ದೇಶಸೇವೆ ಕೇವಲ ಮಾತುಗಳಲ್ಲ, ಅದು ನಮ್ಮ ನಡವಳಿಕೆ...
ಅಗ್ನಿ ಪಥ್ ಯೋಜನೆಯಲ್ಲಿ ದೇಶ ಪ್ರೇಮ, ದೇಶ ರಕ್ಷಣೆ, ಶಿಸ್ತು ಬದ್ಧ ಜೀವನ ಸಂಸ್ಕಾರ ಎಲ್ಲವೂ ಯುವಕರಲ್ಲಿ ಮೂಡುತ್ತದೆ ಎಂಬುದು ನಿಜ. ಅದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತಾ ಹಾಗೆಯೇ ಅದರಲ್ಲಿ ಬಹಳಷ್ಟು ಪ್ರಯೋಜನವಿದೆ ಎಂಬ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದಕ್ಕಾಗಿ ಒಂದು ಪ್ರೀತಿ ಪೂರ್ವಕ ಸಲಹೆ ಮತ್ತು ಮನವಿ.
ಪೀಠಿಕೆ : ಸಾಮಾನ್ಯವಾಗಿ ಇಲ್ಲಿಯವರೆಗೂ ಸೈನ್ಯದಲ್ಲಿ ಬಹುತೇಕ ಬಡವರು ಮತ್ತು ಗ್ರಾಮೀಣ ಭಾಗದ ಜನರೇ ಹೆಚ್ಚು ಸೇರುತ್ತಿದ್ದರು. ಇದು ಬಹಿರಂಗ ಸತ್ಯ. ಈಗ ಸ್ವಲ್ಪ ಬದಲಾವಣೆ ಮಾಡಿಕೊಂಡು ಆದ್ಯತೆಯಲ್ಲಿ ಬೇರೆಯವರಿಗೆ ಅವಕಾಶ ಕಲ್ಪಿಸೋಣ.
1) ಈ ದೇಶದ ಶಾಸಕರು ಸಂಸದರು ಮತ್ತು ಮಂತ್ರಿಗಳ ಅರ್ಹತೆಯುಳ್ಳ ಮಕ್ಕಳು ಮೊದಲು ಅಗ್ನಿವೀರರಾಗಿ ಹೊರಬರಲಿ. ಏಕೆಂದರೆ ಅವರ ಮಕ್ಕಳು ಹೆಚ್ಚಾಗಿ ದಾರಿ ತಪ್ಪುತ್ತಿರುವ ಘಟನೆಗಳು ಆಗಾಗ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಅವರಿಗೆ ಸಂಸ್ಕಾರದ ಅವಶ್ಯಕತೆ ಇದೆ.
2) ಸರ್ಕಾರದ ಅತ್ಯಂತ ಉನ್ನತ ಹುದ್ದೆಯಲ್ಲಿ ಇರುವ ( ಗ್ರೇಡ್ 1&2 ) ಅರ್ಹತೆಯುಳ್ಳ ಮಕ್ಕಳು ಎರಡನೆಯ ಅಗ್ನಿ ವೀರರಾಗಲಿ.
3) ವಿವಾಹಿತರಾಗಿ ಸಂಸಾರ ಹೊಂದಿರುವ ಸ್ವಾಮೀಜಿಗಳು, ಮೌಲ್ವಿಗಳು, ಫಾದರ್ ಗಳು ಮುಂತಾದ ಎಲ್ಲಾ ಧರ್ಮದ ಧರ್ಮಾಧಿಕಾರಿಗಳ ಅರ್ಹತೆಯುಳ್ಳ ಮಕ್ಕಳು ಮೂರನೇ ಅಗ್ನಿ ವೀರರು.
4) ಸುಮಾರು 100 ಕೋಟಿಗೂ ಹೆಚ್ಚು ವಾರ್ಷಿಕ ಆದಾಯವಿರುವ ಉದ್ಯಮಿಗಳ ಮಕ್ಕಳು ನಾಲ್ಕನೇ ಅಗ್ನಿ ವೀರರು.
5) ಸದಾ ತುಂಬಾ ವೀರಾವೇಷದಲ್ಲಿ ಮಾತನಾಡುವ ಪತ್ರಕರ್ತರ ಅರ್ಹತೆಯುಳ್ಳ ಮಕ್ಕಳು ಐದನೇ ಅಗ್ನಿ ವೀರರು.
6) ಸಿನಿಮಾ ನಟ ನಟಿಯರ, ವೈದ್ಯರ, ಶಿಕ್ಷಕರ, ವಕೀಲರ, ಲೆಕ್ಕ ಪರಿಶೋಧಕರ, ನ್ಯಾಯಾಧೀಶರ, ಬೃಹತ್ ಗುತ್ತಿಗೆದಾರರ ಬ್ಯಾಂಕ್ ನೌಕರರ ಮುಂತಾದ ಸಮಾಜದ ಗಣ್ಯ ವ್ಯಕ್ತಿಗಳು ಮತ್ತು ತಮ್ಮ ಮಕ್ಕಳನ್ನು ಏಸಿ ರೂಮಿಗಳಲ್ಲಿ ಅತ್ಯಂತ ಪ್ರೀತಿಯಿಂದ ಬೆಳೆಸುತ್ತಿರುವ ಅರ್ಹತೆಯುಳ್ಳ ಮಕ್ಕಳು ಆರನೇ ಅಗ್ನಿ ವೀರರು.
7) ಸಾಹಿತಿಗಳು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು, ಪರಿಸರವಾದಿಗಳು, ಬುದ್ದಿ ಜೀವಿಗಳು ಮುಂತಾದವರ ಅರ್ಹತೆಯುಳ್ಳ ಮಕ್ಕಳು ಏಳನೇ ಅಗ್ನಿ ವೀರರು.
ಹೀಗೆ ದೇಶದ ಬಹಳಷ್ಟು ಸಂಪನ್ಮೂಲಗಳನ್ನು, ತೆರಿಗೆ ಹಣವನ್ನು ಉಪಯೋಗಿಸಿಕೊಂಡು ಸುಖವಾಗಿ ಜೀವಿಸುತ್ತಿರುವ ಎಲೈಟ್ ಗುಂಪಿನ ಜನರು ಮೊದಲು ದೇಶ ಸೇವೆಗೆ ಇಳಿಯಲಿ. ಪಾಪ ಇಲ್ಲಿಯವರೆಗೂ ರೈತರು ಬಡವರು ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಬದಲಾವಣೆಯ ಸಮಯ. ಹೇಗಿದ್ದರೂ ಅಗ್ನಿ ಪಥ್ ಯೋಜನೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ದಯವಿಟ್ಟು ಮೇಲೆ ತಿಳಿಸಿದ ಎಲ್ಲರೂ ದೇಶ ಸೇವೆಗೆ ಸಿದ್ದರಾಗಿ.
ಇಲ್ಲ, ಈ ಯೋಜನೆಯಲ್ಲಿ ಯಾವುದೇ ಒತ್ತಾಯವಿಲ್ಲ. ಆಸಕ್ತಿ ಇರುವವರು ಮಾತ್ರ ಸೇರಬಹುದು ಎಂದು ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸುತ್ತಿರುವವರು ಹೇಳಬಹುದು. ಆದರೆ ಶ್ರೀಮಂತರಿಗೆ ಯಾವಾಗಲೂ ಆಯ್ಕೆಗಳಿರುತ್ತವೆ. ಬಡವರಿಗೆ ಆಯ್ಕೆಗಳೇ ಇರುವುದಿಲ್ಲ. ಇದು ವ್ಯಂಗ್ಯವಲ್ಲ, ಹಾಸ್ಯವಲ್ಲ. ದೇಶದ ಮತ್ತು ಪ್ರಜೆಗಳ ಮೇಲಿನ ಕಳಕಳಿ. ಇದು ಎಲ್ಲರಿಗೂ ಸಮನಾಗಿ ಅನ್ವಯ. ದೇಶಭಕ್ತಿ - ದೇಶಸೇವೆ ಕೇವಲ ಮಾತುಗಳಲ್ಲ. ಅದು ನಮ್ಮ ನಡವಳಿಕೆ.....
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ