ದೇವರ ಮೊಸಳೆ ‘ಬಬಿಯಾ’ನ ಮರೆಯಲಾಗದ ನೆನಪುಗಳು
ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇಗುಲಕ್ಕೆ ನನ್ನ ಮೊದಲ ಭೇಟಿ ೯೦ರ ದಶಕದಲ್ಲೇ ಆಗಿತ್ತು. ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಸಾಹಿತ್ಯದ, ಬರವಣಿಗೆಯ ಹುಚ್ಚು. ಈ ಹುಚ್ಚಿಗೆ ಬೆಂಬಲ ನೀಡಿದವರು ನನ್ನ ಸನ್ಮಿತ್ರರಾದ ಪತ್ರಕರ್ತ ಶ್ರೀರಾಮ ದಿವಾಣ. ನಾನೂ ದಿವಾಣರು ಪತ್ರ ಮಿತ್ರರು. ಆ ೯೦ರ ದಶಕದಲ್ಲಿ ಮೊಬೈಲ್ ಬಂದಿರದ ಕಾಲದಲ್ಲಿ ಅಂಚೆ ಮೂಲಕ ಬರುತ್ತಿದ್ದ ಪತ್ರಗಳೇ ಜೀವಾಳವಾಗಿತ್ತು. ಪತ್ರದ ಮೂಲಕ ಪರಿಚಯವಾದವರು ಶ್ರೀರಾಮರು. ಅವರದ್ದು ಕುಂಬಳೆ ಸಮೀಪದ ಸೂರಂಬೈಲು. ಅವರು ಹಲವಾರು ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದರು. ಅವರು ಖ್ಯಾತ ಸಾಹಿತಿ ದಿ. ಗಣಪತಿ ದಿವಾಣರ ಮಗ. ಶ್ರೀರಾಮರು ಮಂಗಳೂರಿನಲ್ಲಿ ಆಗಿನ ಸಂಜೆ ಪತ್ರಿಕೆಯಾಗಿದ್ದ (ಮೊದಲ ಪತ್ರಿಕೆಯೂ ಹೌದು) ‘ಮಂಗಳೂರು ಮಿತ್ರ’ದಲ್ಲಿ ಉಪ ಸಂಪಾದಕರಾಗಿದ್ದರು. ಶನಿವಾರ ಸಂಜೆ ಅವರ ಜೊತೆ ರೈಲಿನಲ್ಲಿ ಕುಂಬಳೆಗೆ ನಮ್ಮ ಪ್ರಯಾಣ.
ಒಂದು ದಿನ ಶನಿವಾರ ಅವರ ಮನೆಗೆ ಹೋದಾಗ ನಾಳೆ ನಿಮಗೊರ್ವ ವ್ಯಕ್ತಿಯನ್ನು ಪರಿಚಯ ಮಾಡಿಕೊಡುತ್ತೇನೆ ಎಂದರು. ಹಾಗೆ ಮರುದಿನ ಪರಿಚಯವಾದವರು ಮತ್ತೊರ್ವ ಪತ್ರಕರ್ತ ಎಂ ನಾ ಚಂಬಲ್ತಿಮಾರ್ (ಎಂನಾ). ಇವರು ಆಗ ‘ಕರಾವಳಿ ಅಲೆ' ಪತ್ರಿಕೆಯಲ್ಲಿದ್ದರು. ಈಗ ಚಂಬಲ್ತಿಮಾರ್ ಅವರದ್ದೇ ಆದ ಯಕ್ಷಗಾನ ಮಾಸಿಕ ‘ಕಣಿಪುರ' ವನ್ನು ನಡೆಸುತ್ತಿದ್ದಾರೆ. ಕಣಿಪುರ ಪತ್ರಿಕೆಯು ಯಕ್ಷಗಾನ ಪ್ರಿಯರ ಅಚ್ಚುಮೆಚ್ಚಿನ ಸಂಗಾತಿಯಾಗಿ ಬೆಳೆದಿದೆ. ಆಗೆಲ್ಲಾ ಪತ್ರಕರ್ತರೆಂದರೆ ನನಗೂ ಬಹಳ ಕುತೂಹಲ ಮತ್ತು ನಾನೂ ಪತ್ರಕರ್ತನಾಗಬೇಕೆಂಬ ಹಂಬಲ ಬಹಳ ಇತ್ತು. ಹಾಗೆ ಮರುದಿನ ಭಾನುವಾರ ಬಂದ ಎಂ ನಾ ಜೊತೆ ಮದ್ಯಾಹ್ನದ ತನಕ ಹರಟೆ ಹೊಡೆದು, ಊಟ ಮುಗಿಸಿ ನಾವೆಲ್ಲಾ ಜೊತೆಯಾಗಿ ತೆರಳಿದ್ದು ಇದೇ ಸರೋವರ ಕ್ಷೇತ್ರ ಅನಂತಪುರಕ್ಕೆ. ಗುಡ್ಡಗಳಿಂದ ಸುತ್ತುವರೆದ ಕೆರೆಯೊಂದರ ನಡುವೆ ಇರುವ ದೇವಸ್ಥಾನ. ಅನಂತ ಪದ್ಮನಾಭ ಇಲ್ಲಿಯ ಮುಖ್ಯ ದೇವರು. ಈ ಮೂರ್ತಿ ಶಿಲಾ ವಿಗ್ರಹವಲ್ಲ. ಶರ್ಕರ ಪಿಷ್ಟದಿಂದ ಮಾಡಿದ ಮೂರ್ತಿ. ಅಂದರೆ ಗಿಡಮೂಲಿಕೆಗಳ ರಸ ತೆಗೆದು ಮಾನವಾಕೃತಿಯಂತಹ ಹಂದರಕ್ಕೆ ಮೆತ್ತಿ ಅದನ್ನು ಮೂರ್ತಿ ರೂಪಕ್ಕೆ ತರುವುದು. ಇದೊಂದು ಅಪರೂಪದ ಕಲೆ. ಈ ರೀತಿಯ ಮೂರ್ತಿಗಳು ಈಗ ನೋಡ ಸಿಗುವುದು ಅಪರೂಪ.
ಹೀಗೆ ನಾವು ದೇವಸ್ಥಾನಕ್ಕೆ ಹೋದಾಗ ಇನ್ನೂ ಸಂಜೆಯಾಗಿರಲಿಲ್ಲ. ದೇವಸ್ಥಾನ ಹಾಗೂ ಅದರ ಸುತ್ತ ಇರುವ ಕೆರೆ ನನ್ನನ್ನು ಬಹುವಾಗಿ ಆಕರ್ಷಿಸಿತು. ಸುಂದರ ಪರಿಸರ, ಗುಡ್ಡದ ಮೇಲೆ ಎಲ್ಲೆಡೆ ಹಸಿರು ಹೊದಿಕೆ. ಬಹಳ ಸೊಗಸು. ನನ್ನನ್ನು ಈ ಪರಿಸರ ಮಂತ್ರಮುಗ್ಧನನ್ನಾಗಿಸಿತು ಅಂದರೆ ತಪ್ಪಿಲ್ಲ. ಆ ಸಮಯ ಶ್ರೀರಾಮರು ಹೇಳಿದ್ದು ಆ ಕೆರೆಯಲ್ಲಿ ಒಂದು ಮೊಸಳೆ ಇದೆ ಎಂದು. ನನಗೂ ಅದನ್ನು ನೋಡಬೇಕೆಂಬ ಕುತೂಹಲ. ಆ ಮೊಸಳೆಯ ಹೆಸರು ‘ಬಬಿಯಾ’ ಎಂದು ತಿಳಿಯಿತು. ಆಗಿನ್ನೂ ಕ್ಷೇತ್ರದ ಬ್ರಹ್ಮಕಲಶ ಆಗಿರಲಿಲ್ಲ. ಮೊಸಳೆಗೆ ಹರಕೆಯಾಗಿ ಕೋಳಿಯನ್ನು ನೀಡುವ ಕ್ರಮ ಇತ್ತಂತೆ. ಏಕೆಂದರೆ ಕೋಳಿಯನ್ನು ಕಟ್ಟಲು ಒಂದು ಕೋಲನ್ನು ಕೆರೆಯ ಬದಿಯಲ್ಲಿ ಊರಿದ್ದರು. ಹರಕೆ ಕೇಳಿಕೊಂಡವರು ಆ ಕೋಲಿಗೆ ಕೋಳಿಯನ್ನು ಕಟ್ಟಿ ಹೋಗುತ್ತಿದ್ದರು. ಮೊಸಳೆ ಅದಕ್ಕೆ ಬೇಕಾದ ಸಮಯದಲ್ಲಿ ಬಂದು ಕೋಳಿಯನ್ನು ತಿಂದು ಹೋಗುತ್ತಿತ್ತು. ಆದರೆ ಬ್ರಹ್ಮ ಕಲಶೋತ್ಸವದ ಸಮಯದಲ್ಲಿ ದೇವಳದ ಆವರಣದಲ್ಲಿ ಮಾಂಸಹಾರವನ್ನು ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ಮೂಡಿ ಕೋಳಿ ಹರಕೆಯನ್ನು ನಿಲ್ಲಿಸಲಾಯಿತು ಎಂಬ ವಿಷಯ ಕೇಳಲ್ಪಟ್ಟಿದ್ದೇನೆ. ಅಂದು ನನಗೆ ಮೊಸಳೆಯ ದರ್ಶನವಾಗಲೇ ಇಲ್ಲ. ಅದೊಂದು ಬೇಸರವಿದ್ದರೂ ಉಳಿದಂತೆ ಆ ಕ್ಷೇತ್ರ ನನ್ನನ್ನು ಬಹುವಾಗಿ ಸೆಳೆಯಿತು.
ಮೊದಲ ಸಲ ಹೋದಾಗಲೇ ಬಹಳಷ್ಟು ಮನಸೆಳೆದಿದ್ದ ಈ ಪುಣ್ಯ ಕ್ಷೇತ್ರಕ್ಕೆ ನಂತರದ ದಿನಗಳಲ್ಲಿ ನಿಯಮಿತವಾಗಿ ಭೇಟಿ ನೀಡುತ್ತಿದ್ದೆ. ಗೆಳೆಯ ಎಂ ನಾ ಬ್ರಹ್ಮ ಕಲಶೋತ್ಸವದ ಸಮಯದಲ್ಲಿ ಬರಬೇಕೆಂದು ತಿಳಿಸಿದರೂ ಹೋಗಲು ಆಗಿರಲಿಲ್ಲ. ನಂತರ ಅವರ ಒಂದು ಪುಸ್ತಕ ಬಿಡುಗಡೆಯ ಸಮಯದಲ್ಲಿ ಅನಂತಪುರಕ್ಕೆ ಹೋಗಿದ್ದೆ. ದೇಗುಲದ ಬಳಿ ಇರುವ ಸಭಾಭವನದಲ್ಲೇ ಕಾರ್ಯಕ್ರಮವಿತ್ತು. ಪ್ರತೀ ಬಾರಿ ಕಾಸರಗೋಡಿನ ಮಧೂರು ದೇಗುಲಕ್ಕೆ ಹೋಗುವಾಗಲೆಲ್ಲಾ ಕುಂಬಳೆಯ ಅನಂತಪುರಕ್ಕೆ ನನ್ನ ಭೇಟಿ ಇದ್ದೇ ಇರುತ್ತಿತ್ತು.
ಈ ಮೊಸಳೆ ಕ್ಷೇತ್ರ ಅಥವಾ ಸರೋವರ ಕ್ಷೇತ್ರದ ಬಗ್ಗೆ ಬಹಳಷ್ಟು ಮಾಹಿತಿ ನನಗೆ ಸಿಕ್ಕಿದ್ದು ನಾನು ನನ್ನ ಕಾಲೇಜು ಸಹಪಾಠಿ ಪ್ರಿಯಾ ನಾಯ್ಕ್ ಜೊತೆ ಕ್ಷೇತ್ರ ದರ್ಶನ ಕಾರ್ಯಕ್ರಮದ ಶೂಟಿಂಗ್ ಹೋದಾಗ. ಆಕೆ ನ್ಯೂಸ್ ಟಿವಿ ಚಾನೆಲ್ ಒಂದರ ವರದಿಗಾರ್ತಿಯಾಗಿದ್ದಳು. ಆ ಸಮಯ ತಿರುವನಂತಪುರದ ಅನಂತ ಪದ್ಮನಾಭ ದೇಗುಲದ ನೆಲದ ಅಡಿ ಭಾಗದಲ್ಲಿದ್ದ ಕೊಠಡಿಗಳನ್ನು ತೆರೆಯಲಾಗಿ ಬಹಳಷ್ಟು ಬಂಗಾರದ ಆಭರಣಗಳು ದೊರೆತಿದ್ದವು. ತಿರುವನಂತಪುರ ದೇಗುಲಕ್ಕೂ ಕುಂಬಳೆಯ ಅನಂತಪುರ ದೇವಾಲಯಕ್ಕೂ ಸಂಬಂಧ ಇದೆ ಎಂಬ ವಿಷಯ ತಿಳಿದು ಆಕೆ ನನಗೆ ಕರೆ ಮಾಡಿ ನನ್ನನ್ನು ಅಲ್ಲಿಗೊಮ್ಮೆ ಕರೆದುಕೊಂಡು ಹೋಗು ಎಂದಳು. ಹಾಗೆ ಒಂದು ದಿನ ನಾನು, ಅವಳು ಮತ್ತು ಕ್ಯಾಮರಾಮೆನ್ ಜೀವನ್ ಜೊತೆಯಾಗಿ ಕುಂಬಳೆ ಹೊರಟೆವು. ದಾರಿಯಲ್ಲಿ ಮಂಗಳೂರಿನ ಸ್ಥಳೀಯ ಪತ್ರಕರ್ತರೊಬ್ಬರು ನಮ್ಮ ಜೊತೆಯಾದರು.
ನಾವು ಅಲ್ಲಿಗೆ ತಲುಪುವಾಗ ಮದ್ಯಾಹ್ನದ ಪೂಜೆಯ ಸಮಯ ಕಳೆದು ಹೋಗಿತ್ತು. ಅಲ್ಲಿರುವ ದೇವರ ಮೊಸಳೆಗೆ ನೈವೇದ್ಯ ನೀಡುವ ಕ್ರಮ ಇದೆ. ‘ಮೊಸಳೆ ನೈವೇದ್ಯ' ಎಂಬ ಪೂಜೆಯನ್ನೂ ಭಕ್ತಾದಿಗಳು ಮಾಡಿಸಬಹುದು. ಮೊಸಳೆಗೆ ಅನ್ನವನ್ನು ಉಂಡೆಯ ಆಕಾರದಲ್ಲಿ ಮಾಡಿ ಕೆರೆಯ ಹತ್ತಿರ ಬಂದು ‘ಬಬಿಯಾ...ಬಬಿಯಾ... ಎಂದು ಕರೆಯುತ್ತಾರೆ. ಆಗ ಮೊಸಳೆ ಬರುತ್ತದಂತೆ. ಆದರೆ ಅಂದಿನ ನೈವೇದ್ಯ ನೀಡಿ ಆಗಿತ್ತು. ನಾವು ಕೆರೆಯ ಬಳಿ ಹೋದರೂ ನಮಗೆ ಬಬಿಯಾ ದರ್ಶನವಾಗಲಿಲ್ಲ. ಆದರೆ ನಮಗಿಂತ ಮೊದಲು ಕ್ಷೇತ್ರಕ್ಕೆ ಆಗಮಿಸಿದ್ದ ಅಲ್ಲಿಯ ಸ್ಥಳೀಯ ಚಾನೆಲ್ ಒಂದರ ಸಿಬ್ಬಂದಿಗಳಿಗೆ ಬಬಿಯಾ ದರ್ಶನವಾಗಿತ್ತು. ಅದನ್ನು ಅವರ ಛಾಯಾಗ್ರಾಹಕ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ. ನಾವು ಅವರಿಂದ ಆ ಚಿತ್ರಗಳನ್ನು ಕೇಳಿ ಪಡೆದುಕೊಂಡೆವು.
‘ಬಬಿಯಾ’ ಬಗ್ಗೆ ಅಲ್ಲಿಯ ಅರ್ಚಕರಲ್ಲಿ ಹಾಗೂ ಸಿಬ್ಬಂದಿಗಳಲ್ಲಿ ಕೇಳಿದಾಗ ನಮಗೆ ಸಿಕ್ಕ ಮಾಹಿತಿ ಇದು. ಈ ಮೊಸಳೆ ಈ ಕೆರೆಯಲ್ಲಿ ಕಂಡು ಬರುವುದಕ್ಕಿಂತ ಮೊದಲು ‘ಬಬಿಯಾ’ ಎಂಬ ಒಂದು ಮೊಸಳೆ ಆ ಕೆರೆಯಲ್ಲಿತ್ತಂತೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ನಮ್ಮನ್ನು ಆಳುತ್ತಿದ್ದಾಗ ಒಮ್ಮೆ ಬ್ರಿಟೀಷ್ ಸೈನ್ಯದ ದಂಡು ಅನಂತಪುರಕ್ಕೆ ಬಂದಿತ್ತಂತೆ. ಅದು ೧೯೪೧-೪೨ರ ಸಮಯವಿರಬಹುದು. ಆಗ ಮೊಸಳೆ ಕೆರೆಯಿಂದ ಹೊರಬಂದು ದೇವಸ್ಥಾನದ ಆವರಣದ ಹೊರಗಡೆಗೂ ಬರುತ್ತಿತ್ತಂತೆ. ಆಗ ಮೊಸಳೆಗೆ ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ದೇವಸ್ಥಾನದ ಒಳಗೆ ಹೊರಗೆ ಹೋಗಿ ಬರಲು ಒಂದು ಓಣಿ ಇತ್ತಂತೆ. ಈ ಓಣಿಯ ಬದಿಯಲ್ಲಿ ಮೊಸಳೆ ಬಂದಿದ್ದಾಗ ಬ್ರಿಟೀಷ್ ಅಧಿಕಾರಿಯೊಬ್ಬ ಗುಂಡು ಹೊಡೆದು ಕೊಂದನಂತೆ. ಕೊಂದ ಮೊಸಳೆಯನ್ನು ತನ್ನ ಶೌರ್ಯ ಪ್ರದರ್ಶನಕ್ಕಾಗಿ ಆತ ತೆಗೆದುಕೊಂಡು ಹೋದನಂತೆ. ಆದರೆ ಆತ ಕೆಲವೇ ಸಮಯದಲ್ಲಿ ಒಂದು ಅವಘಡದಲ್ಲಿ ಸತ್ತುಹೋದನಂತೆ. ಆ ಮೊಸಳೆಯಲ್ಲಿ ದೇವರನ್ನು ಕಾಣುತ್ತಿದ್ದ ಭಕ್ತಾದಿಗಳು ಈ ಸಾವಿಗಾಗಿ ತುಂಬಾ ಮರುಗಿದರು.ಪವಾಡವೆಂಬಂತೆ ಕೆಲವೇ ದಿನಗಳಲ್ಲಿ ಆ ಕೆರೆಯಲ್ಲಿ ಮತ್ತೊಂದು ಮೊಸಳೆ ಕಂಡು ಬಂತು. ಈ ಮೊಸಳೆಗೂ ‘ಬಬಿಯಾ’ ಎಂದೇ ನಾಮಕರಣ ಮಾಡಲಾಯಿತು. ಈ ಕಾರಣದಿಂದ ಈ ಬಬಿಯಾ ವಯಸ್ಸು ಸುಮಾರು ೮೦-೮೫ ಇರಬಹುದೇನೋ? ಆ ಕೊಳದ ಇಡೀ ಪರಿಸರದಲ್ಲಿ ಇದೊಂದೇ ಮೊಸಳೆ ಇತ್ತು. ಒಂಟಿ ಮೊಸಳೆ ಇಷ್ಟೊಂದು ದೀರ್ಘ ಕಾಲ ಬದುಕುವುದು ಬಹಳ ಅಪರೂಪವೆಂದು ತಜ್ಞರ ಅಭಿಮತ.
ಬಬಿಯಾ ಹೆಗ್ಗಳಿಕೆ ಎಂದರೆ ಯಾವತ್ತೂ ಯಾವ ಮಾನವನಿಗೂ ಅಥವಾ ಪ್ರಾಣಿಗೂ ತೊಂದರೆ ನೀಡಿಲ್ಲ. ಇಲ್ಲಿ ದೇವಾಲಯ ಇರುವ ದೊಡ್ಡ ಕೆರೆ ಮತ್ತು ಪಕ್ಕದಲ್ಲೇ ರಕ್ತೇಶ್ವರೀ ಗುಡಿಯ ಬಳಿ ಸಣ್ಣ ಕೆರೆ ಇದೆ. ಈ ಮೊಸಳೆ ಎರಡೂ ಕೆರೆಗಳಲ್ಲಿ ವಾಸ ಮಾಡುತ್ತಿತ್ತು. ಅದಕ್ಕೆ ವಾಸಕ್ಕೆ ಅನುಕೂಲವಾಗುವಂತೆ ಪುಟ್ಟ ಪುಟ್ಟ ಗುಹೆಗಳಂತಹ ರಚನೆ ಆ ಕೆರೆಗಳಲ್ಲಿವೆ. ದೊಡ್ಡ ಕೆರೆಯಿಂದ ಸಣ್ಣ ಕೆರೆಗೆ ಹೋದರೆ ಅಲ್ಲಿ ಒಂದೆರಡು ತಿಂಗಳು ಇದ್ದು ಬರುತ್ತಿತ್ತು. ಅದು ಸಣ್ಣ ಕೆರೆಯಲ್ಲಿ ಇರುವಾಗ ಅರ್ಚಕರು ನೈವೇದ್ಯವನ್ನು ಅಲ್ಲಿಗೇ ತೆಗೆದುಕೊಂಡು ಹೋಗಿ ಕೊಡುತ್ತಾರೆ.
ಸಣ್ಣ ಕೆರೆಯ ಬಳಿ ಓಡಾಡುತ್ತಿದ್ದ ದನ ಕರುಗಳು, ನಾಯಿ, ಬೆಕ್ಕು ಮೊದಲಾದ ಯಾವ ಪ್ರಾಣಿಗಳನ್ನೂ ಕೊಂದ ನಿದರ್ಶನಗಳಿಲ್ಲ. ಮೊಸಳೆ ಉಭಯವಾಸಿ. ಆದರೆ ಯಾವತ್ತೂ ಬಬಿಯಾ ಮಾನವ ಓಡಾಟ ನಡೆಸುವ ಜಾಗಕ್ಕೆ ಬಂದು ತೊಂದರೆ ನೀಡಿದಿಲ್ಲ. ತನ್ನ ಪಾಡಿಗೆ ಕೆರೆಯಲ್ಲಿ, ಅಪರೂಪಕ್ಕೆ ದೇಗುಲದ ಪ್ರಾಂಗಣದಲ್ಲಿ ಓಡಾಟ ನಡೆಸುತ್ತಿತ್ತು. ಆಸ್ತಿಕರ ನಂಬಿಕೆಗೆ ಪೂರಕವಾಗಿ ಇದೊಂದು ದೈವಿಕ ಗುಣ ಲಕ್ಷಣದ ಮೊಸಳೆಯೇ ಆಗಿತ್ತು. ಆಹಾರ ನೀಡಲು ಅರ್ಚಕರು ಮೊಸಳೆ ಬಳಿ ಹೋದರೂ ಅದು ಏನೂ ಮಾಡುತ್ತಿರಲಿಲ್ಲ. ಸೌಮ್ಯ ಸ್ವಭಾವದ ಮೊಸಳೆಗಳು ಕಂಡು ಬರುವುದು ಅಪರೂಪದಲ್ಲಿ ಅಪರೂಪ.
೨೦೦೮ರಲ್ಲಿ ಈ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಿತು. ಬ್ರಹ್ಮಕಲಶೋತ್ಸವಕ್ಕೆ ಹೋಗಲು ಆಗದೇ ಇದ್ದರೂ ನನ್ನ, ಅನಂತಪುರದ ನಂಟು ಮುಂದಿನ ದಿನಗಳಲ್ಲೂ ಮುಂದುವರಿಯಿತು. ಆದರೆ ‘ಬಬಿಯಾ’ ದರ್ಶನ ಮಾತ್ರ ಆದದ್ದು ೨೦೧೮ರಲ್ಲಿ ಇರಬೇಕು. ನಾನು ನನ್ನ ಪತ್ನಿ ಶಾರದಾ, ಬಾಲ್ಯದ ಗೆಳೆಯ ನಂದಕಿಶೋರ್ ಮತ್ತು ಆತನ ಪತ್ನಿ ಮಮತಾ ಜೊತೆಯಾಗಿ ಅನಂತಪುರಕ್ಕೆ ಬಂದಿದ್ದೆವು. ಆಗಲೂ ನಾವು ಬರುವಾಗ ಮದ್ಯಾಹ್ನದ ಪೂಜೆ ಮುಗಿದಿತ್ತು. ಅರ್ಚಕರು ಮೊಸಳೆ ಸಣ್ಣ ಕೆರೆಯಲ್ಲಿದೆ. ಅಲ್ಲಿ ಹೋಗಿ ನೋಡಿ ನಿಮಗೆ ದರ್ಶನದ ಭಾಗ್ಯ ದೊರೆತರೂ ದೊರೆಯಬಹುದು ಎಂದರು. ಸಣ್ಣ ಕೆರೆಯತ್ತ ನಾವೆಲ್ಲಾ ಓಡಿದೆವು. ಆದರೆ ಅಲ್ಲಿ ಎಲ್ಲೂ ‘ಬಬಿಯಾ’ ಸುಳಿವಿರಲಿಲ್ಲ. ನೀರಿನಲ್ಲಿ ಗಾಳಿಯ ಗುಳ್ಳೆಗಳು ಕಂಡ ಕೂಡಲೇ ಅಲ್ಲಿರಬಹುದು ಎಂದು ಆಶಾಭಾವನೆ ನಮ್ಮಲ್ಲಿ ಮೂಡುತ್ತಿತ್ತು. ನಮ್ಮಂತೆ ಇನ್ನೂ ಸುಮಾರು ಹತ್ತು ಮಂದಿ ಬಬಿಯಾನನ್ನು ಕಾಯುತ್ತಿದ್ದರು. ಸ್ವಲ್ಪ ಸಮಯ ಕಾದ ಬಳಿಕ ನಾವು ಇನ್ನು ಹೊರ ಬರಲಾರದು ಎಂದು ಮರಳುವ ಮನಸ್ಸು ಮಾಡುವಾಗ ಅಲ್ಲಿಯೇ ಇದ್ದ ಓರ್ವ ಸ್ಥಳೀಯ ಯುವಕ ಬಂದು, ‘ನಾನು ಬಬಿಯಾನನ್ನು ಕರೆಯುತ್ತೇನೆ, ನೀವು ಸದ್ದು ಮಾಡದೇ ನಿಶ್ಯಬ್ಧವಾಗಿರಬೇಕು' ಎಂದ. ನಾವು ಆಯಿತು ಎಂದೆವು. ಆದಷ್ಟು ಕೊಳದಿಂದ ದೂರ ಸರಿದು ನಿಂತೆವು. ಆತ ನಿಧಾನವಾಗಿ ‘ಬಬಿಯಾ, ಬಬಿಯಾ...ಬಬಿಯಾ’ ಎಂದು ಅಲ್ಲಿಯ ಕಲ್ಲುಗಳಿಗೆ ಕೈಯಲ್ಲಿ ಹೊಡೆಯುತ್ತಿದ್ದ. ಮೂರು, ನಾಲ್ಕು ಬಾರಿ ಹಾಗೆ ಮಾಡಿದಾಗ ನಿಧಾನವಾಗಿ ನೀರಿನ ನಡುಭಾಗದಿಂದ ಬಬಿಯಾ ಪ್ರತ್ಯಕ್ಷವಾಯಿತು. ನನ್ನ ಖುಷಿಗೆ ಪಾರವಿರಲಿಲ್ಲ. ಏಕೆಂದರೆ ಈ ದೃಶ್ಯಕ್ಕಾಗಿ ನಾನು ಸುಮಾರು ಎರಡು ದಶಕಗಳ ಕಾಲ ಕಾದಿದ್ದೆ. ಸುಮಾರು ಅರ್ಧ ಭಾಗದಷ್ಟು ನೀರಿನಿಂದ ಹೊರ ಬಂದ ಬಬಿಯಾನನ್ನು ನೋಡಿ ನನಗೆ ಅಚ್ಚರಿಯಾಗಿತ್ತು. ನಾನು ಬಬಿಯಾ ಅಷ್ಟು ದೊಡ್ಡ ಮೊಸಳೆಯಾಗಿರಬಹುದು ಎಂದು ಅಂದಾಜು ಮಾಡಿರಲಿಲ್ಲ. ಸುಮಾರು ಹದಿನೈದು ನಿಮಿಷಗಳ ಕಾಲ ನಮಗೆ ದರ್ಶನ ನೀಡಿದ ಬಬಿಯಾ ಮತ್ತೆ ನೀರಿನಲ್ಲಿ ಮುಳುಗಿದ.
ನಂತರ ಕೋವಿಡ್ ಸಮಯದ ಬಳಿಕ ಕ್ಷೇತ್ರಕ್ಕೆ ಹೋಗಲು ಆಗಲೇ ಇಲ್ಲ. ಕಳೆದ ಅಕ್ಟೋಬರ್ ೧೦ರಂದು ನನ್ನ ಪತ್ನಿ ನನಗೆ ಫೋನ್ ಮಾಡಿ ‘ಬಬಿಯಾ ನಿನ್ನೆ ಸತ್ತು ಹೋಯಿತಂತೆ' ಅಂದಾಗ ನನಗೆ ನಂಬಲೇ ಆಗಲಿಲ್ಲ. ಕಳೆದ ಒಂದೂವರೆ ವರ್ಷಗಳ ಹಿಂದೆಯೂ ಇದೇ ರೀತಿಯ ಸುದ್ದಿ ಬಂದಿತ್ತು. ನಂತರ ಅದು ಸುಳ್ಳು ಎಂದಾಗಿತ್ತು. ಆದರೆ ಈ ಬಾರಿ ಸಂಗತಿ ಸತ್ಯವಾಗಿತ್ತು. ದೇವರ ಮೊಸಳೆ ‘ಬಬಿಯಾ’ ಇನ್ನಿಲ್ಲ ಎಂಬ ಸುದ್ದಿ ನಿಜಕ್ಕೂ ತುಂಬಾ ನೋವು ತಂದಿತು. ಅದೇ ಸಮಯ ಕ್ಷೇತ್ರದೊಂದಿಗೆ ನಿರಂತರ ಒಡನಾಟ ಇರಿಸಿಕೊಂಡಿದ್ದ ಪತ್ರಕರ್ತೆ ಪ್ರಿಯಾ ಕರೆ ಮಾಡಿ ‘ಬಬಿಯಾ ಸತ್ತು ಹೋದದ್ದು ಸತ್ಯ ಸಂಗತಿ. ನಾನು ಅಕ್ಟೋಬರ್ ೭ಕ್ಕೆ ಕ್ಷೇತ್ರಕ್ಕೆ ಹೋಗಿದ್ದೆ. ಆಗ ಬಬಿಯಾ ಆಹಾರ ಸ್ವೀಕರಿಸುತ್ತಿರಲಿಲ್ಲ. ಬಬಿಯಾನನ್ನು ಪರೀಕ್ಷಿಸಲು ಪಿಲಿಕುಳ ನಿಸರ್ಗಧಾಮದ ವೈದ್ಯರನ್ನು ಕ್ಷೇತ್ರಕ್ಕೆ ಕರೆದುಕೊಂಡು ಹೋಗಿದ್ದೆ' ಎಂದಳು. ಆಕೆ ಅಂದು ತೆಗೆದ ಫೊಟೋಗಳೇ ‘ಬಬಿಯಾ’ನ ಕೊನೆಯ ನೆನಪಾಗಿ ಉಳಿದು ಹೋದವು.
ಬಬಿಯಾ ಗಂಡೋ, ಹೆಣ್ಣೋ ಎಂಬ ಜಿಜ್ಞಾಸೆ ಎಲ್ಲರಲ್ಲೂ ಇತ್ತಾದರೂ ಕ್ಷೇತ್ರದ ಜನ ಮಾತ್ರ ‘ಅವನು' ಅಂದರೆ ಗಂಡು ಎಂದೇ ಸಂಬೋಧಿಸುತ್ತಿದ್ದರು. ಭಕ್ತಾದಿಗಳ ಹಾಗೂ ಅರ್ಚಕರ ನಂಬಿಕೆ ನಿಜವಾಗುವಂತೆ ಬಬಿಯಾ ನಿಧನ ಹೊಂದಿದಾಗ ವೈದ್ಯರು ಪರೀಕ್ಷಿಸಿದಾಗ ಅದು ಗಂಡು ಮೊಸಳೆ ಎಂಬ ಸಂಗತಿ ತಿಳಿದು ಬಂತು. ದೇವರ ಮೊಸಳೆ ‘ಬಬಿಯಾ’ ಹಾಗೂ ಅನಂತಪುರದ ಅನಂತ ಪದ್ಮನಾಭ ದೇವಸ್ಥಾನದ ನನ್ನ ಸುಮಾರು ಎರಡುವರೆ ದಶಕಗಳ ಒಡನಾಟದ ಕೆಲವು ಕ್ಷಣಗಳನ್ನು ಮಾತ್ರ ಹಂಚಿಕೊಂಡಿರುವೆ. ಇಲ್ಲಿರುವ ವಿಷಯಗಳು ನಾನು ಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ಕಂಡುಬಂದದ್ದು ಮಾತ್ರ. ಬಬಿಯಾ ಹಾಗೂ ದೇವಸ್ಥಾನದ ಬಗ್ಗೆ ಇನ್ನೂ ಹಲವಾರು ವಿಷಯಗಳು ನಿಮ್ಮಲ್ಲಿ ಇರಬಹುದು. ‘ಬಬಿಯಾ’ ಇನ್ನಿಲ್ಲ ಎಂಬ ಸುದ್ದಿ ಕೇಳಿದಾಗ ಕಣ್ಣಾಲಿಗಳು ತೇವವಾಗಿ ಇವೆಲ್ಲಾ ಸಂಗತಿಗಳು ನೆನಪಾದವು. ಇನ್ನೊಂದು ಮೊಸಳೆ ಕ್ಷೇತ್ರಕ್ಕೆ ಬರಲಿ ಎಂಬ ಹಾರೈಕೆ ಎಲ್ಲಾ ಆಸ್ತಿಕರದ್ದು.
ಚಿತ್ರ ವಿವರ: ೧. ಅ.೭ರಂದು ಕೊನೇ ಸಲ ಜೀವಂತ ಕಂಡು ಬಂದ ಬಬಿಯಾ
೨. ಬಬಿಯಾ ಜೊತೆ ಒಡನಾಟ ಇರಿಸಿಕೊಂಡಿದ್ದ ಚಂದ್ರಣ್ಣ
೩. ಬಬಿಯಾ ಅಂತಿಮ ದರ್ಶನ
೪. ಸರೋವರ ಕ್ಷೇತ್ರ ಶ್ರೀ ಅನಂತಪುರ
ಚಿತ್ರಗಳು: ಪ್ರಿಯಾ ನಾಯ್ಕ್, ಮಂಗಳೂರು ಮತ್ತು ಲೇಖಕರ ಸಂಗ್ರಹ