ದೇಶ ಸೇವೆ ಎಂಬ ವಿಷಯದ ಬಗ್ಗೆ ಒಂದು ಪ್ರಬಂಧ...
ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರ ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು " ದೇಶ ಸೇವೆ " ಎಂಬ ವಿಷಯದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮನವಿ ಮಾಡಿಕೊಂಡರು. ಆ ಮಗುವಿಗೆ ನಾನು ಹೇಳಿದ ವಿಷಯಗಳು.
ದೇಶ ಸೇವೆ
" ದೇಶ ನಿನಗೇನು ಕೊಟ್ಟಿದೆ ಎಂಬುದನ್ನು ಕೇಳುವುದಕ್ಕೆ ಮೊದಲು, ನೀನು ದೇಶಕ್ಕಾಗಿ ಏನು ಕೊಟ್ಟಿರುವೆ ಎಂದು ನಿನ್ನನ್ನೇ ಕೇಳಿಕೋ " ಎಂದು ಅಮೆರಿಕಾದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ಒಮ್ಮೆ ಹೇಳುತ್ತಾರೆ. ಈ ಸಂದರ್ಭದಲ್ಲಿ ಭಾರತೀಯರಾದ ನಮ್ಮೆಲ್ಲರಿಗೂ ಇದು ಅತ್ಯಂತ ಮಹತ್ವವಾದುದು. ದೇಶ ಸೇವೆ ಎಂದರೆ ಸೈನ್ಯ ಸೇರಿ ದೇಶದ ರಕ್ಷಣೆ ಮಾಡುವುದು ಮಾತ್ರವಲ್ಲ ದೇಶ ಸೇವೆ ಬಹಳ ವಿಶಾಲವಾದ ಅರ್ಥವನ್ನು ಹೊಂದಿದೆ.
ದೇಶ ಸೇವೆಯ ಮೊಟ್ಟಮೊದಲ ಮತ್ತು ಬಹುಮುಖ್ಯ ಅಂಶವೆಂದರೆ ನಮ್ಮ ಸಂವಿಧಾನವನ್ನು ಗೌರವಿಸುವುದು ಮತ್ತು ಪಾಲಿಸುವುದು. ಅದಕ್ಕೆ ನಮ್ಮಿಂದ ಯಾವುದೇ ಚ್ಯುತಿ ಬಾರದಂತೆ ವರ್ತಿಸುವುದು. ಆ ಮುಖಾಂತರ ನಮ್ಮ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು.
ಎರಡನೆಯ ಪ್ರಮುಖ ಸೇವೆಯೆಂದರೆ, ದೇಶದ ಆಂತರಿಕ, ಬಾಹ್ಯ, ನೈಸರ್ಗಿಕ ಅಥವಾ ಬೇರೆ ಯಾವುದೇ ಸಂಕಷ್ಟದ ಸಮಯದಲ್ಲಿ ಕಾಯಾ ವಾಚಾ ಮನಸ್ಸಾ ಅದರ ಜೊತೆಗಿರುವುದು. ಇಂತಹ ಸನ್ನಿವೇಶದಲ್ಲಿ ದೇಶದ್ರೋಹಿಗಳು ಪರಿಸ್ಥಿತಿಯ ಲಾಭ ಪಡೆದು ದೇಶವನ್ನು ನಾಶ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕೆ ನಾವು ಯಾವುದೇ ಅವಕಾಶ ನೀಡಬಾರದು.
ಮೂರನೆಯ ಮುಖ್ಯ ಅಂಶವೆಂದರೆ, ದೇಶದ ಸಾರ್ವಜನಿಕ ಆಸ್ತಿ ಪಾಸ್ತಿಗಳಾದ ಶಾಲೆ ರಸ್ತೆ ಕಚೇರಿ ವಾಹನ ಆಸ್ಪತ್ರೆ ಯಾವುದೇ ಇರಲಿ ಅದಕ್ಕೆ ನಮ್ಮಿಂದ ಯಾವುದೇ ಹಾನಿಯಾಗದಂತೆ ಎಚ್ಚರವಹಿಸುವುದು ಮತ್ತು ಪ್ರಾಕೃತಿಕ ಸಂಪನ್ಮೂಲಗಳಾದ ಗಾಳಿ ನೀರು ಬೆಳಕು ಕಾಡು ಬೆಟ್ಟ ಗುಡ್ಡಗಳ ಪ್ರದೇಶವನ್ನು ನಾಶ ಮಾಡದೆ, ಮಲಿನ ಮಾಡದೆ, ದುರುಪಯೋಗ ಪಡಿಸಿಕೊಳ್ಳದೆ ಅದನ್ನು ರಕ್ಷಿಸುವುದು ದೇಶಕ್ಕೆ ನಾವು ಮಾಡಬಹುದಾದ ಸೇವೆಗಳಲ್ಲಿ ಮಹತ್ವದ್ದಾಗಿರುತ್ತದೆ.
ನಾಲ್ಕನೆಯದಾಗಿ, ವೈಯಕ್ತಿಕ ಬದುಕಿನಲ್ಲಿ ನಾವು ಭ್ರಷ್ಟರಾಗದೆ, ದುಶ್ಚಟಗಳ ದಾಸರಾಗದೆ, ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡದೆ, ಗಲಭೆಯಲ್ಲಿ ಭಾಗವಹಿಸದೆ, ಗುರು ಹಿರಿಯರು ಮಾತಾ ಪಿತೃಗಳು ಮುಂತಾದ ಎಲ್ಲರನ್ನೂ ಗೌರವಿಸಿ - ಪ್ರೀತಿಸಿ ನಮ್ಮಿಂದ ಯಾವುದೇ ಅಪಚಾರವಾಗದಂತೆ ನಡವಳಿಕೆ ರೂಪಿಸಿಕೊಳ್ಳುವುದು ದೇಶಕ್ಕೆ ನಾವು ಮಾಡುವ ಸಹಾಯವಾಗುತ್ತದೆ.
ಐದನೆಯದಾಗಿ, ನಾವು ನಮ್ಮಲ್ಲಿರುವ ಕ್ರೀಡೆ ಸಾಹಿತ್ಯ ಸಂಗೀತ ಕಲೆ ವಿಜ್ಞಾನ ವ್ಯಾಪಾರ ಉದ್ಯಮ ಮುಂತಾದ ಯಾವುದೇ ಕ್ಷೇತ್ರದಲ್ಲೂ ಅತ್ಯಂತ ಪ್ರಾಮಾಣಿಕ ಮತ್ತು ಶ್ರಮದಿಂದ ದೊಡ್ಡ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದರೆ ಅಥವಾ ಅದಕ್ಕೆ ಪ್ರಯತ್ನಿಸಿದರೆ ಅದು ನಮ್ಮ ದೇಶಕ್ಕೆ ನಾವು ಕೊಡಬಹುದಾದ ಬಹುದೊಡ್ಡ ಕೊಡುಗೆಯಾಗುತ್ತದೆ. ಹೀಗೆ ಹೇಳುತ್ತಾ ಹೋದರೆ ಇನ್ನೂ ಸಾಕಷ್ಟು ವಿಷಯಗಳು ದೇಶ ಸೇವೆಯ ವ್ಯಾಪ್ತಿಯಲ್ಲಿ ಬರುತ್ತದೆ.
ಇಲ್ಲಿ ಇನ್ನೂ ಒಂದು ಮುಖ್ಯ ವಿಷಯವೆಂದರೆ ಈ ಅಂಶಗಳು ಕೇವಲ ಹೇಳಿಕೆಗಳು, ಭಾಷಣಗಳು, ಪ್ರಬಂಧಗಳು, ಬರಹಗಳು, ಅಂಕಣಗಳು ಅಥವಾ ಇನ್ಯಾವುದೇ ಕಲಾ ಪ್ರಕಾರದ ರೂಪದಲ್ಲಿ ಇರದೆ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದು ನಿಜವಾದ ದೇಶಸೇವೆಯಾಗುತ್ತದೆ. ಕೇವಲ ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆ ಹಾಡಿ, ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಂಡ ಮಾತ್ರಕ್ಕೆ ಅದು ದೇಶ ಸೇವೆಯಾಗುವುದಿಲ್ಲ. ಆ ದಿನಗಳು ಕೇವಲ ಸಾಂಕೇತಿಕ ಆಚರಣೆಗಳು.
ಗೆಳೆಯ - ಗೆಳತಿಯರೆ ಇನ್ನು ಮುಂದೆ ನಾವು ಈ ಅಂಶಗಳನ್ನು ನಮ್ಮ ಜೀವನದಲ್ಲಿ ಪಾಲಿಸುವ ಮುಖಾಂತರ ದೇಶ ಸೇವೆ ಸಲ್ಲಿಸುವ ಸಂಕಲ್ಪ ಮಾಡೋಣ. ಧನ್ಯವಾದಗಳು.ಜೈ ಭಾರತ, ಜೈ ಕರ್ನಾಟಕ.
- 286 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಿಂದ ಸುಮಾರು 24 ಕಿಲೋಮೀಟರ್ ದೂರದ ಬೆಳ್ಳಾರೆ ಗ್ರಾಮ ತಲುಪಿತು. ಇಂದು 14/8/2021 ಶನಿವಾರ 287 ದಿನ ನಮ್ಮ ಕಾಲ್ನಡಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಿಂದ ಸುಮಾರು 14 ಕಿಲೋಮೀಟರ್ ದೂರದ ಸುಳ್ಯ ತಾಲ್ಲೂಕು ತಲುಪಲಿದೆ. ನಾಳೆ 15/8/2021 ಭಾನುವಾರ 288 ನೆಯ ದಿನ ಸುಳ್ಯ ನಂತರ ಕೊಡಗು ಜಿಲ್ಲೆಯ ಪ್ರವೇಶಿಸಲಾಗುತ್ತದೆ.
ಕೊಡಗು ಜಿಲ್ಲೆಯ ಮಾರ್ಗಸೂಚಿ: ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ, ಸೋಮವಾರಪೇಟೆ ಆಸಕ್ತರು ಭಾಗವಹಿಸಬಹುದು.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ