ದೊರೆಸಾನಿಪಾಳ್ಯ (ಅಮಲೋದ್ಭವಿ ನಗರ)

ದೊರೆಸಾನಿಪಾಳ್ಯ (ಅಮಲೋದ್ಭವಿ ನಗರ)

ಬರಹ

೧೮೭೬ ರಿಂದ ೧೮೭೮ರವರೆಗೆ ತಲೆದೋರಿದ ಭೀಕರ ಕ್ಷಾಮಕ್ಕೆ ಸಾವಿರಾರು ಜನರು ಮರಣವನ್ನಪ್ಪಿ, ಅನೇಕ ಸಾವಿರ ಜನರು ತಮ್ಮ ಹಳ್ಳಿಗಳನ್ನು ತೊರೆದು ಉದರ ಪೋಷಣೆಗಾಗಿ ಪಟ್ಟಣಗಳನ್ನು ಆಶ್ರಯಿಸಬೇಕಾಯಿತು.
ಹೀಗೆ ಘೋರ ಬರದಿಂದ ಸರ್ವಸ್ವವನ್ನೂ ಕಳೆದುಕೊಂಡ ಅನಾಥರಿಗೆ ಜಮೀನು, ಮನೆ, ದೇವಸ್ಥಾನ ಮತ್ತು ಶಾಲೆಗಳನ್ನು ಒದಗಿಸಿಕೊಡಲು ಪ್ರತ್ಯೇಕ ಗ್ರಾಮಗಳನ್ನು ನಿರ್ಮಿಸಬೇಕಾಯಿತು. ಹೀಗೆ ಉಗಮವಾದ ಹಳ್ಳಿಗಳಲ್ಲಿ ದೊರೆಸಾನಿಪಾಳ್ಯ (ತಾಯಿಪಾಳ್ಯ)ವೂ ಒಂದು. ಈ ಗ್ರಾಮವನ್ನು ೧೮೭೬ರಲ್ಲಿ ಬಿಷಪ್ ಷೆವಾಲಿಯೇ ಎಂಬುವರು ವೇಮಲನಾಯ್ಡು ಎಂಬುವರಿಂದ ೮೦೦ ರೂಪಾಯಿಗಳ ಕ್ರಯಕ್ಕೆ ಪಡೆದರು. ಈ ಜಮೀನು ಬನ್ನೇರುಘಟ್ಟ ರಸ್ತೆಯ ಪಕ್ಕದ ಗದ್ದೆಗಳು, ಕೆರೆ, ಹೊಲಗಳು ಮತ್ತು ಜಾಲಾರಿ ಕಾಡಿನವರೆಗೂ ಹಾಗೂ ಅರಕೆರೆಯವರೆಗೂ ಹರಡಿತ್ತು. ಇದರ ಜೊತೆಗೆ ೧೯೦೫ ರಲ್ಲಿ ಸ್ವಾಮಿ ಜೆ ಪೆಸಾಂದಿಯೇ ಎಂಬುವರು ಮೈಸೂರು ಸರಕಾರದವರಿಂದ ದರಖಾಸ್ತಿನಲ್ಲಿ ೫೦ ಎಕರೆ ಜಮೀನನ್ನು ಪಡೆದರು.
ಈ ಹಳ್ಳಿಗೆ ಸ್ವಾಮಿ ಜೆ ಪೆಸಾಂದಿಯೇರವರು ಅಮಲೋದ್ಭವಿ ಮಾತೆಯ ಜ್ಞಾಪಕಾರ್ಥವಾಗಿ ತಾಯಿಪಾಳ್ಯವೆಂದು ಕರೆದರು. ಇವರ ಕಾಲದಲ್ಲಿಯೇ ಈಗಿರುವ ಅಮಲೋದ್ಭವ ಮಾತೆಯ ಪ್ರತಿಮೆಯನ್ನು ಬೆಂಗಳೂರಿನ ಸಂತ ಫ್ರಾನ್ಸಿಸ್ ಝೇವಿಯರ್ ಪ್ರಧಾನಾಲಯದಿಂದ ತರಲಾಯಿತು. ೧೮೭೮ರಲ್ಲಿ ನಿರ್ಮಿಸಲ್ಪಟ್ಟ ಹಳೆಯ ದೇವಾಲಯವನ್ನು ೧೯೭೮ರಲ್ಲಿ ಕೆಡವಲಾಯಿತು. ಈಗ ಕಂಗೊಳಿಸುತ್ತಿರುವ ಭವ್ಯ ದೇವಾಲಯವು ಸ್ವಾಮಿ ಟಿ ಬೆರ್ನಾರ್ಡ್ರವರ ಶ್ರಮದ ಫಲ.
ಬೆಂಗಳೂರಿನ ಸಂತ ಅನ್ನಮ್ಮನವರ ಮಠದ ಸನ್ಯಾಸಿನಿಯರು ದೊರೆಸಾನಿಪಾಳ್ಯದಲ್ಲಿ ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದ್ದಾರೆ. ಊರಿನಲ್ಲಿ ಪ್ರೌಢಶಾಲೆಯಿಲ್ಲದ ಕಾರಣ, ಏಳನೆಯ ತರಗತಿ ಮುಗಿಸಿದ ಮಕ್ಕಳು ಅಕ್ಕಪಕ್ಕದ ಊರಿನ ಪಾಠಶಾಲೆಗಳನ್ನು ಅಶ್ರಯಿಸಿ ಬೇಕಾಗಿದೆ. ಬೆಂಗಳೂರಿಗೆ ಅತೀ ಸಮೀಪದಲ್ಲಿರುವ ಈ ಊರು ನಗರಕ್ಕೆ ವಿಲೀನಗೊಂಡು ಈಗ ಅಮಲೋದ್ಭವಿನಗರವೆಂದು ನೂತನ ನಾಮಾಂಕಿತವನ್ನು ಧರಿಸಿದೆ.
ಈ ಊರಿನಲ್ಲಿ ಸುಮಾರು ೩೦೦ ಕ್ರೈಸ್ತಕುಟುಂಬಗಳಿವೆ. ಕೆಲವೇ ವರ್ಷಗಳ ಹಿಂದೆ ನೂರಕ್ಕೆ ನೂರು ಕ್ರೈಸ್ತರ ಊರಾಗಿದ್ದ ಇಲ್ಲಿ ಇಂದು ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದಾರೆ. ಹೀಗೆ ವಲಸೆ ಬಂದವರಲ್ಲಿ ಮಲಯಾಳಿಗಳೇ ಹೆಚ್ಚು. ವ್ಯವಸಾಯವನ್ನೇ ಜೀವನಾಧಾರ ಮಾಡಿಕೊಂಡಿದ್ದ ಈ ಊರ ಮೂಲನಿವಾಸಿಗಳು ಇಂದು ಮಹಿಳೆಯರ ಸಹಿತವಾಗಿ ಸಣ್ಣಕಾರ್ಖಾನೆಗಳಲ್ಲಿ ಅಲ್ಪಕೂಲಿಗಾಗಿ ದುಡಿಯುತ್ತಿದ್ದಾರೆ.
ಈ ಊರಿನ ಪಾದ್ರಿಕೆರೆಯದೇ ದೊಡ್ಡ ಕತೆ. ಬಿಷಪ್ ಷೆವಾಲಿಯೇರವರು ಊರಿನವರಿಗಾಗಿ ನಿರ್ಮಿಸಿದ ಈ ಕೆರೆಯನ್ನು ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅಂದರೆ ೧೯೯೧ರಲ್ಲಿ ಕರ್ನಾಟಕ ಸರ್ಕಾರವು ವಶಪಡಿಸಿಕೊಂಡು ಯಾರಿಗೋ ಪರಭಾರೆ ಮಾಡಿತು. ಊರಿನವರು ನ್ಯಾಯಾಲಯದ ಮೆಟ್ಟಿಲೇರಿದರಾದರೂ ಅವರಿಗೆ ನ್ಯಾಯ ಸಿಗಲಿಲ್ಲ.