ದೇವರ ಪ್ರಾರ್ಥನೆಯಿಂದ ಲಾಭವಿದೆಯೇ?

ದೇವರ ಪ್ರಾರ್ಥನೆಯಿಂದ ಲಾಭವಿದೆಯೇ?

ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖಗಳಿವೆ. ಹಾಗೆಯೇ ಪ್ರತಿಯೊಂದು ಕಾರ್ಯಕ್ಕೂ ಪರ ಹಾಗೂ ವಿರೋಧ ಇದ್ದೇ ಇರುತ್ತದೆ. ಕೆಟ್ಟದು ಎಂದು ಇರುವುದಾದರೆ ಒಳ್ಳೆಯದು ಇದ್ದೇ ಇರುತ್ತದೆ. ಹಾಗೆಯೇ ದೇವರನ್ನು ನಂಬುವ ಆಸ್ತಿಕರು ಇರುವ ಹಾಗೆಯೇ ದೇವರನ್ನು ನಂಬದ ನಾಸ್ತಿಕರೂ ಇರುವುದು ಸಹಜ. ಅವರವರ ನಂಬಿಕೆ, ವಾದಗಳು ಇದ್ದೇ ಇರುತ್ತದೆ. ನಾವು ಮಾಡುವ ಒಳ್ಳೆಯ ಕೆಲಸಗಳೇ ನಮ್ಮನ್ನು ಕಾಪಾಡುತ್ತವೆ ಎಂದು ನಂಬುವವರು ಹಲವರಾದರೆ, ದೇವರ ಆಶೀರ್ವಾದ ಇದ್ದ ಕಾರಣದಿಂದಲೇ ನನ್ನ ಕಾರ್ಯ ಸುಗಮವಾಗಿ ನಡೆಯಿತು ಎಂದು ನಂಬುವವರು ಸಾಕಷ್ಟು ಮಂದಿ ಇದ್ದಾರೆ. 

ನಿಮ್ಮ ಯಾವುದೇ ನಂಬಿಕೆಗಳು ಉಳಿದವರಿಗೆ (ನಿಮ್ಮ ಕುಟುಂಬ, ಸ್ನೇಹಿತರು ಇತ್ಯಾದಿ.) ತೊಂದರೆಯಾಗದಿದ್ದರೆ ನೀವು ಅದನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಆಪತ್ತು ಇಲ್ಲ. ನೀವು ದೇವರನ್ನು ನಂಬುವುದಿಲ್ಲವೋ ಸರಿ, ನಿಮ್ಮ ಈ ಭಾವನೆಯನ್ನು ಬೇರೆಯವರ ಮೇಲೆ ಹೇರಲು ಹೋಗಬೇಡಿ. ಅವರ ನಂಬಿಕೆ ಅವರಿಗೆ. ಏನಾದರೂ ಒಳ್ಳೆಯ ಕಾರ್ಯ ಆಗಬೇಕೋ ಅದನ್ನು ಮಾಡಲು ಬೇಕಾದರೆ ಒತ್ತಾಯ ಮಾಡಿ. ಆದರೆ ಅವರು ನಂಬದ, ನೀವು ನಂಬಿಸಲು ಸಾಧ್ಯವಾಗದ, ವೃಥಾ ಚರ್ಚೆಗೆ ಕಾರಣವಾಗಿ ಸೌಹಾರ್ದ ಸಂಬಂಧಗಳನ್ನು ಹಾಳು ಮಾಡುವ ವಿಷಯಗಳಿಗೆ ತಲೆಹಾಕಬೇಡಿ.

ದೇವರ ಇರುವಿಕೆಯ ಬಗ್ಗೆ ನಂಬಿಕೆ ಇಲ್ಲದ ಬಹಳ ಜನರನ್ನು ಕಾಡುವ ಪ್ರಶ್ನೆಯಿದು. ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು. ದೇವರ ಪೂಜೆಯಿಂದ ನಿಜವಾಗಿಯೂ ಲಾಭವಿದೆಯೇ ? ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ..? 

'ಪೂಜೆ' ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ. ಸೃಷ್ಟಿ ಸ್ಥಿತಿಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನುದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ.

ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತಿಲ್ಲ. ಅದಕ್ಕೆ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ. ಶಾಂತಿ, ನೆಮ್ಮದಿ, ನಂಬಿಕೆ, ಸಂತೋಷ. ಸಹೃದಯತೆ, ಯೋಜನಾ ಮುನ್ನಡೆ, ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ,  ಕಲಿಯುವಿಕೆ, ಆರಾಧನೆ, ಐಕ್ಯತೆ, ಮುತಾದ  ಶಕ್ತಿ ಕ್ರಿಯೆಗಳು ಲಭಿಸುತ್ತವೆ. ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ. ನಿಮ್ಮ ಧರ್ಮ ಯಾವುದೇ ಇರಲಿ, ನೀವು ನಿಮ್ಮ ದೇವರನ್ನು ಭಕ್ತಿಯಿಂದ ಸ್ಮರಿಸಿದರೆ ಮನಸ್ಸಿನಲ್ಲಿ ಒಂದು ಬಗೆಯ ಧೈರ್ಯ ಮೂಡುತ್ತದೆ ಎಂಬುವುದು ವೈಜ್ಞಾನಿಕ ಸತ್ಯ. 

ಪ್ರಾರ್ಥನೆ, ಪೂಜೆ ನಂಬಿದವರಿಗೆ ದೇವರಿದ್ದಾನೆ, ಪಾಲಿಸುತಾನೆ, ರಕ್ಷಿಸುತ್ತಾನೆ, ಸಹಕರಿಸುತ್ತಾನೆ ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ ಪ್ರಸಂಗವೊಂದು ಇತ್ತೀಚೆಗೆ ನಾನು ವಾಟ್ಸಾಪ್ ಮೂಲಕ ಹಂಚಿ ಬಂದ ಸಂದೇಶವೊಂದರಲ್ಲಿ ಓದಿದೆ. ಅಜ್ಞಾತ ಬರಹಗಾರನಿಗೆ ನಮನಗಳನ್ನು ಸಲ್ಲಿಸುತ್ತಾ, ಆ ಕಥೆಯನ್ನು ನಿಮ್ಮ ಮುಂದಿಡುತ್ತಿರುವೆ. 

***

ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ. ಆದರೆ ಜನಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿದ್ದರು. ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ದೇವರನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ.

ಒಂದು ದಿನ ರಾತ್ರಿ ಜೋರಾಗಿ ಮಳೆ ಸುರಿಯಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ವಿಷಕಾರಿ ಕ್ರಿಮಿನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯ ಜತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಬಾಲಕನ ಪರಿಚಯವೂ ಇಲ್ಲದೇ ಇದ್ದುದರಿಂದ  ಏನು ಮಾಡಬೇಕು? ಎಂಬುದನರಿಯದೆ ಈ  ದುರಂತವನ್ನು ಹೇಗೆ ತಪ್ಪಿಸಲಿ? ಎಂದು ಯೋಚಿಸುತ್ತಾನೆ.

ಆಗ ಆತನಿಗೆ ಗೋಡೆಯಲ್ಲಿ ತೂಗು ಹಾಕಿದ್ದ ದೇವರ ಚಿತ್ರಪಟವೊಂದು ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. ‘ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯಕ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ’ ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ. 

ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ‘ಅಂಕಲ್, ಜೋರು ಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ’ ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ. 

ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆ ಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. 

ಮನುಜ ಶುದ್ಧಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ. ಆದರೂ ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಗಳಿಗೆ ನಾವು ತಲೆಬಾಗಲೇ ಬೇಕು. ಆಸ್ತಿಕರು ಇರುವಂತೆ, ನಾಸ್ತಿಕರೂ ಇರುತ್ತಾರೆ ಎಂಬುವುದನ್ನು ಬರೆಯಬಾರದು. ಕಪಟ, ಮೋಸ, ವಂಚನೆ ಮಾಡಿ ದೇವರಿಗೆ ಲಕ್ಷಾಂತರ ರೂಪಾಯಿಯ ಕಾಣಿಕೆ ನೀಡಿದರೇನು ಫಲ? ಅದಕ್ಕಿಂತ ದೇವರನ್ನು ನಂಬದೇ ಇದ್ದರೂ ಹಸಿದು ಬಂದವನಿಗೆ ಒಂದು ಹೊತ್ತಿನ ಊಟ ನೀಡುವವ ದೊಡ್ದ ಮನುಷ್ಯ ಎಂದು ಗುರುತಿಸಲ್ಪಡುತ್ತಾನೆ. ಅವನು ದೇವರನ್ನು ನಂಬದೇ ಇದ್ದರೂ ದೇವರ ಆಶೀರ್ವಾದ ಅವನ ಮೇಲೆ ಸದಾ ಇರುತ್ತದೆ. ಏಕೆಂದರೆ ‘ಜನ ಸೇವೆಯೇ ಜನಾರ್ಧನನ ಸೇವೆ’ ಅಲ್ಲವೇ? 

(‘ವಾಟ್ಸಾಪ್’ ಮೂಲಕ ಸಂಗ್ರಹಿತ)

ಚಿತ್ರ ಕೃಪೆ: ಅಂತರ್ಜಾಲ ತಾಣ