ದೇವರೊಡನೆ ಸಂದರ್ಶನ - 5

ದೇವರೊಡನೆ ಸಂದರ್ಶನ - 5

    "ಏನ್ರೀ ಅದು, ಮಾತೇ ಮುತ್ತು, ಮಾತೇ ಮೃತ್ಯು ಅಂತ ರಾತ್ರಿಯೆಲ್ಲಾ ಕನವರಿಸುತ್ತಿದ್ದಿರಿ. ಯಾವ ಸ್ವಾಮಿಗಳ ಉಪದೇಶ ಕೇಳಕ್ಕೆ ಹೋಗಿದ್ದಿರಿ?" ವಾಕಿಂಗಿಗೆ ಹೊರಡಲು ಸಿದ್ಧರಾಗಿದ್ದ ಗಣೇಶರನ್ನು ಅವರ ಪತ್ನಿ ವಿಚಾರಿಸಿದಾಗ ಅವರು ಮುಗುಳ್ನಗುತ್ತಾ "ಮಾತೇ ಮುತ್ತು, ಮಾತಿಂದಲೇ ಮುತ್ತು, ಮಾತಿಂದಲೇ ಕುತ್ತು" ಎನ್ನುತ್ತಾ ಹೊರಹೊರಟರು. ಹುರುಪು, ಉಲ್ಲಾಸದಿಂದ ಹೆಜ್ಜೆ ಹಾಕುತ್ತಾ ರತ್ನಗಿರಿಬೋರೆಯ ಮಾಮೂಲು ಕಲ್ಲುಬೆಂಚಿನ ಮೇಲೆ ಕುಳಿತು ಆಗಸಕ್ಕೆ ಕೆಂಬಣ್ಣದ ಲೇಪ ಹಚ್ಚಿ ಮೂಡುತ್ತಿದ್ದ ರವಿಯನ್ನು ವೀಕ್ಷಿಸುತ್ತಲೇ, "ದೇವರೇ, ಮುಂದುವರೆಸೋಣವೇ?" ಎಂದು ಪ್ರಾರಂಭಿಸಿದರು.

ಗಣೇಶ: ಹೌದು, ನೀನು ಯಾರು ಏನು ಮಾಡಿದರೂ ಸುಮ್ಮನಿರುತ್ತೀಯಲ್ಲಾ, ನಿನ್ನನ್ನು ಪೂಜೆ ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ ಅಲ್ಲವಾ?

ದೇವರು: ನೀವು ಏನು ಮಾಡಿದರೂ ನಿಮಗೆ ಅದರ ಫಲ ಸಿಗುವಂತೆ ಮಾಡಿಟ್ಟಾಗಿದೆ. ನಿಮಗೆ ಒಳ್ಳೆಯ ಫಲ ಬೇಕೆಂದರೆ ಒಳ್ಳೆಯ ಕೆಲಸ ಮಾಡಿ, ಬೇಡವೆಂದರೆ ಬಿಡಿ.

ಗಣೇಶ: ನನಗೆ ಈಗಲೂ ಒಂದು ಡೌಟು! ಅಯ್ಯೋ, ವಿಷಯ ಎಲ್ಲೆಲ್ಲಿಗೋ ಹೋಯಿತು. ಮೂಲ ವಿಷಯಕ್ಕೇ ಬರುತ್ತೇನೆ. ನಿಜಕ್ಕೂ ಜ್ಞಾನಕ್ಕಿಂತ ಮಾತೇ ದೊಡ್ಡದು. ಮಾತಿಲ್ಲದಿದ್ದರೆ ನಾನು ನಿನ್ನೊಂದಿಗೆ ಹೀಗೆ ಮಾತನಾಡಲಾಗುತ್ತಿತ್ತೇ? ಇಂತಹ ಮಾತಿಗಿಂತಲೂ ದೊಡ್ಡದು ಯಾವುದು ಇರಬಹುದು?

ದೇವರು: ಮಾತಿಗಿಂತಲೂ ದೊಡ್ಡದು ಮನಸ್ಸು. ಮನಸ್ಸು ಮೊದಲು ಹೀಗೆ ಮಾಡು, ಹಾಗೆ ಮಾತನಾಡು ಎಂದು ನಿಮಗೆ ಹೇಳುತ್ತದೆ. ನಂತರ ಅದರಂತೆ ನೀವು ಮಾಡುತ್ತೀರಿ, ಮಾತನಾಡುತ್ತೀರಿ.

ಗಣೇಶ: ಅರ್ಥವಾಯಿತು. ನಾವು ಏನು ಮಾಡಬೇಕು, ಮಾತನಾಡಬೇಕು ಅಂದುಕೊಳ್ಳುತ್ತೀವೋ ಹಾಗೆ ಮಾಡುತ್ತೇವೆ. ಅಂದರೆ, ನಾವು ಅಂದರೆ ನಮ್ಮ ಮನಸ್ಸು, ಮನಸ್ಸು ಅಂದರೆ ನಾವು, ಅಲ್ಲವೇ?

ದೇವರು: ಮನಸ್ಸು ಅನ್ನುವುದು ಎಷ್ಟು ಪ್ರಬಲ ಅನ್ನುವುದು ನಿನ್ನ ಮಾತಿನಿಂದಲೇ ತಿಳಿಯಿತಲ್ಲವೇ? ಆದರೆ, ಮನಸ್ಸು ಅಂದರೆ ನೀವಲ್ಲ. ನೀವು ಬೇರೆಯೇ ಆಗಿದ್ದೀರಿ. ವ್ಯಾವಹಾರಿಕವಾಗಿ ಮನಸ್ಸನ್ನು ನೀವು ಎಂದು ಹೇಳಬಹುದು. ಅದು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬದಂತೆ. ಪ್ರತಿಬಿಂಬ ಆದರೋ ಮೂಲದ ರೀತಿಯಲ್ಲೇ ಇರುತ್ತದೆ. ಆದರೆ ಈ ಮನಸ್ಸು ಇದೆಯಲ್ಲಾ, ಅದು ಕೆಲವು ಸಲ ಮೂಲಕ್ಕಿಂತಲೂ ಭಿನ್ನವಾಗಿಯೇ ವರ್ತಿಸುತ್ತದೆ. ಒರಿಜಿನಲ್ಲು, ಡೂಪ್ಲಿಕೇಟು ಅನ್ನಬಹುದು. ಮನಸ್ಸು ಡೂಪ್ಲಿಕೇಟ್ ನೀವು ಆಗಿದೆ. ಡೂಪ್ಲಿಕೇಟ್ ಮಾಡುವ ಅವಾಂತರಗಳ ಫಲ ಅನುಭವಿಸಬೇಕಾದುದು ಮಾತ್ರ ಒರಿಜಿನಲ್ಲೇ ಆಗಿರುತ್ತದೆ. ನೀವು ಮನಸ್ಸಿನ ಯಜಮಾನರಾದರೆ ಮುಂದುವರೆಯುತ್ತೀರಿ. ಮನಸ್ಸು ನಿಮ್ಮ ಮೇಲೆ ಸವಾರಿ ಮಾಡಿದರೆ ಹಿಂದಕ್ಕೇ ಹೋಗುತ್ತೀರಿ.

ಗಣೇಶ: ನಿಜ ದೇವರೇ, ಮನಸ್ಸು ಮಾಡುವ ಅವಾಂತರ ಅಷ್ಟಲ್ಲ, ಅನುಭವಿಸಿಬಿಟ್ಟಿದ್ದೇನೆ. ಇದಕ್ಕಿಂತಲೂ ದೊಡ್ಡದು ಯಾವುದು?

ದೇವರು: ಮನಸ್ಸಿನ ಯಜಮಾನನೂ ಒಬ್ಬನಿದ್ದಾನೆ. ಅದೇ ಇಚ್ಛಾಶಕ್ತಿ! ಈ ಜಗತ್ತಿನಲ್ಲಿ ಇಚ್ಛಾಶಕ್ತಿ ಇಲ್ಲದ ಯಾವುದೇ ಒಂದು ಸಂಗತಿ ಇಲ್ಲ. ಪ್ರತಿಯೊಂದು ಸಂಗತಿಯ ಗುಣ, ಸ್ವಭಾವ, ಅಸ್ತಿತ್ವಕ್ಕೆ ಈ ಇಚ್ಛಾಶಕ್ತಿ ಇರಲೇಬೇಕು. ನಿನಗೆ ಅರ್ಥವಾಗುವಂತೆ ಹೇಳಬೇಕೆಂದರೆ ಈ ಗಾಳಿ, ನೀರು, ಬೆಂಕಿ ಇವುಗಳು ನಿರ್ದಿಷ್ಟ ಗುಣವುಳ್ಳದ್ದಾಗಿವೆ. ಬೆಂಕಿಯ ಕೆಲಸ ಸುಡುವುದು, ನೀರಿನ ಕೆಲಸ ಆರಿಸುವುದು. ಅವುಗಳ ಕೆಲಸ ಅವು ಮಾಡುವುದಕ್ಕೆ ಅವುಗಳಲ್ಲಿನ ಇಚ್ಛಾಶಕ್ತಿಯೇ ಕಾರಣ. ಅದಿಲ್ಲದಿದ್ದರೆ ಬೆಂಕಿ ತಣ್ಣಗಿರುತ್ತಿತ್ತು, ನೀರು ಸುಡುವ ಕೆಲಸ ಮಾಡುತ್ತಿತ್ತು. ಅಂದರೆ ಇಚ್ಛಾಶಕ್ತಿ ಇಲ್ಲದಿದ್ದಿದ್ದರೆ ಒಂದು ಇನ್ನೊಂದರ ಗುಣವನ್ನು ಅರಗಿಸಿಕೊಂಡು ಎಲ್ಲವೂ ಒಂದೇ ಆಗಿಬಿಡುತ್ತಿದ್ದವು. ನಿಮ್ಮ ಶರೀರದಲ್ಲಿ ರಕ್ತ ಹೀಗೆಯೇ ಹರಿಯಬೇಕು, ಹೃದಯ ಹೀಗೆಯೇ ಬಡಿದುಕೊಳ್ಳಬೇಕು, ಹೀಗೆಯೇ ಉಸಿರಾಡಬೇಕು ಮುಂತಾದ ಕೆಲಸಗಳ ಹಿಂದೆಯೂ ಕೆಲಸ ಮಾಡುತ್ತಿರುವುದು ಇದೇ ಇಚ್ಛಾಶಕ್ತಿ. ಇಚ್ಛಾಶಕ್ತಿ ನಿಮ್ಮೊಳಗೇ ಇದೆ. ಅದನ್ನು ಹೊಸದಾಗಿ ಗಳಿಸಿಕೊಳ್ಳಬೇಕಿಲ್ಲ. ಅದನ್ನು ಉಪಯೋಗಿಸಿಕೊಳ್ಳಬೇಕಷ್ಟೆ. ಅದಕ್ಕೆ ಅಡ್ಡಿಯಾಗಿರುವುದು ನಿಮ್ಮ ಮನಸ್ಸೇ ಆಗಿದೆ. ನಾಯಿ ಬಾಲ ಆಡಿಸಬೇಕೋ, ಬಾಲವೇ ನಾಯಿಯನ್ನು ಆಡಿಸಬೇಕೋ ಅನ್ನುವುದು ನಿಮ್ಮಗಳಿಗೇ ಬಿಟ್ಟಿದ್ದು.

ಗಣೇಶ: ಅಯ್ಯಪ್ಪಾ! ನಾಯಿಬಾಲ ಡೊಂಕಷ್ಟೇ ಅಲ್ಲ, ಎಷ್ಟೊಂದು ಗಟ್ಟಿ ಅನ್ನುವುದೂ ಗೊತ್ತಾಯಿತು. ಇಷ್ಟು ಕೇಳಿಯೇ ಸುಸ್ತಾಯಿತು. ಈ ಇಚ್ಛಾಶಕ್ತಿಯ ನಂತರದ್ದಾದರೂ ಯಾವುದು?

ದೇವರು: ನೆನಪಿನ ಶಕ್ತಿ ಇಲ್ಲದಿದ್ದರೆ ನಾನು ಈ ಮೊದಲು ಹೇಳಿದ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ಆದ್ದರಿಂದ ಸ್ಮರಣಶಕ್ತಿ ದೊಡ್ಡದಾಗಿದೆ. ಎಷ್ಟೇ ದೊಡ್ಡ ಪಂಡಿತರಾಗಿದ್ದರೂ ನೆನಪಿನ ಶಕ್ತಿ ಇಲ್ಲದಿದ್ದರೆ ಪಾಂಡಿತ್ಯಕ್ಕೆ ಏನೂ ಬೆಲೆ ಇರದು. ಈಗ ಆಡಿದ ಮಾತೇ ಇನ್ನೊಂದು ಗಳಿಗೆಗೆ ಮರೆತುಹೋದರೆ ಪ್ರಯೋಜನವೇನು? ಈ ನೆನಪಿನ ಶಕ್ತಿ ಹಾಳಾಗುವುದಕ್ಕೆ ಹಲವು ಕಾರಣಗಳಿರುತ್ತವೆ. ಅದನ್ನು ಉಳಿಸಿಕೊಳ್ಳಲೂ ಸಾಧನೆ ಮಾಡಬೇಕಾಗುತ್ತದೆ. ಸದ್ಯಕ್ಕೆ ಇಷ್ಟು ನಿನಗೆ ಸಾಕು. ಇದುವರೆಗೆ ಕೇಳಿದ್ದನ್ನು ಮರೆಯದಿದ್ದರೆ ನಿನಗೇ ಒಳ್ಳೆಯದು.

ಗಣೇಶ: ಅದೇನೋ ನಿಜ. ನಮಗೆ ಬೇಕಾದದ್ದು ಮಾತ್ರ ನೆನಪಿರುತ್ತದೆ. ಇಷ್ಟವಿಲ್ಲದ್ದು ಮರೆತುಹೋಗುತ್ತದೆ. ನೆನಪಿನ ಶಕ್ತಿಗಿಂತಲೂ ದೊಡ್ಡದು ಯಾವುದು ಎಂದು ತಿಳಿಯುವ ಕುತೂಹಲ ನನಗೆ.

ದೇವರು: ಅದು ಮನೋಕೇಂದ್ರೀಕರಣ. ನೀವು ಧ್ಯಾನ ಅನ್ನುತ್ತೀರಲ್ಲಾ, ಅದು. ಧೃಡತೆ ಮತ್ತು ಸ್ಥಿರತೆ ಇದರ ಲಕ್ಷಣವಾಗಿದೆ.

ಗಣೇಶ: ಹಿಂದೆ ಋಷಿ-ಮುನಿಗಳು, ರಾಕ್ಷಸರು ಮುಂತಾದವರು ಇಷ್ಟಾರ್ಥ ಸಿದ್ಧಿಗೆ ತಪಸ್ಸು ಮಾಡುತ್ತಿದ್ದರಲ್ಲಾ ಅದೂ ಧ್ಯಾನವೇ ಅಲ್ಲವೇ? ನನಗೆ ಒಂದು ಸಂದೇಹ. ನೀನು ಹೇಗಿದೀಯಾ ಅಂತಲೇ ನಮಗೆ ಗೊತ್ತಿಲ್ಲ. ಕೆಲವರು ನಿರಾಕಾರ ಅಂತಾರೆ. ತುಂಬಾ ಜನ ನಿನಗೆ ದೇವಸ್ಥಾನ ಕಟ್ಟಿ ನಿನ್ನ ವಿಗ್ರಹ ಇಟ್ಟು ಪೂಜೆ ಮಾಡ್ತಾರೆ. ಯಾವುದನ್ನು ನಂಬುವುದು? ಯಾವುದನ್ನು ಬಿಡುವುದು?

ದೇವರು: ಎರಡೂ ರೀತಿ ಹೇಳುವವರು ನೀವೇನೇ! ಸರ್ವವ್ಯಾಪಿ ಅನ್ನುವವನನ್ನು ಒಂದು ಸ್ಥಳದಲ್ಲಿ ಮಾತ್ರ ಇದ್ದಾನೆ ಅಂದರೆ ವ್ಯಾಪಕನನ್ನು ವ್ಯಾಪ್ಯನನ್ನಾಗಿ ಮಾಡಿದಂತೆ.

ಗಣೇಶ: ನನ್ನ ಸಮಸ್ಯೆ ಏನೆಂದರೆ ಏನಾದರೂ ಪ್ರತೀಕ ಇದ್ದರೆ ತಾನೇ ಅದರಲ್ಲಿ ಮನಸ್ಸನ್ನು ನಿಲ್ಲಿಸಲು ಸಾಧ್ಯ ಆಗೋದು? ಇಲ್ಲದೇ ಇದ್ದರೆ ಮನಸ್ಸನ್ನು ಕೇಂದ್ರೀಕರಿಸೋದಾದರೂ ಹೇಗೆ?

ದೇವರು: ನೀನು ಧ್ಯಾನ ಮಾಡಬೇಕಿರೋದು ಪರಮಾತ್ಮನ ಬಗ್ಗೆಯೋ ಅಥವ ವಿಗ್ರಹದ ಬಗ್ಗೆಯೋ?

ಗಣೇಶ: ವಿಗ್ರಹದ ಮೂಲಕ ಪರಮಾತ್ಮನ ಬಗ್ಗೆ.

ದೇವರು: ಪರಮಾತ್ಮನ ಕುರಿತ ಚಿಂತನೆ, ಧ್ಯಾನ ಒಳ್ಳೆಯದೇ. ಆದರೆ ಯಾವುದರ ಮೂಲಕ ಅವನನ್ನು ಕಾಣಬಯಸುತ್ತೀಯೋ ಅಲ್ಲಿಗೇ ನಿನ್ನನ್ನು ನಿಲ್ಲಿಸಿಕೊಂಡುಬಿಟ್ಟರೆ ಪ್ರಯೋಜನವಾಗದು. ಮೊದಲು ಧ್ಯಾನ ಅನ್ನುವ ಕುರಿತು ನಿಮ್ಮ ಕಲ್ಪನೆ ಸ್ಪಷ್ಟವಾಗಬೇಕು. ಧ್ಯಾನ ಅಂದರೇನೆಂದೇ ತಿಳಿಯದಿದ್ದವರು ಧ್ಯಾನ ಏನು ಮಾಡಿಯಾರು?

ಗಣೇಶ: ಧ್ಯಾನ ಅಂದರೆ ಕಣ್ಣು ಮುಚ್ಚಿಕೊಂಡು ನಿನ್ನ ಹೆಸರನ್ನೋ, ಮತ್ತೇನನ್ನೋ ಜಪಿಸುವುದು ಅಷ್ಟೇ ತಾನೇ?

ದೇವರು: ನಾನು ಮೊದಲೇ ಹೇಳಿದ್ದೆ, ಧೃಢತೆ ಮತ್ತು ಸ್ಥಿರತೆ ಧ್ಯಾನದ ಲಕ್ಷಣ. ಧೀ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಯಶಸ್ಸಿನ ಯಾನವೇ ಧ್ಯಾನ. ನೀನು ಹೇಳಿದಂತೆ ಕೇವಲ ಸ್ನಾನ ಮಾಡಿ ವಿಭೂತಿ, ಪಟ್ಟೆ, ಮುದ್ರೆ, ಕುಂಕುಮ ಮುಂತಾದುವನ್ನು ಹಚ್ಚಿಕೊಂಡು ಕಣ್ಣುಮುಚ್ಚಿ ಕುಳಿತು ಯಾವುದೋ ಮಂತ್ರ ಜಪಿಸುವುದು ಮಾತ್ರ ಧ್ಯಾನ ಆಗುವುದಿಲ್ಲ. ಮನಸ್ಸಿನಲ್ಲಿ ಸ್ಪಷ್ಟ ಲಕ್ಷ್ಯ ಇಲ್ಲದಿದ್ದರೆ ಧ್ಯಾನಕ್ಕೆ ಅರ್ಥ ಬರುವುದೂ ಇಲ್ಲ. ನಿಮ್ಮ ಶರೀರ ಮಾತ್ರ ಕಣ್ಣುಮುಚ್ಚಿ ಕುಳಿತಿದ್ದರೂ ನಿಮ್ಮ ಮನಸ್ಸು ಮಾತ್ರ ಎಲ್ಲೆಲ್ಲೋ ಕುಣಿಯುತ್ತಿರುತ್ತದೆ. ನಡೆದು ಹೋದ ಸಂಗತಿಗಳ ಬಗ್ಗೆಯೋ, ಯಾವುದೋ ಆಮೋದ-ಪ್ರಮೋದದ ಬಗ್ಗೆಯೋ, ಮತ್ತಿನ್ನೇನಾವುದೋ ಸಂಗತಿಯ ಬಗ್ಗೆಯೋ ಚಿಂತಿಸುತ್ತಿರುತ್ತದೆ. ಅಸ್ಪಷ್ಟ ಗುರಿಯಿದ್ದರೆ ಮನಸ್ಸು ಅದರ ಮೇಲೆ ಹೇಗೆ ನಿಂತೀತು?

ಗಣೇಶ: ಹಾಗಾದರೆ ಧ್ಯಾನ ಹೇಗೆ ಮಾಡೋದು? ಮನಸ್ಸು ನಾವು ಹೇಳಿದ ಹಾಗೆ ಕೇಳಬೇಕಲ್ಲಾ?

ದೇವರು: ಧ್ಯಾನ ಮಾಡುವುದು ಮನಸ್ಸಿನ ನಿಯಂತ್ರಣಕ್ಕೆ ಸಹಕಾರಿ. ಆದರೆ ಯಾವುದರ ಕುರಿತು ಧ್ಯಾನ ಮಾಡುತ್ತಿದ್ದೀರಿ, ಏಕೆ ಮಾಡುತ್ತಿದ್ದೀರಿ ಎಂಬುದರ ಸ್ಪಷ್ಟ ಕಲ್ಪನೆ ಮೊದಲು ಇರಬೇಕು. ಅದೇ ಇಲ್ಲದಿದ್ದರೆ ಧ್ಯಾನದಲ್ಲಿ ಮನಸ್ಸು ಹೇಗೆ ತಾನೇ ನಿಂತೀತು? ನೀವು ಯಾವುದೋ ಇಷ್ಟವಾದ ಕೆಲಸ ಮಾಡುತ್ತಿರುವಾಗ, ಅದು ಮುಗಿಯುವವರೆಗೂ ನಿಮಗೆ ಬೇರೆ ವಿಷಯಗಳ ಬಗ್ಗೆ ಪರಿಮೆರುವುದಿಲ್ಲ. ಊಟ ಮಾಡುವಾಗಲೂ, ಬೇರೆ ಕೆಲಸಗಳಲ್ಲಿ ತೊಡಗಿರುವಾಗಲೂ ನಿಮ್ಮ ಇಷ್ಟದ ವಿಷಯದ ಬಗ್ಗೆಯೇ ಚಿಂತಿಸುತ್ತಿರುತ್ತೀರಿ ಮತ್ತು ಅವಕಾಶ ಮಾಡಿಕೊಂಡು ಪುನಃ ಆ ಕೆಲಸದಲ್ಲಿ ತೊಡಗುತ್ತೀರಿ ಅಲ್ಲವೇ? ಧ್ಯಾನ ಎಂದರೆ ನೀವು ಮಾಡುವ ಯಾವುದೇ ಕೆಲಸವನ್ನು ತನ್ಮಯತೆಂಯಿಂದ, ಶ್ರದ್ಧೆಯಿಂದ ಅದು ಪೂರ್ಣಗೊಳ್ಳುವವರೆಗೂ ಮಾಡುವುದು ಅಷ್ಟೆ. ಇದೇ ನಿಜವಾದ ಧ್ಯಾನ ಮತ್ತು ಧ್ಯಾನದ ಕುರಿತ ಅರಿವು! ಗುರಿ ನಿರ್ಧರಿಸಿಕೊಂಡು ಅದನ್ನು ಈಡೇರಿಸಲು ತೊಡಗುವ ಕ್ರಿಯೆಯೇ ಧ್ಯಾನ ಆಗುತ್ತದೆ.

ಗಣೇಶ: ಆಂ? ಹೂಂ!!

ದೇವರು: ನಿನ್ನ ಮನಸ್ಸು ಈಗ ನಿನ್ನ ಮನೆಯ ಕಡೆಗೆ ಹೊರಳಿದೆ. ಈಗ ಏನು ಮಾತನಾಡಿದರೂ ನಿನಗೆ ಅದರ ಕಡೆಗೆ ಲಕ್ಷ್ಯ ಹೋಗುವುದಿಲ್ಲ. ನಿನ್ನ ಉಪಹಾರದ ಸಮಯವೂ ಆಗುತ್ತಿದೆಯೆಂದು ನಿನ್ನ ಚಡಪಡಿಕೆಯಿಂದಲೇ ಗೊತ್ತಾಗುತ್ತದೆ. ಇವತ್ತಿಗೆ ಇಷ್ಟು ಸಾಕು, ನಿನ್ನ ಅನುಮಾನ ಏನಾದರೂ ಇದ್ದರೆ ನಾಳೆ ಕೇಳುವಿಯಂತೆ. ಹೋಗಿಬಾ.

     'ಎಷ್ಟಾದರೂ ದೇವರಲ್ಲವೇ? ಅದಕ್ಕೇ ನನ್ನ ಮನಸ್ಸಿನಲ್ಲಿದ್ದದ್ದು ಗೊತ್ತಾಗಿದೆ.' ಎಂದುಕೊಂಡ ಗಣೇಶರು ಮನೆಯ ಕಡೆಗೆ ಸರಸರ ಹೆಜ್ಜೆ ಹಾಕಿದರು.

-ಕ.ವೆಂ.ನಾಗರಾಜ್.

Comments

Submitted by ಗಣೇಶ Wed, 08/26/2015 - 23:44

ಕವಿನಾಗರಾಜರೆ,
ದೇವರ ಸಂದರ್ಶನ ತುಂಬಾ ಕಷ್ಟವಾಗುತ್ತಿದೆ!
ರಾತ್ರಿ, ಹಗಲು "ಹಾಗೂ ಉಂಟೇ", "ಹೀಗೂ ಉಂಟೇ", "ಉಂಟೇ ಉಂಟೇ.." ಇತ್ಯಾದಿ ಇತ್ಯಾದಿ ಒಂಟೆಗಳ ತಲೆ, ಟಿವಿ ವ್ಯಾನ್, ಕ್ಯಾಮರಾಗಳು ನನ್ನ ಮನೆ ಸುತ್ತಾ ಸುತ್ತುತ್ತಿವೆ..
ಸಾಲದ್ದಕ್ಕೆ ಈ ಪಾರ್ಥರು ಬೇರೆ, " ಬೆಳಗೆದ್ದು ಗಣೇಶರು ವಾಕಿಂಗ್ ಹೋಗುವುದಾ! ಸೂರ್ಯ ಪಶ್ಚಿಮದಲ್ಲಿ ಹುಟ್ಟಿದರೆ ಮಾತ್ರ ಸಾಧ್ಯ! ಅದೂ ದೇವರ ಸಂದರ್ಶನ ಗಣೇಶರಿಗೆ!! ನೀವೂ ನಂಬುತ್ತೀರಲ್ಲಾ... ಅವರ ಆಶ್ರಮಕ್ಕೆ ಜನ ಸೆಳೆಯಲು ನಾಟಕವಾಡುತ್ತಿದ್ದಾರೆ. ದೇವರು ಇರಲು ಸಾಧ್ಯವೇ ಇಲ್ಲ. ಜಗತ್ತಲ್ಲಿ ಇರುವುದು ಸತ್ತವರ ದೆವ್ವಗಳು ಮಾತ್ರ. ಯಾವುದೋ ಉತ್ತಮ ಗುಣದ ದೆವ್ವವನ್ನು ಸಂದರ್ಶಿಸಿ ಅದನ್ನೇ ದೇವರ ಸಂದರ್ಶನ ಅಂತ ಬೊಗಳೆ ಬಿಟ್ಟಿದ್ದಾರೆ.... "ಎಂದೆಲ್ಲಾ ಜ್ಯೂಸೀ ನ್ಯೂಸ್ ಚಾನಲ್‌ನಲ್ಲಿ ಅರ್ಧಗಂಟೆ ಭಾಷಣ ಬಿಗಿದಿದ್ದಾರೆ.
ಜನರಿಗೆ, ಪಾರ್ಥರಿಗೆ ನಂಬಿಕೆ ಬರುವಂತೆ ಏನಾದರೂ ಕರುಣಿಸು ಎಂದು ದೇವರಲ್ಲಿ ಬೇಡಿಕೊಂಡರೆ, " ಅದು ನಿನ್ನ ತಲೆನೋವು.." ಎಂದು ಅಂತರ್ಧಾನನಾದ..:(

Submitted by kavinagaraj Thu, 08/27/2015 - 08:57

In reply to by ಗಣೇಶ

ಮಿತ್ರ ಗಣೇಶರೇ, ಒಳ್ಳೆಯದೇ ಆಯಿತು ಬಿಡಿ. ವಿವಾದಗಳು, ಚರ್ಚೆಗಳು ದೊಡ್ಡವರನ್ನಾಗಿಸುತ್ತವೆ. ಪಾರ್ಥರ ಭಾಷಣದಿಂದ ಆಶ್ರಮಕ್ಕೆ ಬರುವ ಜನರು ಇನ್ನೂ ಹೆಚ್ಚಾಗುತ್ತಾರೆ. ಒಳ್ಳೆಯ ವಿಚಾರವನ್ನು ದೆವ್ವ ಹೇಳಿದರೂ ಒಪ್ಪುವ ನನ್ನಂತಹವರು ಇರುವಾಗ ಎದೆಗುಂದುವ ಅಗತ್ಯವಿಲ್ಲ. ಮುಂದೊಮ್ಮೆ ಪಾರ್ಥರೇ ಆಶ್ರಮದ ಪರಮಭಕ್ತರಾದರೂ ಆಶ್ಚರ್ಯವಿಲ್ಲ. ನಂತರ 'ಹೀಗೂ ಉಂಟೆ'ಯಲ್ಲಿ ಪಾರ್ಥರ ಕುರಿತೇ ಒಂದು ಎಪಿಸೋಡ್ ಪ್ರಸಾರವಾಗಬಹುದು.

Submitted by nageshamysore Thu, 08/27/2015 - 02:04

ಕವಿಗಳೆ ಸಾರದಲ್ಲಿ ಹೇಳುವುದಾದರೆ,

ಮಾತಿನ ರೂವಾರಿ ಮನಸು
ಮನಸ ಯಜಮಾನ ಇಚ್ಛಾಶಕ್ತಿ
ಅಧಿಗಮಿಸುತದರ ಬಲ ನೆನಪು
ಗಟ್ಟಿಯಾಗಿಸೊ ಧ್ಯಾನ ಚುರುಕು
ನಿಯಂತ್ರಿಸೆ ಮನ- ತನ್ಮಯತೆಗೆ
ಫಲಹಾರಗಮನ ಗಣೇಶ(ತೆ)ರಿಗೆ ||

Submitted by kavinagaraj Thu, 08/27/2015 - 09:02

In reply to by nageshamysore

ಮಿತ್ರ ಆಶುಕವಿ ನಾಗೇಶರಿಗೆ ವಂದನೆಗಳು. ದೇವರ ಸಂದರ್ಶನ ನಡೆಸುತ್ತಿರುವ ಗಣೇಶಾನಂದರನ್ನು ಸನ್ಮಾನಿಸಲು ಅವರನ್ನು ಹಾಸನಕ್ಕೆ ಬರಲು ಆಹ್ವಾನಿಸಿದ್ದೆವು. ಸದ್ಯಕ್ಕೆ ಬಿಡುವಿಲ್ಲವೆಂದಿದ್ದಾರೆ. ಸಂದರ್ಶನ ಪೂರ್ಣವಾದನಂತರ ಅವರು ಬರದಿದ್ದರೆ ಅವರಿರುವಲ್ಲಿಗೇ ಹೋಗಿ ಸನ್ಮಾನಿಸುವೆವು. ನೀವೂ ಬನ್ನಿ, ಸ್ವಾಗತ ಗೀತೆ ರಚಿಸಿ ಹಾಡಲು!!

Submitted by partha1059 Thu, 08/27/2015 - 12:17

ನಾಗರಾಜ ಸರ್
ಗಣೇಶರಿಗೆ ಇಷ್ಟೆಲ್ಲ ಉಪದೇಶವೆ ?
ಅವರಿಗೆ ಅದನ್ನೆಲ್ಲ ಕೇಳುವ ಸಹನೆಯೆ
ಬದಲಿಗೆ ಕಡುಬಿನಲ್ಲಿ ಈ ಜ್ಞಾನವನ್ನೆಲ್ಲ ತುರುಕಿ ಕೊಟ್ಟಿದ್ದರೆ
ನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತೆ
ಎಂದು ನುಂಗಿ ಬಿಡುತ್ತಿದ್ದರು
ನಾನಂತು ಸದ್ಯಕ್ಕೆ ಗಣೇಶರ ಎದುರಿಗೆ ಹೋಗುವದಿಲ್ಲ
ನೀವು ಹೇಳಿಕೊಟ್ಟಿರುವ ವಿಷಯವನ್ನೆಲ್ಲ ನನ್ನ ಮೇಲೆ ಪ್ರಯೋಗ ಮಾಡಿದರೆ ಕಷ್ಟ
.
-ಪಾರ್ಥಸಾರಥಿ

Submitted by kavinagaraj Thu, 08/27/2015 - 13:16

In reply to by partha1059

:) ಪಾರ್ಥರೇ, ಕಡುಬಿನ ಜೊತೆಗೆ ಏನು ಬೆರೆಸಿ ಕೊಟ್ಟರೂ ಅದನ್ನು ಗಣೇಶರು ಜೀರ್ಣಿಸಿಕೊಳ್ಳುತ್ತಾರೆ. ಹುಲುಮಾನವರಿಗೆ ಕಷ್ಟವಾದೀತು ಅಷ್ಟೇ! ಗಣೇಶರಿಗೆ ಕಷ್ಟವಾದರೆ, ಸಹನೆಯಿಲ್ಲದಿದ್ದರೆ ದೇವರ ಸಂದರ್ಶನವನ್ನೇ ಮಾಡದೆ ಸುಮ್ಮನಾಗಿಬಿಟ್ಟಾರು! ಆಗ ನಿಮ್ಮ ಮೇಲೆ ಪ್ರಯೋಗವೂ ಇರುವುದಿಲ್ಲ!!

Submitted by ಗಣೇಶ Sun, 08/30/2015 - 22:51

In reply to by kavinagaraj

-ಫಲಹಾರಗಮನ ಗಣೇಶ(ತೆ)ರಿಗೆ ||
:) :)
-ಕಡುಬಿನಲ್ಲಿ ಈ ಜ್ಞಾನವನ್ನೆಲ್ಲ ತುರುಕಿ ಕೊಟ್ಟಿದ್ದರೆ
ನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತೆ
ಎಂದು ನುಂಗಿ ಬಿಡುತ್ತಿದ್ದರು
ಸೂಪರ್ ಪಾರ್ಥರೆ...ಉತ್ತಮ ಐಡಿಯ..ದೇವರಲ್ಲಿ ಹೀಗೇ ಜ್ಞಾನವನ್ನು ತುರುಕಿಸಲು ಕೇಳುವೆ.
-ಗಣೇಶಾನಂದರನ್ನು ಸನ್ಮಾನಿಸಲು...
ಇದು ಯಾರು ಗಣೇಶಾನಂದರು! ನಾವು ರೆಡಿಯಾಗಿ ಕುಳಿತಿದ್ದೇವೆ. ಹಾಗೇ ಸರಕಾರಕ್ಕೂ ಕೆಲವು ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಿ..
-------
ಸಂಪದಿಗರೆ, ನಿಮಗೇನಾದರೂ ದೇವರ ಬಳಿ ಕೇಳಬೇಕು ಎಂಬಂತಹ ಪ್ರಶ್ನೆಗಳಿದ್ದರೆ ಸಂಕೋಚವಿಲ್ಲದೇ ತಿಳಿಸಿ. ನಾನು ಕೇಳುವೆ. (ಉತ್ತರ ಕೊಡದಿದ್ದರೆ ನನ್ನನ್ನು ದೂರಬೇಡಿ, ಕವಿನಾಗರಾಜರನ್ನು ದೂರಬಹುದು :) )

Submitted by kavinagaraj Mon, 08/31/2015 - 14:49

In reply to by ಗಣೇಶ

ನಾನಂತೂ ನನಗೆ ತಲುಪುತ್ತಿರುವ ಸಂದರ್ಶನದ ವಿವರವನ್ನು ಹಂಚಿಕೊಳ್ಳುತ್ತಿರುವೆ. ಸುದ್ದಿಮೂಲದ ಬಗ್ಗೆ ಕೇಳುವಂತಿಲ್ಲವೆಂದು ಪತ್ರಿಕಾ/ದೂ.ದ.ಮಾಧ್ಯಮದವರಂತೆ ಹೇಳಬೇಕಾಗುತ್ತದೆ. ಏಕೆಂದರೆ, ಆ ಮೂಲದ ಬಗ್ಗೆ ಖಚಿತವಾಗಿ ತಿಳಿಯಲು ಪ್ರಯತ್ನ ಸಾಗಿದೆ. ಪಾರ್ಥರಿಗೆ ಈ ಕೆಲಸ ವಹಿಸಿರುವೆ. ಯಾರಾದರೂ ದೂರಿದರೆ ಒಳ್ಳೆಯದೇ ಆದೀತು. ಯಾರು ಪ್ರಶಸ್ತಿ ಕೊಡದಿದ್ದರೂ ಪ್ರಸಿದ್ಧಿಯಂತೂ ಸಿಗಬಹುದೇನೋ!! :))