ದೊಡ್ಡವರ ದಾರಿ ....................11

ದೊಡ್ಡವರ ದಾರಿ ....................11

 

 

                      ತಮಿಳು ನಾಡಿನ ಕಂಚಿ ಕಾಮಾಕ್ಷಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ?       ಅದೇ ಕಾಮಾಕ್ಷಿ ದೇವಸ್ಥಾನದ    ಸಮೀಪವಿರುವ ಕಂಚಿಮಠದ ಶ್ರೀ ಶ್ರೀ ಚಂದ್ರಶೇಖರೆಂದ್ರ ಸರಸ್ವತಿ ಮಹಾಸ್ವಾಮಿಗಳು, ಕಂಚಿ ಪರಮಾಚಾರ್ಯರೆಂದೆ ಪ್ರಸಿದ್ಧಿಯಾದವರು.  100 ವರ್ಷಗಳ ಕಾಲದ ಇವರ  ಜೀವಿತಾವಧಿಯಲ್ಲಿ 90 ವರ್ಷಗಳ ಕಾಲ  ಭಗವನ್ನಾಮ ಚಿಂತನೆಯಲ್ಲಿ ಸಾಧನೆಮಾಡಿದ ಮಹಾ ಪುರುಷರು. ಜಾತಿ, ಮತ, ಪಂಥಗಳ ಜಿಜ್ಞಾಸೆಗಳಿಂದ ಆಚೆ ಉಳಿದು ಮಾನವೀಯತೆಯಲ್ಲಿ ದೇವರನ್ನು ಕಂಡ ಪ್ರತ್ಯಕ್ಷದರ್ಶಿಗಳು.  ಇವರು ಮೌನಧಾರಣೆಯಲ್ಲೇ  ಹೆಚ್ಚು ವರ್ಷಗಳ ಕಾಲ ಇದ್ದವರು. ಈ ಸಮಯದಲ್ಲಿ ಹಲವಾರು ಗಣ್ಯರು ಬಂದು ಇವರ ದರ್ಶನಮಾತ್ರದಿಂದಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.   ಇವರ ದರ್ಶನಕ್ಕಾಗಿಯೇ ಭಕ್ತರು ದೇಶವಿದೇಶಗಳಿಂದ ಬರುತ್ತಿದ್ದರು.

 

                 ಕಂಚಿ ಮಠದ ಪಕ್ಕದಲ್ಲೇ ಸುಮಾರು 300 ಕ್ಕೂ ಹೆಚ್ಚು ವರ್ಷ ಹಳೆಯ ಮಸೀದಿ ಇದೆ.  ಮಠಕ್ಕೂ, ಮಸೀದಿಗೂ ಪ್ರತಿ ನಿತ್ಯ ಸಹಸ್ರಾರು ಮಂದಿ ಬರುತ್ತಿದ್ದರು. ವಾಹನ ನಿಯಂತ್ರಿಸುವುದೇ ದಿನ ನಿತ್ಯದ ಸಮಸ್ಯೆಯಾಗಿತ್ತು.  ಎರಡು ಧರ್ಮಾನುಯಾಯಿಗಳಿಗೆ ಕಿರಿಕಿರಿಯಾಗುತ್ತಿತ್ತು. ಎರಡೂ ಧರ್ಮದವರಿಗೆ  ಒಂದು ಪರಿಹಾರದ ಅವಶ್ಯಕತೆ ಇತ್ತು. ಇದಕ್ಕೆ ಮಠವು ಹೊಸ ಜಾಗದಲ್ಲಿ ಮಸೀದಿಯನ್ನು ಪುನರ್ನಿರ್ಮಿಸಿ ಕೊಡಬೇಕೆಂಬ ಪ್ರಸ್ತಾಪವೂ  ಬಂತು.  ಈ ವಿಚಾರ ಕಂಚಿ ಪರಮಾಚಾರ್ಯರ ಕಿವಿಗೂ  ಮುಟ್ಟಿತು.  ಪರಮಾಚಾರ್ಯರು ಇದನ್ನು ತೀರ್ವವಾಗಿ ವಿರೋಧಿಸುತ್ತಾ " ನಿಜ ಹೇಳಬೇಕೆಂದರೆ ಬೆಳಗಿನಜಾವದ ಮಸೀದಿಯ ನಮಾಜ್ ಕರೆ,  ನನ್ನ ದೈನಂದಿನ ಪ್ರಾರ್ಥನೆಗೂ ಎಚ್ಚರಗೊಳಿಸುವ ಕರೆಯೇ ಆಗಿದೆ. ಅದು ಇದ್ದಲ್ಲೇ ಇರಲಿ  " ಎಂದರು. ಮಸೀದಿಯ ಸ್ಥಳಾಂತರಕ್ಕೆ ಪರಮಾಚಾರ್ಯರು  ಸುತರಾಂ ಒಪ್ಪಲೇ ಇಲ್ಲ.  ಮೌನವ್ರತವನ್ನು ಕೈಗೊಂಡುಬಿಟ್ಟರು.  ಕೊನೆಗೆ ಮಸೀದಿ ಸ್ಥಳಾಂತರದ ನಿರ್ಧಾರವನ್ನೇ ಕೈಬಿಡಲಾಯಿತು.