ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೀಗೆ

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೀಗೆ

ಬರಹ

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ಎಂಬ ಪ್ರಬಂಧವನ್ನು ಓದಿ ಮನಸ್ಸಿಗೆ ಬಹಳ ನೋವಾಯಿತು. ನಮ್ಮವರೇ ಹಾಗೆ. ದೇವರ ಕೆಲಸ ಎಂದರೆ ಸರಕಾರದ ಕೆಲಸದಂತೆ ಮಾಡಿದರೂ ಆಯಿತು ಬಿಟ್ಟರೂ ಆಯಿತು. ದೇವಸ್ಥಾನವೆಂದರೆ ಬೀಚಿಯವರು ಹೇಳಿರುವಂತೆ ಊರ ಮುಂದಿನ ಇಸ್ಪೀಟ್ ಆಡುವ ಜಾಗವೆಂದೇ ಅರ್ಥ.
ಚಿಕ್ಕಮಗಳೂರು ಜಿಲ್ಲೆ/ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಹಾಳು ಬಿದ್ದು ಹೋಗಿದ್ದ ಶ್ರೀ ಉದ್ಭವ ಕಲ್ಲೇಶ್ವರ ದೇವಸ್ಥಾನವನ್ನು ನಮ್ಮ ಕುಟುಂಬದವರೆಲ್ಲರೂ ಸೇರಿ ಹಣ ಹೊಂದಿಸಿ, ಜೊತೆಗೆ ಭಕ್ತಾದಿಗಳಿಂದಲೂ ಹಣ ಸಂಗ್ರಹಿಸಿ ಉತ್ತಮ ರೀತಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಿದೆವು. ಬಂದ ಭಕ್ತಾದಿಗಳೆಲ್ಲಾ ಹೊಗಳಿದ್ದೇ ಹೊಗಳಿದ್ದು. ನೀವು ಉತ್ತಮ ಕಾರ್ಯ ನಡೆಸಿದ್ದೀರಿ, ಇನ್ನು ನಾವುಗಳು ಅದರ ಉಸ್ತುವಾರಿ, ಜೋಪಾನಗಾರಿಕೆ ಮಾಡಿಕೊಳ್ಳುತ್ತೇವೆಂದು ಊರಿನವರು ಬರವಸೆ ನೀಡಿದರು. ಆದರೆ ಈಗ ಆಗುತ್ತಿರುವುದೇನು? ಪುನಃ ಯಾರಿಗೂ ಬೇಡದ ಅನಾಥ ಮಗುವಾಗಿದ್ದಾನೆ ಶ್ರೀ ಕಲ್ಲೇಶ್ವರಸ್ವಾಮಿ. ದೇವಸ್ಥಾನಕ್ಕೆ ಹಳೆಯ ಕಳೆ (ಕೊಳೆ?) ಪುನಃ ಬರುತ್ತಿದೆ. ಕಾರಣ ಒಂದೇ . . . ಆ ದೇವಸ್ಥಾನದಿಂದ ಅರ್ಚಕರಿಗಾಗಲಿ ಸ್ಥಳೀಯ ಭಕ್ತರಿಗಾಗಲೀ ಯಾವುದೇ ರೀತಿಯ ಹಣ ಹರಿವು ಇರುವುದಿಲ್ಲ. ಕೇವಲ ಭಕ್ತಿಯೊಂದೇ. ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ಸುಫರ್ದಿನಲ್ಲಿರುವ ಈ ದೇವಸ್ಥಾನವನ್ನು ಹೊಕ್ಕ ಅಧಿಕಾರಿಗಳು ಈ ಶತಮಾನದಲ್ಲಿ ಇಲ್ಲವೆಂದೇ ನನ್ನ ಭಾವನೆ.