ದೇವರ ಆಟ, ಬಲ್ಲವರಾರು..?
ಇದು ಇತ್ತೀಚೆಗೆ ನಡೆದ ಒಂದು ಘಟನೆ...
ಒಬ್ಬರು, ನನಗೆ ತುಂಬಾ ಪರಿಚಿತರು. ಗಂಡ ಹೆಂಡತಿ ಇಬ್ಬರೂ ಸರಕಾರಿ ನೌಕರಿಯಲ್ಲಿದ್ದರು. ಜೀವನ ಪೂರ್ತಿ ದುಡಿದು ದುಡಿದು ಮಕ್ಕಳನ್ನು ಬೆಳೆಸಿ, ಅವರ ಮದುವೆ ಕೂಡ ಮಾಡಿ ಗೆದ್ದರು..
ನಿವೃತ್ತಿಯ ಬಳಿಕ ಒಂದು ಚಿಕ್ಕ ಮನೆ ಕಟ್ಟಿಕೊಂಡು ಇರುತ್ತಿದ್ದರು. ಮಗ ಸಾಫ್ಟ್ ವೇರ್ ಇಂಜಿನಿಯರ್. ಪ್ರತಿಷ್ಟಿತ ಕಂಪೆನಿಯ ಉದ್ಯೋಗಿ. ಕೈತುಂಬಾ ಸಂಬಳ. ನೋಡಲು ಸುರಸುಂದರ. ಇನ್ನೇನು ಒಂದು ಸುಂದರ ಕನ್ನೆ ಜೊತೆ ಮದುವೆಯೂ ಆಯಿತು. ಮಗನಿಗೆ ಮಗ ಹುಟ್ಟಿದ.
ಸೊಸೆ, ಮೊಮ್ಮಗನನ್ನು ನೋಡಲು ಬೆಂಗಳೂರಿಗೆ ಹೋಗಿ ಸ್ವಲ್ಪ ದಿನ ಇದ್ದರು. ಮಗ, ಸೊಸೆ, ಇಲ್ಲಿಯೇ ಇದ್ದು ಬಿಡಿ, ಕಲಬುರಗಿಗೆ ಹೋಗಿ ಏನು ಮಾಡುತ್ತೀರಿ? ಎಂದು ಬಹಳ ಆಗ್ರಹ ಮಾಡಲು ಸುಮಾರು ದಿನ ಮಗನ ಮನೆಯಲ್ಲಿಯೇ ಇದ್ದರು. ಸೊಸೆ ಕೆಲಸಕ್ಕೆ ಹೋಗ್ತಾಳೆ. ಕೂಸಿಗೆ ನೋಡಲೂ ಆಗುತ್ತದೆ ಎಂದು ಅಲ್ಲಿಯೇ ಇದ್ದರು.
ಮೊಮ್ಮಗ ಈಗ 4 ವರ್ಷದವನಾದ. ಶಾಲೆಗೆ ಹೋಗಲು ಶುರು ಮಾಡಿದ. ಈಗ ಈ ವೃದ್ಧ ದಂಪತಿಗಳ ಅವಶ್ಯಕತೆ ಕಡಿಮಯಾಗತೊಡಗಿತು. ಅವರೂ ಬೇಸತ್ತು ತಮ್ಮೂರಿಗೆ ಬಂದು ಇರಲು ಶುರು ಮಾಡಿದರು. ಕೆಲವು ವರ್ಷಗಳ ನಂತರ, ಮಗ ಬೆಂಗಳೂರಿನಲ್ಲಿ ಒಂದು ದೊಡ್ಡ ಫ್ಲಾಟ್ ಖರೀದಿ ಮಾಡಿದ. ಹಣದ ಕೊರತೆ ಕಂಡು ಬಂದು, ಅಮ್ಮನ ಹತ್ತಿರ, ಸ್ಪಲ್ಪ ಸಹಾಯ ಕೇಳಿದ. ಆಮ್ಮ ನಿವೃತ್ತ ಶಾಲಾ ಶಿಕ್ಷಕಿ. ಸ್ವಲ್ಪ ಹಣ ಬ್ಯಾಂಕ್ ನಲ್ಲಿ ಇತ್ತು. ಅದನ್ನೆಲ್ಲ ಖಾಲಿ ಮಾಡಿ ಮಗನಿಗೆ ಧಾರೆ ಎರೆದರು. ಇನ್ನೂ ಹೆಚ್ಚಿನ ಹಣ ಬೇಕಾಯಿತು.
ಕೊನೆಗೆ ತಂದೆ ತಮ್ಮ ಕಲ್ಬುರ್ಗಿಯ ಮನೆ ಮಾರಿ ಮಗನಿಗೆ ಸಹಾಯ ಮಾಡಿದರು. ಈಗ ಅವರಿಗೆ ಇರಲು ಮನೆಯೇ ಇಲ್ಲ. ಮರಳಿ ಬೆಂಗಳೂರಿಗೆ ಮಗನ ಮನೆಗೆ ಹೋದರು. ಈಗ ಮಗನ, ಸೊಸೆಯ ಕಿರಿ ಕಿರಿ ಶುರು ಆಯಿತು. ದಿನಾಲೂ ಜಗಳ, ಅತ್ತೆ ಸೊಸೆಯರ ನಡುವೆ. ಅತ್ತೆಯ ಬಿಪಿ ಹೆಚ್ಚಾಗಿ ಒಂದು ರಾತ್ರಿ ಇಹಲೋಕ ಯಾತ್ರೆ ಮುಗಿಸಿದರು.
ಸ್ವಲ್ಪ ಸಮಯದ ನಂತರ ತಂದೆಯ ಜೊತೆ ಕೂಡ ಕಿರಿ ಕಿರಿ. ಸೊಸೆಯ ಕಿರಿ ಕಿರಿಯಿಂದ ಬೇಸತ್ತು ಹೋದರು. ಪುಣ್ಯಕ್ಕೆ ಪಿಂಚಣಿ ಬರುತಿತ್ತು. ಕೊನೆಗೆ ಸೋತು ಮನೆ ಬಿಟ್ಟು, ವೃದ್ಧಾಶ್ರಮದ ಹಾದಿ ಹಿಡಿದರು. ಮನಸ್ಸಿನಲ್ಲಿ ತುಂಬಾನೇ ನೋವು. ಸಿಟ್ಟು ಕೂಡಾ.
ಮನೆ ಬಿಟ್ಟು ಹೋಗುವಾಗ, ತಂದೆ ಮಗನ ನಡುವೆ ಜಗಳ. ಸೊಸೆ, ಮೊಮ್ಮಗನ ಮುಂದೆಯೇ ಮಗನಿಂದ ಅಪಮಾನ.
ತೊಲಗು ಇಲ್ಲಿಂದ, ನನಗೆ ನಿನ್ನ ಮುಖ ಎಂದೂ ತೋರಿಸ ಬೇಡ. ನನ್ನ, ನಿನ್ನ ನಡುವಿನ ಸಂಬಂಧ ಕಡೆದು ಹೋಯಿತು . ಹೀಗೆ ಏನೇನೋ ಮಗನ ಮಾತು ಕಿವಿಯಲ್ಲಿ ಬೀಳುತ್ತಾ ಇರುವಾಗಲೇ ಇವರು ಮನೆ ಬಿಟ್ಟು ವೃದ್ಧಾಶ್ರಮದ ಕಡೆ ಹೆಜ್ಜೆ ಹಾಕಿದರು..
ಹೋಗುವಾಗ ಮಗನ ಕೊನೆಯ ಮಾತುಗಳು. ನೀನೂ ಸತ್ತರೂ.. ನಿನ್ನ ಹೆಣ ಸುಡಲೂ ಬರಲಾರೆ ನಾ...
ಎರಡು ದಿನಗಳ ನಂತರ... ವೃದ್ಧಾಶ್ರಮಕ್ಕೆ ಒಂದು ಫೋನ್ ಬರುತ್ತೆ. ಮೊಮ್ಮಗನ ಫೋನ್..
ಅಜ್ಜ.. ಅಪ್ಪ ಹಾರ್ಟ್ ಅಟ್ಯಾಕ್ ಆಗಿ ತೀರಿ ಕೊಂಡರು.
ಅಜ್ಜ ಮನೆಗೆ ಬಂದರು. ಅಂಗಳದಲ್ಲಿ ಮಗನ ಶವ ಮಲಗಿದ್ದಾರೆ.. ಎಲ್ಲವೂ ರೆಡಿ.. ಹೆಣ ಎತ್ತಲು. ಅಪ್ಪ ಬಂದರು. ಒಂದು ತುಳಸಿ ದಳ, ಮಗನ ಬಾಯಿಯಲ್ಲಿ ಹಾಕಿ. ಒಂದು ಸೌಂಟು ನೀರು ಬಿಟ್ಟು. ಮತ್ತೆ ಹೊರಟರು. ವೃದ್ಧಾಶ್ರಮದ ಕಡೆಗೆ. ಅಂದು ಮಗ ಬಯ್ದಿದ್ದ ಮಾತುಗಳು ಕಿವಿಯಲ್ಲಿ ಗುಂಯ ಅನ್ನುತಿದ್ದವು. ನೀ, ಸತ್ತರೂ ನಿನ್ನ ಹೆಣಕ್ಕೆ ನೀರು ಬಿಡಲಾರೆ.. ನಿನ್ನ ಶವ ನೋಡಲೂ ಬರಲಾರೆ..
ಆದರೆ..ಇಂದು.. ಯಾರು, ಯಾರ... ಅಂತಿಮ ದರ್ಶನಕ್ಕೆ ಬಂದರು...? ದೇವರ ಆಟ ಬಲ್ಲವರಾರು..? ಬಾಳಿನ ಮರ್ಮ ತಿಳಿದವರಾರೂ...? ಈ ಹಾಡು ದೂರದಲ್ಲಿ ಕೇಳಿ ಬರುತಿತ್ತು...
ಡಾ. ಉದಯ ಪಾಟೀಲ, ನೇತ್ರ ತಜ್ಞರು, ಕಲಬುರಗಿ.
ಚಿತ್ರ: ಅಂತರ್ಜಾಲ ಕೃಪೆ