ದೇಹ ವಿಡಂಬನೆ

ದೇಹ ವಿಡಂಬನೆ

ಖ್ಯಾತ ತತ್ವ ಶಾಸ್ತ್ರಜ್ಞ ಲಿಯೋ ಟಾಲ್ ಸ್ಟಾಯ್ ಜೊತೆ, ವೈವಾಹಿಕ ಜೀವನದ ಹೊಸ್ತಿಲಿನ ಒಂದು ದಿನ ಅವರ ಪತ್ನಿ ಸೊಫಿಯಾ ಮಾತನಾಡುತ್ತಾ, “ನಮಗೆ ಹುಟ್ಟುವ ಮಗುವಿಗೆ ನನ್ನ ರೂಪ ಮತ್ತು ನಿಮ್ಮ ಜಾಣ್ಮೆಯಿರಬೇಕಲ್ಲವೇ?” ಎಂದರಂತೆ. ಲಿಯೋ ಟಾಲ್ ಸ್ಟಾಯ್ ಅಷ್ಟೇ ಹಗುರವಾಗಿ ಗಹಗಹಿಸಿ ನುಗುತ್ತಾ, “ಒಂದೊಮ್ಮೆ ನನ್ನ ರೂಪ ಮತ್ತು ನಿನ್ನ ಜಾಣ್ಮೆಯನ್ನು ಭಗವಂತ ನಮ್ಮ ಮಗುವಿಗೆ ಅನುಗ್ರಹಿಸಿದರೆ....!” ಎಂದು ಹೇಳಿದರಂತೆ. ಯಾಕೆ ಈ ಅಂತೆ ಕಂತೆ ಎಂದು ಯೋಚಿಸದಿರಿ. 

ಸೋಫಿಯಾ ಬಹಳ ಸೊಗಸುಗಾತಿ, ಸ್ಫುರದ್ರೂಪಿ. ಎಲ್ಲರನ್ನೂ ಸೆಳೆಯುವ ಸೌಂದರ್ಯ ರಾಶಿ. ಆದರೆ ಸ್ವಲ್ಪ ನಿಧಾನ ಮತಿ. ಲಿಯೋ ಟಾಲ್ ಸ್ಟಾಯ್ ಜಗದೇಕ ಸುಂದರನಲ್ಲ. ಒರಟು ಮುಖ, ಕಪ್ಪು ದೇಹ, ಕೆದರಿದ ಕೂದಲು, ಎಂದರೆ ಅಷ್ಟೊಂದು ಸುರೂಪಿಯಲ್ಲ. ಆದರೆ ಮಹಾ ಮೇಧಾವಿ. ರಷ್ಯನ್ ಮೇರು ಕಾದಂಬರಿಕಾರ, ಮನುಜ ಸ್ವಭಾವವೇ ಹಾಗೆ. ಇದು ಅವನ ದೌರ್ಬಲ್ಯವೂ ಇರಬಹುದು. 

ಸುಂದರ ದೇಹಕ್ಕೆ ಮಾತ್ರವೇ ಗೌರವ, ಊನ ದೇಹ ಅಥವಾ ಊನರೂಪಿಗಳ ಬಗ್ಗೆ ತಾತ್ಸಾರ. ಮನುಜನ ಈ ನೋಟ ಆತನ ವ್ಯಕ್ತಿತ್ವವನ್ನು ಮಂದಗೊಳಿಸುತ್ತದೆ. ಬಹಳ ತೆಳ್ಳಗೆ ಉದ್ದನೆಯಿದ್ದರೆ “ಕೋಲು ದೂಮ”, “ಲಂಬೂ”, ಎಂದು ವಿಡಂಬನೆ ಮಾಡುವರು. ಅವನಿಗೆ ಸುರಂಗ ತೋಡಲು ಕಷ್ಟವಾಗಬಹುದು. ದೇವರ ಕೋಣೆಗೆ ಹೋಗುವಾಗ ಎಷ್ಟು ಬಾರಿ ‘ಮಂಡೆ’ಗೆ ಗಾಯವಾಗಿದೋ ಎನೋ ಪಾಪ!’ ಎಂದು ಹಂಗಿಸುವರು. ಪಪ್ಪಾಯಿ ಕೊಯಿಲಿಕ್ಕೆ ಲಾಯಕ್ಕು ಮನುಷ್ಯ, ದೋಟಿಯೇ ಬೇಡ!. ಏಳಡಿ ತನಕ ಏಣಿ ಬೇಡ.. ಹೀಗೆ ನಾನಾ ಶೈಲಿಯಲ್ಲಿ ಉಲಿಯುವ ಕೆಟ್ಟ ಗುಣ ಹಲವರಲ್ಲಿದೆ. ಕುಳ್ಳಗಿದ್ದರೆ ಐಆರ್8, ಬಟ್ಟೆ ಭಾರಿ ಕಮ್ಮಿ ಸಾಕು, ಮೇಜು ಹತ್ತಿ ಕುಳಿತುಕೊಳ್ಳಲು ಬಹಳ ಕಷ್ಟ ಆಗಬಹುದು. ಸೆಲೂನ್ ಕುರ್ಚಿ ಹತ್ತಿಸಲು ಜನ ಬೇಕೇ ಬೇಕು, ಸ್ವಿಚ್ ಹಾಕಲು ಕೂಡಾ ಎತ್ತರದ ಮಣೆಯಿಡಬೇಕಪ್ಪ ಎಂದು ಕುಳ್ಳರಿಗೆ ಗೇಲಿ ತಪ್ಪಿದ್ದಲ್ಲ. ಕೆಲವರು ಪದದ ಅರ್ಥವರಿಯದೆ ‘ಕುಂಟ’ ಎಂಬ ವಿಪರೀತ ನಾಮಧೇಯದಿಂದ ಕುಳ್ಳರನ್ನು ಗುರುತಿಸುವುದೂ ಇದೆ. ಕುಂಟನೆಂದು ಕುಳ್ಳನನ್ನು ಹೆಳವನನ್ನಾಗಿಸುವ ಮಹಾ ಬುದ್ಧಿವಂತರಿಗೆ ಭಾಷೆ ಕಲಿಸುವುದಾದರೂ ಯಾರು? 

ಬೆನ್ನು ಬಾಗಿದವನನ್ನು, ಕಾಲು ಬಗ್ಗಿಸಿ ನಡೆಯುವವನ್ನು, ಮೂಗು ತಿರುಚಿರುವವನ್ನು, ಓರೆ ದೃಷ್ಟಿಯುಳ್ಳವರನ್ನು, ಬಹಳ ಬಿಳಿಯಿದ್ದವರನ್ನು, ತಲೆ ಬೋಳಾದವರನ್ನು, ಜುಟ್ಟು(ಶಿಖೆ) ಇರುವವರನ್ನು ಗುರುತಿಸುವಾಗ ಜನರು ಅನುಸರಿಸುವ ಕ್ರಮಗಳು ನೋವನ್ನುಂಟು ಮಾಡುತ್ತದೆ. ದೈಹಿಕ ಊನತೆ ಅಥವಾ ಸಂರಚನೆಗಳನ್ನು ಆಧರಿಸಿ ಹೆಸರಿಡುವ ಮೂಲಕ ನಾವು ಬಿಟ್ಟಿ “ಅಪ್ಪ” ಆಗ ಬೇಕೇಕೆ?

ದೇಹವು ಸೃಷ್ಟಿಯ ಕೊಡುಗೆ. ಭಗವಂತನ ಲೀಲೆ. ಸೃಷ್ಟಿಯು ಸಮ ಪ್ರಮಾಣದ ಸಾಮರ್ಥ್ಯ, ಬುದ್ಧಿ ಮತ್ತೆಗಳನ್ನು ಪ್ರತಿಯೊಬ್ಬನಿಗೂ ನೀಡಿರುತ್ತದೆ. ವಕ್ರವಾಗಿ ಬೆಳೆದ ತರಕಾರಿಗಳಿಗೆ ರುಚಿಯೇನೂ ಕಮ್ಮಿಯಿರದು. ದೇಹದಲ್ಲಿ ವಿಕಲತೆ ಅಥವಾ ಕುರೂಪವಿರುವವರೆಲ್ಲರೂ ಅಸಾಧಾರಣ ಕಾರ್ಯಕ್ಷಮತೆ ಹೊಂದಿರುವುದನ್ನು ನೋಡುತ್ತಿದ್ದೇವೆ. ಮಹಾ ಸಾಧಕರಾಗಿ ಮೆರೆಯುವ ಅಸಂಖ್ಯ ಊನ ದೇಹಿಗಳು ನಮ್ಮ ಸುತ್ತ ಮುತ್ತ, ಕೆಲವೊಮ್ಮೆ ನಮ್ಮೊಂದಿಗೆಯೇ ಇದ್ದಾರೆ. ಆದುದರಿಂದ ದೇಹದ ಸ್ವರೂಪ ಗೇಲಿಗೊಳಗಾಗಬಾರದು. ಗೇಲಿ ಮಾಡುವವರು ಮುಂದೊಂದು ದಿನ ಯಾವುದಾದರೂ ಅಪಘಾತಗಳಿಗೆ ಸಿಲುಕಿ ವಿಕಲಾಂಗರಾಗಬಾರದೆಂದಿಲ್ಲವಲ್ಲ! ಆದುದರಿಂದ ದೇಹದ ಆಕಾರ, ಗಾತ್ರ, ವರ್ಣ, ನ್ಯೂನತೆಗಳನ್ನು ಗಮನಿಸದೆ ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಮನ್ನಣೆ ಕೊಡುವುದನ್ನು ಅರಿತಿರಬೇಕು. ಋಣಾತ್ಮಕ ಭಾವನೆ ಬೇಡ. ಧನಾತ್ಮಕವೇ ಆಗಿರೋಣ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ