ದೇಶದ ಸಮಸ್ಯೆಗಳು ನಿಜಕ್ಕೂ ಬಗೆಹರಿಯುತ್ತಾ?
ಬಹಳ ಹಿಂದೆ ಅನಿಲ್ ಕಪೂರ್ ನಾಯಕರಾಗಿರುವ ನಾಯಕ್ ಎಂಬ ಒಂದು ಹಿಂದಿ ಚಲನ ಚಿತ್ರ ತೆರೆ ಕಂಡಿತ್ತು. ಅದರಲ್ಲಿ ಟಿವಿ ವರದಿಗಾರನಾಗಿರುವ ನಾಯಕ ರಾಜ್ಯದ ಮುಖ್ಯ ಮಂತ್ರಿಯಾಗಿ ನಟಿಸಿದ ಅಮರೀಶ್ ಪುರಿಯವರಿಗೆ ರಾಜ್ಯದಲ್ಲಾದ ಗಲಭೆಯ ವರದಿಯನ್ನು ತೋರಿಸಿದಾಗ ಆ ಮುಖ್ಯಮಂತ್ರಿ ಒಂದು ದಿನಕ್ಕೆ ರಾಜ್ಯದ ಆಡಳಿತವನ್ನು ಆ ವರದಿಗಾರನ ಕೈಗೆ ನೀಡಿ ಆಡಳಿತ ನಡೆಸುವುದು ಎಷ್ಟು ಕಷ್ಟ ಎಂದು ನಿರೂಪಿಸಲು ಬಯಸುತ್ತಾನೆ. ಆಗ ಮುಖ್ಯಮಂತ್ರಿಯ ಪಾತ್ರಧಾರಿಯಾದ ಅಮರೀಶ್ ಪುರಿ ಒಂದು ಮಾತು ಹೇಳುತ್ತಾರೆ ರಾಜಕಾರಣಿಗಳು ಯಾವತ್ತೂ ಯಾವ ಸಮಸ್ಯೆಯನ್ನೂ ಪರಿಹಾರ ಮಾಡಲು ಹೋಗಬಾರದು. ಆ ಸಮಸ್ಯೆಯನ್ನು ಪರಿಹರಿಸಿದರೆ ಮುಂದಿನ ಚುನಾವಣೆಯಲ್ಲಿ ಜನರಿಗೆ ಯಾವ ವಿಷಯದ ಬಗ್ಗೆ ಭರವಸೆಯನ್ನು ಕೊಡುವುದು? ಹೇಗೆ ಚುನಾವಣೆಯನ್ನು ಗೆಲ್ಲುವುದು? ಈ ಮಾತು ಇಂದಿನ ರಾಜಕಾರಣಿಗಳ ಆಡಳಿತಕ್ಕೆ ಹಿಡಿದ ಕನ್ನಡಿ.
ನಾವೆಲ್ಲಾ ಒಮ್ಮೆ ಯೋಚಿಸೋಣ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ನಮ್ಮ ದೇಶಕ್ಕೆ ಮುಳ್ಳಾಗಿರುವ ಪಾಕಿಸ್ತಾನದ ಸಮಸ್ಯೆಯನ್ನು ಸುಮಾರು ೭೨ ವರ್ಷಗಳು ಕಳೆದರೂ ಜ್ವಲಂತವಾಗಿರಿಸಿರುವುದು ಯಾರು? ಕಾಶ್ಮೀರದ ಸಮಸ್ಯೆಯಾಗಲೀ, ರಾಜ್ಯ ರಾಜ್ಯಗಳ ನಡುವೆ ಇರುವ ಗಡಿ ಸಮಸ್ಯೆಯಾಗಲೀ, ನೀರಿನ ಸಮಸ್ಯೆಯಾಗಲೀ ಇನ್ನೂ ಬಗೆ ಹರಿಯದೇ ಇರುವ ಕಾರಣವಾದರೂ ಏನು? ಏನೇ ತಕರಾರುಗಳಿದ್ದರೂ ಸಮಸ್ಯೆಯನ್ನು ಬಗೆ ಹರಿಸದೇ ಇರಲು ಸಾಧ್ಯವೇ?
ಒಂದೊಮ್ಮೆ ನಾವು ಪಾಕಿಸ್ತಾನದ ಮೇಲೆ ಯುಧ್ಧವನ್ನು ಸಾರುತ್ತೇವೆಂದರೂ ವಿರೋಧ ಪಕ್ಷದವರು ಒಪ್ಪಿಯಾರೇ? ಖಂಡಿತಾ ಇಲ್ಲ. ಮುಂದಿನ ದಿನಗಳಲ್ಲಿ ಇದೇ ವಿರೋಧ ಪಕ್ಷ ಆಡಳಿತ ಪಕ್ಷವಾದಾಗ ಇದೇ ನಿರ್ಧಾರ ತಕೊಂಡರೂ ಆಗ ಇರುವ ವಿರೋಧ ಪಕ್ಷ ಇದನ್ನು ಒಪ್ಪಿತೇ? ನಾವು ವಿರೋಧಕ್ಕಾಗಿ ವಿರೋಧ ಎಂಬ ಪ್ರವೃತ್ತಿಯನ್ನು ಬಿಟ್ಟು ಬಿಡ ಬೇಕು. ಸೈನಿಕರ ನೈತಿಕತೆಯನ್ನು ಕುಗ್ಗಿಸುವ ಎಲ್ಲಾ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾ ಬಂದಿದ್ದಾರೆ. ಹಲವಾರು ರಾಜಕಾರಣಿಗಳಿಗೆ ಮೊನ್ನೆ ಮೊನ್ನೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಬೇಕಂತೆ. ಇವರು ರಾಜಕೀಯದ ಕೆಸರಾಟಕ್ಕೆ ದೇಶದ ಸೈನಿಕರೇ ಬೇಕೇ? ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಅಧಿಕಾರ ಇವರಿಗೆ ನೀಡಿದವರು ಯಾರು? ಆಡಳಿತದಲ್ಲಿರುವ ಪಕ್ಷ ಎಲ್ಲಾದರೂ ಇದನ್ನು ರಾಜಕೀಯವಾಗಿ ಬಳಸಿ ಮುಂದಿನ ಚುನಾವಣೆಯಲ್ಲೂ ಜಯ ಗಳಿಸಿದರೆ ಎಂಬ ಹೆದರಿಕೆಯೂ ಇರಬಹುದು.
ಒಂದು ಅವಧಿಗೆ ಸಂಸದ, ವಿಧಾನ ಸಭಾ ಸದಸ್ಯ ಅಥವಾ ಕನಿಷ್ಟ ಕಾರ್ಪೋರೇಟರ್ ಆದ ವ್ಯಕ್ತಿಯೂ ಸಹ ತನ್ನ ಜೀವಿತಾವಧಿಯಲ್ಲಿ ಯಾವತ್ತೂ ರಾಜಕಾರಣಕ್ಕೆ ನಿವೃತ್ತಿ ನೀಡಲು ಬಯಸುವುದಿಲ್ಲ. ನೀವೇ ಗಮನಿಸಿ ರಾಜ್ಯ ಅಥವಾ ಕೇಂದ್ರದಲ್ಲಿ ಒಮ್ಮೆ ಮಂತ್ರಿಯಾದವರು ಮುಂದೆ ಮಾಜಿ ಆದರೂ ಅವರಿಗೆ ಸಿಗುವ ನಿವೃತ್ತಿ ಭತ್ಯೆಗಳು ಸಾಯುವವರೆಗೆ ಆರಾಮದಿಂದ ಬದುಕಲು ಸಾಕು. ಆದರೂ ಸಾಯುವ ತನಕ ಅಧಿಕಾರದಲ್ಲಿ ಇರಲು ಬಯಸುತ್ತಾರಲ್ಲ ಇದೇ ನಮ್ಮ ದೇಶದ ದುರಂತ. ನಾವು ಪ್ರತಿಯೊಂದಕ್ಕೂ ವಿದೇಶದಲ್ಲಿ ಹಾಗೆ ಹೀಗೆ ಎಂದು ಹೇಳುವವರು ಅಲ್ಲಿಯ ರಾಜಕಾರಣಿಗಳು ಅಧಿಕಾರ ಕಳೆದುಕೊಂಡ ನಂತರ ಹೇಗೆ ನಡೆದುಕೊಳ್ಳುವರೆಂದು ಯೋಚಿಸಿದ್ದಾರಾ? ಒಂದೆರಡು ವರ್ಷಗಳ ಹಿಂದೆ ಇಂಗ್ಲೆಂಡ್ನ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಪ್ರಧಾನ ಮಂತ್ರಿ ನಿವಾಸವನ್ನು ಆ ಕೂಡಲೇ ಖಾಲಿ ಮಾಡಿದರು. ನಮ್ಮ ಸಾಮಾನುಗಳನ್ನು ತಾವೇ ಜೋಡಿಸಿಕೊಂಡು ಹೋದರು. ನಮ್ಮಲ್ಲಾದರೆ ಅಧಿಕಾರ ಕಳೆದುಕೊಂಡು ವರ್ಷವೇ ಕಳೆದರೂ ಮನೆ ಬಿಟ್ಟುಕೊಡುವುದಿಲ್ಲ. ಕೆಲವು ಮಂದಿ ಮಾಜಿಗಳು ಹಾಲಿಗಳಿಗಿಂತ ಪವರ್ಫುಲ್ ಆಗಿರುತ್ತಾರೆ. ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಒಮ್ಮೆ ಸಿನೆಮಾ ಟಿಕೇಟ್ ಖರೀದಿಸಲು ಕ್ಯೂದಲ್ಲಿ ನಿಂತ ಚಿತ್ರವನ್ನು ನಮ್ಮ ಭಾರತದಲ್ಲಿ ನಮ್ಮ ಮಾಜಿ ಮಂತ್ರಿಗಳಿಂದ ಅಪೇಕ್ಷಿಸಲು ಸಾಧ್ಯವೇ?
ಈಗ ಕಾವೇರಿ ನೀರಿನ ಸಮಸ್ಯೆಯನ್ನೇ ತೆಗೆದುಕೊಂಡರೆ ಎಷ್ಟೊಂದು ವರ್ಷಗಳಿಂದ ಈ ಸಮಸ್ಯೆ ಇದೆ, ಮುಂದೆ ಎಷ್ಟು ವರ್ಷಗಳವರೆಗೆ ಈ ಸಮಸ್ಯೆ ಮುಂದುವರೆಯ ಬಹುದು? ಆ ಕಾವೇರಮ್ಮನಿಗೂ ಗೊತ್ತಿರಲಿಕ್ಕಿಲ್ಲ. ನಮ್ಮನ್ನು ಆಳುವವರ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ. ಎಲ್ಲಾ ತೀರ್ಪುಗಳು ನ್ಯಾಯಾಲಯಗಳೇ ನೀಡಬೇಕೆಂದು ನಮ್ಮ ರಾಜಕಾರಣಿಗಳು ಬಯಸುತ್ತಾರೆ, ಅಷ್ಟರ ಮಟ್ಟಿಗೆ ಅವರು ಸೇಫ್. ಪ್ರಶ್ನೆ ಕೇಳುವ ಜನರಿಗೆ ದೂರದ ನ್ಯಾಯಾಲಯವನ್ನು ತೋರಿಸುತ್ತಾರೆ ಮತ್ತು ಯಾಮಾರಿಸುತ್ತಾರೆ. ಸಮಸ್ಯೆ ಹಾಗೇ ಉಳಿದು ಬಿಡುತ್ತೆ.
ಇನ್ನಾದರೂ ರಾಜಕಾರಣಿಗಳು ಬರೇ ರಾಜಕಾರಣ ಮಾಡದೇ ಜನರ ಹಿತಕ್ಕಾಗಿ ದುಡಿಯುವ ಕಾಲ ಬರಬಹುದೇ? ಅಥವಾ ಇದೂ ಸಹ ಕೇವಲ ನಮ್ಮ ಸುಂದರ ಕಲ್ಪನೆಯಾಗಿಯೇ ಉಳಿಯುವುದೋ? ಕಾಲವೇ ಹೇಳಬೇಕು.