ದೊರೆತ ಅವಕಾಶದ ಸದುಪಯೋಗ ಬಹುಮುಖ್ಯ

ದೊರೆತ ಅವಕಾಶದ ಸದುಪಯೋಗ ಬಹುಮುಖ್ಯ

ನಮ್ಮ ಜೀವನದಲ್ಲಿ ನಮಗೆ ಬಹಳಷ್ಟು ಅವಕಾಶಗಳು ಬರುತ್ತವೆ. ಆದರೆ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹುಮುಖ್ಯ. ಅವಕಾಶ ಮತ್ತು ಅದೃಷ್ಟಗಳು ತುಂಬಾ ಸಮಯ ಇರುವುದಿಲ್ಲ. ಸಿಕ್ಕಾಗ ಬಾಚಿಕೊಳ್ಳುವುದೇ ಜಾಣತನ. ಕೈಗೆ ಸಿಕ್ಕಿದ ಬಳಿಕ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳುವುದೂ ಒಂದು ಬಗೆಯ ಕಲೆ ಎನ್ನಬಹುದು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಕುರಿತಾದ ಒಂದು ಪುಟ್ಟ ನೀತಿ ಕಥೆ ಇಲ್ಲಿದೆ. ಇದರಲ್ಲಿ ದೊರೆತ ಅವಕಾಶವನ್ನು ಬಳಸಿಕೊಂಡವರಿಗೆ ಏನು ಸಿಕ್ಕಿತು? ಅವಕಾಶವನ್ನು ಕಳೆದುಕೊಂಡವರ ಗತಿ ಏನಾಯಿತು ಎನ್ನುವುದನ್ನು ಗಮನಿಸಿ ನಾವೂ ಬಾಳಿನಲ್ಲಿ ಉತ್ತಮ ಹೆಜ್ಜೆಯನ್ನು ಇಡೋಣ…

ಒಂದು ಕಾಡಿನಲ್ಲಿ ಹಲವಾರು ಮಂಗಗಳು ವಾಸಿಸುತ್ತಿದ್ದವು. ಆ ಕಾಡಿನ ದಾರಿಯಾಗಿ ಒಂದು ನಗರಕ್ಕೆ ಹೋಗಬಹುದಿತ್ತು. ಆ ನಗರವನ್ನು ಸಂಪರ್ಕಿಸಲು ಆ ಕಾಡಿನ ದಾರಿ ಬಹು ಹತ್ತಿರದ ದಾರಿಯಾಗಿತ್ತು. ಆ ಕಾರಣದಿಂದ ಹಲವಾರು ಮಂದಿ ಜನರು ಈ ದಾರಿಯನ್ನು ಉಪಯೋಗಿಸುತ್ತಿದ್ದರು. ಮಂಗಗಳು ಈ ದಾರಿಯಲ್ಲಿ ಯಾರೇ ಸಂಚರಿಸಿದರೂ ಅವರ ಮೇಲೆರಗಿ, ಅವರ ಬಟ್ಟೆಗಳನ್ನು ಹರಿಯುವುದು, ಅವರ ಬಳಿ ಇದ್ದ ತಿಂಡಿಗಳನ್ನು ಕಸಿಯುವುದು ಮಾಡುತ್ತಿದವು. ಅವುಗಳ ಉಪಟಳ ವಿಪರೀತವಾದ ಕಾರಣ ಬಹಳಷ್ಟು ಜನ ಆ ದಾರಿಯಲ್ಲಿ ಹೋಗುವುದನ್ನು ಕಡಿಮೆ ಮಾಡಿದ್ದರು.

ಒಮ್ಮೆ ಒಬ್ಬ ಗುರು ತನ್ನ ಶಿಷ್ಯಂದಿರ ಜೊತೆ ಅದೇ ದಾರಿಯಲ್ಲಿ ಬಂದರು. ಅವರು ಬಹಳ ದೂರದಿಂದ ನಡೆದುಕೊಂಡು ಬಂದಿದ್ದುದರಿಂದ ಆ ದಾರಿಯ ಮಧ್ಯ ಇದ್ದ ಒಂದು ಮರದ ಕೆಳಗೆ ವಿಶ್ರಾಂತಿಯನ್ನು ಪಡೆದುಕೊಂಡರು. ಅದೇ ಸಮಯ ಆ ಮಂಗಗಳ ಗುಂಪು ಅವರ  ಮೇಲೆ ದಾಳಿ ಮಾಡಿತು. ಒಂದೊಂದು ಮಂಗ ಒಬ್ಬೊಬ್ಬರನ್ನು ಆರಿಸಿಕೊಂಡು, ಅವರ ಬಟ್ಟೆಗಳನ್ನು ಹರಿಯುವುದು, ಅವರ ಬಳಿ ಇದ್ದ ಚೀಲದಿಂದ ಸಾಮಾಗ್ರಿಗಳನ್ನು ಹೊರಗೆಳೆಯುವುದು, ತಿಂಡಿಗಳನ್ನು ತಿನ್ನುವುದು ಮೊದಲಾದುವುಗಳನ್ನು ಮಾಡತೊಡಗಿದವು. ಇದರ ಜೊತೆಗೆ ಜೋರಾಗಿ ಕೂಗಿ ಚೇಷ್ಟೆಯನ್ನೂ ಮಾಡಲಾರಂಭಿಸಿದವು.

ನಿದ್ರಿಸುತ್ತಿದ್ದ ಗುರುಗಳು ನಿಧಾನವಾಗಿ ಎದ್ದು ನೋಡಿದಾಗ ಅವರ ಮತ್ತು ಶಿಷ್ಯಂದಿರ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ. ಎಲ್ಲಾ ಮಂಗಗಳು ಮರವೊಂದರಲ್ಲಿ ಗುಂಪಾಗಿ ಕೂತು ಅವರನ್ನು ಅಣಕಿಸುತ್ತಿವೆ. ಗುರುಗಳು ದಿವ್ಯದೃಷ್ಟಿಯುಳ್ಳವರಾಗಿದ್ದರು. ಅವರು “ಕಪಿರಾಜಾ, ತಾವು ಏಕೆ ನಮಗೆಲ್ಲಾ ಈ ರೀತಿಯ ಕಾಟ ಕೊಡುತ್ತಿರುವಿರಿ?” ಎಂದು ಕೇಳಿದರು.

“ನಮಗೆ ನಿಮ್ಮ ಮೇಲೆ ಸಿಟ್ಟು ಇದೆ. ನೀವೆಲ್ಲಾ ಮಾನವ ಜನ್ಮ ಪಡೆದುಕೊಂಡಿರುವಿರಿ. ಆದರೆ ನಾವಿನ್ನೂ ಮಂಗಗಳಾಗಿಯೇ ಉಳಿದಿದ್ದೇವೆ. ದೇವರು ನಮಗೆಲ್ಲಾ ಈ ಮಂಗನ ಜನ್ಮ ನೀಡಿ ಮೋಸ ಮಾಡಿದ್ದಾನೆ. ಅದಕ್ಕೇ ನಾವು ನಿಮ್ಮ ಮೇಲೆ ಹಗೆ ಸಾಧಿಸಲು ಈ ರೀತಿಯಾಗಿ ಕಾಟಕೊಡುತ್ತಿದ್ದೇವೆ. ಇದರಿಂದ ನಮ್ಮ ಮನಸ್ಸಿನ ಬೇಸರ ಒಂದಷ್ಟು ಕಡಿಮೆಯಾಗುತ್ತದೆ.” ಎಂದಿತು ಕಪಿ ರಾಜ ಮಂಗ.

“ಸುಮ್ಮನೇ ದೇವರನ್ನು ದೂಷಣೆ ಮಾಡಬೇಡಿ. ದೇವರು ಎಲ್ಲರಿಗೂ ಅವಕಾಶಗಳನ್ನು ಕೊಟ್ಟೇ ಇರುತ್ತಾನೆ. ಆದರೆ ನಾವು ಅದನ್ನು ಗಮನಿಸಿರುವುದಿಲ್ಲ ಮತ್ತು ಅದರ ಉಪಯೋಗವನ್ನು ಸರಿಯಾಗಿ ಪಡೆದುಕೊಂಡಿರುವುದಿಲ್ಲ.” ಎಂದರು ಗುರುಗಳು.

ಗುರುಗಳು ತಮ್ಮ ಮಾತನ್ನು ಮುಗಿಸುವಷ್ಟರಲ್ಲೇ ಆಕಾಶದಿಂದ ಅಶರೀರವಾಣಿ ಕೇಳಿಸಿತು. “ಗುರುಗಳ ಮಾತು ಸತ್ಯ. ಮಂಗಗಳೇ ನಿಮಗೆ ಈ ಹಿಂದೆ ಮಾನವನಾಗಲು ಹಲವಾರು ಅವಕಾಶಗಳನ್ನು ಕೊಟ್ಟಿದ್ದೆ ಆದರೆ ನೀವು ಅವುಗಳನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಈಗ ನಿಮಗೆ ಮತ್ತೊಂದು ಅವಕಾಶ ನೀಡುತ್ತಿದ್ದೇನೆ. ಇನ್ನು ಕೆಲವು ನಿಮಿಷಗಳಲ್ಲಿ ಜೋರಾದ ಮಳೆ ಬರುತ್ತದೆ. ಆ ಸಮಯದಲ್ಲಿ ಪಕ್ಕದ ನದಿಯಲ್ಲಿ ಸ್ನಾನ ಮಾಡಿದರೆ ನಿಮಗೆ ಮಾನವ ಜನ್ಮ ಲಭಿಸುತ್ತದೆ. ನೆನಪಿರಲಿ, ಮಳೆ ಬರುತ್ತಿರುವ ಸಮಯದಲ್ಲಿ ಸ್ನಾನ ಮಾಡಿದರೆ ಮಾತ್ರ ನಿಮಗೆ ಮಾನವ ಜನ್ಮ." ಈ ಅಶರೀರವಾಣಿಯನ್ನು ಕೇಳಿದ ಗುರುಗಳು ನಸುನಕ್ಕು ‘ಈ ಸಲವಾದರೂ ನಿಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿರಿ” ಎಂದರು.

ಕೆಲವೇ ನಿಮಿಷಗಳಲ್ಲಿ ಜೋರಾದ ಮಳೆ ಸುರಿಯಲು ಪ್ರಾರಂಭವಾಯಿತು. ಬರ ಬರುತ್ತಾ ಮಳೆಯ ಪ್ರತಾಪ ಹೆಚ್ಚಾಗಿ ನದಿಯಲ್ಲಿನ ನೀರೂ ಉಕ್ಕಿ ಹರಿಯಲಾರಂಭಿಸಿತು. ನದಿಯ ನೀರು ರೌದ್ರಾವತಾರವನ್ನು ತಾಳಿತು. ಈ ನದಿಯ ಪ್ರವಾಹವನ್ನು ನೋಡಿ ಮಂಗಗಳು ಹೆದರಿದವು. ಯಾವ ಮಂಗವೂ ಆ ನೀರಿಗೆ ಧುಮುಕಲು ಧೈರ್ಯ ಮಾಡಲಿಲ್ಲ. ರಭಸವಾಗಿ ಹರಿಯುವ ನೀರಿಗೆ ಧುಮುಕಿ ಸ್ನಾನ ಮಾಡುವುದೆಂದರೆ ಜೀವವನ್ನು ಕಳೆದುಕೊಂಡಂತೆಯೇ. ನಮಗೆ ಮಾನವ ಜನ್ಮ ಬೇಡ. ಮಂಗಗಳಾಗಿಯೇ ಬದುಕಿರುತ್ತೇವೆ ಎಂದುಕೊಂಡು ಮಂಗಗಳು ಸುಮ್ಮನಾದವು.

ಅಷ್ಟರಲ್ಲಿ ಆ ಗುಂಪಿನಲ್ಲಿದ್ದ ಒಂದು ಮಂಗ ಧೈರ್ಯ ಮಾಡಿ ರಭಸದಿಂದ ಹರಿಯುತ್ತಿದ್ದ ನದಿಯ ನೀರಿಗೆ ಧುಮುಕಿಯೇ ಬಿಟ್ಟಿತು. ಆ ನೀರಿನಲ್ಲಿ ಮುಳುಗಿ ಎದ್ದಾಗ, ಏನಾಶ್ಚರ್ಯ ! ಆ ಮಂಗ ಮಾನವನಾಗಿ ಪರಿವರ್ತಿತವಾಗಿತ್ತು. ಇದನ್ನು ನೋಡಿದ್ದೇ ತಡ ಉಳಿದ ಮಂಗಗಳೂ ನದಿಯ ನೀರಿಗೆ ಧುಮುಕಿದವು. ಆದರೆ ಯಾವ ಮಂಗಗಳೂ ಮಾನವರಾಗಿ ಬದಲಾಗಲಿಲ್ಲ. ಎಲ್ಲಾ ಮಂಗಗಳು ಮತ್ತೆ ದೇವರನ್ನು ದೂಷಿಸಲು ಪ್ರಾರಂಭಿಸಿದವು. 

ಗುರುಗಳು “ ನೀವು ಈಗ ದೇವರನ್ನು ದೂರಿ ಪ್ರಯೋಜನವಿಲ್ಲ. ಸಿಕ್ಕ ಅವಕಾಶವನ್ನು ಧೈರ್ಯದಿಂದ ಸರಿಯಾದ ಸಮಯದಲ್ಲಿ ಬಳಸಿಕೊಂಡದ್ದರಿಂದ ಆ ಒಂದು ಮಂಗ ಮನುಷ್ಯ ರೂಪ ಪಡೆಯಿತು. ಈಗ ಮಳೆ ನಿಂತಿದೆ. ಆದುದರಿಂದ ನಿಮಗೆ ಯಾರಿಗೂ ಮನುಷ್ಯ ರೂಪ ಬರಲಿಲ್ಲ. ನೀವು ಸರಿಯಾದ ಸಮಯಕ್ಕೆ ನಿರ್ಣಯ ತೆಗೆದುಕೊಳ್ಳದೇ ಇದ್ದುದರಿಂದ ಮಂಗಗಳಾಗಿಯೇ ಉಳಿದು ಹೋದಿರಿ. ಭವಿಷ್ಯದಲ್ಲಿ ಇಂತಹ ಅವಕಾಶ ಮತ್ತೆ ಸಿಗುವುದೋ ಗೊತ್ತಿಲ್ಲ. ಆದರೆ ಸಿಕ್ಕರೆ ತಪ್ಪದೇ ಬಳಸಿಕೊಳ್ಳಿ” ಎಂದು ಹೇಳಿ ತಮ್ಮ ಶಿಷ್ಯಂದಿರ ಜೊತೆ ನಗರದತ್ತ ಹೊರಟರು. ಮನುಷ್ಯನಾಗಿ ಪರಿವರ್ತನೆಯಾದ ಮಂಗವೂ ಆ ಗುರುಗಳ ಶಿಷ್ಯನಾಗಿ ಅವರ ಜೊತೆ ಹೋಯಿತು. ಉಳಿದ ಮಂಗಗಳು ಬೇಸರದಿಂದ ಮತ್ತೆ ಮರವೇರಿ ಕುಳಿತುಕೊಂಡವು.

ಇದು ಕೇವಲ ಕಥೆಯಾಗಿರಬಹುದು. ಆದರೆ ಇದರಲ್ಲಿ ಸಿಕ್ಕ ಅವಕಾಶವನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳುವುದು ಅತ್ಯಂತ ಮುಖ್ಯ ಎನ್ನುವ ತತ್ವ ಅಡಗಿದೆ. ನಮ್ಮ ಜೀವನದಲ್ಲೂ ಹಾಗೆ. ವಿದ್ಯಾರ್ಥಿಗಳಾಗಿರುವಾಗ ದೊರೆತ ಅವಕಾಶ ಬಳಸಿಕೊಂಡು ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು. ನಂತರ ಕೆಲಸದ ಹುಡುಕಾಟದಲ್ಲಿರುವಾಗ ಸಿಕ್ಕ ಉತ್ತಮ ಅವಕಾಶಗಳನ್ನು ತಡವರಿಸದೇ ಬಾಚಿಕೊಳ್ಳಬೇಕು. ಇದೇ ಬುದ್ಧಿವಂತಿಕೆ. ಈ ರೀತಿಯ ಬುದ್ದಿವಂತಿಕೆ, ಸಮಯಪ್ರಜ್ಞೆ ಇದ್ದವರು ಮಾತ್ರ ಜೀವನದಲ್ಲಿ ಮುಂದೆ ಬರುತ್ತಾರೆ ಮತ್ತು ಏನನ್ನಾದರೂ ಸಾಧಿಸುತ್ತಾರೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ