ದೇಶ ಕಾಯೋ ನಮ್ಮ ಹೆಮ್ಮೆಯ ಸೈನಿಕರಿಗೊಂದು ಸಲಾಂ
ವರ್ಷ ಕಳೆದು ಮತ್ತೆ ದೀಪಾವಳಿ ಹಬ್ಬ ಬಂದಿದೆ, ಆದರೆ ನಮ್ಮ ಹಳ್ಳಿಗಳ ಕಡೆ ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕೊಂಚ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತದೆ. ಕಾಲ ಕಾಲಕ್ಕೆ ಸುರಿಯಬೇಕಾಗಿದ್ದ ಮಳೆರಾಯ ಮುನಿಸಿಕೊಂಡಿದ್ದಾನೆ,ಭೂತಾಯಿಯ ನಂಬಿ ಅವಳ ಒಡಲಿಗೆ ಸುರಿದಿದ್ದ ಬೀಜರಾಶಿ ಫಲ ಕೊಡುವ ಬದಲು ಸುಟ್ಟು ಕರುಕಲಾಗಿದೆ, ಬೇಸಿಗೆ ಕಾಲದಲ್ಲಿ ಆಸರೆಯಾಗಬೇಕಿದ್ದ ಕೆರೆ ಕಟ್ಟೆಗಳ ನೀರು ತಳ ಸೇರಿದೆ, ಮನುಷ್ಯನ ಊಟಕ್ಕಿಂತ ನಾವು ನಂಬಿರುವ ದನಕರುಗಳ ಬಗ್ಗೆ ಯೋಚಿಸಿದಾಗ ಅನ್ನದಾತನ ಕಣ್ಣುಗಳಲ್ಲಿ ಕಣ್ಣೀರ ಹನಿಗಳು ಒಸರುತ್ತಿವೆ.
ಮೇಲಿನ ಸಾಲುಗಳು ನಮ್ಮೂರ ಸ್ಥಿತಿಯಾದರೆ ಇನ್ನು ದೇಶದ ಕಥೆ ಇನ್ನೊಂದು ಹಾದಿ ಹಿಡಿದಿದೆ, ಪಾಕಿಸ್ತಾನ ಮತ್ತು ಆ ದೇಶ ಪ್ರಾಯೋಜಿತ ಭಯೋತ್ಪಾದನೆ ಒಂದೆಡೆಯಾದರೆ ಮತ್ತೊಂದೆಡೆ ದೇಶದ ಒಳಗೆ ಕುಳಿತು ದೇಶದ ಬಗ್ಗೆ ಹೀನವಾಗಿ ಮಾತನಾಡುವ ಪಡೆಯೊಂದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ದೇಶದಲ್ಲಿ ಆಗುವ ತಪ್ಪುಗಳಿಗೆಲ್ಲ ಮೋದಿ ಮತ್ತು RSS ಕಾರಣ ಅನ್ನೋ ಭಂಡ ವಾದದ ಜೊತೆ ಹಿಂದೂ ಧರ್ಮದ ಪ್ರತಿಯೊಂದು ಆಚರಣೆಯನ್ನು ವಿರೋದಿಸುವುದೇ ಇವರಿಗೊಂದು ದೊಡ್ಡ ಕೆಲಸವಾಗಿದೆ. ಬೇರೆ ಧರ್ಮಗಳ ಆಚರಣೆ ಮತ್ತು ಸಂಪ್ರದಾಯಗಳು ಇವರಿಗೆ ಆಯಾ ಧರ್ಮಗಳ ಖಾಸಗಿ ವಿಷಯವಾಗಿ ಕಾಣುತ್ತದೆ ಆದರೆ ಹಿಂದೂ ಆಚರಣೆಗಳು ಮಾತ್ರ ಮೂಢನಂಬಿಕೆ ಹಾಗೂ ಶೋಷಣೆಯಾಗಿ ಕಾಣುತ್ತವೆ. ಉದಾಹರಣೆಗೆ ದೀಪಾವಳಿಯಲ್ಲಿ ಪಟಾಕಿ ಹೊಡೆಯಬಾರದು, ನಮ್ಮೂರ ಮಾರಮ್ಮ/ದುರ್ಗಮ್ಮ ದೇವರಿಗೆ ಬಲಿ ಕೊಡುವುದು, ಕಂಬಳ, ಜಲ್ಲಿಕಟ್ಟು ಹೀಗೆ ಪ್ರತಿ ಆಚರಣೆಯಲ್ಲೂ ತಪ್ಪು ಹುಡುಕುವ ಜನರಿಗೆ ಈ ಆಚರಣೆಗಳ ಹಿಂದಿನ ನಂಬಿಕೆ ಹಾಗೂ ವೈಜ್ಞಾನಿಕ ಕಾರಣಗಳನ್ನು ಹುಡುಕುವ ತಾಳ್ಮೆ ಕೂಡ ಇಲ್ಲ.
ಆದರೆ ಇವರೆಲ್ಲರಿಗಿಂತ ಭಿನ್ನವಾದ ಇನ್ನೊಂದು ವರ್ಗದ ಜನರು ಮಾತ್ರ ಇಂಥ ಹುಚ್ಚಾಟಗಳ ಬಗ್ಗೆ ಗಮನ ಕೊಡದೆ ತಾಯಿ ಭಾರತ ಮಾತೆಯ ಮತ್ತು ಅವಳ ಮಕ್ಕಳ ರಕ್ಷಣೆಗಾಗಿ ಜೀವ ಮುಡುಪಿಟ್ಟು ಹಗಲು ರಾತ್ರಿ, ಬಿಸಿಲು ಚಳಿಯ ಬಗ್ಗೆ ಯೋಚಿಸದೇ ತಮ್ಮ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ದೇಶದ ಒಳಗೆ ಕುಳಿತ ನಾವು ಮಾತ್ರ ಇಂಥ ಹೆಮ್ಮೆಯ ಮಕ್ಕಳನ್ನು ರಾಜಕೀಯದ ವಸ್ತುಗಳನ್ನಾಗಿ ಬಳಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಎಪತ್ತು ವರ್ಷಗಳ ಹೊಸ್ತಿಲ್ಲಲ್ಲಿ ನಿಂತಿದ್ದೇವೆ, ದೇಶದ ಸೇನೆ ಪ್ರಪಂಚದ ಪ್ರಮುಖ ಸೇನೆಗಳಲ್ಲಿ ಒಂದಾಗಿದೆ ಆದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳಿಗೆ ಮಾತ್ರ ಅಲೆದಾಟ ತಪ್ಪಿಲ್ಲ.
ನಾವು ವಾರದಲ್ಲಿ ಐದು ಆರು ದಿನ ಕೆಲಸ ಮಾಡಿದ್ದಕ್ಕೆ ನೋವು, ಸುಸ್ತು, ಖಿನ್ನತೆ ಅಂತ ಹತ್ತಾರು ಸಮಸ್ಯೆಗಳ ಸುಳಿಯಲ್ಲಿದ್ದೇವೆ, ಆದರೆ ಇವರಿಗೆ ರಜಾ-ಮಜಾ ಅನ್ನೋ ಪದಗಳು ಮಾತ್ರ ತುಂಬಾ ದೂರ. ವರ್ಷಕ್ಕೆ ದಿನದ ಲೆಕ್ಕದಲ್ಲಿ ಸಿಗುವ ರಜದಲ್ಲಿ ಗಡಿಯಿಂದ ಊರು ತಲುಪಲು ಮತ್ತು ವಾಪಸ್ಸಾಗಲು ಅರ್ಧಕ್ಕೂ ಹೆಚ್ಚು ಸಮಯ ಕಳೆದು ಹೋಗುತ್ತದೆ. ಉಳಿದ ದಿನಗಳು ನಿಮಿಷಗಳ ಹಾಗೆ ಮುಗಿದು ಹೋಗುತ್ತವೆ, ಇನ್ನು ಒಮ್ಮೆ ರಜಾ ಮುಗಿಸಿ ಹೊರಟರೆ ತಿರುಗಿ ಬರುವ ಯಾವ ನಂಬಿಕೆಗಳು ಇಲ್ಲ, ಕೆಲಸ ಮಾಡುವ ಸ್ಥಳಗಳಲ್ಲಿ ಮೊಬೈಲ್ ಬಳಕೆ ಕನಸಿನ ಮಾತು, ತಿಂಗಳಿಗೊಮ್ಮೆ ಬರುವ ಪತ್ರಗಳೇ ಇವರಿಗೆ ಮತ್ತು ಮನೆಯವರಿಗೆ ಸಂಪರ್ಕ ಕೊಂಡಿ.
ಇಂಥ ಹೆಮ್ಮೆಯ ಮಕ್ಕಳ ಬಗ್ಗೆ ದೇಶದ ಮುಕ್ಕಾಲು ಭಾಗದ ಜನರಿಗೆ ಗೌರವವಿದೆ ಹಾಗು ಅವರ ಬಗ್ಗೆ ನಾಲ್ಕು ಜನರ ಹತ್ತಿರ ಮಾತನಾಡಲು ಹೆಮ್ಮೆ ಪಡುತ್ತಾರೆ. ಆದರೆ ಯಾರೋ ನಾಲ್ಕು ಜನ ಮಾತನಾಡುವ ನಾಲ್ಕಾರು ಕೆಟ್ಟ ಮಾತುಗಳು ಮಾತ್ರ ನಂಜಿನಂತೆ ದೇಶವೆಲ್ಲಾ ಪಸರಿಸತೊಡಗಿವೆ. ಎಲ್ಲೋ ಭೂಕಂಪವಾದಾಗ, ಇನ್ನೆಲ್ಲೋ ಪ್ರವಾಹ ಬಂದಾಗ, ಮತ್ತೆಲ್ಲೋ ಚಂಡಮಾರುತ ಎದ್ದಾಗ, ಸುನಾಮಿಯ ಸುಳಿಗೆ ಸಿಕ್ಕಾಗ, ರಾಜಕೀಯ ನಾಯಕರುಗಳ ಭವಿಷ್ಯ ಬರೆಯುವ ಚುನಾವಣೆಗಳಾದಾಗ ಶಾಂತಿ ಪಾಲನೆಗಾಗಿ ಇವರ ನೆನಪಾಗುವ ದೇಶದ ಕೆಲವೊಂದು ಜನರಿಗೆ ಉಳಿದ ಸಮಯದಲ್ಲಿ ಶತ್ರುಗಳಾಗಿ ಕಾಣುವುದು ಮಾತ್ರ ದುರದೃಷ್ಟಕರ. ದೂರದ ಸಿಯಾಚಿನನ್ ಮೈ ಕೊರೆಯುವ ಚಳಿಯನ್ನೂ ಅಥವಾ ರಾಜಸ್ತಾನದ ಉರಿಬಿಸಿಲನ್ನೋ ನೆನೆದಾಗ ನಮಗೆ ಜೀವ ಬಾಯಿಗೆ ಬಂದ ಅನುಭವವಾಗುತ್ತದೆ, ಆದರೆ ಇವರಿಗೆ ಮಾತ್ರ ಅದು ನಿತ್ಯ ಜೀವನ.
ಭಾರತೀಯರ ನಂಬಿಕೆಯ ಪ್ರಕಾರ ಮಗ ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕು, ಆದರೆ ಇವರಿಗೆ ಮಾತ್ರ ಅದು ವಿರುದ್ಧವೂ ಆಗಬಹುದು, ಪುತ್ರಶೋಖಂ ನಿರಂತರಂ ಅನ್ನೋ ಮಾತು ಇವರ ಪೋಷಕರಿಗೆ ಯಾವಾಗ ಬೇಕಾದರೂ ಅನ್ವಯಿಸಬಹುದು. ಇವರೆಲ್ಲಿ ಅದೆಷ್ಟೋ ಮಂದಿ ಮಕ್ಕಳ ಮುಖ ನೋಡುವ ಮುನ್ನ ಕೊನೆಯುಸಿರೆಳೆಯುತ್ತಾರೆ. ಮದುವೆಗೆ ಮುನ್ನವೇ ಇವರ ಹೆಂಡತಿ ವಿಧವೆಯಾಗಬಹುದು ಅನ್ನೋ ಮೂನ್ಸೂಚನೆಯಿರುತ್ತದೆ. ಇನ್ನೂ ಯುದ್ಧದಲ್ಲೋ ಅಥವಾ ಇನ್ನ್ಯಾವುದೋ ಕಾರ್ಯಾಚರಣೆಯಲ್ಲಿ ಅಂಗವಿಕಲನಾದರೆ ಪರಿಸ್ಥಿತಿ ಹೇಳತೀರದು. ನಿವೃತ್ತಿ ನಂತರದ ಜೀವನ ಸುಖಮಯವಾಗುವ ಯಾವುದೇ ನಂಬಿಕೆಗಳಿಲ್ಲ. ಸೇವೆಗೆ ಸೇರುವ ಮೊದಲೇ ಪ್ರಾಣತ್ಯಾಗಕ್ಕೆ ಸಿದ್ಧರಾಗುವ ಇವರಿಗೆ ಜೀವದ ಮೇಲೆ ಯಾವುದೇ ಹಂಗಿಲ್ಲ, ಗುಂಡಿಗೆ ಎದೆ ಕೊಟ್ಟು ಶತ್ರುಗಳ ಎದೆ ಸೀಳುವ ಇವರಿಗೆ ದೇಶ ಸೇವೆ ಅನ್ನೋದು ದೇಹವನ್ನೆಲ್ಲಾ ತುಂಬಿಕೊಂಡಿದೆ.
ನಾವಿಲ್ಲಿ ಹಬ್ಬದ ಗುಂಗಿನಲ್ಲಿ ಸಿಕ್ಕ ನಾಲ್ಕಾರು ದಿನಗಳ ರಜೆಯನ್ನು ಯಾವ ರೀತಿ ಕಳೆಯುವುದು ಅನ್ನೋ ಯೋಚನೆಯಲ್ಲಿದ್ದರೆ, ಅತ್ತ ಅವರು ಗಡಿಯಲ್ಲಿ ಯಾವಾಗ ಬೇಕಾದರೂ ಗುಂಡುಗಳ ಸುರಿಮಳೆಯಾಗಬಹುದು ಅಂತ ದಿನದ ಇಪ್ಪತ್ನಾಲ್ಕು ಗಂಟೆಯೂ ಎಚ್ಚರವಾಗಿ ದೇಶದ ರಕ್ಷಣೆಗಾಗಿ ಕಾದು ಕುಳಿತ್ತಿದ್ದಾರೆ. ಆದರೆ ಅವರ ಬಗ್ಗೆ ನಮ್ಮ ಕೆಲ ಜನ ಆಡುವ ಕೀಳು ಮಟ್ಟದ ಮಾತುಗಳು ಮಾತ್ರ ಕಣ್ಣಲ್ಲಿ ನೀರು ತರಿಸುತ್ತವೆ. ಉದಾಹರಣೆಗೆ 'ನಾವು ಅವರನ್ನು ಸೇನೆಗೆ ಸೇರಲು ಹೇಳಿದ್ದವಾ?' ಹಾಗೂ ಇನ್ನು ಅನೇಕ ಮಾತುಗಳು. ದೇಶದ ರಾಜಕೀಯ ನಾಯಕರುಗಳ ಅರೋಗ್ಯ ಸ್ವಲ್ಪ ಏರುಪೇರಾದರು ಉನ್ನತ ಆಸ್ಪತ್ರೆಗಳಲ್ಲಿ ಅವಶ್ಯವಿದ್ದರೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸುವ ನಮ್ಮ ವ್ಯವಸ್ಥೆ ಇವರ ಬಗ್ಗೆ ಕೂಡ ಸ್ವಲ್ಪ ಕಾಳಜಿ ವಹಿಸಿದರೆ ತುಂಬಾ ಒಳ್ಳೆಯದು.
ಇನ್ನಾದರೂ ಇಂಥ ಹೆಮ್ಮೆಯ ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವುದನ್ನು ನಿಲ್ಲಿಸೋಣ, ಇವರ ಹೆಸರಿನಲ್ಲಿ ರಾಜಕೀಯ ಮಾಡಬಾರದು ಅನ್ನೋ ಅರಿವು ನಮ್ಮ ರಾಜಿಕೀಯದವರಿಗೆ ತಿಳಿಯಲಿ. ದಿನದ ಜಂಜಾಟದ ಪಯಣದಲ್ಲಿ ಇವರ ಭೇಟಿಯಾದರೆ ಒಂದು ಹೆಮ್ಮೆಯ ಮತ್ತು ಗೌರವಪೂರಕ ಸೆಲ್ಯೂಟ್ ಹೇಳಿ ಮುಂದೆ ಸಾಗೋಣ. ದೇಶದ ಎಲ್ಲಾ ಸೈನಿಕರಿಗೂ ಹಾಗೂ ಅವರ ಮನೆಯವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು.