ದೇಶಭಕ್ತಿಯ ಸ್ಥಾನದಲ್ಲಿ ವ್ಯಕ್ತಿಪೂಜೆ, ರಾಷ್ಟ್ರಪ್ರೇಮದ ಸ್ಥಾನದಲ್ಲಿ ಮೋಜು-ಮಸ್ತಿ!

ದೇಶಭಕ್ತಿಯ ಸ್ಥಾನದಲ್ಲಿ ವ್ಯಕ್ತಿಪೂಜೆ, ರಾಷ್ಟ್ರಪ್ರೇಮದ ಸ್ಥಾನದಲ್ಲಿ ಮೋಜು-ಮಸ್ತಿ!

ಬರಹ

  ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನನಗೆ ನನ್ನ ವಿದ್ಯಾರ್ಥಿ ದೆಸೆಯ ನೆನಪಾಗುತ್ತದೆ. ಅರವತ್ತರ ದಶಕ ಅದು. ಗಣರಾಜ್ಯೋತ್ಸವದಂದು ಶಾಲೆಯಲ್ಲಿ ಧ್ವಜಾರೋಹಣದ ನಂತರ ಹಿರಿಯ ಅತಿಥಿಯೊಬ್ಬರಿಂದ ದೇಶದ ಬಗ್ಗೆ, ಗಣರಾಜ್ಯವೆಂಬ ವ್ಯವಸ್ಥೆಯ ಬಗ್ಗೆ ಮಾಹಿತಿಪೂರ್ಣ ಹಾಗೂ ಉದ್ಬೋಧಕ ಉಪನ್ಯಾಸ ಇರುತ್ತಿತ್ತು. ಅನಂತರ ನಮ್ಮಿಂದ, ಅಂದರೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತಿದ್ದವು.

  ಸ್ವಾತಂತ್ರ್ಯೋತ್ಸವದಂದು ಸ್ಥಳೀಯ ಆಡಳಿತದ ವತಿಯಿಂದ ಊರ ಮೈದಾನದಲ್ಲಿ ನಡೆಯುತ್ತಿದ್ದ ಧ್ವಜಾರೋಹಣದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಊರಿನ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಹಿಸುತ್ತಿದ್ದೆವು. ಸ್ಕೌಟ್ಸ್, ಎಸಿಸಿ, ಎನ್‌ಸಿಸಿ ವಿದ್ಯಾರ್ಥಿಗಳು ಆಯಾ ಸಮವಸ್ತ್ರದಲ್ಲಿ ಮೈದಾನದಲ್ಲಿ ಕವಾಯಿತು ಮಾಡುತ್ತಿದ್ದರು. ಗಣರಾಜ್ಯೋತ್ಸವದಂದೂ ಇಂಥ ಕವಾಯಿತು ಇರುತ್ತಿತ್ತು. ಸ್ವಾತಂತ್ರ್ಯೋತ್ಸವದಂದು ಊರಿನ ಪ್ರಮುಖ ರಸ್ತೆಗಳಲ್ಲಿ ಈ ಸಮವಸ್ತ್ರಧಾರಿಗಳ ಪ್ರಭಾತಫೇರಿ ಹೊರಡುತ್ತಿತ್ತು. ಎನ್‌ಸಿಸಿ ವಿದ್ಯಾರ್ಥಿಯಾಗಿ ನಾನು ಮೈದಾನದಲ್ಲಿ ಗಣ್ಯರೆದುರು ಕವಾಯಿತಿನಲ್ಲಿ ಪಾಲ್ಗೊಂಡು, ಊರೆಲ್ಲ ಸುತ್ತುವ ಭವ್ಯ ಪ್ರಭಾತಫೇರಿಯಲ್ಲಿ ಶಿಸ್ತುಬದ್ಧ ಹೆಜ್ಜೆಯಿಕ್ಕುತ್ತ, ಬೂಟುಗಾಲಿನ ಪ್ರತಿ ಹೆಜ್ಜೆಯನ್ನೂ ಪರಂಗಿಯವನ ಮೇಲೇ ಇಡುತ್ತಿದ್ದೇನೆಂದು ಭಾವಿಸುತ್ತ, ಪ್ರತಿಯೊಂದು ಸೆಲ್ಯೂಟ್ ಕುಟ್ಟುವಾಗಲೂ ಭವ್ಯ ಭಾರತದ ದಿವ್ಯ ಪ್ರಜೆ ನಾನೆಂದು ಸಂಭ್ರಮಿಸುತ್ತ, ಮುಂದೆ ನಾನೇ ಈ ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿ ಎಂದು ಭ್ರಮಿಸುತ್ತ ಮುಂದೆ ಸಾಗುತ್ತಿದ್ದ ಆ ದಿನಗಳನ್ನು ನೆನೆಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ. ಸಂಜೆಗೆ ಏರ್ಪಾಟಾಗಿರುತ್ತಿದ್ದ ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶಭಕ್ತಿಯನ್ನು ಬಿಂಬಿಸುವಂಥವಾಗಿರುತ್ತಿದ್ದು ಅವುಗಳಿಗೆ ಜನರು ಕಿಕ್ಕಿರಿದು ಸೇರುತ್ತಿದ್ದರು. ದೇಶದ ಇತರೆಡೆಗಳಲ್ಲಿಯೂ ಇದೇ ರೀತಿಯ ಆಚರಣೆಗಳಿರುತ್ತಿದ್ದವು.

  ಈಗ ಹೇಗಿದೆ?
  ಸಂತಸದ ವಿಷಯವೆಂದರೆ, ದೇಶಾದ್ಯಂತ ಇಂದಿಗೂ ಈ ಆಚರಣೆಗಳು ಹೆಚ್ಚೂಕಮ್ಮಿ ಇದೇ ರೀತಿ ಮುಂದುವರಿದುಕೊಂಡುಬಂದಿವೆ. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಎಂದರೆ ಶಾಲಾ ಮಕ್ಕಳಿಗೆ ಇಂದೂ ಅದೇ ಸಡಗರ. ಆದರೆ, ವಿಷಾದದ ಸಂಗತಿಯೆಂದರೆ, ಪಾಲಕರಾದ ನಾವೇ ಈಚೀಚೆಗೆ ನಮ್ಮ ಮಕ್ಕಳನ್ನು ಆ ದಿನಗಳಂದು ದೇಶಪ್ರೇಮ ಉದ್ದೀಪನಗೊಳಿಸುವ ಕಾರ್ಯಕ್ರಮಗಳಲ್ಲಿ ತೊಡಗಲು ಅಷ್ಟಾಗಿ ಬಿಡುತ್ತಿಲ್ಲ.

  ’ಧ್ವಜಾರೋಹಣ ಮುಗಿದಕೂಡಲೇ ಮನೆಗೆ ಬಂದ್ಬಿಡು. ಹೋಂವರ್ಕ್ ಮಾಡ್ಕೋ. ಟೆಸ್ಟಿಗೆ ಓದ್ಕೋ. ಪ್ರೋಗ್ರಾಮು ಅಂತ ಅಲ್ಲೇ ಕೂತ್ಕೋಬೇಡ’, ಎಂದು ಆ ದಿನವೂ ಮಕ್ಕಳನ್ನು ಹೋಂವರ್ಕ್ ಮತ್ತು ಟೆಸ್ಟ್‌ಗಳೆಂಬ ಅಂಕುಶಗಳಿಂದ ಚುಚ್ಚುತ್ತೇವೆ! ದೇಶಪ್ರೇಮ ಜಾಗೃತವಾಗುವುದೇ ಅತ್ಯುಚ್ಚ ಪರೀಕ್ಷಾ ಸಾಫಲ್ಯ ಎಂಬೊಂದು ಚಿಂತನೆಯನ್ನು ನಾವು ಆ ದಿನ ಮಾಡುವುದಿಲ್ಲ. ಪಾಲಕರಾದ ನಾವೇ ಆ ದಿನ ಗಣರಾಜ್ಯೋತ್ಸವ/ಸ್ವಾತಂತ್ರ್ಯೋತ್ಸವ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಮೂರ್ಖಪೆಟ್ಟಿಗೆಯೆದುರು ಕೂತುಬಿಡುತ್ತೇವೆ.

  ಇನ್ನು, ಇಂದಿನ ಕಾಲೇಜು ವಿದ್ಯಾರ್ಥಿಗಳಂತೂ ಬಹುತೇಕರು ಗಣರಾಜ್ಯೋತ್ಸವ-ಸ್ವಾತಂತ್ರ್ಯೋತ್ಸವಗಳಿಗೂ ತಮಗೂ ಸಂಬಂಧವೇ ಇಲ್ಲದಂತೆ, ಆ ಉತ್ಸವಗಳು ಕೇವಲ ರಾಜಕಾರಣಿಗಳ, ಸರ್ಕಾರಿ ಕಚೇರಿಗಳ ಮತ್ತು ಶಾಲಾ ಬಾಲಕರ ಕಾರ್ಯಕ್ರಮಗಳೆಂಬಂತೆ ಅದರಿಂದ ವಿಮುಖರಾಗಿರುತ್ತಾರೆ. ಆ ದಿನ ಸಿನೆಮಾಕ್ಕೆ ಹೋಗುವುದು, ಮಾಲ್‌ಗಳನ್ನು ಸುತ್ತುವುದು, ಕ್ರಿಕೆಟ್ ಆಡುವುದು ಇವೇ ಈ ಯುವ ವಿದ್ಯಾರ್ಥಿಗಳ ದಿನಚರಿಯಾಗಿರುತ್ತದೆ. ಬಹುಪಾಲು ಯುವ ಉದ್ಯೋಗಿಗಳ ಕಥೆಯೂ ಭಿನ್ನವೇನಲ್ಲ.

  ದೇಶಪ್ರೇಮ
  ದೇಶಪ್ರೇಮವೆಂಬುದು ಯಾರೂ ಹೇಳಿಕೊಟ್ಟು ಬರುವಂಥದಲ್ಲ. ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿಯೂ ಸದಾಕಾಲ ನಳನಳಿಸುತ್ತಿರಬೇಕಾದುದು ಅದು. ಜಾಗತೀಕರಣದ ಇಂದಿನ ದಿನಮಾನದಲ್ಲಿ ನಾವು ಒಂದು ಮಟ್ಟದ ಪ್ರಗತಿಯನ್ನು ಹೇಗೂ ಸಾಧಿಸಬಹುದು. ಒಂದಷ್ಟು ಉಪಭೋಗಗಳನ್ನು ಮತ್ತು ನಾಗರಿಕ ಸೌಲಭ್ಯಗಳನ್ನು ಹೇಗೂ ಹೊಂದಬಹುದು. ಆದರೆ, ಯಾವುದೇ ದೇಶದ ಅಖಂಡತೆ, ಘನತೆ, ಸ್ವಂತಿಕೆ ಮತ್ತು ಸಂಸ್ಕೃತಿ ಇವು ಉಳಿಯಬೇಕಾದರೆ, ಬೆಳೆಯಬೇಕಾದರೆ ಮತ್ತು ಬೆಳಗಬೇಕಾದರೆ ಆ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ರಾಷ್ಟ್ರಪ್ರೇಮವೆಂಬುದು ಸದಾಕಾಲ ಜಾಗೃತಾವಸ್ಥೆಯಲ್ಲಿರಬೇಕಾದುದು ಅತ್ಯವಶ್ಯ.

  ಎಂದೇ, (೧) ದೇಶಭಕ್ತಿಯ ದ್ಯೋತಕವಾದ, (೨) ರಾಷ್ಟ್ರಪ್ರೇಮದ ಜಾಗೃತಿ ಹುಟ್ಟಿಸುವ ಮತ್ತು (೩) ಅಂಥ ಜಾಗೃತ ಸ್ವರೂಪವನ್ನು ಲೋಕಕ್ಕೆ ಶ್ರುತಪಡಿಸುವ ಮೂಲಕ ನಮ್ಮನ್ನು ನಾವು ಈ ಜಗತ್ತಿನಲ್ಲಿ ಸುದೃಢಗೊಳಿಸಿಕೊಳ್ಳುವ ಅವಕಾಶವನ್ನು ನೀಡುವ ಈ ನಮ್ಮ ಗಣರಾಜ್ಯೋತ್ಸವ-ಸ್ವಾತಂತ್ರ್ಯೋತ್ಸವಗಳೇನಿವೆ, ಇವುಗಳ ಆಚರಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತನಗೆ ಸಾಧ್ಯವಾಗುವ ಮತ್ತು ಸೂಕ್ತವಾದ ರೀತಿಯಲ್ಲಿ ಭಾಗಿಯಾಗಬೇಕಾದ್ದು ಸರ್ವಥಾ ಅಪೇಕ್ಷಣೀಯ.

  ನೇತಾರರ ಕಾರುಬಾರು
  ವಿದ್ಯಾರ್ಥಿಗಳು ಮತ್ತು ನಾಗರಿಕರ ಬಗ್ಗೆ ಈ ಮಾತಾಯಿತು, ಗಣರಾಜ್ಯೋತ್ಸವ-ಸ್ವಾತಂತ್ರ್ಯೋತ್ಸವಗಳ ಸಂದರ್ಭದಲ್ಲಿ ನಮ್ಮ ನೇತಾರರ ಕಾರುಬಾರು ಹೇಗಿರುತ್ತದೆ? ಗಂಜಿಹಾಕಿ ತೀಡಿದ ಖಾದಿ ದಿರಸು ಧರಿಸಿ ಆ ದಿನ ರಾಷ್ಟ್ರಧ್ವಜಕ್ಕೊಂದು ಸೆಲ್ಯೂಟ್ ಕುಟ್ಟಿ ಒಂದು ಭಾಷಣ ಬಿಗಿದುಬಿಟ್ಟರೆ ನಮ್ಮ ನೇತಾರರ ರಾಷ್ಟ್ರಪ್ರಜ್ಞೆ ಸಂಪನ್ನವಾಯಿತು! ದೇಶದ ಬಗ್ಗೆ ಅರಿವಿಲ್ಲದ, ದೇಶದ ಸಂಸ್ಕೃತಿ-ಇತಿಹಾಸಗಳು ಗೊತ್ತಿರದ ಮತ್ತು ಸ್ವಾರ್ಥಕ್ಕಾಗಿ ದೇಶವನ್ನೇ ದೋಚುವ ಈ ಪುಢಾರಿಗಳ ಬಾಯಿಂದ ಅಂದು ನಾವು ಪುಂಖಾನುಪುಂಖವಾಗಿ ದೇಶಭಕ್ತಿಯ ಉಪದೇಶಗಳನ್ನು ಕೇಳಬೇಕು! ಮರುದಿನದ ಪತ್ರಿಕೆಗಳಲ್ಲೂ ಇದನ್ನೇ ಓದಬೇಕು.

  ಗಣರಾಜ್ಯೋತ್ಸವವಿರಲೀ ಸ್ವಾತಂತ್ರ್ಯೋತ್ಸವವಿರಲೀ ಈ ರಾಜಕಾರಣಿಗಳು ಸೀದಾ ಗಾಂಧೀಜಿಯ ಅಂಗಳಕ್ಕೇ ಜಿಗಿದುಬಿಡುತ್ತಾರೆ! ಬಹುತೇಕರು ಕಾಂಗ್ರಸ್ಸಿಗರೋ, ಕಾಂಗ್ರೆಸ್ ವಲಸಿಗರೋ ಇಲ್ಲವೇ ’ಕಾಂಗ್ರೆಸ್ ಬುದ್ಧಿ’ಯವರೋ ಆಗಿರುವ ಈ ಪುಢಾರಿಗಳು ದೇಶದ ಸ್ವಾತಂತ್ರ್ಯಾರ್ಜನೆಯ ಶ್ರೇಯಸ್ಸನ್ನೆಲ್ಲ ಒಬ್ಬ ಎಂ.ಕೆ.ಗಾಂಧಿಗೆ ಕೊಟ್ಟುಬಿಡುತ್ತಾರೆ. ಗಣರಾಜ್ಯದ ಶ್ರೇಯಸ್ಸನ್ನು ಸಂಪೂರ್ಣವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬರಿಗೇ ಧಾರೆಯೆರೆದುಬಿಡುತ್ತಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಜೀವತೆತ್ತ ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸುಭಾಶ್ಚಂದ್ರ ಬೋಸ್ ಅಂಥವರು ಸ್ವಾತಂತ್ರ್ಯೋತ್ಸವದಂದು ಈ ಪುಢಾರಿಗಳ ಕಣ್ಣಿಗೆ ಕಾಣುವುದೇ ಇಲ್ಲ. ಗಣರಾಜ್ಯೋತ್ಸವವೆಂದಕೂಡಲೇ ಇವರಿಗೆ ನೆನಪಾಗುವುದು ಅಂಬೇಡ್ಕರ್ ಮಾತ್ರ. ಅಂಬೇಡ್ಕರ್ ಹೆಸರು ಬಿಟ್ಟರೆ ಸಂವಿಧಾನರಚನಾಮಂಡಳಿಯ ಉಳಿದ ಸದಸ್ಯರ ಹೆಸರುಗಳೇ ಈ ನೇತಾರರಿಗೆ ಗೊತ್ತಿರುವುದಿಲ್ಲ. ಇವರಿಗದು ಬೇಕಾಗಿಯೂ ಇಲ್ಲ.

  ಈ ಕರಾಮತ್ತಿನಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ ಒಂದು ಹೆಜ್ಜೆ ಮುಂದಿರುತ್ತದೆ. ಕಾಂಗ್ರೆಸ್ ಪುಢಾರಿಗಳ ಪ್ರಕಾರ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧಿಯಾದರೆ ತದನಂತರ ದೇಶವನ್ನು ಮುನ್ನಡೆಸಿ ಅಭಿವೃದ್ಧಿಪಡಿಸಿದವರು ಜವಹರ್‌ಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಈ ಮೂವರೇ. ಆ ಅಭಿವೃದ್ಧಿಯನ್ನಿಂದು ಅತಿಶಯಗೊಳಿಸುತ್ತ ದೇಶವನ್ನು ಕಂಗೊಳಿಸುವಂತೆ ಮಾಡುತ್ತಿರುವವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರೇ. ರಾಷ್ಟ್ರಾಭಿವೃದ್ಧಿಯ ವಿಷಯದಲ್ಲಿ ನೆಹರೂ ಕುಟುಂಬದ ಹೊರತು ಇನ್ನ್ಯಾವ ಮಹಾನುಭಾವರ ಹೆಸರೂ ಆ ದಿನ ಈ ಕಾಂಗ್ರೆಸ್ ಪುಢಾರಿಗಳಿಗೆ ನೆನಪಾಗುವುದಿಲ್ಲ. ಇನ್ನು, ಸ್ವಾತಂತ್ರ್ಯ ಚಳವಳಿಯ ಪೂರ್ವದ ಭಾರತದ ಇತಿಹಾಸವಾಗಲೀ ಭವ್ಯ ಪರಂಪರೆಯಾಗಲೀ ಈ ಪುಢಾರಿಗಳಿಗೆ ಸಂಪೂರ್ಣ ಅಜ್ಞಾತ ಮತ್ತು ವರ್ಜ್ಯ ಸಹ.

  ವ್ಯಕ್ತಿಪೂಜೆ ಸಲ್ಲ
  ಈ ದೇಶಕ್ಕೆ ಕೇವಲ ಒಬ್ಬ ವ್ಯಕ್ತಿಯಿಂದಾಗಿ ಸ್ವಾತಂತ್ರ್ಯ ಬಂದದ್ದಲ್ಲ. ಕೇವಲ ಒಬ್ಬ ವ್ಯಕ್ತಿ ಕೂತು ಈ ದೇಶದ ಸಂವಿಧಾನ ರಚಿಸಲಿಲ್ಲ. ಕೇವಲ ಒಂದು ಕುಟುಂಬದಿಂದಾಗಿ ಮಾತ್ರ ಈ ದೇಶ ಪ್ರಗತಿಪಥದಲ್ಲಿ ಸಾಗುತ್ತಿರುವುದಲ್ಲ. ಈ ವ್ಯಕ್ತಿಗಳು ಮತ್ತು ಈ ಕುಟುಂಬಕ್ಕಿಂತ ಮೊದಲು ಈ ದೇಶವೇನೂ ದರಿದ್ರವಾಗಿರಲಿಲ್ಲ. ಆದ್ದರಿಂದ ದೇಶದ ವಿಷಯದಲ್ಲಿ ವ್ಯಕ್ತಿಪೂಜೆ ಸರ್ವಥಾ ಸಲ್ಲ. ಅದೂ, ಗಣರಾಜ್ಯೋತ್ಸವ-ಸ್ವಾತಂತ್ರ್ಯೋತ್ಸವಗಳಂಥ ರಾಷ್ಟ್ರೀಯ ಉತ್ಸವಗಳ ಸಂದರ್ಭದಲ್ಲಿ ಈ ರೀತಿಯ ವ್ಯಕ್ತಿಪೂಜೆಗಳು ಅತ್ಯಂತ ಖಂಡನಾರ್ಹ.

  ಕಾಲವೀಗ ಬಹಳ ಬದಲಾಗಿದೆ. ಮಾಹಿತಿಸಂಗ್ರಹವೆಂಬುದಿಂದು ಕೈಬೆರಳ ತುದಿಯ ಆಟವಾಗಿದೆ. ರಾಜಕಾರಣಿಗಳು ಹೇಳಿದ್ದನ್ನೆಲ್ಲ ನಂಬುವಷ್ಟು ಅಮಾಯಕರಲ್ಲ ಇಂದಿನ ನಮ್ಮ ಯುವಜನತೆ. ಭಾರತದ ಇತಿಹಾಸದ ಬಗ್ಗೆ ಹಿರಿಯರಿಗೇ ಅಚ್ಚರಿಯಾಗುವಷ್ಟು ಜ್ಞಾನವನ್ನು ನಮ್ಮ ಇಂದಿನ ವಿದ್ಯಾವಂತ ಯುವಪೀಳಿಗೆಯ ಗಣನೀಯ ಭಾಗ ತನ್ನದಾಗಿಸಿಕೊಂಡಿದೆ. ಇಂಥ ಸನ್ನಿವೇಶದಲ್ಲಿ, ಗಣರಾಜ್ಯೋತ್ಸವ-ಸ್ವಾತಂತ್ರ್ಯೋತ್ಸವಗಳ ಆಚರಣೆ ವೇಳೆ ವೇದಿಕೆಗಳಮೇಲೆ ಪ್ರಕಟವಾಗಬೇಕಾದದ್ದು ಸಮಗ್ರ ನೋಟ ಹೊಂದಿರುವ ರಾಷ್ಟ್ರಪ್ರಜ್ಞೆ ಮತ್ತು ಸ್ವಾರ್ಥರಹಿತ ದೇಶಭಕ್ತಿ ಹೊರತು ವ್ಯಕ್ತಿಪೂಜೆಯಲ್ಲ. ಇಂಥದೊಂದು ಎಚ್ಚರ ನಮ್ಮ ರಾಜಕಾರಣಿಗಳಿಗಿರಬೇಕು.

  ಅದೇ ವೇಳೆ, ಗಣರಾಜ್ಯೋತ್ಸವ-ಸ್ವಾತಂತ್ರ್ಯೋತ್ಸವಗಳನ್ನು ಮೋಜು-ಮಸ್ತಿಗೆ ಬಳಸಿಕೊಳ್ಳದೆ ಆ ದಿನ ಆ ಉತ್ಸವ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಅಖಂಡತೆ-ರಾಷ್ಟ್ರಪ್ರೇಮಗಳನ್ನು ಜಗತ್ತಿಗೆ ಸಾರುವ ಪ್ರಾಮಾಣಿಕ ಯತ್ನವನ್ನು ಈ ದೇಶದ ಪ್ರಜೆಗಳಾದ ನಾವೆಲ್ಲ ಮಾಡಬೇಕು. ಅಂದಾಗ ಮಾತ್ರ ಭಾರತಮಾತೆಗೆ ಜಯ.

-0-

  (ಪ್ರಿಯ ಸಂಪದಿಗ ಮಿತ್ರರೇ, ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವು ಪ್ರತಿ ವರ್ಷ ಕನ್ನಡ ಸಾಹಿತ್ಯಲೋಕದ ಶ್ರೇಷ್ಠರೊಬ್ಬರಿಗೆ ನೀಡುತ್ತಿರುವ ಪ್ರತಿಷ್ಠಿತ ’ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ’ಯನ್ನು ೨೦೦೯ನೇ ಸಾಲಿಗೆ ನನಗೆ ನೀಡಲು ತೀರ್ಮಾನಿಸಿರುವುದನ್ನು ಮಾಧ್ಯಮಗಳ ಮೂಲಕ ತಿಳಿದು ತುಂಬ ಮಂದಿ ನನ್ನ ಮಿತ್ರರು ಮತ್ತು ಅಭಿಮಾನಿಗಳು ನನಗೆ ಪತ್ರಗಳ ಮೂಲಕ ಹಾಗೂ ಮಿಂಚಂಚೆ ಮೂಲಕ ಅಭಿನಂದನೆಗಳನ್ನು ಕಳಿಸುತ್ತಿದ್ದಾರೆ. ಅವರ ಪೈಕಿ, ಸಂಪದಿಗ ಮಿತ್ರರಾದ ನಿಮ್ಮ ಸಂಖ್ಯೆ ಗಣನೀಯವಾಗಿದೆ. ನಿಮಗೆಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದಗಳನ್ನರ್ಪಿಸುವುದು ನನ್ನ ಕರ್ತವ್ಯವಾದರೂ ಸಮಯಾಭಾವದಿಂದಾಗಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಮೂಲಕ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ, ದಯೆಯಿಟ್ಟು ಸ್ವೀಕರಿಸಿ.
  - ಎಚ್. ಆನಂದರಾಮ ಶಾಸ್ತ್ರೀ)