ದೇವಾಲಯಗಳ ವಾಸ್ತು ವಿನ್ಯಾಸ…

ದೇವಾಲಯಗಳ ವಾಸ್ತು ವಿನ್ಯಾಸ…

ಮಾಧ್ಯಮಗಳು ಮತ್ತು ಅವರ ಕೆಲವು ಜ್ಯೋತಿಷಿಗಳು ಭಕ್ತಿಯ ಹೆಸರಿನಲ್ಲಿ ಬಿತ್ತುವ ಮೌಡ್ಯ - ಪ್ರಕೃತಿಯ ಸಹಜ ನಡವಳಿಕೆ. ಗವಿ ಗಂಗಾಧರೇಶ್ವರ ದೇವಸ್ಥಾನದ ಗರ್ಭಗುಡಿಯ ಶಿವಲಿಂಗದ ಮೇಲೆ ಸಂಕ್ರಾಂತಿಯ ದಿನದಂದು ಸಂಜೆ ಸೂರ್ಯ ಕಿರಣಗಳ ಸ್ಪರ್ಶ ಮತ್ತು ಭಾರತೀಯ ದೇವಾಲಯಗಳ ವಾಸ್ತು ವಿನ್ಯಾಸ. ಮುಸ್ಲಿಮರ ಮಸೀದಿಗಳು, ಕ್ರಿಶ್ಚಿಯನ್ನರ ಚರ್ಚುಗಳು, ಸಿಖ್ಖರ ಗುರುದ್ವಾರಗಳು, ಜೈನ ಮಂದಿರಗಳು, ಬೌದ್ಧ‌ ಸ್ತೂಪಗಳು ವಿಶ್ವದ ಎಲ್ಲಾ ಭಾಗಗಳಲ್ಲೂ  ಮೇಲ್ನೋಟಕ್ಕೆ ಒಂದೇ ರೀತಿ ಕಾಣುತ್ತವೆ. ವಿಶಾಲತೆ, ಭವ್ಯತೆ, ಪ್ರಾಕೃತಿಕ ಹಿನ್ನೆಲೆಯ ವಿಷಯದಲ್ಲಿ ಒಂದಷ್ಟು ವ್ಯತ್ಯಾಸ ಇರಬಹುದು. ಆಂತರಿಕ ವಿನ್ಯಾಸಕ್ಕೆ ಅನೇಕ ಅರ್ಥಗಳು ಇರಬಹುದು. ನನಗೆ ತಿಳಿದಿಲ್ಲ. 

ಆದರೆ ಹಿಂದೂ ದೇವಾಲಯಗಳು ‌ಸಾಕಷ್ಟು ವಿಭಿನ್ನತೆ ಮತ್ತು ವಿವಿಧ ರೀತಿಯ ವಾಸ್ತು ವೈವಿಧ್ಯತೆ ಹೊಂದಿವೆ. ಸೂರ್ಯನ ಆರಾಧಕರಾದ ಹಿಂದೂ ಜೀವನ ಶೈಲಿಯ ಜನರ ದೇವಾಲಯಗಳು ಬಹುತೇಕ ಪೂರ್ವಾಭಿಮುಖವಾಗಿಯೇ ಇರುತ್ತದೆ. ಬೆಳಗಿನ ಸೂರ್ಯನ ಕಿರಣಗಳು ದೇವರು ಮೂರ್ತಿಯ ಮೇಲೆ ಬೀಳುವಂತೆ ನಿರ್ಮಿಸಲಾಗಿರುತ್ತದೆ. ಗರ್ಭಗುಡಿ ಪ್ರಾಂಗಣ ಮುಖ ಮಂಟಪ  ಸುತ್ತಮುತ್ತಲಿನ ಪರಿಸರ ಪ್ರವೇಶ ದ್ವಾರ ಎಲ್ಲವೂ ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತದೆ. ಎಂದಿನಂತೆ ಭಾರತೀಯರಲ್ಲಿ ನಂಬಿಕೆಯ ಆಧಾರದ ಮೇಲೆ ಅನುಭವಗಳಿಂದ ಕಲಿತ ಪಾಠಗಳಿಂದ ಜನರ ಭಕ್ತಿ ಭಾವನೆಗಳಿಗೆ, ಸಂಪ್ರದಾಯಗಳಿಗೆ, ಪವಿತ್ರ ಗ್ರಂಥಗಳಿಗೆ ಪೂರಕವಾಗಿ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಚಿತ್ರಕಲೆ, ಶಿಲ್ಪಕಲೆ, ವೈವಿಧ್ಯತೆ ಮತ್ತು ಇತಿಹಾಸ ಸಾರುವ ಕಲ್ಲುಗಂಬಗಳು, ಕೆಲವು ಕಡೆ ಗೋಪುರಗಳು ಎಲ್ಲವೂ ಪ್ರದೇಶದಿಂದ ಪ್ರದೇಶಕ್ಕೆ ಸಾಕಷ್ಟು ವಿಶೇಷತೆ ಹೊಂದಿವೆ.

ಆ ರೀತಿಯ ಒಂದು ವಿಶೇಷತೆಯೇ ಗವಿ ಗಂಗಾಧರೇಶ್ವರ ದೇವಾಲಯದ ಸೂರ್ಯ ರಶ್ಮಿಯ ಶಿವಲಿಂಗದ ಸ್ಪರ್ಶ.  ಪ್ರಕೃತಿಯ ಸಹಜ ಕ್ರಿಯೆ. ಸಂಜೆ ಸೂರ್ಯಾಸ್ತದ ಸಮಯದಲ್ಲಿ ಕೆಲವೇ ಸೆಕೆಂಡುಗಳ ಈ ಪ್ರಕ್ರಿಯೆ ಭಕ್ತರಿಗೆ ಒಂದು ದೈವಿಕ ಮಹತ್ವ ಎನಿಸಿದರೆ, ಕೆಲವರಿಗೆ ಕುತೂಹಲಕಾರಿ ಮತ್ತು ಸುಂದರ ದೃಶ್ಯ. ಇದು ಪ್ರತಿ ವರ್ಷವೂ ನಡೆಯುತ್ತದೆ. ಆ ದೇವಸ್ಥಾನದ ವಾಸ್ತು ವಿನ್ಯಾಸ ಒಂದು ಬೆರಗು ಮೂಡಿಸುವುದು ನಿಜ. ಆದರೆ ಅದನ್ನು ವೈಭವೀಕರಿಸಿ ಅತಿ ಮಾನುಷ ಶಕ್ತಿ ಎಂದು ಬಿಂಬಿಸುವುದು ಸರಿಯಲ್ಲ. ಶಬರಿಮಲೆಯ ಜ್ಯೋತಿ ಒಂದು ಕೃತಕ ಸೃಷ್ಟಿ ಎಂದು ಈಗಾಗಲೇ ಸಾಬೀತಾಗಿದೆ. ಆದರೆ ನೋಡಲು ಅದು ಸಹ ಒಂದು ರೋಮಾಂಚಕಾರಿ ದೃಶ್ಯ.

ಪ್ರಾಚೀನ ದೇವಾಲಯಗಳನ್ನು ಹೆಚ್ಚಾಗಿ ಕಾಡು ಮೇಡು ಬೆಟ್ಟ ಗುಡ್ಡಗಳ ಕಠಿಣ ಸ್ಥಳಗಳಲ್ಲಿ ಕಟ್ಟಲಾಗುತ್ತಿತ್ತು. ಬಹುಶಃ ಸುಂದರ ಪ್ರಕೃತಿಯ ಮಡಿಲಲ್ಲಿ ಅದರ ಸೌಂದರ್ಯವನ್ನು ಸಹ ದೇವಸ್ಥಾನದ ಭಾಗವಾಗಿ ಪರಿಗಣಿಸಲಿ ಮತ್ತು ದೇವರ ದರ್ಶನ ಹೆಚ್ಚು ತ್ರಾಸದಾಯಕವಾಗಿದ್ದರೆ ಅದನ್ನು ಪಡೆಯಲು ಹೆಚ್ಚು ಹೆಚ್ಚು ಶ್ರಮಪಡಲಿ ಅದರ ಮುಖಾಂತರ ಬದುಕಿನ ಸಂಕಷ್ಟಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಲಿ ಹಾಗು ದೇವರ ಭೇಟಿ ಸುಲಭವಲ್ಲ ಎಂದು ಸಾಂಕೇತಿಕವಾಗಿ ನಿರೂಪಿಸುವ ಉದ್ದೇಶವೂ ಇರಬಹುದು. ಇನ್ನೂ ಹಲವು ವ್ಯಾಖ್ಯಾನಗಳು ಇರಬಹುದು.

ಆದರೆ ಆಧುನಿಕ ಕಾಲದಲ್ಲಿ ಇಸ್ಕಾನ್ ಎಂಬ ಸಂಸ್ಥೆ ಶ್ರೀಕೃಷ್ಣ ದೇವಾಲಯಗಳನ್ನು ಹೆಚ್ಚು ವೈಭವೋಪೇತವಾಗಿ, ಆಕರ್ಷಕವಾಗಿ ಮಾರ್ಬಲ್ ಗಳನ್ನು ಬಳಸಿ ಕಟ್ಟಲಾಯಿತು. ವಸತಿ ಗೃಹಗಳನ್ನು ಮದುವೆ ಮಂಟಪಗಳನ್ನು ನಿರ್ಮಿಸಲಾಯಿತು. ಒಂದು ರೀತಿಯ ವ್ಯಾಪಾರೀಕರಣ ಪ್ರಾರಂಭವಾಯಿತು. ಗಣೇಶ, ಆಂಜನೇಯ, ಲಕ್ಷ್ಮೀ ವೆಂಕಟೇಶ್ವರ, ಶ್ರೀರಾಮ, ಶಿರಡಿ ಸಾಯಿಬಾಬಾ, ಕೆಲವು ಜಾತಿಗಳ ದೇವರುಗಳು, ಮನೆ ದೇವರುಗಳು ಮುಂತಾದ ದೇವಸ್ಥಾನಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಎಲ್ಲೆಂದರಲ್ಲಿ ನಿರ್ಮಿಸಲಾಯಿತು. ಭವ್ಯತೆಯ ಜಾಗದಲ್ಲಿ ಮನೆ, ಲಾಡ್ಜಿಂಗ್, ಆಸ್ಪತ್ರೆ, ಶಾಲೆ, ಅರಮನೆ ರೀತಿಯ ಸಾಮಾನ್ಯ ವಿನ್ಯಾಸಗಳ ರೂಪದಲ್ಲಿ ಸಹ ಕಟ್ಟಲಾಯಿತು. ಹಿಂದಿನ ವಾಸ್ತು ವಿನ್ಯಾಸ ಮರೆಯಾಯಿತು. ಜಾಗಕ್ಕೆ, ಅವಕಾಶಕ್ಕೆ, ಹಣಕ್ಕೆ ತಕ್ಕ ದೇವಾಲಯಗಳು ನಿರ್ಮಾಣವಾದವು. ರಾಜಕಾರಣಿಗಳು, ವ್ಯಾಪಾರಿಗಳು, ಉದ್ಯಮಿಗಳು, ಜಮೀನ್ದಾರರರು ಇತ್ತೀಚಿನ ದಿನಗಳಲ್ಲಿ ಇದಕ್ಕಾಗಿ ಹೆಚ್ಚಿನ ಹಣಕಾಸು ನೆರವು ನೀಡುತ್ತಿದ್ದಾರೆ. ದೇವಾಲಯಗಳಿಗೆ ರಾಜಾಶ್ರಯದ ಜಾಗದಲ್ಲಿ ಜನಾಶ್ರಯ ದೊರೆತಿದೆ.

ಉತ್ತರ ಭಾರತಕ್ಕಿಂತ ದಕ್ಷಿಣದ ದೇವಾಲಯಗಳನ್ನು ಹೆಚ್ಚು ಭವ್ಯವಾಗಿ, ವಿಶಾಲವಾಗಿ, ಕಲಾತ್ಮಕವಾಗಿ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಭಾರತದ ಪ್ರವಾಸೋದ್ಯಮದಲ್ಲಿ ದೇವಾಲಯಗಳದೇ ಅತಿ ಹೆಚ್ಚು ಮಹತ್ವದ ಪಾತ್ರವಾಗಿದೆ. " ದೇವಾಲಯಗಳಿಲ್ಲದ ಭಾರತ ಆತ್ಮವಿಲ್ಲದ ಮನುಷ್ಯನಂತೆ " ಎಂದು ಒಬ್ಬ ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ, ಮಾಧ್ಯಮಗಳು ವಿಜೃಂಭಿಸಿದ ಸೂರ್ಯ ಕಿರಣಗಳ ಸ್ಪರ್ಶದ ನೆನಪಲ್ಲಿ ದೇವಾಲಯಗಳ ವಿನ್ಯಾಸದ ಅತ್ಯಂತ ಕನಿಷ್ಠ ಮಾಹಿತಿ ನಿಮ್ಮೊಂದಿಗೆ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದೇನೆ. 

ಇದೊಂದು ಆಳವಾದ ಆಧ್ಯಾತ್ಮಿಕ ವಿಷಯ. ಬಡವರ, ಅಸ್ಪೃಶ್ಯರ, ಅನೇಕ ಜಾತಿ ಧರ್ಮಗಳ ನಂಬಿಕೆಯ, ಕಲ್ಪನೆಯ, ಭಾವನಾತ್ಮಕತೆಯ, ಶೋಷಣೆಯ, ಮಾನಸಿಕ ನೆಮ್ಮದಿಯ ಹುಡುಕಾಟದ ದೇವಸ್ಥಾನದ ನಿರ್ಮಾಣಗಳು ಮತ್ತು ಅವುಗಳ ವಾಸ್ತು ವಿನ್ಯಾಸ ಸವಾಲಿನ ಅಧ್ಯಯನಕ್ಕೆ ಮುನ್ನುಡಿಯಂತಿದೆ. ಭಾರತದ ಸಾಮಾಜಿಕ ರಾಜಕೀಯ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿರುವ ದೇವಸ್ಥಾನಗಳ ಬಗ್ಗೆ ನಿಮ್ಮ ಗಮನ ಸೆಳೆಯುವ ಒಂದು ಸಣ್ಣ ಪ್ರಯತ್ನ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ