ದೊಡ್ಡವರಿಗಾಗಿ ಮಕ್ಕಳ ಹಾಡು "ನಾಯಿಮರಿ, ನಾಯಿಮರಿ, ತಿಂಡಿಬೇಕೆ?"

ದೊಡ್ಡವರಿಗಾಗಿ ಮಕ್ಕಳ ಹಾಡು "ನಾಯಿಮರಿ, ನಾಯಿಮರಿ, ತಿಂಡಿಬೇಕೆ?"

ಬರಹ

(ಒಂದ್ನಿಮಿಷ: ಇದೊಂದು ಹಾಸ್ಯಕ್ಕೆಂದು ಬರೆದ ಅಣಕವಾಡು. ರಾಜಕಾರಣಿಗಳಲ್ಲೂ ಪ್ರಾಮಾಣಿಕರು, ಧೀಮಂತರು, ಉತ್ತಮ ನಾಯಕರು, ದೇಶಭಕ್ತರು ಇರುತ್ತಾರೆ. ಇದು ಅಂಥವರನ್ನು ಉದ್ದೇಶಿಸಿ ಬರೆದಿದ್ದಲ್ಲ. ಬರಿದೇ ತಿಂದು-ತೇಗುವ ಪುಢಾರಿಗಳು ಇದರ ಗುರಿ. ಎಲ್ಲ ರಾಜಕಾರಣಿಗಳೂ ಪ್ರಾಮಾಣಿಕರೇ ಅನ್ನುವುದು ನಿಮ್ಮ ಅನಿಸಿಕೆಯಾದಲ್ಲಿ, ಇದು ಯಾರನ್ನೂ ಉದ್ದೇಶಿಸಿದ್ದಲ್ಲ, ಕೇವಲ ಕಾಲ್ಪನಿಕ ಅಂತಂದುಕೊಂಡು ಓದಿ!):

ಜಿ.ಪಿ.ರಾಜರತ್ನಂ ಅವರ "ನಾಯಿಮರಿ, ನಾಯಿಮರಿ" ಹಾಡಿನ ಮೊದಲ ನಾಲ್ಕು ಸಾಲುಗಳು:

ನಾಯಿಮರಿ, ನಾಯಿಮರಿ, ತಿಂಡಿ ಬೇಕೆ?
ತಿಂಡಿ ಬೇಕು, ತೀರ್ಥ ಬೇಕು, ಎಲ್ಲ ಬೇಕು.
ನಾಯಿಮರಿ, ನಿನಗೆ ತಿಂಡಿ ಯಾಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು.

ಅದನ್ನೇ ಅನುಸರಿಸಿ, ಅದೇ ಧಾಟಿಯಲ್ಲಿ ಒಂದು ಅಣಕವಾಡು (ರಾಜರತ್ನಂ ಅವರ ಕ್ಷಮೆ ಕೋರಿ):

ಓ ಪುಢಾರಿ, ಓ ಪುಢಾರಿ, ಓಟು ಬೇಕೆ?
ಓಟು ಬೇಕು, ಸೀಟು ಬೇಕು, ಎಲ್ಲ ಬೇಕು.
ಓ ಪುಢಾರಿ ನಿನಗೆ ಸೀಟು ಯಾಕೆ ಬೇಕು?
ಸೀಟಿನಲ್ಲಿ ಕೂತು ಹಣವ ಬಾಚಬೇಕು!

ಓ ಪುಢಾರಿ, ನಿನಗೆ ಎಷ್ಟು ಕೋಟಿ ಬೇಕು?
ನೂರೋ, ಇನ್ನೂರೋ ಕೋಟಿ ಆದ್ರೆ ಸಾಕು.
ಓ ಪುಢಾರಿ, ಅಷ್ಟು ಹಣ ಯಾಕೆ ಬೇಕು?
ಇನ್ನು ನೂರು ವರ್ಷ ಕೂತು ತಿನ್ನಬೇಕು!

ಓ ಪುಢಾರಿ, ಜನರಿಗೆಲ್ಲ ತೊಂದ್ರೆ ಅಲ್ವಾ?
ಜನರ ಚಿಂತೆ ನಿಂಗೆ ಯಾಕೋ, ಕೆಲ್ಸ ಇಲ್ವ?
ಓ ಪುಢಾರಿ, ಮುಂದೆ ನಿಂಗೆ ಓಟು ಸಿಕ್ಕಲ್ಲ;
ನಂಗೂ ಗೊತ್ತು, ಅದ್ಕೆ ಈಗ್ಲೆ ತಿಂತೀನಲ್ಲ!