ದೊಡ್ಡವರ ದಾರಿ ...................10
" ಈಗ್ಗೆ 25 ವರ್ಷಗಳ ಹಿಂದಿನ ಮಾತು. ಒಂದು ದಿನ ಕೊಲ್ಕೊತ್ತ ನಗರದ ಒಂದು ದಾರಿಯಲ್ಲಿ ಒಬ್ಬನೇ ನಡೆದು ಹೋಗುತಿದ್ದೆ, ನನ್ನ ಎದುರು ಬದಿಯಿಂದ ಒಂದು ಬಾಲಕಿಯೊಬ್ಬಳು ಬರುತ್ತಿದ್ದಳು. ಅವಳು ಏಕೋ ನನ್ನ ಸೆಳೆದಳು. ಅವಳ ಮುಖ ನಿಸ್ತೆಜವಾಗಿತ್ತು, ಬಹಳ ಬಳಲಿದ್ದಳು, ಪ್ರಾಯಶಃ ತುಂಬಾ ಹಸಿದಿರಬೇಕೆಂದು ನನಗೆ ಅನ್ನಿಸತೊಡಗಿತು. ಈಗ ಈ ಬಾಲಕಿಗೆ ಏನಾದರು ಕೊಡಬೇಕೆಂದು ಅನ್ನಿಸತೊಡಗಿತು. ನನ್ನ ಕೋಟಿನ ಜೇಬಿಗೆ ಕೈ ಇಳಿಬಿಟ್ಟೆ, ಒಂದು ಬಿಸ್ಕುತ್ತ್ ಇತ್ತು. ಅದನ್ನೇ ಆ ಬಾಲಕಿಗೆ ಕೊಟ್ಟೆ. ಅವಳು ತಕ್ಷಣ ತಿನ್ನಲಿಲ್ಲ, ಅವಳು ಬಂದ ದಾರಿಯಲ್ಲೇ ಹಿಂದೆ ನಡೆದಳು. ಇವಳ ನಡತೆ ಆಶ್ಚರ್ಯ ತರಿಸಿತು. ಅವಳನ್ನೇ ನೋಡುತ್ತಾ ನಾನು ನಿಧಾನ ನಡೆದೆ. ಸ್ವಲ್ಪ ದೂರ ಸಾಗಿದ ಮೇಲೆ ಒಂದು ಬಡಕಲು ನಾಯಿಯ ಹತ್ತಿರ ಹೋಗಿ ಇದ್ದ ಒಂದು ಬಿಸ್ಕುತ್ತ್ನಲ್ಲಿ ಅರ್ಧವನ್ನು ಆ ನಾಯಿಗೆ ಕೊಟ್ಟು ಇನ್ನರ್ಧವನ್ನು ತಾನು ತಿಂದಳು. "
ಈ ಘಟನೆ ನನ್ನ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಪ್ರಸಿದ್ದ ಕಾದಂಬರಿಕಾರ ಫ್ರಾನ್ಸಿನ ಡಾಮಿನಿಕ್ ಲಾಪಿಯರ್ " A Thousand Suns " ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. " ಒಂದು ಪುಟ್ಟ ಬಾಲಕಿ ತನ್ನ ಹಸಿವಿನ ನಡುವೆಯೂ ತನ್ನ ನಾಯಿಯನ್ನು ತನ್ನಂತೆ ಬಗೆದ ಈ ಘಟನೆ ನನ್ನ ಹೃದಯ ಕಲಕಿತು. ಪ್ರತಿಕೂಲ ಪರಿಸ್ತಿತಿಯಲ್ಲೂ ಧಾರಾಳತನ ತೋರುವ ಭಾರತೀಯರ ಬಗ್ಗೆ ನನಗೆ ಗೌರವ ಭಾವನೆ ಮೂಡಿತು. ಈ ಘಟನೆ ನನ್ನನ್ನು ವಿಶಾಲವಾಗಿ ಚಿಂತಿಸುವಂತೆ ಮಾಡಿತು." ಎನ್ನುತ್ತಾರೆ.
ಈ ಪುಸ್ತಕ ಮಾರಾಟದಿಂದ ಬಂದ ಗೌರವ ಧನ ಸುಮಾರು ಏಳು ಕೋಟಿ ರೂಪಾಯಿಗಳು. ಈ ಹಣವನ್ನು ಪಶ್ಚಿಮ ಬಂಗಾಳದ ಸುಂದರ ಬನ್ಸ್ ದ್ವೀಪದ ಜನರ ಉಪಯೋಗಕ್ಕಾಗಿ ಬಳಸಿದರು. ಈ ದ್ವೀಪ ಸಮೂಹದಲ್ಲಿ 57 ಸಣ್ಣ ಸಣ್ಣ ದ್ವೀಪಗಲ್ಲಿ ಸುಮಾರು 10 ಲಕ್ಷ ಜನ ವಾಸಿಸುತ್ತಾರೆ. ಇಲ್ಲಿನ ಜನಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆಯನ್ನು ಮನಗೊಂಡ ಲಾಪಿಯರ್ ಒಂದು ದೊಡ್ಡ ದೋಣಿಯನ್ನು ಕೊಂಡು ಅದರಲ್ಲಿ ನಾಲ್ಕಾರು ವೈದ್ಯರು, ಆರೆಂಟು ದಾದಿಯರು ಇರುವ ಒಂದು 25 ಜನರ ತಂಡವನ್ನು ಸಜ್ಜುಗೊಳಿಸಿದರು. ಈ ತಂಡ ದ್ವೀಪದಿಂದ ದ್ವೀಪಕ್ಕೆ ಸಂಚರಿಸಿ, ಬೇಕಾದ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದ್ದಾರೆ. ಈವರೆಗೆ 50000 ಕ್ಕೂ ಹೆಚ್ಚು ರೋಗಿಗಳಿಗೆ ಔಷದೊಪಚಾರ ಕೊಟ್ಟಿದೆ, ಸಾವಿರಾರು ಶಸ್ತ್ರ ಚಿಕಿತ್ಸೆ ನಡೆಸಿದೆ. ಒಂದು ಸಾರ್ಥಕ ಮಾನವೀಯ ಸೇವೆ ಮಾಡುತ್ತಿದೆ.
ಇಂತಹ ಮಹನೀಯರ ಸೇವೆಯನ್ನು ಗುರುತಿಸುವ ಜವಾಬ್ದಾರಿ ಸರ್ಕಾರ ಮಾಡಬೇಕು. ಲಾಪಿಯರ್ ಮಾತ್ರ ಯಾವುದಕ್ಕೂ ತಲೆಕೆಡೆಸಿ ಕೊಳ್ಳದೆ ದಕ್ಷಿಣ ಫ್ರಾನ್ಸ್ ನಲ್ಲಿ ತನ್ನ ಚಿಕ್ಕ ಸಂಸಾರದೊಂದಿಗೆ ಬದುಕುತ್ತಿದ್ದಾರೆ. ಇಂತಹವರ ದಾರಿ ವಿಶಾಲ ಮತ್ತು ನೇರ.