ದೇವರ ಮತ ( ಓಟು ) ಯಾರಿಗೆ..?

ದೇವರ ಮತ ( ಓಟು ) ಯಾರಿಗೆ..?

ದೇವರಲ್ಲಿ ಒಂದು ಮನವಿ - ಭಿನ್ನಹ - ಬೇಡಿಕೆ - ಸವಾಲು - ಆದೇಶ -   ಎಚ್ಚರಿಕೆ. ರಾಮ, ಅಲ್ಲಾ, ಜೀಸಸ್, ವೆಂಕಟೇಶ್ವರ, ಮಂಜುನಾಥ, ರಾಘವೇಂದ್ರ, ಶಿರಡಿ ಸಾಯಿಬಾಬಾ ಹೀಗೆ ಎಲ್ಲಾ ಧರ್ಮದ ಎಲ್ಲಾ ರೂಪಗಳಿಗೂ ಭೇದವೆಣಿಸದೆ ಅನ್ವಯಿಸಿ. ಇಂದು ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಅತ್ಯುತ್ತಮ ಮತ್ತು ಒಳ್ಳೆಯವರು ಎನ್ನುವ 224 ಜನರನ್ನು ಗೆಲ್ಲುವಂತೆ ಮಾಡಿ ಮುಂದಿನ 5 ವರ್ಷಗಳಲ್ಲಿ ಈ ರಾಜ್ಯದ ಜನ ಸುಖ ಸಂತೋಷದಿಂದ ಇರುವಂತೆ ನೋಡಿಕೋ..

ನಾವು ಹುಲು ಮಾನವರು. ನಮ್ಮನ್ನು ಸೃಷ್ಟಿಸಿರುವುದೇ ನೀನು. ನಮಗೆ ಒಳ್ಳೆಯವರನ್ನು ಗುರುತಿಸುವ ಮತ್ತು ಗುರುತಿಸಿದರೂ ಅವರನ್ನೇ ಆಯ್ಕೆಮಾಡುವ ಬುದ್ದಿ ಸಾಮರ್ಥ್ಯವಿಲ್ಲ. ಅನೇಕ ಆಸೆ ಆಮಿಷಗಳಿಗೆ ಬಲಿಯಾಗುತ್ತೇವೆ. ನಾವು‌ ದುರ್ಬಲ ಮನಸ್ಸಿನವರು. ಆದ್ದರಿಂದ ಹೇಗಿದ್ದರೂ ನೀನು ಸರ್ವ ಶಕ್ತ - ಸರ್ವಾಂತರ್ಯಾಮಿ. ಒಳ್ಳೆಯವರನ್ನು ಹುಡುಕುವುದು ಮತ್ತು ಅವರನ್ನೇ ಆಯ್ಕೆ ಮಾಡುವುದು ನಿನಗೆ ಸುಲಭ ಹಾಗು ಅದು ನಿನ್ನ ಧರ್ಮ. ಜನ ತಮ್ಮ ಸ್ವಾರ್ಥಕ್ಕಾಗಿ ಯಾರಿಗೆ ಓಟು ಹಾಕಲಿ ಆದರೆ ‌EVM ನಲ್ಲಿ‌ ಆ ಓಟು ಒಳ್ಳೆಯವರಿಗೆ ಹೋಗುವಂತ ವ್ಯವಸ್ಥೆ ಮಾಡು.

ಇಷ್ಟು ದೊಡ್ಡ ಜಗತ್ತನ್ನೇ ಸೃಷ್ಟಿ ಮಾಡಿರುವ ನೀನು ದಯವಿಟ್ಟು ಸ್ವಲ್ಪ ಬಿಡುವು ಮಾಡಿಕೊಂಡು ಈ ಚುನಾವಣೆಯಲ್ಲಿ ಪ್ರಾಮಾಣಿಕರು ದಕ್ಷರು ಗೆಲ್ಲುವಂತೆ ಮಾಡು. ಆಗ ನಿನ್ನ ಈ ಭಾಗದ ಅರ್ಧ ಕೆಲಸ ಕಡಿಮೆಯಾದಂತೆ ಆಗುತ್ತದೆ. ಒಳ್ಳೆಯವರು ಗೆದ್ದರೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬುದು ನಿನಗೂ ತಿಳಿದಿದೆಯಲ್ಲವೇ? ಇಲ್ಲದಿದ್ದರೆ ಭ್ರಷ್ಟರು ದುಷ್ಟರು ವಂಚಕರು ಮೋಸಗಾರರೇ ಚುನಾವಣೆಯಲ್ಲಿ ಗೆದ್ದು ಜನರನ್ನು ಸೃಷ್ಟಿಸಿದ ನಿನಗೂ ನಿನ್ನನ್ನು ನಂಬಿರುವ ನಮಗೂ ದ್ರೋಹ ಬಗೆಯುತ್ತಾರೆ. ನಿನಗೆ ಕೆಟ್ಟ ಹೆಸರು ತರುತ್ತಾರೆ. ನಿನ್ನ ಮೇಲಿನ ನಂಬಿಕೆಯನ್ನೇ ಶಿಥಿಲಗೊಳಿಸುತ್ತಾರೆ. ನೀನು ಈ ಕೆಲಸ ಮೊದಲೇ ಮಾಡಿದ್ದರೆ ನಾನು ಈಗ ಈ ರೀತಿಯಲ್ಲಿ ನಿನಗೇ ಬುದ್ದಿ ಹೇಳುವ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ..

ಅಪ್ಪಾ ದೇವರೇ ಅಷ್ಟು ದೊಡ್ಡ ಶಕ್ತಿ ಇರುವ ನೀನೇ ಏನೂ ಮಾಡದೇ ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಂಡಿದ್ದರೆ ಇನ್ನು ನಾವು ಮಾಡುವುದಾದರು‌ ಏನು. ನಿನ್ನ‌ ಕೈಯಿಂದಲೇ ಒಳ್ಳೆಯದು ಮಾಡಲು‌ ಸಾಧ್ಯವಾಗದಿದ್ದರೆ ಇನ್ನು‌ ಈ ರಾಜಕೀಯ ನಾಯಕರಿಂದ ಏನು ಮಾಡಲು ಸಾಧ್ಯ?

ಇಂತಹ ಪ್ರಮುಖವಾದ ಸಮಯದಲ್ಲೇ ನೀನು ನಿನ್ನ ಸಾಮರ್ಥ್ಯ ತೋರದಿದ್ದರೆ ನೀನು ಇದ್ದರೂ ಏನು ಪ್ರಯೋಜನ. ‌ಜನರು ಜಾತಿ ಧರ್ಮ ಹಣ ಹೆಂಡಕ್ಕೆ ತಮ್ಮನ್ನು ಮಾರಿಕೊಳ್ಳುತ್ತಿರುವಾಗ, ಕೆಲವರು ಅವರನ್ನು ಕೊಂಡುಕೊಳ್ಳುತ್ತಿರುವಾಗ ನೀನು ಏನು ಪ್ರತಿಕ್ರಿಯೆ ಕೊಡದೆ ಮೌನವಾಗಿ ಇದ್ದರೆ ನಾವು ಏನೆಂದು ಅರ್ಥಮಾಡಿಕೊಳ್ಳಬೇಕು. 

" ಮೌನಂ ಸಮ್ಮತಿ ಲಕ್ಷಣಂ " ಎಂದು ಭಾವಿಸಬೇಕೆ.‌ " ದುಷ್ಟ ಶಿಕ್ಷಣ ಶಿಷ್ಟ ರಕ್ಷಣ " ನಿನ್ನ ಕರ್ತವ್ಯವಲ್ಲವೇ. ಅದರಲ್ಲಿ ನೀನು ವಿಫಲನಾದರೆ ನಮ್ಮ ಪಾಡೇನು? ಹೇಗಿದ್ದರೂ ಬಹುತೇಕ ಅಭ್ಯರ್ಥಿಗಳು ಮಂದಿರ ಮಸೀದಿ ಚರ್ಚುಗಳಿಗೆ ನಿನ್ನಲ್ಲಿ ಪ್ರಾರ್ಥಿಸಲು ಬರುತ್ತಾರಲ್ಲವೇ, ಆಗ ಅವರಿಗೆ ಸರಿಯಾದ ತಿಳಿವಳಿಕೆ ನೀಡು.‌ ಸುಮ್ಮನೆ ನಿರ್ಜೀವ ಕಲ್ಲಿನಂತೆ ಕುಳಿತಿರಬೇಡ. ಕೆಟ್ಟವರಿಗೆ ಬುದ್ದಿ ಹೇಳಬೇಕು ಎಂಬ ಸಾಮಾನ್ಯ ಜ್ಞಾನ ಸಹ ನಿನಗಿಲ್ಲ ಎಂಬುದೇ ಆಶ್ಚರ್ಯ.

ಓ ದೇವರೇ ಎಷ್ಟೋ ಜನ ನಿನ್ನನ್ನು ನಂಬಿದ್ದಾರೆ. ಆ ದೇವರು ಒಳ್ಳೆಯದು ಮಾಡುತ್ತಾನೆ ಎಂದು. ದಯವಿಟ್ಟು ಅವರ ಭಾವನೆ - ನಂಬಿಕೆಗಳಿಗೆ ಮೋಸ ಮಾಡಬೇಡ. ಜನರಿಗೇನೋ ಬುದ್ದಿ ಇಲ್ಲ, ಜವಾಬ್ದಾರಿ ಇಲ್ಲ. ಆದರೆ ನಿನಗಾದರೂ ಇರಬೇಡವೇ? ಒಂದು ವೇಳೆ ಈ ಚುನಾವಣೆಯಲ್ಲಿ ಕೆಟ್ಟವರು ಗೆದ್ದರೆ ನಾನಂತೂ ನಿನ್ನನ್ನು ಕ್ಷಮಿಸುವುದಿಲ್ಲ. ನೀನೊಬ್ಬ ಎಲ್ಲಾ ಜನರ ಭಾವನೆಗಳೊಂದಿಗೆ, ಭಕ್ತಿಯೊಂದಿಗೆ, ಸೌಕರ್ಯಗಳೊಂದಿಗೆ ಆರಾಮವಾಗಿ ಇರುವ ನಿಷ್ಪ್ರಯೋಜಕ ಶಕ್ತಿ ಎಂದೇ ಪರಿಗಣಿಸುವೆ.

ಆದ್ದರಿಂದಲೇ ಸಾಕಷ್ಟು ಜನ ಹೇಳುವುದು, ದೇವರಿಲ್ಲ ಅದೊಂದು ಕಲ್ಪನೆ ಮಾತ್ರ. ದೇವರು ಅಸ್ತಿತ್ವದಲ್ಲಿ ಇದ್ದರೆ ಚುನಾವಣೆಯ ಅವಶ್ಯಕತೆಯೇ ಇರಲಿಲ್ಲ. ಆತ ಇಲ್ಲದ ಕಾರಣದಿಂದಲೇ ಪ್ರಜಾಪ್ರಭುತ್ವ ಚುನಾವಣೆ ಮಾಡುವುದು ಅನಿವಾರ್ಯವಾಗಿದೆ ಇತ್ಯಾದಿ ಇತ್ಯಾದಿ. ಆ ಅನಿವಾರ್ಯದಿಂದಾಗಿಯೇ ಹಣವಂತರು ಕ್ರಿಮಿನಲ್ ಗಳು ಭ್ರಷ್ಟರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುತ್ತಾರೆ. ಅದನ್ನು ತಡೆಯಲು ದೇವರು ಇಲ್ಲ. ನಾವೇ ಪ್ರಜೆಗಳು ಎಚ್ಚೆತ್ತುಕೊಂಡು ಒಳ್ಳೆಯವರಿಗೆ ಮತ ಚಲಾಯಿಸಿ ನಮ್ಮ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಯಾವ ದೇವರು ನಮ್ಮನ್ನು ಕಾಪಾಡುವುದಿಲ್ಲ. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟದ್ದು..

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ