ದೇಶದ ಹಣೆಬರಹ
ಕವನ
ಭಾರತ ದೇಶವು ದಿಗಂತಕ್ಕೇರಲು
ನಿತ್ಯವು ಬೇಕಿದೆ ಪರಿಪುಷ್ಠಿ
ಭವ್ಯತೆ ಒಡಲಲಿ ತುಂಬಿದ ಮುತ್ತನು
ಹೆಕ್ಕಬೇಕು ತಥ್ಯಕೆ ಮರುಪುಷ್ಠಿ||
ಗಾಂಧಿಯ ಕನಸನು ನನಸದು ಮಾಡಲು
ಹಗಲಿರುಳೆನ್ನದ ದುಡಿಮೆಯಲಿ
ರಾಮರಾಜ್ಯದ ಪ್ರತಿಸ್ಥಾಪನೆ ಅತ್ಯಗತ್ಯವದು
ಸಾರ್ಥೈಕ್ಯತೆಯ ದಿವ್ಯ ಸಾಧನೆಯಲಿ||
ಭ್ರಷ್ಟತೆ ಮೂಢತೆ ತೊಲಗಿಸಿ ನಿಂತರೆ
ದೇಶಕೆ ದೇಶವೇ ಅಭಿವೃದ್ಧಿ
ಕಾಯಕ ನಿಷ್ಠೆಗೆ ನೀಡುವ ದೇಣಿಗೆ
ನಾಡಿನ ಜನತೆಗೆ ಶ್ರೇಯೋಭಿವೃದ್ಧಿ||
ಐಕ್ಯತೆ ಮಂತ್ರದಿ ನಡೆದಿಹ ನಾಡಿಗೆ
ಆಂತರೀಕ ವೈಷಮ್ಯವೆ ಎದುರಾಗಿ
ಘನತೆಯು ಕುಗ್ಗುತ ಜನತೆಯ ಹಾದಿಗೆ
ದ್ವೇಷಾಸುಯಗಳ ಸುರಿಮಳೆಯು||
ಭಯೋತ್ಪಾದನೆ ಉಗ್ರರ ಭೀತಿಗೆ ತಲ್ಲಣ
ಗೊಂಡಿಹ ದೇಶವು ಚಿಂತೆಯಲಿ
ಅತ್ಯಾಚಾರ ಅನಾಚಾರದ ಭದ್ರ ಬುನಾದಿ
ನಿಲ್ಲದೆ ಸಾಗುವ ಹಾದಿಯಲಿ||
ಸತ್ಯನಿಷ್ಠೆ ಪ್ರಾಮಾಣಿಕತೆ ಬೀಜವ ಬಿತ್ತುತ್ತ
ನಡೆದರೆ ಖಂಡಿತ ಸಾಧನೆವಿನಹ
ಹಿಂಸೆಯ ಪಥದಲಿ ನಡೆದರೆ ನಿತ್ಯವು
ಬದಲಾಗದು ದೇಶದ ಹಣೆಬರಹ||
-ಅಭಿಜ್ಞಾ ಪಿ ಎಮ್ ಗೌಡ
ಚಿತ್ರ್