ದೇವುಡು ಅವರ ಸಣ್ಣ ಕತೆಗಳು

“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು.
ಬಹುಮುಖ ಪ್ರತಿಭೆಯ ದೇವುಡು (1896-1962) ಅವರು ಕನ್ನಡನಾಡಿನಲ್ಲಿ ಮನೆಮಾತಾಗಿರುವುದು ಅವರ “ಮಹಾ…” ಸರಣಿಯ ಈ ಮೂರು ಬೃಹತ್ ಕಾದಂಬರಿಗಳಿಂದಾಗಿ: “ಮಹಾಕ್ಷತ್ರಿಯ”, ಮಹಾಬ್ರಾಹ್ಮಣ” ಮತ್ತು “ಮಹಾದರ್ಶನ”. ಇವು ಭಾರತದ ವೈದಿಕ ಸಂಸ್ಕೃತಿಯ ಮೂಲವನ್ನು ಹೊಸತನದಲ್ಲಿ ಕಟ್ಟಿಕೊಡುತ್ತವೆ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಹಾಗೂ ತೆಲುಗು ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ದೇವುಡು ಮಹಾನ್ ವಿದ್ವಾಂಸರು. ಜೊತೆಗೆ, ವೇದ, ವೇದಾಂತ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಉಪನಿಷತ್ತು ಮತ್ತು ಮೀಮಾಂಸ ಶಾಸ್ತ್ರ ಇವನ್ನು ಗಾಢವಾಗಿ ಅಧ್ಯಯನ ಮಾಡಿದವರು. ಅವರ ಕೃತಿಗಳ ಭಾಷಾ ಪ್ರೌಢಿಮೆ, ಪದ ಸಂಪತ್ತು, ಸೃಜನಶೀಲತೆ ಹಾಗೂ ಕಲ್ಪನಾವಿಲಾಸಗಳನ್ನು ಕಂಡಾಗ ನಮಗೆ ಅವರ ಅಧ್ಯಯನದ ಆಳ ಮತ್ತು ವ್ಯಾಪ್ತಿಯ ಪರಿಚಯವಾಗುತ್ತದೆ.
ಸುಮಾರು 60ಕ್ಕೂ ಅಧಿಕ ಕೃತಿಗಳನ್ನು ರಚಿಸಿರುವ ದೇವುಡು ಅವರು ಹದಿನೈದು ಕಾದಂಬರಿಗಳು, ಹಲವು ಸಣ್ಣ ಕತೆಗಳು ಮತ್ತು ವಿದ್ವತ್-ಪೂರ್ಣ ಕೃತಿಗಳನ್ನು ಬರೆದು, ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದವರು. ವಿದ್ವಾಂಸರಿಗಾಗಿ “ಮೀಮಾಂಸ ದರ್ಪಣ” ರಚಿಸುವುದರ ಜೊತೆಗೆ “ಯೋಗವಾಸಿಷ್ಠ”ವನ್ನು 24 ಸಂಪುಟಗಳಲ್ಲಿ ಅನುವಾದಿಸಿರುವುದು ಗಮನಾರ್ಹ. ಮಕ್ಕಳಿಗಾಗಿಯೂ ಅವರು ಹಲವಾರು ಕತೆಗಳನ್ನು ಬರೆದಿದ್ದಾರೆ.
ದೇವುಡು ಕೃಷ್ಣ ಶಾಸ್ತ್ರಿ ಮತ್ತು ಸುಬ್ಬಮ್ಮ ಅವರ ಸುಪುತ್ರನಾಗಿ ದೇವುಡು ನರಸಿಂಹ ಶಾಸ್ತ್ರಿ ಜನಿಸಿದ್ದು ಮೈಸೂರಿನಲ್ಲಿ (29-12-1896). ಸಂಸ್ಕೃತ ಎಂ.ಎ. ವರೆಗೆ ಅವರ ಅಧ್ಯಯನ. ವಿದ್ಯಾರ್ಥಿ ದೆಸೆಯಲ್ಲೇ ಬರವಣಿಗೆ ಶುರು ಮಾಡಿದ್ದ ಅವರಿಗೆ ಆಗಲೇ ತತ್ತ್ವಶಾಸ್ತ್ರದ ಗಂಭೀರ ಕಲಿಕೆಯಲ್ಲಿ ಆಸಕ್ತಿ. 1925ರಲ್ಲಿ ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ವೃತ್ತಿಯೊಂದಿಗೆ ಅವರ ವೃತ್ತಿ ಜೀವನ ಆರಂಭ. ಮೂರು ವರುಷಗಳ ನಂತರ ಬೆಂಗಳೂರಿನ ಆರ್ಯ ವಿದ್ಯಾಶಾಲೆಗೆ ಮುಖ್ಯೋಪಾಧ್ಯಾಯರಾಗಿ ನೇಮಕ. ಅನಂತರ ಉಪಾಧ್ಯಾಯ ವೃತ್ತಿಯೊಂದಿಗೆ ಇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡರು. ತಮ್ಮ ಸುತ್ತಲಿನ ಬೆಳವಣಿಗೆಗಳಿಗೆಲ್ಲ ಅವರು ಸ್ಪಂದಿಸುತ್ತಿದ್ದರು. ಬದುಕಿನುದ್ದಕ್ಕೂ ಅವರದು ನಿರಂತರವಾದ ಅಧ್ಯಯನ ಹಾಗೂ ಬರವಣಿಗೆ.
ಈ ಸಂಕಲನದ ಮೊದಲ ಕತೆ “ಭಾರ್ಗವಿ”. ತನ್ನ ರಾಜ್ಯದ ಸ್ವಾತಂತ್ರ್ಯವೇ ಮುಖ್ಯ ಎಂದು ನಂಬುವ ಭಾರ್ಗವಿ ಅದಕ್ಕಾಗಿ ತನ್ನ ಜೀವದ ಜೀವದಂತಿದ್ದ ಪ್ರಿಯಕರನನ್ನೇ ನಿರಾಕರಿಸುವ ಕತೆ ಇದು. ಎರಡನೆಯ ಕತೆ “ವೈಣಿಕ” ಬಹುಕಾಲ ನೆನಪಿನಲ್ಲಿ ಉಳಿಯುವ ಕತೆ. ಇಂದು ಪ್ರಸಿದ್ಧವಾಗಿರುವ ಮಾಂತ್ರಿಕ ವಾಸ್ತವತೆಗೆ ಇದೊಂದು ಉತ್ತಮ ನಿದರ್ಶನ. ಸಂಗೀತ ಕಲೆಯೂ ರಾಜನ ಇಷ್ಟಕ್ಕೆ ಅನುಸಾರವಾಗಿ ಮೂಡಿ ಬರಬೇಕು ಎಂದು ನಿರೀಕ್ಷಿಸುವ ಒಬ್ಬ ರಾಜನಿಗೆ ಮಹಾನ್ ವೈಣಿಕನೊಬ್ಬನು ಆ ಕಲೆಯ ಪರಮ ಪಾವಿತ್ರ್ಯವನ್ನು ಮನಗಾಣಿಸುವ ಅಪರೂಪದ ಕತೆ.
ಮೂರನೆಯ ಕತೆ “ಆತ್ಮಾರ್ಪಣ”. ಕೋಟೆಯ ನಿರ್ಮಾಣದ ಹಂತದಲ್ಲಿ ಹೆಬ್ಬಾಗಿಲು ದೃಢವಾಗಿ ನಿಲ್ಲಲಿಕ್ಕಾಗಿ ಗೌಡನ ಸೊಸೆಯೇ ಆತ್ಮಾರ್ಪಣ ಮಾಡುವುದನ್ನು ಮನ ಮಿಡಿಯುವಂತೆ ಚಿತ್ರಿಸುತ್ತದೆ. ಅನಂತರದ ಕತೆ “ಮುಯ್ಯಿಗೆ ಮುಯ್ಯಿ”. ಅಂದೊಮ್ಮೆ ರಾಜನ ಅವಕೃಪೆಗೆ ತುತ್ತಾಗಿದ್ದ ಗರುಡನು ಯುದ್ಧದಲ್ಲಿ ತನ್ನ ರಾಜ್ಯಕ್ಕೆ ಗೆಲುವು ತಂದು ಕೊಡುವ ಕತೆ.
ಈ ಸಂಕಲನದ ಅತ್ಯಂತ ಸಣ್ಣ ಕತೆ ಐದನೆಯದು: 'ಉಂಗುರ”. ಒಂದು ಪುಟ್ಟ ಮಾನವೀಯ ಘಟನೆಯ ಸುತ್ತ ಹೆಣೆದಿರುವ ಕತೆ. ಮುಂದಿನದು “ಅಂದಿನ ಕಥೆ”. ಕಾಲ ಬದಲಾದಂತೆ, ಹಿಂದಿನ ತಲೆಮಾರಿನ ಸಮಾಜಮುಖಿ ಮೌಲ್ಯಗಳನ್ನು ಈಗಿನ ತಲೆಮಾರು ತಿರಸ್ಕರಿಸುವುದೇ ಇದರ ಕಥಾವಸ್ತು. ಏಳನೆಯ ಕತೆ “ಅದರ ಫಲ”. ಹಣದ ಮದದಲ್ಲಿ ವಿವೇಕ ಕಳೆದುಕೊಂಡಿದ್ದ ಸಿರಿವಂತನೊಬ್ಬನಿಗೆ ದಿಟ್ಟ ಹೆಣ್ಣೊಬ್ಬಳು ಮರೆಯಲಾಗದ ಪಾಠ ಕಲಿಸುವ ಕತೆ.
ಮುಂದಿನ ಐದು ಕತೆಗಳು ದೀರ್ಘ ಕತೆಗಳು. “ಮೂರು ಕನಸು” ಕತೆ ಒಬ್ಬಳು ವಿಧವೆ ಮಧ್ಯವಯಸ್ಕಳು ಮತ್ತು ಯುವಕನ ನಡುವಣ ಮಮತೆಯ ಸಂಬಂಧವನ್ನು ಮನಮುಟ್ಟುವಂತೆ ವರ್ಣಿಸುತ್ತದೆ. “ಘಾಟಿ ಮುದುಕ” ಕತೆ, ಇಬ್ಬರು ಹಕ್ಕುದಾರ ಮಕ್ಕಳಿಗೆ ತನ್ನ ಕಾಲಾನಂತರ ಆಸ್ತಿಯನ್ನು ನ್ಯಾಯೋಚಿತವಾಗಿ ವಿಭಜಿಸಲು ಮುದುಕನೊಬ್ಬ ಮಾಡಿದ ಭಾರೀ ಜಾಣ್ಮೆಯ ತಂತ್ರವನ್ನು ವಿಸ್ತಾರವಾಗಿ ಸಾದರಪಡಿಸುವ ಕತೆ.
“ಕಳ್ಳರ ಕೂಟ” ಕತೆಯು ಪ್ರೇಮಕತೆಯಾಗಿಯೂ ಪತ್ತೇದಾರಿ ಕತೆಯಾಗಿಯೂ ಸಫಲವಾಗಿದೆ. “”ಸೋಲೋ ಗೆಲುವೋ” ಕತೆ ಸ್ವಾಭಿಮಾನಿಯಾದ ಹೆಣ್ಣು ಅಹಂಕಾರದ ಗಂಡನ್ನು ಗೆದ್ದುಕೊಳ್ಳುವ ಪರಿಯನ್ನು ಕುತೂಹಲಕಾರಿಯಾಗಿ ತೆರೆದಿಡುತ್ತದೆ. ಮೊದಲ ಭಾಗದ ಕೊನೆಯ ಕತೆ “ಇದು ನಿಜವೇ?” ಪತ್ನಿಯೊಬ್ಬಳ ದಿನಚರಿಯ ರೂಪದಲ್ಲಿ ಪ್ರಸ್ತುತ ಪಡಿಸಿರುವ ಈ ಕತೆಯು ಪತಿ-ಪತ್ನಿಯರ ನಡುವಣ ಸರಸಸಲ್ಲಾಪ ಮತ್ತು ರೋಮಾನ್ಸಿನ ವಿವಿಧ ಸಂದರ್ಭಗಳನ್ನು ನವಿರಾದ ಭಾಷೆಯಲ್ಲಿ ಚಿತ್ರಿಸಿದೆ.
ಈ ಕೃತಿಯ ಎರಡನೇ ಭಾಗದಲ್ಲಿ ದೇವುಡು ಅವರು ಮಕ್ಕಳಿಗಾಗಿ ಅನುವಾದಿಸಿರುವ ವಿದೇಶಗಳ ಹತ್ತು ಕತೆಗಳಿವೆ. ಈ ಸಂಕಲನದ ಮೂಲಕ ಕನ್ನಡದ ಅಗ್ರಪಂಕ್ತಿಯ ಸಾಹಿತಿಯಾದ ದೇವುಡು ಅವರ ಎಲ್ಲ ಸಣ್ಣಕತೆಗಳೂ ಒಂದೇ ಹೊತ್ತಗೆಯಲ್ಲಿ ಓದುಗರಿಗೆ ಲಭ್ಯವಾಗಿವೆ. ಇವು ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ಓದಬೇಕಾದ ಕತೆಗಳು.