ದೇಹ ನೆಟ್ಟಗಿದ್ದಾಗ ಮನಸ್ಸು ನೆಟ್ಟಗಿರಲಿಲ್ಲ…
‘ನೀವು ಸಾಯಬೇಕೆಂದು ಕೊಳ್ಳುತ್ತಿದ್ದೀರಾ? ನಿಮ್ಮನ್ನು ಖಿನ್ನತೆ, ಹತಾಶೆ, ಜುಗುಪ್ಸೆಗಳು ಕಾಡುತ್ತಿವೆಯಾ? ನಿಮ್ಮ ಸಮಸ್ಯೆಗಳನ್ನು ನನ್ನೊಂದಿಗೆ ಹೇಳಿಕೊಳ್ಳಬಹುದು. ನನ್ನ ದೂರವಾಣಿ ಸಂಖ್ಯೆ…’ಈ ಜಾಹೀರಾತು ದೂರದೇಶದ ದಿನಪತ್ರಿಕೆಯೊಂದರಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿತ್ತು. ಬಹಳ ಜನರ ಗಮನ ಸೆಳೆಯುತ್ತಿತ್ತು. ಪ್ರತಿಸಾರಿಯೂ ಕನಿಷ್ಠ ಐವತ್ತಕ್ಕೂ ಹೆಚ್ಚು ಜನ ಟೆಲಿಫೋನ್ ಮಾಡುತ್ತಿದ್ದರು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಉತ್ತರ ಕೊಡುತ್ತಿದ್ದ ಮಹಿಳೆ ಅವರು ಹೇಳುವುದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು. ಸಾಂತ್ವನ ಹೇಳುತ್ತಿದ್ದರು.
ಯಾರಾದರೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆಂದರೆ, ‘ಜಗತ್ತಿನಲ್ಲಿರುವ ಸಾವಿರಾರು ಜನರಲ್ಲಿ ಒಬ್ಬರೋ, ಇಬ್ಬರೋ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುತ್ತಾರೆ. ಆದರೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದವರು ಎಷ್ಟೋ ವರ್ಷ ಬದುಕುತ್ತಾರೆ. ಇಂತಿಂಥ ಕ್ಯಾನ್ಸರ್‌ಗೆ ಇಂತಿಂಥ ಕಡೆ ಚಿಕಿತ್ಸೆ ದೊರಕಬಹುದು’ಎಂದೆಲ್ಲ ವಿವರಸಹಿತ ಉತ್ತರಿಸುತ್ತಿದ್ದರು. ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿರುವವರು ಮಾತಾಡಿದರೆ, ‘ಪ್ರಪಂಚದಲ್ಲಿ ಲಕ್ಷ ಜನಕ್ಕೆ ಕೇವಲ ಮೂರು ಜನ ಸಿರಿವಂತರು. ಉಳಿದವರಿಗೆಲ್ಲ ಆರ್ಥಿಕ ಸಮಸ್ಯೆ ಇದ್ದೇ ಇರುತ್ತದೆ. ನೀವು ನಿರ್ಗತಿಕರಲ್ಲ. ನೀವೇಕೆ ಹತಾಶರಾಗಬೇಕು?’ಎಂದು ಸಮಾಧಾನ ಪಡಿಸುತ್ತಿದ್ದರು.
ಹೀಗೆಯೇ ಗಂಡ-ಹೆಂಡಿರ, ತಂದೆ-ಮಕ್ಕಳ, ಉದ್ಯೋಗಸ್ಥರ ಸಮಸ್ಯೆಗಳಿಗೆ ಆಕೆ ಉತ್ತರಿಸುತ್ತಿದ್ದರು. ಕೆಲವರಿಗೆ ಸಾಂತ್ವನ ಸಿಗುತ್ತಿತ್ತು. ಆದರೆ ಒಂದಷ್ಟು ಜನ ಮಾತ್ರ, ‘ಬಹುಶಃ ನಿಮಗೆ ದೇವರು ಒಳ್ಳೆಯ ಆರೋಗ್ಯ, ಐಶ್ವರ್ಯ, ಎಲ್ಲ ಅನುಕೂಲಗಳನ್ನು ಕೊಟ್ಟಿರಬಹುದು. ಸಹಾನುಭೂತಿ ಸುರಿಸುವುದು ಸುಲಭದ ಕೆಲಸ’ಎಂದು ಕಟುವಾಗಿ ಟೀಕಿಸುತ್ತಿದ್ದರು. ಆದರೆ ಆಕೆ ತನ್ನ ಕತೆ ಹೇಳಿಕೊಳ್ಳುತ್ತಿದ್ದಂತೆ ಅವರು ಕರಗಿ ನೀರಾಗುತ್ತಿದ್ದರು. ಆಕೆಯ ಕತೆ ಹೀಗಿದೆ. ಆಕೆ ತಕ್ಕಮಟ್ಟಿಗೆ ಅನುಕೂಲವಾಗಿದ್ದವರು.
ಆದರೆ ಬಾಲ್ಯದಿಂದಲೇ ಸಿಡುಕುವ, ಎಲ್ಲರನ್ನೂ ಸಂಶಯಿಸುವ ಮತ್ತು ಸಣ್ಣ ಕಾರಣಕ್ಕೂ ದೊಡ್ಡ ರಂಪ ಮಾಡಿ ಸಂಬಂಧಗಳನ್ನೇ ಕಳೆದುಕೊಳ್ಳುವ ಮನೋಭಾವ. ಆಕೆ ಎಷ್ಟು ಜಗಳಗಂಟಿಯೆಂದರೆ ಯಾರೂ ಆಕೆಯ ಬಳಿ ಸುಳಿಯುತ್ತಿರಲಿಲ್ಲ. ಹಾಗಾಗಿ ಆಕೆ ಸದಾ ಏಕಾಂಗಿ. ಸದಾ ಖಿನ್ನತೆ. ಒಮ್ಮೆ ಖಿನ್ನತೆಯ ತುತ್ತತುದಿಯಲ್ಲಿದ್ದಾಗ ಎತ್ತರದ ಕಟ್ಟಡದ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ದುರದೃಷ್ಟ ಆಕೆ ಸಾಯಲಿಲ್ಲ.
ತೀವ್ರ ಪೆಟ್ಟಾಗಿ ದೇಹದ ಕೆಳಭಾಗ ಚಲನೆಯ ಶಕ್ತಿಯನ್ನೇ ಕಳೆದುಕೊಂಡುಬಿಟ್ಟಿತು. ಯಾವಾಗಲೂ ಗಾಲಿ ಚಕ್ರದ ಗಾಡಿಯಲ್ಲೇ ಕುಳಿತಿರಬೇಕಿತ್ತು. ತನ್ನ ಪರಿಸ್ಥಿತಿಯ ಬಗ್ಗೆ ಗಾಢವಾಗಿ ಚಿಂತಿಸುತ್ತಿದ್ದರು. ಒಮ್ಮೆ ಆಕೆ ‘ದೇವರೆಷ್ಟು ನಿಷ್ಕರುಣಿ!’ ಎಂದುಕೊಳ್ಳುತ್ತ ಮಲಗಿದರು.
ಕನಸಿನಲ್ಲಿ ದೇವರು ಬಂದು ‘ನಿನ್ನ ಪರಿಸ್ಥಿತಿಗೆ ನೀನೇ ಕಾರಣಕರ್ತಳು. ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ನಿನ್ನ ದೇಹ ನೆಟ್ಟಗಿತ್ತು. ಮನಸ್ಸು ಸೊಟ್ಟಗಿತ್ತು. ಈಗ ನಿನ್ನ ಮನಸ್ಸು ನೆಟ್ಟಗಾಗಿದೆ. ಆದರೆ ದೇಹ ಸೊಟ್ಟಗಾಗಿದೆ. ಈಗಲೂ ನೀನು ಪ್ರಯತ್ನಿಸಿದರೆ ಸರಿಯಾದ ಜೀವನ ನಡೆಸಬಹುದು’ ಎಂದಂತಾಯಿತು. ಆಕೆ ನಿದ್ದೆಯಿಂದೆದ್ದು ಇದರ ಬಗ್ಗೆ ಬಹಳ ಯೋಚಿಸಿದಳು. ತನ್ನ ಮನೋಭಾವ ಬದಲಿಸಿಕೊಂಡಳು.
ಸಿಟ್ಟು, ಸಿಡುಕು, ಸಂಶಯಗಳನ್ನು ನಿಧಾನವಾಗಿ ಕಡಿಮೆ ಮಾಡಿಕೊಂಡಳು. ಸದಾ ಗಾಲಿಕುರ್ಚಿಯಲ್ಲೇ ಕುಳಿತು ಕೊಂಡಿದ್ದರೂ 2 ವರ್ಷಗಳಲ್ಲಿ ಆಕೆಯ ವ್ಯವಹಾರ, ಸಂಸಾರ ಎಲ್ಲವೂ ಸುಸೂತ್ರಗೊಂಡವು. ಇದಾದ ನಂತರ ಆಕೆಗೆ ತನ್ನ ಹಾಗೆಯೇ ಸ್ವಭಾವದ ವೈಪರ್ಯತೆಯಿಂದ ಬಳಲುತ್ತಿರುವವರಿಗೆ ಏಕೆ ಸಹಾಯ ಮಾಡಬಾರದು ಎಂದೆನಿಸಿತು. ಆಕೆ ಮೇಲಿನ ಜಾಹೀರಾತನ್ನು ಕೊಟ್ಟು ತನ್ನ ಸಮಯವನ್ನು ಸದುಪಯೋಗ ಮಾಡಿಕೊಳ್ಳತೊಡಗಿದಳು. ಟೆಲಿಫೋನ್ ಮಾಡಿದವರಿಗೆಲ್ಲ ಪರಿಹಾರ ಸಿಗದಿದ್ದರೂ, ತಮ್ಮ ಸಮಸ್ಯೆಯನ್ನು ಮತ್ತೊಬ್ಬರು ತಾಳ್ಮೆಯಿಂದ ಕೇಳಿಸಿಕೊಂಡ ಸಮಾಧಾನ ಅವರಿಗಾಗುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಈ ‘ಕೇಳುವಿಕೆ’ ಸಾಯಲು ಹೊರಟವರನ್ನು ಬದುಕಿಸಿದೆಯೆಂದು ಬಲ್ಲವರು ಹೇಳುತ್ತಾರೆ.
(ಕೇಳಿದ್ದು) ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ