ದೇಶದ ಪ್ರಥಮ ಮಾದರಿ ಗ್ರಾಮ ಚಿಕ್ಕಜೋಗಿಹಳ್ಳಿಯ ಕಥೆ-ವ್ಯಥೆ

ದೇಶದ ಪ್ರಥಮ ಮಾದರಿ ಗ್ರಾಮ ಚಿಕ್ಕಜೋಗಿಹಳ್ಳಿಯ ಕಥೆ-ವ್ಯಥೆ

ಬರಹ

೫೦ರ ದಶಕದಲ್ಲಿ ದೇಶದಲ್ಲಿಯೇ ಮಾದರಿ ಗ್ರಾಮವೆಂದು ಹೆಸರಾಗಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಇಂದು ಅಭಿವೃದ್ಧಿ ಪಥವನ್ನೇ ಕಾಣದೇ ನರಳುತ್ತಿದೆ. ಗ್ರಾಮವನ್ನು ಸಂಪೂರ್ಣವಾಗಿ ಮಾದರಿಯನ್ನಾಗಿಸಬೇಕೆಂದು ಆಗ ಅವಿರತ ಶ್ರಮಿಸಿದ ಕೆ.ವೆಂಕಟಸ್ವಾಮಿ ಚಿಕ್ಕಜೋಗಿಹಳ್ಳಿಯ ರೂವಾರಿ.
ಈ ಗ್ರಾಮದಲ್ಲಿ ಆಗ ಏನಿದ್ದಿಲ್ಲ? ಶಿಶುವಿಹಾರದಿಂದ ಪ್ರೌಢಶಾಲೆ, ವಿದ್ಯಾರ್ಥಿನಿಲಯ, ಪಂಪ್‌ಸೆಟ್, ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಕೋಳಿಸಾಕಾಣಿಕೆ ಕೇಂದ್ರ, ಅಂಚೆ ಇಲಾಖೆ, ಬ್ಯಾಂಕ್, ತೋಟಗಾರಿಕೆ ತರಬೇತಿ ಕೇಂದ್ರ, ಸಹಕಾರ ಸಂಘ, ಚಾಪೆ ನೇಯ್ಗೆ ಸಂಘ, ಜೊಂಡು ಚಾಪೆ ತಯಾರಿಕೆ ಸಂಘ, ತೆಂಗಿನ ನಾರಿನ ಕೈಗಾರಿಕೆ, ಚಿತ್ರಮಂದಿರ ಹೀಗೇ ಏನುಂಟು, ಏನಿಲ್ಲ ಎಂಬಂತೆ ಆಗಿನ ಚಿಕ್ಕಜೋಗಿಹಳ್ಳಿ ಗ್ರಾಮ ದೇಶದ್ಲಲಿಯೇ ಮಾದರಿ ಎನಿಸಿಕೊಂಡಿತ್ತು.
೧೯೫೪ರಲ್ಲಿ ೧,೧೦೦ ಸ್ವಯಂಸೇವಕರೊಂದಿಗೆ ಶ್ರಮದಾನದ ಮೂಲಕ, ಚಿಕ್ಕಜೋಗಿಹಳ್ಳಿಯಿಂದ ಕಾನಾಮಡುಗುವರೆಗೆ ೧೭ ಮೈಲಿ ಉದ್ದದ ರಸ್ತೆಯನ್ನು ೨೧ ದಿನಗಳಲ್ಲಿ ನಿರ್ಮಿಸಲಾಯಿತು. ಇದು ಕೇವಲ ಶ್ರಮದಾನದ ಮೂಲಕ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಇದೇ ಮುಂದೆ ೧೯೬೨ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಯಿತು. ೧೯೫೮ರಲ್ಲಿ ಆಗಿನ ವಿದ್ಯುತ್ ಸಚಿವ ಎಚ್.ಕೆ.ವೀರಣ್ಣಗೌಡರು ಗ್ರಾಮಕ್ಕೆ ವಿದ್ಯುತ್ ಪೂರೈಕೆಯನ್ನು ಉದ್ಘಾಟಿಸಿದರು. ಇದರಿಂದ ಸುತ್ತಮುತ್ತಲ ಗ್ರಾಮಗಳ ರೈತರ ಸುಮಾರು ೫೦-೬೦ ಪಂಪ್‌ಸೆಟ್‌ಗಳಿಗೆ ವಿದ್ಯುತ್ ದೊರೆಯಿತು. ೧೯೫೭ರಲ್ಲಿ ಕೇಂದ್ರ ಸರ್ಕಾರದ ೩೦,೦೦೦ ರೂ.ಗಳ ಸಹಾಯಧನದೊಂದಿಗೆ ಚಾಪೆ ನೇಯ್ಗೆ ಸಹಕಾರ ಸಂಘ ಪ್ರಾರಂಭಗೊಂಡಿತು. ಜೊಂಡು ಚಾಪೆ ನೇಯ್ಗೆ ಶಿಕ್ಷಣ ಕೇಂದ್ರವೂ ಆರಂಭಗೊಂಡಿತು. ಅದೇ ವರ್ಷ ಕೋಳಿ ಸಾಕಾಣಿಕೆ ಕೇಂದ್ರವೂ ಆರಂಭಗೊಂಡಿತು. ೧೯೫೮ರಲ್ಲಿ ವ್ಯವಸಾಯ ಮಂತ್ರಿ ಕೆ.ಎಫ್.ಪಾಟೀಲರ ನೆರವಿನಿಂದ ಪಶುವೈದ್ಯ ಆಸ್ಪತ್ರೆ ಉದ್ಘಾಟನೆಗೊಂಡಿತು. ೧೯೬೦ರಲ್ಲಿ ಪ್ರಥಮ ಬಾರಿಗೆ ಗ್ರಾಮಕ್ಕೆ ಸರ್ಕಾರಿ ಬಸ್ ಬಂದಾಗ ಗ್ರಾಮಸ್ಥರು ಅಡ್ದಬ್ದಿದು ನಮಸ್ಕರಿಸಿದರು. ಅದೇ ವರ್ಷವೇ ಅಂಚೆ ಮತ್ತು ತಂತಿ ಇಲಾಖೆಯ ಕಚೇರಿ ಆರಂಭಗೊಂಡಿತು. ಆರೋಗ್ಯ ಆರ್.ಎಂ.ಪಾಟೀಲ್‌ರ ನೆರವಿನೊಂದಿಗೆ ೮ ಹಾಸಿಗೆಗಳ ಆಸ್ಪತ್ರೆಯೂ ಆರಂಭಗೊಂಡಿತು. ಪ್ರವಾಸಿ ಮಂದಿರ ನಿರ್ಮಾಣಗೊಂಡಿತು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಏಕಾಧಿಕಾರಿ ಶಾಖೆ ಗ್ರಾಮದಲ್ಲಿ ಕಾರ್ಯಾರಂಭಗೊಂಡಿತು. ಗ್ರಾಮದ ಜನತೆಯ ಸ್ವಾವಲಂಬನೆಗಾಗಿ ೧೯೭೨ರಲಿ ತೆಂಗಿನ ಕೈಗಾರಿಕೆ ಕೇಂದ್ರ ಆರಂಭಗೊಂಡಿತು. ೧೯೭೫ರಲ್ಲಿ ಚಿತ್ರಮಂದಿರ ನಿರ್ಮಾಣಗೊಂಡಿತು. ಅಸ್ಪೃಷ್ಯ ಜನತೆಯ ಉದ್ಧಾರ ಕಾರ್ಯವೆಂದು ಮೆಚ್ಚಿ ಕೇಂದ್ರ ಸರ್ಕಾರವು ದೇಶದ ಮೊದಲ ಮಾದರಿ ಗ್ರಾಮವೆಂದು ೬,೦೦೦ ರೂ.ಗಳ ಸಹಾಯಧನ ನೀಡಿತು. ಪ್ರಧಾನಿ ಇಂದಿರಾಗಾಂಧಿಯವರಿಂದ ವಿವಿಧ ಇಲಾಖೆಗ ಸಚಿವರು, ಗಣ್ಯರು ಈ ಗ್ರಾಮಕ್ಕೆ ಭೇಟಿ ನೀಡಿ ಸಹಾಯ ಹಸ್ತ ನೀಡಿದರು.
ಈಗ ತೆಂಗಿನ ನಾರಿನ ಕೈಗಾರಿಕೆ ಕೇಂದ್ರ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅದಕ್ಕೆ ಮುಳ್ಳುಬೇಲಿಯನ್ನೂ ಬಡಿಯಲಾಗಿದೆ. ಅಂದಿನ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರದಿದ್ದರೂ ಸೂಕ್ತ ವೈದ್ಯರಿಲ್ಲದೆ, ಸಿಬ್ಬಂದಿಯವರಿಲ್ಲದೆ, ಬೆಲೆಬಾಳುವ ಯಂತ್ರೋಪಕರಣಗಳೆಲ್ಲ ಧೂಳು ತಿನ್ನುತ್ತಿವೆ. ಕುರಿ, ಕೋಳಿ ಸಾಕಾಣಿಕೆ ಕೇಂದ್ರಗಳು ಎಂದೋ ಪುಕ್ಕ ಉದುರಿಸಿಕೊಂಡು ಹೋಗಿವೆ. ಎಷ್ಟೋ ವರ್ಷಗಳಿಂದ ಬಾಗಿಲಿಗೆ ಬೀಗ ಹಾಕಿಕೊಂಡಿರುವ ಉಣ್ಣೆ ನೇಯ್ಗೆ ತರಬೇತಿ ಕೇಂದ್ರದಲ್ಲಿ ನೇಯ್ಗೆ ಉಪಕರಣಗಳ ಮೇಲೆ ರಾಶಿ ಧೂಳು ಬ್ದಿದಿದೆ. ಹಾಕಿದ ಬೀಗಕ್ಕೂ ತುಕ್ಕು ಹಿಡಿದಿದೆ. ರೇಷ್ಮೆ ಚಾಕಿ ಸಾಕಾಣಿಕೆ ಕೇಂದ್ರದಲ್ಲಿರುವ ಕುರ್ಚಿಗಳಲ್ಲಿ ಕುಳಿತುಕೊಳ್ಳುವವರೂ ಇಲದೆ ಅನಾಥವಾಗಿವೆ. ಚಾಪೆ ನೇಯ್ಗೆ, ಜೊಂಡು ಚಾಪೆ ತಯಾರಿಕೆಗಳು ಕಿತ್ತು ಹೋಗಿವೆ. ಮಾದರಿ ಗ್ರಾಮದ ಅವಶೇಷಗಳನ್ನು ಮಾತ್ರ ಈಗ ನೋಡಬಹುದಾಗಿದೆ. ಆಗ ಹೆಮ್ಮೆಯಿಂದ ಬೀಗುತ್ತಿದ್ದ ಅಶೋಕ ಸ್ತಂಭ ಗ್ರಾಮದ ದುಸ್ಥಿತಿಯೆಂಬಂತೆ ಮುರಿದುಬ್ದಿದಿದೆ. ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಮಾದರಿ ಗ್ರಾಮ ಹೇಗೆ ಕಾಲಗರ್ಭದ್ಲಲಿ ಸೇರಿಹೋಗುತ್ತಿದೆಯೆಂಬುದನ್ನು ನೋಡಬೇಕೆಂದರೆ ಚಿಕ್ಕಜೋಗಿಹಳ್ಳಿಯನ್ನು ನೋಡಬಹುದಾಗಿದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ