ದೈತ್ಯನ ಎರಡು ಚಿನ್ನದ ತಲೆಗೂದಲು

ದೈತ್ಯನ ಎರಡು ಚಿನ್ನದ ತಲೆಗೂದಲು

ಒಬ್ಬ ಕಟ್ಟಿಗೆ ಒಡೆಯುವವನ ಪತ್ನಿ ಒಂದು ಗಂಡುಮಗುವಿಗೆ ಜನ್ಮವಿತ್ತಳು. ಮರುದಿನ ಒಬ್ಬಳು ಮಂತ್ರವಾದಿ ಹೆಂಗಸು ಆ ಮಗುವನ್ನು ನೋಡಿ, “ಈ ಮಗು ಸಮರ್ಥ ಯುವಕನಾಗಿ ಬೆಳೆಯುತ್ತದೆ. ಅನಂತರ ರಾಜನ ಮಗಳನ್ನು ಮದುವೆಯಾಗಿ ರಾಜ್ಯವನ್ನು ಆಳುತ್ತದೆ." ಎಂದಳು.

ತಾಯಿಗೆ ಬಹಳ ಸಂತೋಷವಾಯಿತು. ಅವಳು ಈ ಸಂಗತಿಯನ್ನು ಸಿಕ್ಕಸಿಕ್ಕವರಿಗೆಲ್ಲ ಹೇಳಿದಳು. ಕೊನೆಗೆ ಇದು ರಾಜನಿಗೂ ತಿಳಿದಾಗ ಅವನಿಗೆ ಭಾರೀ ಸಿಟ್ಟು ಬಂತು. ಆ ಮಗುವನ್ನು ಈಗಲೇ ಕೊಲ್ಲಬೇಕೆಂದು ನಿರ್ಧರಿಸಿದ ರಾಜ, ತನ್ನ ಸೈನಿಕರೊಂದಿಗೆ ಕಟ್ಟಿಗೆ ಕಡಿಯುವವನ ಮನೆಗೆ ಬಂದ. ಅವನು ಮಗುವನ್ನು ಕಿತ್ತುಕೊಂಡು, ಒಂದು ಪೆಟ್ಟಿಗೆಯಲ್ಲಿ ಹಾಕಿ, ಹತ್ತಿರದ ನದಿಗೆ ಎಸೆದ.

ಅದೃಷ್ಟವಶಾತ್ ಆ ಪೆಟ್ಟಿಗೆ ಒಬ್ಬ ಗಿರಣಿ ಮಾಲೀಕನಿಗೆ ಸಿಕ್ಕಿತು. ಆ ಪೆಟ್ಟಿಗೆಯಿಂದ ಮಗು ಅಳುತ್ತಿರುವ ಸದ್ದು ಕೇಳಿದ ಆತ ಅದನ್ನು ನೀರಿನಿಂದ ಎತ್ತಿ, ದಡಕ್ಕೆ ತಂದ. ಅದರೊಳಗಿದ್ದ ಮಗುವನ್ನು ಮನೆಗೊಯ್ದು, ಟಾಮ್ ಎಂದು ಹೆಸರಿಟ್ಟು ಸಾಕಿದ.

ಇಪ್ಪತ್ತು ವರುಷಗಳ ನಂತರ, ಟಾಮ್ ಸುಂದರಾಂಗ ಯುವಕನಾಗಿ ಬೆಳೆದಿದ್ದ. ಅದೊಂದು ದಿನ ರಾಜ ಬೇಟೆಯಾಡುತ್ತಾ ಆ ಜಾಗಕ್ಕೆ ಬಂದ. ಗಿರಣಿ ಮಾಲೀಕನ ಮನೆಗೆ ವಿಶ್ರಾಂತಿಗಾಗಿ ರಾಜ ಭೇಟಿಯಿತ್ತ. ಟಾಮ್ ಮಗುವಾಗಿದ್ದಾಗ ನದಿಯಲ್ಲಿ ಒಂದು ಪೆಟ್ಟಿಗೆಯಲ್ಲಿ ಸಿಕ್ಕಿದ್ದನ್ನು ಗಿರಣಿ ಮಾಲೀಕ ತಿಳಿಸಿದ. ರಾಜನಿಗೆ ತಕ್ಷಣವೇ ತಾನು ಕಟ್ಟಿಗೆ ಒಡೆಯುವವನ ಮಗುವನ್ನು ನದಿಗೆ ಎಸೆದದ್ದು ನೆನಪಾಯಿತು. ಆತ ಪೆಚ್ಚಾದ. ನಂತರ ಒಂದು ಪತ್ರ ಬರೆದು, ಕವರಿಗೆ ಹಾಕಿ, ತನ್ನ ಮುದ್ರೆಯೊತ್ತಿ, ಅದನ್ನು ರಾಣಿಗೆ ತಲಪಿಸಬೇಕೆಂದು ಟಾಮ್‌ನ ಕೈಗಿತ್ತ. ಆ ಪತ್ರದಲ್ಲಿ ಟಾಮ್‌ನನ್ನು ತಕ್ಷಣವೇ ಕೊಂದು ಬಿಡಬೇಕೆಂದು ರಾಜ ಬರೆದಿದ್ದ.

ರಾಜನ ಪತ್ರ ತಗೊಂಡು ಅರಮನೆಗೆ ಪ್ರಯಾಣಿಸಿದ ಟಾಮ್. ಆತ ಕಾಡನ್ನು ಹಾದು ಹೋಗುವಾಗ ಕತ್ತಲಾಯಿತು. ದಣಿದಿದ್ದ ಟಾಮ್ ಅಲ್ಲೊಂದು ಮನೆ ಕಂಡು, ರಾತ್ರಿ ಮಲಗಲಿಕ್ಕಾಗಿ ಒಂದು ಮಂಚ ಒದಗಿಸಬೇಕೆಂದು ವಿನಂತಿಸಿದ. ಅದು ಕಳ್ಳಕಾಕರು ವಾಸ ಮಾಡುತ್ತಿದ್ದ ಮನೆ. ಟಾಮ್ ನಿದ್ದೆ ಮಾಡಿದಾಗ ಅವರು ಅವನ ಜೇಬನ್ನು ತಡಕಾಡಿದರು. ರಾಜನ ಪತ್ರವನ್ನು ಒಡೆದು ಓದಿದ ಅವರಿಗೆ ಟಾಮ್ ಬಗ್ಗೆ ಕನಿಕರ ಮೂಡಿತು. ಅವರ ನಾಯಕ ರಾಜನ ಹೆಸರಿನಲ್ಲಿ ಇನ್ನೊಂದು ಪತ್ರ ಬರೆದ. ಅದರಲ್ಲಿ ರಾಜಕುಮಾರಿಯೊಂದಿಗೆ ತಕ್ಷಣ ಟಾಮ್‌ನ ಮದುವೆ ನೆರವೇರಿಸಬೇಕೆಂದು ಬರೆದ. ಅದನ್ನು ರಾಜನ ಮುದ್ರೆಯಿದ್ದ ಕವರಿನೊಳಗೆ ಹಾಕಿ, ಟಾಮ್‌ನ ಜೇಬಿನಲ್ಲಿ ಇಟ್ಟರು.

ಮರುದಿನ ಟಾಮ್ ಅರಮನೆ ತಲಪಿ, ಆ ಪತ್ರವನ್ನು ರಾಣಿಗೆ ಕೊಟ್ಟ. ತಕ್ಷಣವೇ ರಾಜಕುಮಾರಿಯೊಂದಿಗೆ ಅವನ ಮದುವೆ ಮಾಡಲಿರುವುದಾಗಿ ರಾಣಿ ಹೇಳಿದಾಗ ಅವನಿಗೆ ಸಂತೋಷವಾಯಿತು. ಸುರಸುಂದರಿ ರಾಜಕುಮಾರಿಯನ್ನು ಕಂಡಾಗಲಂತೂ ಅವನ ಸಂತೋಷಕ್ಕೆ ಪಾರವೇ ಇಲ್ಲ. ರಾಜಕುಮಾರಿಗೂ ಸುಂದರಾಂಗ ಟಾಮ್ ಜೊತೆ ಮದುವೆ ಎಂದಾಗ ಖುಷಿಯಾಯಿತು.

ಕೆಲವು ದಿನಗಳ ನಂತರ ರಾಜ ಅರಮನೆಗೆ ಮರಳಿದಾಗ, ಟಾಮ್ ಜೊತೆ ರಾಜಕುಮಾರಿಯ ಮದುವೆ ಆಗಿತ್ತು. ರಾಜನಿಗೆ ತಲೆ ಕೆಟ್ಟು ಹೋಯಿತು. ಆದರೆ ಅವನು ತನ್ನ ಅಳಿಯನನ್ನು ಕೊಲ್ಲುವಂತಿರಲಿಲ್ಲ. ಆದ್ದರಿಂದ ಕುತಂತ್ರದಿಂದ ಟಾಮ್‌ನನ್ನು ಮುಗಿಸಿ ಬಿಡಲು ಯೋಜಿಸಿದ. ಅದೊಂದು ದಿನ ಟಾಮ್‌ನಿಗೆ ರಾಜ ಆದೇಶಿಸಿದ, "ನನ್ನ ನಂತರ ರಾಜನಾಗ ಬೇಕಾದರೆ, ಧೈರ್ಯ ಸಾಹಸಗಳನ್ನು ಸಾಬೀತು ಮಾಡಬೇಕು. ಅದಕ್ಕಾಗಿ ನೀನು ಕರಿ ಪರ್ವತದ ದೈತ್ಯನ ಎರಡು ತಲೆಕೂದಲುಗಳನ್ನು ತರಬೇಕು.” ಟಾಮ್ ಧೈರ್ಯದಿಂದ ಕರಿ ಪರ್ವತಕ್ಕೆ ಪ್ರಯಾಣ ಹೊರಟ. ಅವನೆಂದೂ ಮರಳುವುದಿಲ್ಲವೆಂದು ರಾಜ ಸಂತೋಷದಿಂದಿದ್ದ.

ಒಂದು ವಾರ ಪ್ರಯಾಣ ಮಾಡಿದ ಟಾಮ್ ಒಂದು ಪಟ್ಟಣ ತಲಪಿದ. ಅಲ್ಲಿನ ಜನರೆಲ್ಲ ಚಿಂತೆಯಲ್ಲಿದ್ದರು. ಕಾರಣ ಏನೆಂದು ಟಾಮ್ ವಿಚಾರಿಸಿದ. ಕೊನೆಗೊಬ್ಬ ಮುದುಕ ಹೇಳಿದ, "ನಮ್ಮ ಪಟ್ಟಣದಲ್ಲೊಂದು ಕಾರಂಜಿಯಿದೆ. ಅದರಿಂದ ರೋಗಗಳನ್ನು ಗುಣ ಪಡಿಸುವ ನೀರು ಚಿಮ್ಮುತ್ತಿತ್ತು. ಆದರೆ ಈಗ ಎರಡು ವಾರಗಳಿಂದ ಆ ನೀರು ಚಿಮ್ಮುತ್ತಿಲ್ಲ. ಇದಕ್ಕೆ ಕಾರಣವೇನೆಂದು ತಿಳಿದು ನೀನು ಹೇಳಿದರೆ ಎಲ್ಲರಿಗೂ ಸಂತೋಷವಾಗುತ್ತದೆ.” ಕಾರಣ ತಿಳಿಯಲು ತಾನು ಪ್ರಯತ್ನಿಸುತ್ತೇನೆಂದ ಟಾಮ್.
ಟಾಮ್ ಮುಂದೆ ಸಾಗಿ ಒಂದು ದೊಡ್ಡ ನದಿಯ ದಡ ತಲಪಿದ. ಅದರಾಚೆಗಿತ್ತು ಕರಿ ಪರ್ವತ. ಅಲ್ಲೊಂದು ಗವಿಯಲ್ಲಿ ದೈತ್ಯ ವಾಸ ಮಾಡುತ್ತಿದ್ದ. ಆ ನದಿ ದಾಟಲಿಕ್ಕಾಗಿ ಟಾಮ್ ದೋಣಿಗೆ ಕಾದ. ದೋಣಿ ಬಂದಾಗ ಅದರ ಅಂಬಿಗ ಚಿಂತೆಯಲ್ಲಿ ಮುಳುಗಿದ್ದ. ಅದಕ್ಕೆ ಕಾರಣ ಏನೆಂದು ಟಾಮ್ ಕೇಳಿದ. “ಜೀವಮಾನವಿಡೀ ಅಂಬಿಗನಾಗಿ ಇರಬೇಕೆಂದು ಶಾಪವಿದ್ದರೆ ಚಿಂತೆಯಾಗದೆ ಇರುತ್ತದೆಯೇ? ಈ ಶಾಪದಿಂದ ವಿಮೋಚನೆ ಹೇಗೆಂದು ನನಗೆ ತಿಳಿಸಿದರೆ ನಿನಗೆ ಉಡುಗೊರೆ ಕೊಡ್ತೇನೆ” ಎಂದ ಅಂಬಿಗ. ಅದನ್ನು ತಿಳಿಯಲು ತಾನು ಪ್ರಯತ್ನಿಸುತ್ತೇನೆಂದ ಟಾಮ್.

ನಂತರ ಟಾಮ್ ನದಿ ದಾಟಿ, ಪರ್ವತವೇರಿ ಗವಿಗೆ ಹೋದ. ಅಲ್ಲಿ ದೈತ್ಯನ ಪತ್ನಿ ಇದ್ದಳು. ಟಾಮ್ ತಕ್ಷಣವೇ ಅಲ್ಲಿಂದ ಹೋಗಬೇಕೆಂದೂ ಇಲ್ಲವಾದರೆ ದೈತ್ಯ ಬಂದಾಗ ಟಾಮ್‌ನನ್ನು ತಿಂದೇ ಬಿಡುತ್ತಾನೆಂದೂ ಅವಳು ಬೇಡಿಕೊಂಡಳು. ತನಗೇನು ಬೇಕೆಂದು ಟಾಮ್ ಅವಳಿಗೆ ತಿಳಿಸಿದ. ಅಂತೂ ಅವಳು ಟಾಮ್‌ನಿಗೆ ಸಹಾಯ ಮಾಡಲು ಒಪ್ಪಿದಳು. ದೈತ್ಯ ಬಂದಾಗ ಆತನಿಗೆ ಟಾಮ್‌ನ ವಾಸನೆ ಬರಬಾರದೆಂದು ಅವನನ್ನು ಒಂದು ದೊಡ್ಡ ಡ್ರಮ್ಮಿನಲ್ಲಿ ಅಡಗಿಸಿಟ್ಟಳು.

ಅವತ್ತು ಸಂಜೆ ದೈತ್ಯ ಹಿಂತಿರುಗಿದಾಗ, ಪತ್ನಿ ಅವನಿಗೆ ಹೊಟ್ಟೆ ತುಂಬ ಭೋಜನ ನೀಡಿದಳು. ಅನಂತರ ದೈತ್ಯ ನಿದ್ದೆ ಮಾಡುವ ವರೆಗೆ ಕಾದಿದ್ದ ಪತ್ನಿ ಮೆಲ್ಲನೆ ಹೋಗಿ ಅವನ ಒಂದು ಚಿನ್ನದ ತಲೆಗೂದಲನ್ನು ಕಿತ್ತಳು. ದೈತ್ಯ ಬೊಬ್ಬೆ ಹಾಕುತ್ತಾ ನಿದ್ದೆಯಿಂದೆದ್ದ. “ನಿಮಗೆ ತೊಂದರೆ ಮಾಡಿದೆ. ರೋಗಗಳನ್ನು ಗುಣಪಡಿಸುವ ನೀರು ಚಿಮ್ಮುತ್ತಿದ್ದ ಕಾರಂಜಿಯಿಂದ ಈಗ ನೀರು ಚಿಮ್ಮದಿರಲು ಕಾರಣವೇನೆಂದು ಹೇಳುವಿರಾ?" ಎಂದು ಕೇಳಿದಳು. "ಅಷ್ಟೇನಾ? ಆ ಕಾರಂಜಿಯ ತಳದಲ್ಲಿ ಒಂದು ದೊಡ್ಡ ಕಪ್ಪೆ ಕುಳಿತಿದೆ. ಅದನ್ನು ಕೊಂದರೆ ಕಾರಂಜಿಯಿಂದ ಪುನಃ ನೀರು ಚಿಮ್ಮುತ್ತದೆ” ಎಂದು ಉತ್ತರಿಸಿದ.

ದೈತ್ಯ ಪುನಃ ನಿದ್ದೆ ಹೋದಾಗ, ಪತ್ನಿ ಮೆಲ್ಲನೆ ಹೋಗಿ ಅವನ ಇನ್ನೊಂದು ಚಿನ್ನದ ತಲೆಗೂದಲನ್ನು ಕಿತ್ತಳು. ಈಗ ಆತ ಅಬ್ಬರಿಸುತ್ತಾ ಎದ್ದ. "ಪುನಃ ನಿಮಗೆ ತೊಂದರೆ ಮಾಡಿದೆ. ಈ ಪರ್ವತದ ಬುಡದಲ್ಲಿರುವ ನದಿ ದಾಟಿಸುವ ಅಂಬಿಗ ತನ್ನ ದೋಣಿಯಿಂದ ಬಿಡುಗಡೆಯಾಗಲು ಏನು ಮಾಡಬೇಕು?” ಎಂದು ಕೇಳಿದಳು.

“ಅಷ್ಟೇ ತಾನೇ? ಅವನು ಯಾವಾಗ ತನ್ನ ಹುಟ್ಟನ್ನು ಒಬ್ಬ ಪ್ರಯಾಣಿಕನಿಗೆ ಕೊಡುತ್ತಾನೆಯೋ ಆಗಲೇ ಅವನಿಗೆ ದೋಣಿಯಿಂದ ಬಿಡುಗಡೆ" ಎಂದು ಉತ್ತರಿಸಿದ ದೈತ್ಯ ಮತ್ತೆ ನಿದ್ದೆ ಹೋದ. ಆತ ಗೊರಕೆ ಹೊಡೆಯಲು ಶುರು ಮಾಡಿದಾಗ, ಅವನ ಪತ್ನಿ ಟಾಮ್‌ನನ್ನು ಡ್ರಮ್ಮಿನಿಂದ ಹೊರ ಬರಲು ಹೇಳಿದಳು. ಅವಳು ಅವನಿಗೆ ಎರಡು ಚಿನ್ನದ ತಲೆಗೂದಲು ಕೊಟ್ಟು, ಸಮಸ್ಯೆಯ ಉತ್ತರಗಳನ್ನೂ ತಿಳಿಸಿ ಕಳಿಸಿ ಕೊಟ್ಟಳು.

ನದಿ ದಡಕ್ಕೆ ಧಾವಿಸಿದ ಟಾಮ್ ದೋಣಿಯಲ್ಲಿ ನದಿ ದಾಟಿದ. ದೋಣಿಯಿಂದ ಇಳಿಯುತ್ತಾ ಅಂಬಿಗನಿಗೆ ಹೇಳಿದ, “ನಿನ್ನ ಹುಟ್ಟನ್ನು ಯಾವಾಗ ಪ್ರಯಾಣಿಕನಿಗೆ ಕೊಡುತ್ತೀಯೋ ಆವಾಗ ನಿನಗೆ ಶಾಪವಿಮೋಚನೆ.” ಅಂಬಿಗ ಕೃತಜ್ನತೆಯಿಂದ ಟಾಮ್‌ನಿಗೆ ನೂರು ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ಕೊಟ್ಟ.

ಅನಂತರ ಆ ಪಟ್ಟಣ ತಲಪಿದ ಟಾಮ್ ಅಲ್ಲಿನ ಮುದುಕನಿಗೆ ಕಾರಂಜಿಯಿಂದ ಪುನಃ ನೀರು ಚಿಮ್ಮಬೇಕಾದರೆ ಅದರ ತಳದ ಕಪ್ಪೆಯನ್ನು ಕೊಲ್ಲಬೇಕೆಂದು ತಿಳಿಸಿದ. ಅಲ್ಲಿನ ಜನರು ಹಾಗೆಯೇ ಮಾಡಿದಾಗ ಕಾರಂಜಿಗೆ ಮರುಜೀವ. ಅವರೆಗೆಲ್ಲ ಬಹಳ ಸಂತೋಷವಾಯಿತು. ಅವರೂ ಟಾಮ್‌ನಿಗೆ ಇನ್ನೂರು ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ಕೊಟ್ಟರು.

ಅನಂತರ ಅರಮನೆಗೆ ಹಿಂತಿರುಗಿದ ಟಾಮ್. ಪೆಚ್ಚಾದ ರಾಜನಿಗೆ ತಾನು ತಂದ ಚಿನ್ನದ ನಾಣ್ಯಗಳನ್ನು ತೋರಿಸಿದ. ನದಿಯ ಆ ದಡದಲ್ಲಿ ಇನ್ನಷ್ಟು ಚಿನ್ನದ ನಾಣ್ಯಗಳಿವೆ; ತನಗೆ ಹೆಚ್ಚು ತರಲಾಗಲಿಲ್ಲ ಎಂದು ತಿಳಿಸಿದ. ರಾಜ ದುರಾಶೆಯಿಂದ ತಕ್ಷಣ ಅಲ್ಲಿಗೆ ಹೊರಟ. ಅವನನ್ನು ದೋಣಿಯಲ್ಲಿ ನದಿ ದಾಟಿಸಿದೊಡನೆ ಅಂಬಿಗ ಹುಟ್ಟನ್ನು ರಾಜನ ಕೈಗೆ ಕೊಟ್ಟ. ಅಂಬಿಗನಿಗೆ ಶಾಪ ವಿಮೋಚನೆ ಆಯಿತು. ರಾಜ ಆ ದೋಣಿಯ ಅಂಬಿಗನಾಗಿ ಅಲ್ಲೇ ಸಿಲುಕಿಕೊಂಡ. ಇತ್ತ ಟಾಮ್ ರಾಜಕುಮಾರಿಯೊಂದಿಗೆ ಸುಖಸಂತೋಷದಿಂದ ಬಾಳಿದ.