ದೇಶದ್ರೋಹಕ್ಕೆ ಉತ್ತೇಜನ ಸಿಗದಿರಲಿ

ದೇಶದ್ರೋಹಕ್ಕೆ ಉತ್ತೇಜನ ಸಿಗದಿರಲಿ

ರಾಜ್ಯದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದ ಕಾರಣಕ್ಕಾಗಿ ಸಂಭ್ರಮಾಚಾರಣೆ ನಡೆಸುವುದೇನೋ ಸರಿ. ಆದರೆ ಈ ಸಂಭ್ರಮಾಚರಣೆಯ ವೇಳೆ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ್' ಎಂಬುದಾಗಿಯೂ ಘೋಷಣೆ ಕೂಗಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಇದಂತೂ ಗಂಭೀರ ವಿಷಯವೇ ಆಗಿದೆ. ಅದೂ ವಿಧಾನಸಭೆಯ ಆವರಣದಲ್ಲೇ ಇಂತಹ ಕೂಗು ಮೊಳಗಿದ್ದು ನಿಜವೇ ಎಂದಾಗಿದ್ದರೆ ಅದಂತೂ ತೀರಾ ಅಕ್ಷಮ್ಯವೇ ಸರಿ. ಈ ಪ್ರಕರಣವು ಬುಧವಾರ ವಿಧಾನಮಂಡಲದ ಅಧಿವೇಶನದಲ್ಲೂ ದೊಡ್ದ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಸದಸ್ಯರು ಈ ಘಟನೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ನಿರಾಕರಿಸಿದ್ದಾರೆ. ನಿರಾಕರಣೆಯ ಸಂದರ್ಭದಲ್ಲೂ ಕೆಲವು ಕಾಂಗ್ರೆಸ್ ಮುಖಂಡರು ಬಳಸಿದ ಏಕವಚನದ ಪ್ರಯೋಗ ಕೂಡ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ರಾಜ್ಯಸಭಾ ಸದಸ್ಯ ನಾಸಿರು ಹುಸೇನ್ ಕೂಡಾ ಪಾಕ್ ಪರ ಘೋಷಣೆಯ ಕುರಿತಂತೆ ಮಾಧ್ಯಮದವರು ಪ್ರಶ್ನಿಸಿದಾಗ ಮಾಧ್ಯಮದವರೊಡನೆ ವರ್ತಿಸಿದ ರೀತಿ, ತೋರಿದ ಧಿಮಾಕು ಕೂಡಾ ಅಕ್ಷಮ್ಯವೇ.

ಇದರ ಮಧ್ಯೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಪಾಕಿಸ್ತಾನದ ಘೋಷಣೆ ಕೂಗಿದ್ದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸತ್ಯಾಸತ್ಯತೆ ಅರಿಯಲು ಸಂಬಂಧಿಸಿದ ವಿಡಿಯೋವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿದೆ ‘ ಎಂದಿರುವುದು ಸೂಕ್ತವಾಗಿದೆ. ಇಲ್ಲಿ ಇಂತಹ ಆರೋಪ ಹೊರಿಸಿರುವುದು ಬಿಜೆಪಿಗಿಂತಲೂ ಹೆಚ್ಚಾಗಿ ಮಾಧ್ಯಮದವರೇ ಎಂಬುದನ್ನು ಗಮನಿಸಬೇಕು. ಸುಳ್ಳುಸುಳ್ಳೇ ಮಾಧ್ಯಮದವರು ಇಂತಹ ಆರೋಪ ಹೊರಿಸುವ ಗೋಜಿಗೆ ಹೋಗಲಾರರು. ಹಾಗಾಗಿ ಈ ವಿಷಯದ ಸತ್ಯಾಂಶ ಹೊರಬಂದು, ಪಾಕ್ ಪರ ಘೋಷಣೆ ಕೂಗಿದವರ ಮೇಲೂ ಮತ್ತು ಅಂತಹವರನ್ನು ವಿಧಾನ ಸೌಧಕ್ಕೆ ಕರೆತಂದವರ ಮೇಲೂ ಕ್ರಮ ಜರುಗಿಸುವುದು ಅಗತ್ಯವಾಗಿದೆ. ವಿಧಾನ ಸಭೆಯ ಸ್ಪೀಕರ್ ರವರು ಕೂಡಾ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಇವೆಲ್ಲದರ ಮಧ್ಯೆ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಿದೊಡನೆ ಕೆಲವು ದೇಶದ್ರೋಹಿ, ಹಿಂದು ವಿರೋಧಿ, ಸಮಾಜ ವಿರೋಧಿ ಶಕ್ತಿಗಳು ಇನ್ನು ಮುಂದೆ ತಮ್ಮನ್ನಾರೂ ಪ್ರಶ್ನಿಸುವಂತಿಲ್ಲ ಎಂಬ ವರ್ತನೆ ತೋರುತ್ತಿರುವುದು ಏನನ್ನು ಸೂಚಿಸುತ್ತದೆ ಎಂಬ ಬಗ್ಗೆ ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೯-೦೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ