ದೈನಂದಿನ ಚಟುವಟಿಕೆಗಳ ಭಾಗವಾಗಲಿ ವಿಶ್ವ ಪರಿಸರ ದಿನ
ಇಂದು ಜೂನ್ ೫, ವಿಶ್ವ ಪರಿಸರ ದಿನ. ಪರಿಸರ ದಿನವನ್ನು ವರ್ಷದಲ್ಲಿ ಒಂದು ದಿನ ನೆನಪಿಸಿಕೊಳ್ಳುವುದು, ಕಾಟಾಚಾರಕ್ಕೆ ಗಿಡ ನೆಡುವುದು, ಉದ್ದುದ್ದ ಭಾಷಣ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಗಿಡ ಮರ ಹಾಗೂ ಪರಿಸರದ ಫೋಟೋಗಳನ್ನು ಹಾಕಿ ಶುಭಾಷಯ ಕೋರುವುದಕ್ಕೆ ಸೀಮಿತವಾಗಬಾರದು. ಪ್ರತಿಯೊಂದು ದಿನ ಪರಿಸರ ದಿನವಾಗಬೇಕು. ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಬೇಕು. ಪ್ರತೀ ದಿನ ನಾವು ಹೇಗೆ ನಮ್ಮ ದಿನಚರಿಯನ್ನು ರೂಪಿಸಿಕೊಳ್ಳುತ್ತೇವೋ ಹಾಗೆಯೇ ಪರಿಸರವನ್ನು ಸಂರಕ್ಷಿಸಲೂ ಸಮಯ ಮೀಸಲಿಡಬೇಕಾದದ್ದು ಅತ್ಯಂತ ಅಗತ್ಯ.
ವಿಶ್ವದ ಬಹಳಷ್ಟು ನಗರಗಳು ಈಗ ಸ್ವಚ್ಚ ಗಾಳಿ, ನೀರಿಗಾಗಿ ಹಾತೊರೆಯುತ್ತಿವೆ ಎಂದು ಸಂಶೋಧನಾ ವರದಿಗಳು ಹೇಳುತ್ತಿವೆ. ನಮಗೆ ಕುಡಿಯಲು ಶುದ್ಧ ನೀರು, ಉಸಿರಾಡಲು ಶುದ್ಧ ಗಾಳಿ ಇಲ್ಲದೇ ಇದ್ದಲ್ಲಿ ನಾವು ಮುಂದಿನ ಪೀಳಿಗೆಗೆ ಏನನ್ನು ಉಳಿಸಿ ಹೋಗುತ್ತೇವೆ? ಯೋಚಿಸಬೇಕಾದ ಸಂಗತಿ.
ವಾಯು ಮಾಲಿನ್ಯ, ಜಲ ಮಾಲಿನ್ಯ, ಜಾಗತಿಕ ತಾಪಮಾನ ಹೆಚ್ಚಳ ಹಾಗೂ ಜನಸಂಖ್ಯಾ ಸ್ಫೋಟಗಳು ನಮ್ಮ ಬದುಕನ್ನು ಅಸಹನೀಯವನ್ನಾಗಿಸಿವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯು ೧೯೭೪ರಲ್ಲಿ ಜೂನ್ ೫ ತಾರೀಖನ್ನು ವಿಶ್ವ ಪರಿಸರ ದಿನ ಎಂದು ಆಚರಿಸುವ ನಿರ್ಧಾರಮಾಡಿತು. ಅದರಂತೆ ಪ್ರತೀ ವರ್ಷ ಈ ದಿನದಂದು ವಿಶ್ವದಾದ್ಯಂತ ಪರಿಸರ ಸಂರಕ್ಷಣೆಯ ಬಗ್ಗೆ ಮಾತುಕತೆಗಳು, ಚರ್ಚ್ಗಳು ಆಗುತ್ತಿವೆ. ಕೋವಿಡ್ ೧೯ ಯಾವಾಗ ನಮ್ಮ ವಿಶ್ವವನ್ನು ಕಾಡಲು ಶುರುವಾಯಿತೋ ಆವಾಗದಿಂದ ಪರಿಸರ ಬಹಳಷ್ಟು ಶುದ್ಧವಾಗುತ್ತಿದೆ. ಜನರ ಆರೋಗ್ಯದ ಮೇಲೆ ಕೊರೋನಾ ಮಹಾಮಾರಿ ಪರಿಣಾಮ ಬೀರಲು ಪ್ರಾರಂಭಿಸಿದರೂ ಲಾಕ್ ಡೌನ್ ಎಂಬ ಸರಕಾರದ ನಿರ್ಧಾರದಿಂದ ಜನರ ಓಡಾಟ, ವಾಹನಗಳ ಬಳಕೆ ಕಡಿಮೆ ಆಗಿ ವಾಯು, ಜಲ ಶುದ್ಧವಾಗಿದೆ. ಈಗ ನಮ್ಮಲ್ಲಿ ಶುದ್ಧ ಪರಿಸರವಿದೆ, ಗಾಳಿಯಿದೆ ಆದರೆ ನಾವು ಮಾಸ್ಕ್ ಹಾಕಿ ತಿರುಗಾಡುತ್ತಿದ್ದೇವೆ ಎಂಬುದು ಬದುಕಿನ ವಿಡಂಬನೆಯಲ್ಲವೇ?
ಆದರೂ ಕೊರೋನಾ ಹಿನ್ನಲೆಯಲ್ಲಿ ನಾವಿಂದು ಪರಿಸರಕ್ಕೆ ಮಹತ್ವ ನೀಡಲೇ ಬೇಕಿದೆ. ಬಹುತೇಕ ಕಾಯಿಲೆಗಳು ನಮ್ಮ ವಾಯು, ಜಲ ಮಾಲಿನ್ಯಗಳ ದಿಸೆಯಿಂದಲೇ ಬರುತ್ತವೆ. ನಾವು ನೀರನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸೊಳ್ಳೆಗಳ ಕಾಟ ಕಡಿಮೆ ಆಗಿ ಅದರಿಂದ ಬರುವ ಬಹುತೇಕ ರೋಗಗಳೇ ಮಾಯವಾಗುತ್ತವೆ. ಹಾಗೆಯೇ ವಾತಾವರಣವು ಪರಿಶುದ್ಧವಾದರೆ ನಮಗೆ ವಾಯು ಮಾಲಿನ್ಯದಿಂದ ಬರುವ ಉಸಿರಾಟದ ತೊಂದರೆ, ಅಸ್ತಮಾ ಮುಂತಾದ ಕಾಯಿಲೆಗಳು ದೂರ ಓಡಿ ಹೋಗುತ್ತವೆ.
ನಮ್ಮ ವಿಶ್ವಕ್ಕೆ ಒದಗಿದ ಇನ್ನೊಂದು ಕಂಟಕವೆಂದರೆ ಏರುತ್ತಿರುವ ತಾಪಮಾನ. ಇದರ ಪರಿಣಾಮ ನಮಗೆ ಈಗಾಗಲೇ ಕಾಣಿಸತೊಡಗಿವೆ. ಹಿಮದ ಬೆಟ್ಟಗಳು ಕರಗಲಾರಂಬಿಸಿವೆ. ಇದರಿಂದ ಸಮುದ್ರ ಮಟ್ಟ ಏರುತ್ತದೆ. ಇದೆಲ್ಲಾ ನಮ್ಮ ಪರಿಸರದ ಮೇಲೆ ತೀವ್ರತರವಾದ ಪರಿಣಾಮಗಳನ್ನು ತೋರಿಸುತ್ತದೆ.
ಒಂದು ರೀತಿಯಲ್ಲಿ ನಾವು ಬದುಕುತ್ತಿರುವ ವಾತಾವರಣ ನಮ್ಮ ಹಿರಿಯರು ನಮಗೆ ಕೊಟ್ಟ ಸಾಲ. ಈ ಸಾಲವನ್ನು ನಾವು ಪರಿಸರವನ್ನು ಶುದ್ಧವಾಗಿ ಇರಿಸುವುದರ ಮೂಲಕ ತೀರಿಸಬೇಕು ಮತ್ತು ಗಿಡಗಳನ್ನು ನೆಡುವುದರ ಮೂಲಕ ಬಡ್ಡಿಯನ್ನೂ ಕೊಡಬೇಕು. ಹೀಗೆ ಮಾಡುವುದರಿಂದ ನಾವು ತೀರಿಸುತ್ತಿರುವ ಸಾಲವು ನಮ್ಮ ಮುಂದಿನ ಪೀಳಿಗೆ ಬರುವ ಸಮಯಕ್ಕೆ ಕಮ್ಮಿಯಾಗುತ್ತದೆ. ಇದರಿಂದ ಪರಿಸರವೂ ಸಂರಕ್ಷಣೆಯಾಗುತ್ತದೆ. ನಾವು ನಮ್ಮ ಐಷಾರಾಮ ಜೀವನಕ್ಕಾಗಿ ಪರಿಸರವನ್ನು ನಾಶ ಮಾಡಿದ್ದೇವೆ. ನಮ್ಮಲ್ಲಿ ಈಗ ಸಮಯಕ್ಕೆ ಸರಿಯಾಗಿ ಮಳೆ-ಬೆಳೆಯಾಗುತ್ತಿಲ್ಲ. ಏನೇ ಬೆಳೆದರೂ ಅದಕ್ಕೆ ಕೀಟ, ಹುಳಗಳ ಹಾವಳಿ. ರಾಸಾಯನಿಕಗಳ ಸಿಂಪಡಣೆಯಿಂದ ಕೀಟಗಳು ಸತ್ತರೂ ಅದು ನಮ್ಮ ಆಹಾರ ಪದಾರ್ಥಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾಯಿಲೆಗಳು ನಮ್ಮ ಮನೆಯೊಳಗೇ ಬಂದು ತಲುಪಿವೆ. ಮೊದಲು ೬೦ ವರ್ಷಗಳ ನಂತರ ಬರುತ್ತಿದ್ದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮುಂತಾದ ಕಾಯಿಲೆಗಳು ಈಗ ೪೦ರ ಪ್ರಾಯದಲ್ಲೇ ವಕ್ಕರಿಸಲಾರಂಭಿಸಿವೆ. ನಮ್ಮ ಆಹಾರ, ದೈನಂದಿನ ಚಟುವಟಿಕೆಗಳು ಆರೋಗ್ಯಕ್ಕೆ ಪೂರಕವಾಗಿಲ್ಲ. ನಾವು ಪರಿಸರದ ಮೇಲೆ ನಡೆಸುವ ದೌರ್ಜನ್ಯವು ನಮ್ಮನ್ನು ಇನ್ನಷ್ಟು ಕೆಟ್ಟ ದಿನಗಳಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ.
ನಾವು ಈಗಲೇ ಎಚ್ಚರಗೊಳ್ಳೋಣ. ಪರಿಸರವನ್ನು ಚೆನ್ನಾಗಿಸಲು ಇನ್ನಷ್ಟು ಗಿಡಗಳನ್ನು ನೆಡುವ ಮತ್ತು ಅದನ್ನು ಸಂರಕ್ಷಿಸೋಣ. ಸಾಧ್ಯವಾದಷ್ಟು ಮರುಬಳಕೆಯ ಸಾಮಗ್ರಿಗಳನ್ನು ಖರೀದಿಸೋಣ. ಪ್ಲಾಸ್ಟಿಕ್ ವಸ್ತುಗಳ ಉಪಯೋಗವನ್ನು ಅತ್ಯಂತ ಕನಿಷ್ಟ ಮಟ್ಟದಲ್ಲಿ ಮಾಡುವ. ಸೌರ ಶಕ್ತಿ ಮತ್ತು ಗಾಳಿಯ ಶಕ್ತಿಯ ಬಳಕೆ ಮಾಡುವ. ಮನೆಯಲ್ಲಿನ ಜೈವಿಕ ತ್ಯಾಜ್ಯಗಳನ್ನು ಸಂಸ್ಕರಿಸಿ ನಮ್ಮ ಮನೆಯ ಹೂದೋಟ ಅಥವಾ ತರಕಾರಿ ತೋಟಗಳಿಗೆ ಬಳಸುವ. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಚೀಲಗಳು, ತಟ್ಟೆ, ಲೋಟಗಳಿಗೆ ವಿದಾಯ ಹೇಳುವ. ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಜಲವನ್ನು ಮರುಪೂರಣ ಮಾಡುವ, ಮಳೆ ನೀರನ್ನು ಇಂಗುಗುಂಡಿಗಳಿಗೆ ಹೋಗುವಂತೆ ಮಾಡೋಣ. ಹೀಗೆ ಇನ್ನೂ ಹಲವಾರು ಪರಿಸರ ಸ್ನೇಹಿ ನಡೆಯಿಂದ ನಾವು ನಮ್ಮ ಬದುಕನ್ನು ಸಹನೀಯಗೊಳಿಸಬಹುದು.
ನೆನಪಿಡಿ ಗೆಳೆಯರೇ, ನಮಗಿರುವುದು ಒಂದೇ ಭೂಮಿ. ಅದರ ಪರಿಸರವನ್ನು ನಾವು ಚೆನ್ನಾಗಿ ಇಟ್ಟರೆ ಅದು ನಮ್ಮನ್ನು ಮತ್ತು ನಮ್ಮ ಮುಂದಿನ ಪೀಳಿಗೆಯನ್ನು ಸ್ವಸ್ಥವನ್ನಾಗಿ ಇರಿಸುತ್ತದೆ. ಬನ್ನಿ ಪರಿಸರ ದಿನವನ್ನು ಪ್ರತೀ ದಿನ ಆಚರಿಸೋಣ.
ಚಿತ್ರ ಕೃಪೆ: ಅಂತರ್ಜಾಲ