ದೇಹದಿಂದ ವಾಸನೆ ಬರಲು ಕಾರಣವೇನು?

ದೇಹದಿಂದ ವಾಸನೆ ಬರಲು ಕಾರಣವೇನು?

ಕೆಲವರ ದೇಹದಿಂದ ತೀವ್ರವಾದ ವಾಸನೆ ಕಂಡುಬರುತ್ತದೆ. ಚಳಿ ಇರಲಿ ಮಳೆ ಇರಲಿ, ಸ್ವಲ್ಪ ದೂರ ನಡೆಯಲಿ ಹೀಗೆ ಚಿಕ್ಕ ಕೆಲಸ ಮಾಡಿದರೂ ಅವರಿಗೆ ಅತಿಯಾಗಿ ಬೆವರು ಬರುತ್ತದೆ. ಈ ರೀತಿ ಸಮಸ್ಯೆ ಇರುವ ವ್ಯಕ್ತಿಗಳು ಇತರರೊಂದಿಗೆ ಇರಲು ತುಂಬಾ ಕಷ್ಟಪಡುತ್ತಾರೆ. ದೇಹದ ವಾಸನೆ ಅವರಿಗೆ ಮುಜುಗರ ಉಂಟುಮಾಡುತ್ತದೆ. ಇಂತವರದ್ದು ಒಂದು ಸಮಸ್ಯೆಯಾದರೆ, ಇನ್ನು ಕೆಲವರು ಸ್ನಾನ ಮಾಡಿ ಬಂದ ನಂತರವೂ ಬೆವರುತ್ತಾರೆ, ಮಾತ್ರವಲ್ಲ ಅವರ ದೇಹದಿಂದ ವಾಸನೆ ಹೋಗುವುದಿಲ್ಲ. ಚೆನ್ನಾಗಿ ಸ್ನಾನ ಮಾಡಿ ಬಂದ ನಂತರವೂ ವಾಸನೆ ಇರುತ್ತದೆ. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು? ದೇಹದಿಂದ ವಾಸನೆ ಬರಲು ಹಲವಾರು ಕಾರಣಗಳಿವೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ನೋಡೊಣ.

ವಾಸ್ತವವದಲ್ಲಿ, ಬೆವರು ಮಾತ್ರ ಅಂತಹ ಕೆಟ್ಟ ವಾಸನೆಯನ್ನು ಉಂಟುಮಾಡುವುದಿಲ್ಲ. ಬ್ಯಾಕ್ಟಿರಿಯಾಗಳು ಅದರೊಂದಿಗೆ ಸೇರಿಕೊಂಡಾಗ ಈ ರೀತಿಯಾಗುತ್ತದೆ. ಹಾಗಾಗಿ ತಲೆಯಿಂದ ಹಿಡಿದು ಪಾದದವರೆಗೆ ದೇಹದ ಎಲ್ಲಾ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸ ಬೇಕು. ಇಲ್ಲವಾದಲ್ಲಿ ಬ್ಯಾಕ್ಟಿರಿಯಾಗಳು ಅಲ್ಲಲ್ಲಿ ಸಂಗ್ರಹವಾಗುತ್ತವೆ. ಅದರಲ್ಲಿಯೂ ಕಂಕುಳಲ್ಲಿ, ಬೆರಳುಗಳ ಮಧ್ಯೆ ಬ್ಯಾಕ್ಟಿರಿಯಾಗಳು ವಾಸ ಮಾಡುತ್ತದೆ. ಹಾಗಾಗಿ ಈ ಜಾಗಗಳನ್ನು ಚೆನ್ನಾಗಿ ತೊಳೆದು ಸ್ನಾನ ಮಾಡಬೇಕು ಜೊತೆಗೆ ಸಾಧ್ಯವಾದಲ್ಲಿ ಒಳ್ಳೆಯ ಡಿಯೋಡರೆಂಟ್‌ಗಳನ್ನು ಅಥವಾ ವೆಟ್ ವೈಪ್‌ಗಳನ್ನು ಬಳಸುವುದು ಬಹಳ ಉತ್ತಮ.

ಯಾವ ರೀತಿಯ ಉತ್ಪನ್ನಗಳ ಬಳಕೆ ಒಳ್ಳೆಯದು?: ದೇಹದಿಂದ ವಾಸನೆ ಬರುವುದನ್ನು ತಡೆಯಲು ಜನರು ವಿವಿಧ ಉತ್ಪನ್ನಗಳನ್ನು ಬಳಸುತ್ತಾರೆ. ವಿಶೇಷವಾಗಿ ಬಾಡಿ ವಾಶ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿವೆ. ಆದರೆ ಇವೆಲ್ಲವೂ ನಿಜವಾಗಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂಬುದು ಮುಖ್ಯ ಪ್ರಶ್ನೆ. ಕೆಲವು ಬಾಡಿ ವಾಶ್‌ಗಳು ದೇಹದಿಂದ ಬರುವ ವಾಸನೆಯನ್ನು ಕಡಿಮೆ ಮಾಡಬಹುದು ಆದರೆ ಬ್ಯಾಕ್ಟಿರಿಯಾವನ್ನು ನಿವಾರಿಸುವುದಿಲ್ಲ. ಅದಕ್ಕಾಗಿಯೇ ಸ್ನಾನ ಮಾಡಿ ಬಂದ ನಂತರ ಬರುವ ವಾಸನೆಯಿಂದ ಮುಕ್ತಿ ಪಡೆಯಲು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡಬೇಕು. ಅದಕ್ಕಾಗಿಯೇ ಆಂಟಿಬ್ಯಾಕ್ಟಿರಿಯಲ್ ಕ್ಲೆನ್ಸರ್‌ಗಳನ್ನು ಬಳಸುವುದು ಸೂಕ್ತ. ಇವು ಬ್ಯಾಕ್ಟಿರಿಯಾದಿಂದ ಮುಕ್ತಿ ನೀಡಿ ದೇಹದಿಂದ ಬರುವ ದುರ್ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಳಸಿದ ಬಟ್ಟೆಗಳನ್ನು ತೊಳೆಯದೆಯೇ ಮತ್ತೆ ಬಳಸುವುದು : ಟವೆಲ್ ಬಳಸುವ ವಿಷಯಕ್ಕೆ ಬಂದಾಗ ಅನೇಕ ಜನರು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ದಿನಪೂರ್ತಿ, ಕೆಲವರಂತೂ ವಾರ ಪೂರ್ತಿ ಒಂದೇ ಟವಲ್ ಬಳಸುತ್ತಾರೆ. ಕೇವಲ ಟವಲ್ ಅಲ್ಲ; ಕೆಲವರು ತಮ್ಮ ಬಟ್ಟೆ, ಒಳ ಉಡುಪು ಹೀಗೆ ಬಳಸಿದ ಬಟ್ಟೆಯನ್ನು ತೊಳೆಯದೆಯೇ ಮತ್ತೆ ಮತ್ತೆ ಉಪಯೋಗ ಮಾಡುತ್ತಾರೆ. ಇವು ಮೇಲ್ನೋಟಕ್ಕೆ ಸ್ವಚ್ಛವಾಗಿ ಕಂಡುಬಂದರೂ, ಅವುಗಳಲ್ಲಿ ಬ್ಯಾಕ್ಟಿರಿಯಾಗಳು ಸಂಗ್ರಹವಾಗಿರುತ್ತವೆ. ಇವು ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆ. ಒಂದೇ ಟವಲ್ ಅಥವಾ ಬಟ್ಟೆಗಳನ್ನು ಪದೇ ಪದೇ ಬಳಸುವುದರಿಂದ ದೇಹದಿಂದ ಬರುವ ವಾಸನೆ ಹೆಚ್ಚಾಗುತ್ತದೆ. ಜೊತೆಗೆ ಬಿಗಿಯಾದ ಬಟ್ಟೆ ಅಥವಾ ಸಿಂಥೆಟಿಕ್ ಬಟ್ಟೆಗಳನ್ನು ಉಪಯೋಗ ಮಾಡುವುದರಿಂದಲೂ ಈ ರೀತಿಯ ಸಮಸ್ಯೆ ಕಂಡು ಬರಬಹುದು. ಆದ್ದರಿಂದ, ಒಮ್ಮೆ ಬಳಸಿದ ಬಟ್ಟೆಗಳನ್ನು ಮತ್ತೆ ಬಳಸುವ ಮೊದಲು ಅದನ್ನು ತೊಳೆಯುವ ಅಭ್ಯಾಸ ಬಹಳ ಒಳ್ಳೆಯದು. 

ಹಾರ್ಮೋನ್ ಸಮಸ್ಯೆಗಳು : ಕೆಲವು ವ್ಯಕ್ತಿಗಳಲ್ಲಿ ಕಂಡುಬರುವಂತಹ ಹಾರ್ಮೋನ್ ಸಮಸ್ಯೆಗಳು ಸಹ ಅತಿಯಾದ ವಾಸನೆಯನ್ನು ಉಂಟುಮಾಡಬಹುದು. ವಿಶೇಷವಾಗಿ, ಹೈಪರ್ಹಡೋಸಿಸ್ ಅಂದರೆ ಅತಿಯಾದ ಬೆವರುವಿಕೆ ಮುಂತಾದ ಪರಿಸ್ಥಿತಿಗಳಲ್ಲಿ ಈ ಸಮಸ್ಯೆ ಸ್ಪಷ್ಟವಾಗಿ ಕಂಡುಬರುತ್ತದೆ. ಇದರ ಜೊತೆಗೆ, ಶಿಲೀಂಧ್ರ ಸೋಂಕುಗಳು ಸಹ ಈ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಕೆಲವು ಔಷಧಿಗಳು ಸಹ ಅಹಿತಕರ ವಾಸನೆಗೆ ಕಾರಣವಾಗಬಹುದು. ಮಾತ್ರವಲ್ಲ ನಾವು ಪ್ರತಿನಿತ್ಯ ಸೇವಿಸುವ ಆಹಾರಗಳು ಕೂಡ ಈ ರೀತಿಯ ಸಮಸ್ಯೆಗೆ ಒಂದು ಕಾರಣವಾಗಿರ ಬಹುದು. ಬೆಳ್ಳುಳ್ಳಿ, ಈರುಳ್ಳಿ ಮತ್ತು ಅತಿಯಾದ ಆಲೋಹಾಲ್ ಸೇವನೆ ಹಾಗೂ ಪ್ರೋಟೀನ್ ಭರಿತ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಬೆವರುವಿಕೆಗೆ ಕಾರಣವಾಗಿ ದೇಹದಿಂದ ಕೆಟ್ಟ ವಾಸನೆ ಬರುವುದಕ್ಕೆ ಕಾರಣವಾಗುತ್ತದೆ. ಈ ರೀತಿ ಬೆವರಿನ ಮೂಲಕ ಕೆಲವು ವಿಷಕಾರಿ ವಸ್ತುಗಳು ಬಿಡುಗಡೆಯಾಗುವುದರಿಂದ ವಾಸನೆ ಬರುತ್ತದೆ.

ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ನಿಮ್ಮ ಕೈ ಮತ್ತು ಪಾದಗಳನ್ನು ಮೆತ್ತನೆಯ ಬ್ರಷ್ ಅಥವಾ ಸ್ಪಂಜ್ ಗಳಿಂದ ಸ್ವಚ್ಛಗೊಳಿಸಬೇಕು. ಸ್ನಾನ ಆದ ಬಳಿಕ ದೇಹವನ್ನು ನೀರಿಲ್ಲದಂತೆ ಸರಿಯಾಗಿ ಟವೆಲ್ ಗಳಿಂದ ಒರೆಸಿಕೊಳ್ಳಬೇಕು. ಏಕೆಂದರೆ ದೇಹದ ಯಾವುದೇ ಭಾಗದಲ್ಲಿಯೂ ತೇವಾಂಶವಿದ್ದರೆ ಅಲ್ಲಿ ಬ್ಯಾಕ್ಟಿರಿಯಾ ಹೆಚ್ಚಾಗುತ್ತದೆ. ಜೊತೆಗೆ ನೀವು ಬಳಸುತ್ತಿರುವ ಸೋಪಿನಿಂದ ಯಾವುದೇ ಬದಲಾವಣೆಯಾಗದಿದ್ದರೆ, ತಕ್ಷಣವೇ ಬೇರೆ ಸೋಪನ್ನು ಪ್ರಯತ್ನಿಸಿ. ಸರಿಯಾದ ಡಿಯೋಡರೆಂಟ್ ಅನ್ನು ಆರಿಸಿಕೊಳ್ಳಿ. ಪ್ರತಿನಿತ್ಯ ಸರಿಯಾಗಿ ನೀರು ಕುಡಿಯಿರಿ ಇದರಿಂದ ಮೂತ್ರದ ಮೂಲಕ ವಿಷವನ್ನು ಹೊರಹಾಕಿದಾಗ, ಬೆವರಿನ ವಾಸನೆ ಕಡಿಮೆಯಾಗುತ್ತದೆ. ಜೊತೆಗೆ ನೀವು ಸೇವಿಸುವ ಆಹಾರದ ವಿಷಯದಲ್ಲಿಯೂ ಕಾಳಜಿ ವಹಿಸಿ. ಮೊದಲೇ ಹೇಳಿದಂತೆ. ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆಯನ್ನು ಸ್ವಲ್ಪ ಕಡಿಮೆ ಮಾಡುವುದು ಉತ್ತಮ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ