ದೇಶದ ಪಥ ಬದಲಿಸಿದ 25 ಪ್ರಮುಖ ತೀರ್ಪುಗಳು
'ದೇಶದ ಪಥ ಬದಲಿಸಿದ ೨೫ ಪ್ರಮುಖ ತೀರ್ಪುಗಳು' ಪುಸ್ತಕದ ಲೇಖಕ ವೈ ಜಿ ಮುರಳೀಧರನ್ ಅವರು ಕಳೆದ ೨೫ ವರ್ಷಗಳಿಂದ ಗ್ರಾಹಕ ಜಾಗೃತಿ, ಮಾನವ ಹಕ್ಕು, ವ್ಯಕ್ತಿತ್ವ ವಿಕಸನ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ರಚನೆ ಮತ್ತು ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇವರ ೫೦೦೦ಕ್ಕೂ ಹೆಚ್ಚು ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೆಲವು ಘಟನೆಗಳು, ಪುಸ್ತಕಗಳು, ವ್ಯಕ್ತಿಗಳು ಮತ್ತು ಪ್ರಸಂಗಗಳು ಮಾನವ ಸಮಾಜದ ದಿಕ್ಕನ್ನು ಬದಲಿಸಿರುವುದನ್ನು ಚರಿತ್ರೆಯಲ್ಲಿ ನೋಡಬಹುದು. ಸಾರ್ವಜನಿಕ ಬಸ್ ನಲ್ಲಿ ಬಿಳಿಯರಿಗೆ ಸೀಟು ಬಿಟ್ಟುಕೊಡದ ರೋಸಾ ಪಾರ್ಕ್ಸ್, ನಡುರಾತ್ರಿ ರೈಲಿನಿಂದ ಹೊರದಬ್ಬಿಸಿಕೊಂಡ ಮೋಹನದಾಸ ಗಾಂಧಿ ವಿಶ್ವಾದ್ಯಂತ ಜನಾಂಗೀಯ ನಿಂದನೆಯ ವಿರುದ್ಧ ಆಂದೋಳನಕ್ಕೆ ಕಾರಣವಾದರು. ಕಾರ್ಲ್ಸ್ ಮಾರ್ಕ್ಸ್ ಬರೆದ 'ದಾಸ್ ಕಾಪಿಟಲ್', ಥಾಮಸ್ ಪೇನ್ ರಚಿಸಿದ 'ದ ರೈಟ್ ಆಫ್ ಮ್ಯಾನ್', ಸಿಗ್ಮಂಡ್ ಫ್ರಾಯ್ಡ್ ನ 'ದ ಇಂಟರ್ ಪ್ರಿಟೇಶನ್ ಆಫ್ ಡ್ರೀಮ್ಸ್' ಪುಸ್ತಕಗಳು ಮಾನವನ ಚಿಂತನೆಯನ್ನು ಬದಲಿಸಿದವು. ಅದೇ ರೀತಿ ಭಾರತದ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪುಗಳಲ್ಲಿ ೨೫ ಮುಖ್ಯ ತೀರ್ಪುಗಳನ್ನು ಆಯ್ದು ಅದನ್ನು ಕನ್ನಡ ಜನತೆಗೆ ಸರಳವಾಗಿ ಲೇಖಕರು ಇಲ್ಲಿ ವಿವರಿಸಿದ್ದಾರೆ.
ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಇದರ ನಿರ್ದೇಶಕರಾದ ಕೆ ದ್ವಾರಕನಾಥ್ ಬಾಬು ಇವರು. ತಮ್ಮ ಮುನ್ನುಡಿಯಲ್ಲಿ "ಯಾವುದೇ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಅಭ್ಯಾಸ ಮಾಡುವಾಗ ಆ ತೀರ್ಪಿಗೆ ಮೂಲ ಕಾರಣವೇನು? ಹಾಗೂ ಆ ತೀರ್ಪಿಗೆ ಪೂರಕವಾಗಿ ವಸ್ತುಸ್ಥಿತಿ ಏನು? ತದನಂತರ ಆ ತೀರ್ಪಿನ ತತ್ಪರಿಣಾಮವಾಗಿ ಅಂದರೆ ಸಂವಿಧಾನವನ್ನು ಸೇರಿದಂತೆ ಯಾವ ಯಾವ ಕಾನೂನುಗಳನ್ನು ಮಾರ್ಪಾಡು ಮಾಡುವ ಅಥವಾ ಹೊಸದಾಗಿ ರಚನೆ ಮಾಡುವ ಸಂದರ್ಭ ಒದಗಿಬಂತು ಎಂಬುದನ್ನು ವಿಶದವಾಗಿ ಅಭ್ಯಾಸ ಮಾಡಿ, ಈ ಕೃತಿಯಲ್ಲಿ ಸರಳವಾಗಿ ಕನ್ನಡದಲ್ಲಿ ಎಲ್ಲರಿಗೂ ಮುಟ್ಟುವಂತೆ ರಚಿಸಿ, ಒಂದು ಒಳ್ಳೆಯ ಪ್ರಯತ್ನವನ್ನು ಮಾಡಿರುತ್ತಾರೆ.” ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಕೃತಿಯ ಲೇಖಕರಾದ ವೈ ಜಿ ಮುರಳೀಧರನ್ ಅವರು ತಮ್ಮ 'ಮೊದಲ ಮಾತು' ಇಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳು ಏನೆಂದರೆ "ಕಾನೂನು ಅಥವಾ ತೀರ್ಪುಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳೀಕರಿಸಿ ಆಡುಭಾಷೆಯಲ್ಲಿ ಹೇಳುವುದು ಕಷ್ಟದ ಕೆಲಸ. ಹೀಗೆ ಮಾಡುವಾಗ ಓದುಗರನ್ನು ಹಾದಿ ತಪ್ಪಿಸುವ ಅಪಾಯವೂ ಇರುವುದರಿಂದ ಸಾಕಷ್ಟು ಜಾಗೃತೆ ವಹಿಸಿದ್ದೇನೆ. ಇಲ್ಲಿ ತೀರ್ಪುಗಳ ಬಗ್ಗೆ ಮಾಹಿತಿ ನೀಡಿದ್ದೇನೆ ಹೊರತು ಅದನ್ನು ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಓದುಗರು ಮೂಲ ತೀರ್ಪನ್ನು ಅಧ್ಯಯನ ಮಾಡಬೇಕೆಂದು, ಹಾಗೆ ಮಾಡಿದಲ್ಲಿ ವಿಷಯ ಮತ್ತಷ್ಟು ಸ್ಪಷ್ಟವಾಗುತ್ತದೆ. ಆಯ್ಕೆ ಮಾಡಿಕೊಂಡಿರುವ ತೀರ್ಪುಗಳಿಗೆ ಸಂಬಂಧಿಸಿದ ಉಲ್ಲೇಖ (ಸೈಟೇಷನ್) ಸೂಚಿಸಿದ್ದೇನೆ. ಎಲ್ಲ ತೀರ್ಪುಗಳ ಪೂರ್ಣಪಾಠ ಅಂತರ್ಜಾಲದಲ್ಲಿ ಲಭ್ಯವಿದೆ."
೨೫ ಆಯ್ದ ಪ್ರಮುಖ ತೀರ್ಪುಗಳ ವಿವರಗಳು ಪರಿವಿಡಿಯಲ್ಲಿ ಲಭ್ಯವಿದೆ. ಕಾನೂನಾತ್ಮಕ ಸಂಗತಿಗಳಲ್ಲಿ ಆಸಕ್ತಿ ಇರುವವರು ಓದಲೇ ಬೇಕಾದ ಪುಸ್ತಕ ಇದು. ಕೆಲವೊಂದು ಪದಗಳು, ವಿಷಯಗಳು ಕಾನೂನಿನ ಚೌಕಟ್ಟಿನ ಅಡಿಯಲ್ಲಿ, ಅದರದ್ದೇ ಆದ ಭಾಷೆಗಳಲ್ಲಿ ತಿಳಿಸಿರುವುದರಿಂದ ಅರ್ಥ ಮಾಡಲು ಒಂದಿಷ್ಟು ಕಷ್ಟವಾದೀತು. ಸುಮಾರು ೧೧೦ ಪುಟಗಳ ಈ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸಿದ ಶಿವಕಾಂತ್ ಶುಕ್ಲಾ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಸ ವ್ಯಾಖ್ಯಾನ ಬರೆಸಿದ ಮನೇಕಾ ಗಾಂಧಿ, ಮೀಸಲಾತಿ ಖಾತ್ರಿಗೊಳಿಸಿದ ಇಂದಿರಾ ಸಾವ್ನೆ, ಅತ್ಯಾಚಾರಕ್ಕೆ ಮರಣದಂಡನೆ ಕೊಡಿಸಿದ ನಿರ್ಭಯ, ಮುಸ್ಲಿಂ ಮಹಿಳೆಯರ ಹಕ್ಕನ್ನು ಎತ್ತಿಹಿಡಿದ ಶಾ ಬಾನು, ತ್ರಿವಳಿ ತಲಾಖ್ ಪದ್ಧತಿ ಅಂತ್ಯಗೊಳಿಸಿದ ಶಾಯಾರಾ ಬಾನು ಮೊದಲಾದ ಆಸಕ್ತಿದಾಯಕ ಕೇಸ್ ಗಳ ತೀರ್ಪುಗಳಿವೆ. ೧೯೫೦ರಿಂದ ೨೦೧೯ರ ವರೆಗಿನ ಪ್ರಮುಖ ೨೫ ತೀರ್ಪುಗಳ ವಿವರಗಳನ್ನು ನೀವಿಲ್ಲಿ ಓದಬಹುದಾಗಿದೆ.