ದೇಶ ಪ್ರೇಮ

ದೇಶ ಪ್ರೇಮ

ಎಲ್ಲರೂ ಒಮ್ಮೆ ಓದಲೇ ಬೇಕಾದ ಪ್ರಸಂಗ ಇದು. ಕೊರಮಂಗಲದಿಂದ ಇಂದಿರಾ ನಗರಕ್ಕೆ ಹೋಗುವ ಹಾದಿ ಮಧ್ಯ ದೊಂಬಲೂರಿಗಿಂತ ಮುಂಚೆ ಹಸಿರನ್ನು ಹಾಸಿಕೊಂಡು ಹೊದ್ದುಕೊಂಡು ಮಲಗಿರುವ ಸೈನ್ಯ ತರಭೇತಿ ಸ್ಥಳವಿದೆ. ಮಳೆಗಾಲವೊಂದನ್ನು ಬಿಟ್ಟು ಇನ್ನೆಲ್ಲ ಕಾಲದಲ್ಲೂ ಈ ಹಾದಿಯ ಇಕ್ಕೆಲಗಳಲ್ಲೂ ಮಜ್ಜಿಗೆ ಮತ್ತು ಅಂಬಲಿ ಮಾರುವ ಹಲವಾರು ತಳ್ಳುಗಾಡಿಗಳ ಬಡ ಕುಟುಂಬಗಳು ಕಾಣಸಿಗುತ್ತವೆ. ನಾ ಆ ಹಾದಿಯಲ್ಲಿ ಹೋಗುವಾಗೆಲ್ಲ ಯಾವುದಾದರೊಂದು ತಳ್ಳುಗಾಡಿಯ ಬಳಿ ನಿಂತು ಗುಟುಕು ಅಂಬಲಿಯನ್ನೋ ಮಜ್ಜಿಗೆಯನ್ನೋ ಕುಡಿದು ಅವರೊಂದಿಗಿಷ್ಟು ಹರಟಿ ಮುಂದುವರಿಯುವುದು ಅಭ್ಯಾಸ. ಇಂದು ಕೂಡ ಯಾವುದೋ ಕೆಲಸದ ಮೇಲೆ ಇಂದಿರಾ ನಗರದ ಕಡೆ ಹೋಗುತ್ತಿದ್ದವನು ತಳ್ಳುಗಾಡಿಯೊಂದರ ಮುಂದೆ ಮಜ್ಜಿಗೆಗಾಗಿ ಬೈಕ್ ನಿಲ್ಲಿಸಿದ್ದೆ. ಮಜ್ಜಿಗೆ ಅಂಬಲಿ ಮಾರುತಿದ್ದ ಮಧ್ಯ  ವಯ್ಯಸ್ಸಿನ ಹೆಂಗಸು, ಬೇಲಿಯ ಆಚೆಕಡೆ ನಿಂತು ಏನನ್ನೋ ಕೇಳುತಿದ್ದ ಸೈನಿಕನೊಬ್ಬನ ಮುಖವನ್ನೇ ನೋಡುತ್ತಾ ನಿಂತಿದ್ದಳು . ಪಕ್ಕದಲ್ಲಿ ಅಂಬಲಿ ಕುಡಿಯುತ್ತಿದ್ದ ಇಬ್ಬರು ಕ್ಯಾಬ್ ಡ್ರೈವರ್ ಗಳು ಕೂಡ ಮುಖ ಮುಖ ನೋಡುತ್ತಾ ನಿಂತು ಕೊಂಡಿದ್ದರು . ಸಮಸ್ಯೆ ಇಷ್ಟೇ ಸೈನಿಕನಿಗೆ ಎರಡು ಲೋಟ ಮಜ್ಜಿಗೆ ಬೇಕು ಅವನದನ್ನು ಹಿಂದಿಯಲ್ಲಿ ಕೇಳುತಿದ್ದಾನೆ ಈಕೆ ಕನ್ನಡತಿ ಅವನ ಭಾಷೆ ಅರ್ಥವಾಗುತ್ತಿಲ್ಲ. ಹತ್ತಿರ  ಹೋದವನು ವಿಚಾರಿಸಿ ಎರಡು ಲೋಟ ಮಜ್ಜಿಗೆ ಕೇಳ್ತಾ ಇದ್ದಾನೆ ಕೊಡಮ್ಮ ಎಂದೆ. ಅಯ್ಯೋ ಅಷ್ಟೇನಾ ಸಾರ್ ಎಂದವಳೇ ಅವನು ಬೇಲಿಯಾಚೆಗಿನಿಂದ ಚಾಚಿದ ಚೊಂಬಿಗೆ ಮಜ್ಜಿಗೆ ಹುಯ್ದು ನನಗೂ ಮಜ್ಜಿಗೆ ಕೈಗಿಟ್ಟಿದ್ದಳು. 

ಮುಂದೆ ನಡೆದಿದ್ದು ದೇಶ ಭಕ್ತಿಯ ಪಾಠ. ಮಜ್ಜಿಗೆ ಕುಡಿದ ಸೈನಿಕ ಮೂವತ್ತು ರೂಪಾಯಿಯನ್ನು ಕನ್ನಡತಿಯತ್ತ ಚಾಚುತ್ತಿದ್ದಂತೆಯೇ, ಆಕೆ ನನ್ನತ್ತ ತಿರುಗಿ ಅಣ್ಣ ದುಡ್ಡು ಬೇಡ ಅಂತ ಹೇಳಿ ಅವ್ರಿಗೆ ಅವ್ರ ಭಾಷೇಲಿ ಎಂದಳು. ಆಶ್ಚರ್ಯದಿಂದ ಯಾಕಮ್ಮ ಎಂದೆ. ಅಣ್ಣ ಅವ್ರು ದೇಶ ಕಾಯೋರು ಅವ್ರ ದಾಹ ತೀರ್ಸಿದಕ್ಕೆ ದುಡ್ಡಿಸ್ಕೊಂಡ್ರೆ ಶಿವ ಮೆಚ್ತಾನ ಅಣ್ಣ ಎಂದಳು. ಅರೆ ಕ್ಷಣ ಮೂರು ಜನ್ಮ ಕುಳಿತು ತಿನ್ನುವಷ್ಟಿದ್ದರೂ ಸೈನಿಕರ ಭತ್ಯೆ, ಶಸ್ತ್ರಾಸ್ತ್ರಗಳ ದುಡ್ಡನ್ನು ತಿನ್ನುವ ನೀಚ ರಾಜಕಾರಣಿಗಳು ಕಣ್ಮುಂದೆ ಹಾದು ಹೋದರು. ಆಕೆಯ ಬಗ್ಗೆ ಹೆಮ್ಮೆ ಪಡುತ್ತಲೇ ಸೈನಿಕನಿಗೆ ಆಕೆಗೆ ಹಣ ಬೇಡಂತೆ ನೀನಿನ್ನು ಚೆನ್ನಾಗಿ ದೇಶ ಕಾಯಬೇಕಂತೆ ಎಂದೆ. " ಇಲ್ಲ ಭಯ್ಯಾ ನಾನೊಬ್ಬ ಸೈನಿಕ. ದೇಶ ಕಾಯೋದು ನನ್ನ ಕರ್ತವ್ಯ. ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ , ಜನಸಾಮಾನ್ಯರ ದುಡ್ಡು ಬೇಡ " ಎಂದುಬಿಟ್ಟಿದ್ದ. ತಕ್ಷಣ ನೆನಪಾಗಿದ್ದು ಬೀದಿಬದಿಯ ವ್ಯಾಪಾರಿಗಳನ್ನು ಹತ್ತು ಇಪ್ಪತ್ತು ರೂಪಾಯಿಗಳಿಗೆ ಪೀಡಿಸುವ  ನಮ್ಮ ಪೊಲೀಸರು. 

ಇಬ್ಬರನ್ನು ಸಮಾಧಾನಿಸಿ ಆಕೆಗೆ ನಾ ಕುಡಿದ ಮಜ್ಜಿಗೆಯ ಜೊತೆ ಸೈನಿಕನ ಮಜ್ಜಿಗೆಯ ದುಡ್ಡು ಕೊಟ್ಟು, ನಿಮ್ಮಿಬ್ಬರ ದೇಶಭಕ್ತಿಗೆ ನನ್ನಿಂದೊಂದು ಚಿಕ್ಕ ಸಹಾಯ ಎಂದು ಅಲ್ಲಿಂದ ಹೊರಟಿದ್ದೆ. ದಾರಿಯುದ್ದಕ್ಕೂ ಅವರಿಬ್ಬರೂ ಕಾಡಿದರು. ಈಗಲೂ ಕಾಡುತಿದ್ದಾರೆ.

ಕೋಟಿ ಕೋಟಿ ಇದ್ದರೂ ದೇಶ ಲೂಟಿಮಾಡುವ ಕೆಲವು ರಾಜಕಾರಣಿಗಳೊಂದೆಡೆಯಾದರೆ ಹೊಟ್ಟೆಪಾಡಿಗೆ ದುಡಿಯುವ ಜನಸಾಮಾನ್ಯನ ದೇಶ ಪ್ರೇಮವೊಂದು ಕಡೆ. ಕೈತುಂಬಾ ಸಂಬಳವಿದ್ದು ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದರೂ ಬಡವರ ಹೊಟ್ಟೆಮೇಲೆ ಹೊಡೆಯುವ ಕೆಲವು ಪೊಲೀಸರೊಂದು ಕಡೆಯಾದರೆ ದುಡಿದ ಸಂಬಳ ಹೊತ್ತು ಮನೆಗೆ ಬರಲು ವರುಷ ಕಾಯುವ, ಸಂಬಳ ಬಿಟ್ಟು ಇನ್ನೇನು ಬೇಡ ಎಂಬ ಸೈನಿಕನೊಂದು ಕಡೆ. ಇದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ. ಮೇರಾ ಭಾರತ್ ಮಹಾನ್ ಜೈ ಜವಾನ್, ಜೈ ಕಿಸಾನ್ !

(ವಾಟ್ಸಾಪ್ ನಿಂದ ಸಂಗ್ರಹಿತ)

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ