ದೊಡ್ಡವರ ದಾರಿ................13

ದೊಡ್ಡವರ ದಾರಿ................13

 

 

 

            ಈಗ್ಗೆ 30 ವರ್ಷಗಳ ಹಿಂದಿನ ಮಾತು. ಆಗ ಇಂಜಿನೀಯರಿಂಗ್ ಮಾಡುತ್ತಿದ್ದ ಸಮಯ. ಮದರಾಸಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಹಿರಿಯ ವಿಧ್ಯಾರ್ಥಿ ನೆನಪಿನ ಗಂಟನ್ನು ಬಿಚ್ಚಿ ಹಂಚಿಕೊಂಡ ಸ್ವಾರಸ್ಯಕರ ಪ್ರಸಂಗ ಇದು. 

 

           ಆಗ ಮದರಾಸಿನಲ್ಲಿ ನೀರಿಗೆ ಬಹಳ ಪರದಾಡುತ್ತಿದ್ದ ಒಂದು ಬೇಸುಗೆಯ ತಿಂಗಳು. ಆ ದಿನಗಳಲ್ಲಿ ನಾವಿದ್ದ ಹಾಸ್ಟೆಲ್ಲಿನಲ್ಲಿ ನೀರಿನ ಸಮರ್ಪಕ ಸರಬರಾಜು ಇಲ್ಲದೆ ಕಷ್ಟವಾಗುತ್ತಿತ್ತು. ಇದಕ್ಕೆ ಬೇರೆ ಏನು ಉಪಾಯವಿರಲಿಲ್ಲ. ಪರ್ಯಾಯ ವ್ಯವಸ್ಥೆಯೊಂದೆ ಉಳಿದ ಮಾರ್ಗವಾಗಿತ್ತು.  ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯು ಚಿಂತನೆ ನಡೆಸಿತ್ತು. ಆದರೆ, ನಮ್ಮ ಯುವಕ ಮನಸ್ಸು ಇದನ್ನೆಲ್ಲಾ ಯೋಚಿಸುವ ಗೊಡವೆಗೆ ಹೋಗದೆ, " ನೀರು ಇಲ್ಲ, ಕೊಡಿ ಅಷ್ಟೇ" ಎನ್ನುವ ಧೋರಣೆಯಲ್ಲಿ ಮಾತನಾಡುತ್ತಿದ್ದೆವು.  ಆದರು ಹಾಸ್ಟೆಲ್ಲಿನವರು ಹೇಗೋ ನೀರನ್ನು ಒದಗಿಸುತ್ತಿದ್ದರು. 

 

           ಒಂದು ದಿನ ನೀರಿಗೆ ಬಹಳ ತಾಪತ್ರಯವಾಗಿ ಬೆಳಗಿನಿಂದಲೂ ನೀರು ಇಲ್ಲವಾಯಿತು.  ಹುಡುಗರಿಗೆ ನೀರಿಲ್ಲದೆ ಕಷ್ಟವಾಯಿತು.  ಎಲ್ಲ ಹುಡುಗರು ಒಂದು ಕಡೆ ಸೇರಿ ಎಲ್ಲರು ಟವೆಲ್ ಉಟ್ಟು ಬರಿ ಬನಿಯನ್ ತೊಟ್ಟು ಚಳುವಳಿ ಮಾಡಲು ಘೋಷಣೆ ಕೂಗುತ್ತಾ ಇಡೀ ಕಾಲೇಜಿನ ಆವರಣದಲ್ಲಿ " we want water........we want water......." ಎಂದು ಎಲ್ಲರು ಕೂಗುತ್ತಾ ಸಾಗಿದೆವು.   ನಮ್ಮ ಮೆರವಣಿಗೆ ಆ ಕಾಲೇಜಿನ ನಿರ್ದೇಶಕರ ಮನೆಯ ಮುಂದೆ ಬರುತ್ತಿದ್ದಂತೆ ಘೋಷಣೆ ಜೋರಾಯಿತು.  ಆ ಹುಡುಗರಲ್ಲಿ ಒಬ್ಬ " water......water.....or your daughter........" ಎಂದುಬಿಟ್ಟ. ಇದು ಆ ನಿರ್ದೇಶಕರ ಕಿವಿಗೂ ಬಿತ್ತು.  

 

          ಮನೆಯಿಂದ ಈಚೆ ಬಂದ ನಿರ್ದೇಶಕರು ಘೋಷಣೆ ಕೂಗುತ್ತಿದ್ದ ಹುಡುಗರ ಕಡೆಗೆ ಎರಡೂ ಕೈ ಎತ್ತಿ ಸ್ವಲ್ಪ ನಿಲ್ಲಿಸಿ ಎನ್ನುವಂತೆ ಸನ್ನೆ ಮಾಡಿದರು.  ಅಲ್ಲಿದ್ದ  ಹುಡುಗರು,  ಈಗ ಕೆಲ ಹುಡುಗರಿಗೆ ಏನೋ ಕಾದಿದೆ !ಅಂದುಕೊಂಡು ಘೋಷಣೆ ತಕ್ಷಣ ನಿಲ್ಲಿಸಿದರು.  ನಾವು ಓದುತ್ತಿದ್ದ ಕಾಲೇಜು ಸ್ವಾಯತ್ತೆ ಪಡೆದ ಕಾಲೇಜು.  ಆದದ್ದರಿಂದ ವಿಧ್ಯಾರ್ಥಿಗಳ ಸಮಸ್ತ ಭವಿಷ್ಯವೂ ಕಾಲೇಜಿನ ಕೈಯಲ್ಲೇ ಇರುತ್ತದೆ .  ಇವತ್ತು ಯಾವಯಾವ ಹುಡುಗರಿಗೆ ಏನೇನು ಕಾದಿದೆಯೋ, ಸಾಲದ್ದಕ್ಕೆ  daughter  ಎಂದು ಬೇರೆ ಕೂಗಿದ್ದು ಅವರ ಕಿವಿಗೆ ಬೇರೆ ಬಿದ್ದಿದೆ, ಮುಂದೇನು ಎಂದು ಯೋಚಿಸುವ ಹೊತ್ತಿಗೆ, ನಿರ್ದೇಶಕರು ಗಂಟಲು ಸರಿಮಾಡಿಕೊಂಡು " The first thing you have asked for,  is some what difficult, but the second one is O K for me. Who will come forward?"  ಎಂದು ಕೇಳಿದರು.  ನಿರ್ದೇಶಕರ ಮಾತಿನಲ್ಲಿ ಸಿಟ್ಟಾಗಲಿ, ದ್ವೇಷವಾಗಲಿ ಇರಲಿಲ್ಲ.  ಬಹಳ ಸಾಮಾನ್ಯವಾಗಿ ಮತ್ತು ಹಾಸ್ಯ ಮಿಶ್ರಿತ ದ್ವನಿಯಲ್ಲಿ ಈ ಮಾತು ಹೇಳಿದಾಗ ಅಲ್ಲಿ ನೆರದಿದ್ದ ಎಲ್ಲಾ   ಹುಡುಗರು ತಲೆ ತಗ್ಗಿಸಿ ನಿಂತುಬಿಟ್ಟರು. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಆದರೂ, ಆ ಸ್ತಿತಿಯಲ್ಲಿ ಏನೂ ಮಾಡುವ ಹಾಗಿರಲಿಲ್ಲ. 

 

           ಒಂದೆರಡು ನಿಮಿಷದ ನಂತರ ನಿರ್ದೇಶಕರೇ ಮಾತನಾಡಿ " ನಿಮ್ಮ ತೊಂದರೆ ನಂಗೆ ಗೊತ್ತಿದೆ. ಇದಕ್ಕೆ ಒಂದು ಪರಿಹಾರ ಸಧ್ಯದಲ್ಲೇ ಮಾಡುತ್ತೇವೆ.  ದಯವಿಟ್ಟು ಸಹಕರಿಸಿ " ಎಂದು ನಗುಮೊಗದಿಂದ ನಮ್ಮನ್ನು ಕಳುಹಿಸಿದರು.  ಸಧ್ಯ " ಬದುಕಿದೆಯಾ ಬಡ ಜೀವ"  ಎನ್ನುವಂತೆ  ಎಲ್ಲರು ಜಾಗ ಖಾಲಿ ಮಾಡಿದೆವು. 

 

               ಉನ್ನತ ಹುದ್ದೆಯಲ್ಲಿದ್ದ ನಿರ್ದೇಶಕರು ಮನಸ್ಸು ಮಾಡಿದ್ದರೆ ನಮ್ಮಂತಹ ಹೆಚ್ಚಿನ ವಿಧ್ಯಾರ್ಥಿಗಳಿಗೆ, ಹೆಚ್ಚಿನ ಶಿಕ್ಷೆ ನೀಡಿ ಜೀವಮಾನವೆಲ್ಲ ನೆನಪಿಸಿಕೊಳ್ಳುವಂತೆ ಮಾಡಬಹುದಿತ್ತು.  ಆದರೆ, ಇವರು ಮಾತ್ರ ನಮ್ಮ ಹುಡುಗು ಬುದ್ಧಿಯನ್ನು ಕ್ಷಮಿಸಿಬಿಟ್ಟರು.  ಅಂದಿನ ಅವರ ಹಿರಿತನ ನಮಗೆ  ಜ್ಞಾಪಕಕ್ಕೆ ಬಂದಾಗ ಇಂದೂ ಅವರ ಬಗ್ಗೆ ಗೌರವ ಭಾವನೆ ಉಕ್ಕುತ್ತದೆ.

 

( ಆತ್ಮೀಯರೊಬ್ಬರು ಹೇಳಿದ ಪ್ರಸಂಗವನ್ನು  ಇಲ್ಲಿ  ಯಥಾವತ್ತಾಗಿ ಧಾಖಲಿಸಿದ್ದೇನೆ )

Comments

Submitted by lpitnal@gmail.com Sun, 11/04/2012 - 06:03

ಪ್ರಕಾಶ ನರಸಿಂಹಯ್ಯನವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕಾಲೇಜು ದಿನಗಳ ಆಪ್ತ ಲೇಖನ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದನ್ನು ಆಚರಣೆಯಿಂದ ತೋರಿಸಿದ ನಿರ್ದೇಶಕರ ನಡೆ ಅನುಕರಣೀಯ. ನಮ್ಮನ್ನೂ ಅಂದಿನ ಆ ದಿನಗಳಿಗೆ ಕೊಂಡೊಯ್ದಿತು ಲೇಖನ. ಧನ್ಯವಾದಗಳು.
Submitted by Chikku123 Fri, 11/09/2012 - 13:33

ಚೆನ್ನಾಗಿದೆ ಪುಣ್ಯಾತ್ಮ ಇನ್ಯಾರಾದರೂ ಆಗಿದ್ದರೆ ಕಥೆಯೇ ಬೇರೆ ಇರ್ತಿತ್ತು
Submitted by Prakash Narasimhaiya Fri, 11/09/2012 - 15:34

In reply to by Chikku123

ಆತ್ಮೀಯ ಚಿಕ್ಕು, ನೀರು ಅಥವಾ ನೀರೆ ಎಂದದ್ದನ್ನು ಕ್ಷಮಿಸಿದ ದೊಡ್ಡಗುಣ ನಿರ್ದೇಶಕರದು. ನಿಜಕ್ಕೂ ಪುನ್ಯಾತ್ಮನೆ! ಧನ್ಯವಾದಗಳು