ದೈವ ನರ್ತಕರಿಗೆ ಮಾಶಾಸನ ಸ್ವಾಗತಾರ್ಹ
ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವವರ ಪೈಕಿ ೬೦ ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ೨೦೦೦ ರೂ. ಗಳ ಮಾಶಾಸನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಈ ಮೂಲಕ ರಾಜ್ಯ ಸರ್ಕಾರ ಸನಾತನ ಹಿಂದು ಸಂಸ್ಕೃತಿಯ ರಕ್ಷಕರಾಗಿರುವ ದೈವನರ್ತಕರ ಬದುಕಿಗೊಂದು ಭದ್ರತೆಯ ಭರವಸೆ ನೀಡಿದಂತಾಗಿದೆ.
ಸನಾತನ ಹಿಂದು ಸಂಸ್ಕೃತಿಯ ಸಮಗ್ರತೆಯಲ್ಲಿ ಮಹತ್ವದ ಭಾಗವಾಗಿರುವ ದೈವಾರಾಧನೆಯ ಬಗ್ಗೆ ಕೆಲವು ಎಡಪಂಥೀಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕುಹಕವಾಡುತ್ತಿರುವಾಗಲೇ ಕರ್ನಾಟಕ ಸರಕಾರ ಇಂತಹ ಒಂದು ಉತ್ತಮ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ತೆರೆಕಂಡ "ಕಾಂತಾರ" ಚಲನಚಿತ್ರ ನೋಡಿದ ಬಳಿಕ, ಆ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಹಿರಿಯ ನರ್ತಕರಿಗೆ ಮಾಶಾಸನ ನೀಡುವಂತಾಗಬೇಕು ಎಂಬ ಜನಾಭಿಪ್ರಾಯ ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ ಎಂಬುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿರುವುದು ಸರಿಯಾಗಿಯೇ ಇದೆ.
ಪೂಜೆ- ಆರಾಧನಾ ವೈವಿಧ್ಯಗಳನ್ನು ಹೊಂದಿರುವ ಅತ್ಯಂತ ವಿಶಾಲವಾದ ಸನಾತನ ಹಿಂದು ಸಂಸ್ಕೃತಿಯ ಹಿರಿಮೆಯೇ ಅನನ್ಯವಾದದ್ದು. ಇದು ಪ್ರತಿಯೊಬ್ಬ ಹಿಂದುವಿನಲ್ಲಿ ಅಭಿಮಾನ ಮೂಡಿಸಬೇಕಾಗಿದೆ. ದೈವ- ದೇವರು ಎಂಬ ಭೇದ ಚಿಂತನೆ ನಮ್ಮದಲ್ಲ. ಬದಲಿಗೆ ಅದು ನಮ್ಮ ಸಮಗ್ರ ಚಿಂತನೆ ಎಂಬುದು ಗಮನಾರ್ಹ. ಕಲ್ಲು, ಮಣ್ಣು, ಮರ, ಪ್ರಾಣಿ.. ಹೀಗೆ ನಮಗೆ ಬದುಕಿಗೆ ಆಧಾರವಾಗಿರುವ ಪ್ರಕೃತಿಯನ್ನು ಸಮಗ್ರವಾಗಿ ಆರಾಧಿಸುವ ಸನಾತನ ಸಂಸ್ಕೃತಿಯ ಭವ್ಯತೆ ನಮ್ಮದು. ನಿಜವಾದ ಬಹುತ್ವ ಎಂದರೆ ಇದುವೇ. ಆದರೆ ಏಕ ಸಿದ್ಧಾಂತ ಪ್ರೇರಿತ ಚಿಂತನೆಗಳಿಗೆ ಬಹುತ್ವದ ಸನಾತನ ಹಿಂದೂ ಸಂಸ್ಕೃತಿ ಏಕತ್ವವಾಗಿ ತಮ್ಮ ಏಕವಾದಿ ಸರ್ವಾಧಿಕಾರಿ ಚಿಂತನೆ ಬಹುತ್ವವಾಗಿ ಕಾಣುತ್ತಿರುವುದು ಅಂತಹ ಚಿಂತನೆಗಳ ಬಗ್ಗೆ ಭಾರತೀಯರು ಈಗಲಾದರೂ ಎಚ್ಚರಗೊಳ್ಳಬೇಕಿದೆ.
ದುರದೃಷ್ಟವಶಾತ್ ೧೨೦೦ ವರ್ಷಗಳ ವಿದೇಶಿ ಆಕ್ರಮಣ ಮತ್ತು ಮೆಕಾಲೆ ಹುನ್ನಾರದಿಂದಾಗಿ ದೃಷ್ಟಿ ಸಮಗ್ರತೆಯೇ ನಾಶವಾಗಿಬಿಟ್ಟಿದೆ. ಆದಕಾರಣ ಸಹಜವಾಗಿಯೇ ವಿಕೃತಿ ಮತ್ತು ವಿಸ್ಮೃತಿ ನಮ್ಮನ್ನು ಆವರಿಸಿದೆ. ಇದರಿಂದ ನಮ್ಮದೇ ಧರ್ಮ, ಸಂಸ್ಕೃತಿ, ಸಮಾಜ, ರಾಷ್ಟ್ರೀಯ ಮಹತ್ತನ್ನು ಅರ್ಥಮಾಡಿಕೊಳ್ಳಲಾರದ ನತದೃಷ್ಟರು ನಾವಾಗಿದ್ದೇವೆ. ಭಾರತೀಯರು ಇನ್ನು ಕೆಲವೇ ಸಮಯದಲ್ಲಿ ಬಣ್ಣದಲ್ಲಿ ಮಾತ್ರವೇ ಭಾರತೀಯರಾಗಿದ್ದು., ಬುದ್ಧಿಯಲ್ಲಿ ಭಾರತೀಯತೆಯನ್ನು ವಿರೋಧಿಸುವವರು ಆಗಿರುತ್ತಾರೆ ಎಂಬ ಮೆಕಾಲೆಯ ಭವಿಷ್ಯವಾಣಿ ಎಡಪಂಥೀಯ ವಿಕಾರವಾದಿಗಳ ವಾದಗಳಲ್ಲಿ ಸಾಕಾರಗೊಳ್ಳುತ್ತಿರುವುದನ್ನು ನಾವಿಂದು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ.
ಇತ್ತೀಚೆಗೆ ತೆರೆಕಂಡ ಕಾಂತಾರ ಚಲನಚಿತ್ರ ಸನಾತನ ಹಿಂದು ಸಂಸ್ಕೃತಿಯ ಔನ್ನತ್ಯವನ್ನು ಎತ್ತಿಹಿಡಿದು ಜನ ಪ್ರೀತಿ ಗಳಿಸಿರುವಂತೆಯೇ, ಇನ್ನೊಂದೆಡೆ ಎಡಪಂಥೀಯ ಶಕ್ತಿಗಳ ವಿಕೃತಿಯೂ ಬಯಲಿಗೆ ಬರಲು ಕಾರಣವಾಗಿರುವುದು ವಿಶೇಷ. ದೈವಾರಾಧನೆ ಮತ್ತು ದೈವಗಳ ಕುರಿತಂತೆ ಶುದ್ಧವಾದ ಅರಿವನ್ನು ಚಲನಚಿತ್ರದ ಮೂಲಕ ಜನತೆಯ ಮುಂದಿಟ್ಟ ರಿಷಬ್ ಶೆಟ್ಟಿ ಬಳಗದ ಪ್ರಯತ್ನಕ್ಕೆ ಬಾರಿ ಯಶಸ್ಸು ಲಭಿಸುತ್ತಿರುವ ಅಂತೆಯೇ ಎಡಪಂಥೀಯ ಶಕ್ತಿಗಳ ಅಸಹನೆ ಯಾವ್ಯಾವುದೋ ರೂಪದಲ್ಲಿ ಬಹಿರಂಗವಾಗುತ್ತಿದೆ. ಭೂತಾರಾಧನೆ, ದೈವಾರಾಧನೆಯನ್ನು ಮೂಢನಂಬಿಕೆ ಎಂದು ನಿಂದಿಸಿ ಅವಹೇಳನ ಬಯ್ಯುತ್ತಿದ್ದ ಎಡಪಂಥೀಯ ಶಕ್ತಿಗಳು, ಬಳಿಕ ದೇವರು- ದೈವದ ನಡುವೆ ಭೇದ ಕಲ್ಪಿಸಲು ಮುಂದಾದವು. ಈಗ ದೈವಾರಾಧನೆ ವಿಷಯವನ್ನು ಟೀಕಿಸಲು ಧೈರ್ಯ ಸಾಲದೆ ಬೇರೊಂದು ದಾರಿ ಕಂಡುಕೊಂಡಿದ್ದಾರೆ. ಮದುವೆ ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಪ್ರಚುರಪಡಿಸುವುದು ಇವರ ಹೊಸ ಹುನ್ನಾರ.!
ಈ ಎಲ್ಲಾ ಅಪಸವ್ಯಗಳು ವ್ಯಕ್ತವಾಗುತ್ತಿರುವುದು ಪರಿಣಾಮದಲ್ಲಿ ಒಳಿತೇ ಆಗಿದೆ. ಯಾಕೆಂದರೆ ಸನಾತನ ಹಿಂದುಗಳಲ್ಲಿ ವಿಸ್ಮೃತಿಯ ಪೊರೆಯನ್ನು ಕಳಚಿ ಸತ್ಯದ ಅರಿವು ಮೂಡಲು ಮತ್ತು ಹೋಗಿದ್ದ ಸಮಗ್ರ ದೃಷ್ಟಿಯನ್ನು ಮರಳಿ ಹೊಂದಲು ಇದು ನೆರವಾಗುತ್ತದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೧-೧೦-೨೦೨೨