ದೇವಶಯನೀ ಏಕಾದಶಿ ದಿನ ವಿಶೇಷ
ಎರಡು ದಿನಗಳ ಹಿಂದೆಯಷ್ಟೇ ದೇವಶಯನೀ ಏಕಾದಶಿ ಆಚರಣೆ ನಡೆಯಿತು. ‘ಏಕಾದಶಿ’ ಎಂದೊಡನೆ ನೆನಪಾಗುವುದು ಉಪವಾಸ. ಈ ದಿನದ ಏಕಾದಶಿಯ ವಿಶೇಷತೆಯನ್ನು ತಿಳಿಯೋಣ. ದೇವನಾದ ವಿಷ್ಣುವು ಕ್ಷೀರಸಾಗರದತ್ತ ಮುಖಮಾಡಿ ಸಾಗಿ, ಯೋಗನಿದ್ರೆಗಾಗಿ ನಾಲ್ಕು ತಿಂಗಳು ಆರಂಭಿಸುವ ದಿನವಿಂದು ಆಷಾಢದ ಈ ಏಕಾದಶಿಯ ವಿಶೇಷ. ಆದಕಾರಣವೇ ‘ದೇವಶಯನೀ ಏಕಾದಶಿ’, ಹರಿಶಯನೀ ಏಕಾದಶಿ, ಪದ್ಮನಾಭ ಏಕಾದಶಿ ಎಂದೂ ಹೇಳುತ್ತಾರೆ.
ಭಗವಾನ್ ವಿಷ್ಣುವಿಗೆ ಎಲ್ಲವೂ ಅರ್ಪಣೆ. ಶ್ರದ್ಧಾಭಕ್ತಿಯಿಂದ, ಶುಚಿರ್ಭೂತರಾಗಿ, ಹೂವು ಮುಖ್ಯವಾಗಿ ತುಳಸಿಯೊಂದಿಗೆ ಅರ್ಪಿಸಿ ಶ್ರೀಹರಿಯನ್ನು ಪೂಜಿಸುವರು.ದೀಪದಾರತಿ ಗಂಗಾಜಲ ಅಭಿಷೇಕ ಮಾಡುವರು. ಈ ಆರಾಧನೆಯಿಂದ ಸರ್ವ ಪಾಪಗಳಿಂದ ಪರಿಹಾರವೆಂಬ ನಂಬಿಕೆ. ನಮ್ಮ ಸಂಪ್ರದಾಯ, ಸಂಸ್ಕಾರಗಳು ನಂಬಿಕೆ ಮತ್ತು ವಿಶ್ವಾಸದ ಮೇಲೆಯೇ ನಿಂತಿದೆ. ಒಂದೆಡೆ ಮೋಕ್ಷದತ್ತ ಪಯಣವೆಂಬ ಪ್ರತೀತಿಯೂ ಇದೆ. ಉಪವಾಸ, ಸಾತ್ವಿಕ ಆಹಾರ ಸೇವನೆ, ಧ್ಯಾನ ವಿಶೇಷವಿಂದು. ಬದುಕು ಅಭಿವೃದ್ಧಿಯತ್ತ ಸಾಗುವುದೆಂಬ ವಿಶ್ವಾಸ.
ಪುರಾಣದ ಒಂದು ದಂತಕಥೆಯ ಉಲ್ಲೇಖದಂತೆ ಮಾಂಧಾತನೆಂಬ ಸತ್ಯಶೀಲ, ಗುಣವಂತನಾದ ಅರಸನೋರ್ವ ಪ್ರಜಾನುರಾಗಿಯಾಗಿ, ತನ್ನ ರಾಜ್ಯದ ಆಡಳಿತವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಿದ್ದನಂತೆ. ‘ಯಥಾ ರಾಜ ತಥಾ ಪ್ರಜಾ’ ಎಂಬ ಹಾಗೆ ಪ್ರಜೆಗಳೂ ರಾಜನಿಗೆ ಸಕಲ ಗೌರವ ಮರ್ಯಾದೆ ಕೊಡುತ್ತಿದ್ದರಂತೆ. ಯಾವುದೇ ಕುಂದು ಕೊರತೆಗಳಿಲ್ಲದೆಯೆ ಆಳ್ವಿಕೆ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಮೂರು ವರ್ಷ ಸತತವಾಗಿ ಮಳೆ ಬಾರದೆ ಬರಗಾಲ ಬಂತಂತೆ. ಜೀವಜಂತುಗಳ ನರಳಾಟ ನೋಡಲಾಗದೆ ಅರಸ ದು:ಖಿಸಿ, ಯೋಚಿಸಿ ಕಾಡಿನತ್ತ ಪಯಣ ಬೆಳೆಸಿದನು. ಅಲ್ಲಿ ಅಂಗೀರಸ ಮಹಾಮುನಿಯ ದರ್ಶನವಾಗಲು ಎಲ್ಲಾ ನಡೆದ ವಿಷಯವನ್ನು ತಿಳಿಸಿದನು. ಆಷಾಢ ಏಕಾದಶಿಯಂದು ಭಕ್ತಜನ ಸುರಧೇನು, ಭಕ್ತರ ಕಾಯುವ ಭಗವಂತ ವಿಷ್ಣುವನ್ನು ಉಪವಾಸವಿದ್ದು ಶ್ರದ್ಧೆಯಿಂದ ಆಚರಿಸಿ ಎಂದನು. ಊರಿಗೆ ಮರಳಿದ ರಾಜ ಪ್ರಜೆಗಳನ್ನೆಲ್ಲ ಕೂಡಿಕೊಂಡು ವ್ರತವನ್ನು ಆಚರಿಸಿದ ಪರಿಣಾಮ ಧಾರಾಕಾರ ಮಳೆ ಬಂತಂತೆ. ಅರಸನೊಂದಿಗೆ ಪ್ರಜೆಗಳು ಸಂಭ್ರಮಿಸಿದರಂತೆ.
ಕಷ್ಟಗಳ ನಿವಾರಣೆ, ಉತ್ತಮ ಜೀವನ, ಆಯುಷ್ಯ ಆರೋಗ್ಯವೃದ್ಧಿ, ಮಾನಸಿಕ ನೆಮ್ಮದಿ ಸಿಗುವ ಈ ದೇವಶಯನೀ ಏಕಾದಶಿ ವ್ರತವನ್ನು ಆಚರಿಸಿ ಪುನೀತರಾಗೋಣ.
(ಆಕರ:ಪುರಾಣ ಪ್ರಪಂಚ)
ಸಂಗ್ರಹ: ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ