಂತಾದ ಮೇಲೆ ಅವು ಯಾವುವೂ ಇಲ್ಲವೇ ಇಲ್ಲ! ನೀನು ಇರುವುದರಿಂದ ಮಾತ್ರ ಅವನ್ನು ಕಾಣಲು, ಗುರುತಿಸಲು ಸಾಧ್ಯ. ನೀನೇ ಇಲ್ಲದಿದ್ದರೆ ಅವು ಯಾವುವೂ ಇಲ್ಲ. ಅವುಗಳು ಇವೆ ಅಂತಾಗಲೀ, ಇಲ್ಲವೆಂದಾಗಲೀ ಇರುವುದೇ ಇಲ್ಲ. "

ಟಾಗೂರ್ ಮತ್ತು ಐನ್ ಸ್ತೈನರ ಸ೦ಭಾಷಣೆ ಸುಮಾರು ಹೀಗೇ ಇದೆ. ಟಾಗೂರ್=ದೇವರು. ಐನ್ಸ್ಟೈನ್ = ಗಣೇಶ. ,ಮತ್ತೆಲ್ಲೋ ಐನ್ಸ್ಟೈನ್ ಕೆಳುತ್ತಾರೆ - ನಾನಿಲದಿದ್ದಎ ಚ೦ದ್ರನಿಲ್ವೆ? .... ನನ್ನ ಹೊಸ ಪುಸ್ತಕ ' ಶತಮಾನಪುರುಷ ಐನ್ ಸ್ಟೈನ್' ನಲ್ಲಿ ಇದ್ರ ಬಗ್ಗೆ ಸ್ವಲ್ಪ ಚರ್ಚೆ ಇದೆ

Submitted by nageshamysore Fri, 02/26/2016 - 20:42

ಆಕಾಶನೂ ಸುತ್ತಿಸಿ ಈಗ 'ಅಹಂ ಬ್ರಹ್ಮಾಸ್ಮಿ' ಕಡೆ ತಂದು ಬಿಟ್ಟಿದ್ದೀರ ಗಣೇಶರನ್ನ - ಆದ್ರೆ 'ನಾನೇ ಗ್ರೇಟ್ ' ಅನ್ನೋ ಭಾವ ಗಣೇಶರ ದಿಲ್ ನ ಪೂರಾ ಖುಷ್ ಮಾಡಿರೋ ಹಾಗೆ ಕಾಣ್ತಿದೆ :-)

Submitted by Nagaraj Bhadra Sun, 02/28/2016 - 00:06

ನಮಸ್ಕಾರ ಸರ್,ಕಡೆಯಲ್ಲಿ ಮಾನವನೇ ದೊಡ್ಡವನ್ನು ಎಂದು ಹೇಳಿ ಗಣೇಶ ಹಾಗೂ ನನ್ನಗೂ ಸಂತೋಷ ಪಡಿಸಿದಿರಿ.ಮುಂದೆ ಏನು ಕಾದಿದ್ದೆಯೋ.

Submitted by RAMAMOHANA Sat, 03/05/2016 - 10:12

In reply to by kavinagaraj

ಮೂಢ‌ ಕವಿ ನಾಗರಾಜ್ ಸರ್ ಗೆ ನಮಸ್ಕಾರಗಳು,

"ನೀನೇ ಇಲ್ಲದಿದ್ದರೆ ಆಕಾಶ ಇದೆಯೋ, ಇಲ್ಲವೋ ಅನ್ನುವುದು ಹೇಗೆ ಗೊತ್ತಾಗುತ್ತದೆ?
ಗಣೇಶ: ನಾನು ಇಲ್ಲದಿದ್ದರೂ ಈ ಭೂಮಿ, ಸೂರ್ಯ, ಆಕಾಶ ಎಲ್ಲಾ ಇದ್ದೇ ಇರುತ್ತೆ ಅಲ್ಲವಾ?
ದೇವರು: ನೀನು ಇರುವುದರಿಂದ ಇವೆಲ್ಲಾ ಇದೆ! ಕಲ್ಪನೆ ಮಾಡಿಕೋ, ನೀನು ಇಲ್ಲ ಅಂದುಕೋ. ನೀನೇ ಇಲ್ಲದಿದ್ದ ಮೇಲೆ ನಿನಗೆ ಈ ಆಕಾಶ, ಭೂಮಿ ಇವೆಲ್ಲವನ್ನೂ ಕಾಣಲು ಸಾಧ್ಯವಿದೆಯಾ? ಹಾಗೆ ಕಾಣಲು ಸಾಧ್ಯವಿಲ್ಲ ಅಂತಾದ ಮೇಲೆ ಅವು ಯಾವುವೂ ಇಲ್ಲವೇ ಇಲ್ಲ!``

ಅವು ಯಾವುದೂ ಆಗ‌ ` ನಾನು` ಪಾಲಿಗೆ ಇಲ್ಲವಾಗುತ್ತದೆ ಹೊರತು, ಅವುಗಳ‌ ಅಸ್ಥಿತ್ವ‌ ಇಲ್ಲವಾಗುವುದಿಲ್ಲ‌. ಇಲ್ಲವೆ ಆಗ‌ `ನಾನು` ಭಾವ‌ `ನೀನು` (ಪರಮಾತ್ಮ‌) ವಿನಲ್ಲಿ ಲೀನವಾಗುತ್ತದೆ. ಅದೇ ಸಮಾಧಿ ಅಥವ‌ ಬಂಧಮುಕ್ತ‌ ಸ್ಥಿತಿ. ‍ ಅನಿಸಿದ್ದು,.

ದೇವರೊಡನೆ ಸಂಭಾಷಣೆ ಚೆನ್ನಾಗಿದೆ.

ರಾಮೋ.

Submitted by kavinagaraj Sun, 03/06/2016 - 15:12

In reply to by RAMAMOHANA

ನಮಸ್ತೆ ರಾಮಮೋಹನರೇ. ಇದು ಒಂದು ರೀತಿಯಲ್ಲಿ ಮೊಟ್ಟೆ ಮೊದಲೋ, ಕೋಳಿ ಮೊದಲೋ ಎಂಬ ವಾದದಂತೆ! ಬೃಹತ್ ಬ್ರಹ್ಮಾಂಡದ ಅತಿ ಸಣ್ಣ ಜೀವಿಗಳು ತಮ್ಮ ಶಕ್ತ್ಯಾನುಸಾರ ನಿರ್ಧರಿಸುತ್ತವೆ!! ಎಲ್ಲಾ ದೇವರ ಆಟವೇ????