ದೋಸೆ, ಇಡ್ಲಿ ಪ್ರಿಯರಿಗೆ ತಮಿಳುನಾಡಿನ ಸಾಮಾನ್ಯ ಹೋಟೆಲ್‌ಗಳು ಸ್ವರ್ಗ!

ದೋಸೆ, ಇಡ್ಲಿ ಪ್ರಿಯರಿಗೆ ತಮಿಳುನಾಡಿನ ಸಾಮಾನ್ಯ ಹೋಟೆಲ್‌ಗಳು ಸ್ವರ್ಗ!

ವಾಸ್ತವದಲ್ಲಿ ತಿಂಡಿಪೋತನಾಗಿರುವ ನನಗೆ ಯಾವುದೇ ಪ್ರದೇಶಕ್ಕೆ ಹೋದಾಗ ಮೊದಲು ಲವ್‌ ಅಥವಾ ಹೇಟ್‌ ಆಗುವುದು ಅಲ್ಲಿಯ ತಿಂಡಿ-ಆಹಾರಗಳ ಮೇಲಾಗಿರುತ್ತದೆ. ನನ್ನ ಪುಣ್ಯಕ್ಕೆ ತಮಿಳುನಾಡಿನಲ್ಲಿದ್ದ ಐದು ದಿನಗಳಲ್ಲಿ ಒಂದು ಹೊತ್ತಿನ ಬೆಳಗಿನ ಉಪಹಾರ ಬಿಟ್ಟರೆ ಉಳಿದೆಲ್ಲೆಡೆ ಅದ್ಭುತವಾಗಿತ್ತು. ಕರ್ನಾಟಕ, ಬೆಂಗಳೂರಿನ ದೋಸೆಗಳೇ ಮಹಾನ್‌ ಎನ್ನುವ ತಲೆಯಿಲ್ಲದವನಿಗೆ ತಮಿಳುನಾಡಿನ ದೊಡ್ಡ ದೊಡ್ಡ ಕ್ರಿಸ್ಪಿ ದೋಸೆ ಹಾಗೂ ಅದಕ್ಕೆ ನೀಡುವ ಚಟ್ನಿಗೆ ಫಿದಾ ಆಗಿತ್ತು. ಕೊನೆಯಲ್ಲಿ ಕರ್ನಾಟಕದ ಗಡಿ ಹತ್ತಿರ ಬಂದ ಬಳಿಕವೂ ಮಧ್ಯಾಹ್ನದ ಊಟಕ್ಕೂ ದೋಸೆ ತಿನ್ನಬೇಕು ಎನ್ನುವಷ್ಟರ ಮಟ್ಟಿಗೆ ಹುಚ್ಚು ಹಿಡಿಸಿತ್ತು.

ತಮಿಳುನಾಡಿಗೆ ಹೊರಡುವ ಪ್ಲ್ಯಾನ್‌ ಮಾಡಿದಾಗ ನನ್ನ ತಮಿಳು ಸಹೋದ್ಯೋಗಿಗಳ ಬಳಿ ನಿಮ್ಮೂರಿನ ವಿಶೇಷ ತಿಂಡಿಗಳ ಪಟ್ಟಿ ಕೊಡಿ ಎಂದು ಕೇಳಿದ್ದೆ. ಏಕೆಂದರೆ ನಾವು ಹೋಗಿರುವ ಊರಿನ ವಿಶೇಷ ಸ್ಥಳೀಯ ಆಹಾರಗಳನ್ನು ಸವಿಯುವುದು ನನ್ನಲ್ಲಿ ಮೊದಲಿನಿಂದಲೂ ಬಂದ ಅಭ್ಯಾಸ. ನಮ್ಮೂರಿಗೆ ಬಂದವರಿಗೆ ತೆಳ್ಳೇವು, ತೊಡೆದೇವು, ಅಪ್ಪೆಹುಳಿ, ಹಲಸಿನಕಾಯಿ ಪೋಳ್ದ್ಯ, ಬಾಳೆಕಾಯಿ ಹಶಿ, ನುಗ್ಗೆಸೊಪ್ಪಿನ ಪಲ್ಯ, ಕೆಸುವಿನ ಸೊಪ್ಪಿನ ಕರಕಲಿ, ಪತ್ರೊಡೆ, ವಂದಾನೆ ಜಡೆ ತಂಬಳಿ, ಅಪ್ಪೆಮಿಡಿ ಉಪ್ಪಿನಕಾಯಿಯನ್ನೇ ಬಾಳೆಯಲ್ಲಿ ಅಲಂಕರಿಸುವ ರೂಢಿ ನಮ್ಮದು. ಸಾವಿರಕ್ಕೂ ಅಧಿಕ ಜನ ಬಂದಿದ್ದ ನನ್ನ ಮದುವೆಯಲ್ಲೂ ಇದನ್ನೇ ಪಾಲಿಸಲಾಗಿತ್ತು. ಹೀಗಾಗಿ ಯಾವುದೇ ಊರಿಗೆ ಹೋದಾಗ ಅಲ್ಲಿಯ ಸ್ಥಳೀಯ ಆಹಾರದ ರುಚಿಯನ್ನು ಆನಂದಿಸದಿದ್ದರೆ, ಆ ಪ್ರವಾಸ ಪರಿಪೂರ್ಣ ಎನಿಸುವುದೇ ಇಲ್ಲ. ಆದರೆ ನನ್ನ ಸಹೋದ್ಯೋಗಿಗಳು ಒಂದಿಷ್ಟು ಬೇಕರಿಯಲ್ಲಿ ಸಿಗುವ ಸ್ವೀಟ್‌ಗಳ ಹೆಸರನ್ನು ನನಗೆ ಹೇಳಿದ್ದರು. ಆದರೆ ಯಾವಾಗ ಮೊದಲ ದಿನದಂದು ಕೃಷ್ಣಗಿರಿ, ತಿರುಚಿ ಹಾಗೂ ತಂಜಾವೂರಿನ ಸಾಮಾನ್ಯ ಹೋಟೆಲ್‌ಗಳಲ್ಲಿ ದೋಸೆ, ಇಡ್ಲಿಯನ್ನು ಸವಿದೆನೋ, ಆ ಕ್ಷಣಕ್ಕೆ ಎಲ್ಲ ಬೇಕರಿ ಹಾಗೂ ಸ್ವೀಟ್‌ಗಳು ನನ್ನ ತಲೆಯಿಂದ ಓಡಿ ಹೋಗಿದ್ದವು.

ದಿನದಲ್ಲಿ ಇಷ್ಟವಾದಷ್ಟು ಹೊತ್ತು ದೋಸೆಯನ್ನೇ ತಿಂದುಕೊಂಡು ಖುಷಿಯಿಂದ ಬದುಕುತ್ತೇನೆ ಎನ್ನುವಷ್ಟರ ಮಟ್ಟಿಗೆ ಅಲ್ಲಿಯ ದೋಸೆಗಳು ಇಷ್ಟವಾದವು. ಅದರಲ್ಲೂ ತುಪ್ಪದ ರೋಸ್ಟ್‌ ಹಾಗೂ ಪುಡಿ ದೋಸೆಯ ರುಚಿಯ ತೂಕ ಒಂದು ಕೆಜಿ ಹೆಚ್ಚೇ ಇತ್ತು. ಇದರ ಜತೆಗೆ ಇಡ್ಲಿ ಕೂಡ ಸಕತ್ತಾಗಿರುತ್ತದೆ. ಸಣ್ಣ ಮಗುವೊಂದನ್ನು ಮಲಗಿಸುವಷ್ಟು ದೊಡ್ಡ ದೋಸೆಗಳನ್ನು ನಮಗೆ ಸರ್ವ್‌ ಮಾಡುತ್ತಾರೆ. ಅಂದ್ಹಾಗೆ ಅಲ್ಲಿನ ಬಹುತೇಕ ಎಲ್ಲ ಹೋಟೆಲ್‌ಗಳಲ್ಲಿಯೂ ಅದೇ ರೀತಿ ಇರುತ್ತದೆ. ಆದರೆ ನಮ್ಮ ಬೆಂಗಳೂರಿನಲ್ಲಿ ದೋಸೆ ಕೊಡುವ ಹಾಗೆ ತುಪ್ಪದಲ್ಲಿ ದೋಸೆಯನ್ನು ಈಜಾಡಲು ಬಿಡದೇ, ನಿಜವಾಗಿಯೂ ಕ್ರಿಸ್ಪಿ ದೋಸೆಯನ್ನು ಕೊಡುತ್ತಾರೆ. ನಮ್ಮೂರಿನ ತೆಳ್ಳೇವಿನಷ್ಟು ತೆಳ್ಳಗಿರದಿದ್ದರೂ, ಕ್ರಿಸ್ಪಿಯಾಗಿರುವ ವಿಚಾರದಲ್ಲಿ ಸ್ಪರ್ಧೆ ನೀಡುವಂತಿತ್ತು. ಅದಕ್ಕೆ ಎಲ್ಲ ಹೋಟೆಲ್‌ಗಳಲ್ಲಿ ಮೂರು ವಿಧದ ಚಟ್ನಿ ಕೊಡುತ್ತಾರೆ. ಅದರಲ್ಲಿ ನನಗೆ ಬಿಳಿ ಚಟ್ನಿ ಮೇಲೆ ಲವ್‌ ಆಗಿತ್ತು.

ಇದರ ಜತೆಗೆ ಮಧ್ಯಾಹ್ನದ ಊಟ ಕೂಡ ಸಿಂಪಲ್‌ ಆಗಿ, ರುಚಿಕರವಾಗಿರುತ್ತದೆ. ಬಹುತೇಕ ಎಲ್ಲ ಕಡೆ ಫುಲ್‌ ಮೀಲ್ಸ್‌ ಇರುತ್ತದೆ ಹಾಗೂ ಅದರ ಜತೆಗೆ ಎರಡು-ಮೂರು ರೀತಿಯ ಸಾರು-ಸಾಂಬಾರು, ಪಲ್ಯ, ಪಾಯಸ, ಮಜ್ಜಿಗೆ, ಪೋಳ್ದ್ಯದ ರೀತಿಯ ಅವಿಯಲ್‌ ಕೊಡುತ್ತಾರೆ. ಉಪ್ಪಿನಕಾಯಿ ಹಾಗೂ ಹಪ್ಪಳ ಇದ್ದೇ ಇರುತ್ತದೆ. ಇಲ್ಲಿ ಒಂದೇ ಹೊತ್ತಿಗೆ ಊಟ ಸಿಗುವುದರಿಂದ ಮಧ್ಯಾಹ್ನ ಸ್ವಲ್ಪ ಸರಿಯಾಗಿ ಬ್ಯಾಟಿಂಗ್‌ ಮಾಡುವುದು ಒಳಿತು. ಮತ್ತೆ ರಾತ್ರಿಗೆ ಅದೇ ದೋಸೆ, ಇಡ್ಲಿಯನ್ನು ತಿನ್ನಬೇಕಾಗುತ್ತದೆ. ನನ್ನಂಥವರಿಗೆ ಇದು ತೀರಾ ಖುಷಿಯ ವಿಚಾರ. ಏಕೆಂದರೆ ನಾನು ಊಟಕ್ಕಿಂತ ದೋಸೆ, ಇಡ್ಲಿಯನ್ನು ಹೆಚ್ಚು ಇಷ್ಟಪಡುವ ವ್ಯಕ್ತಿ.

ಅಂದ್ಹಾಗೆ ತಮಿಳುನಾಡಿನ ತಿರುಚಿ, ತಂಜಾವೂರು, ರಾಮೇಶ್ವರ, ಮಧುರೈ ಭಾಗಕ್ಕೆ ಪ್ರವಾಸಕ್ಕೆ ಬಂದಾಗ ತುಂಬಾ ಐಷಾರಾಮಿ ಹೋಟೆಲ್‌ಗಳತ್ತ ಮುಖ ಮಾಡಬೇಡಿ. ಸ್ವಚ್ಛತೆಯನ್ನು ಕಾಪಾಡಿಕೊಂಡಿರುವ ಸಾಮಾನ್ಯ ಹೋಟೆಲ್‌ಗೆ ಲಗ್ಗೆ ಇಟ್ಟುಬಿಡಿ. ರುಚಿಯಲ್ಲಿ ಯಾವುದೇ ರಾಜಿ ಇರುವುದಿಲ್ಲ. ಅದರ ಜತೆಗೆ ನಿಮ್ಮ ಜೇಬಿಗೂ ಅಷ್ಟೊಂದು ಹೊರೆ ಬೀಳುವುದಿಲ್ಲ. ವಿಶೇಷವೆಂದರೆ ಐದು ದಿನಗಳಲ್ಲಿ ಒಮ್ಮೆಯೂ ನಾವು ನಾಲ್ವರಿಂದ ಒಂದು ಹೊತ್ತಿಗೆ ಊಟ-ತಿಂಡಿಯ ಬಿಲ್‌ ₹750 ದಾಟಲಿಲ್ಲ. ಬಹುತೇಕ ಕಡೆ ₹500ರ ಆಸುಪಾಸಿನಲ್ಲೇ ಇತ್ತು. ಕೆಲವು ಹೋಟೆಲ್‌ಗಳಲ್ಲಿ ಅಲ್ಲಿಯ ಸರ್ವರ್‌ಗಳ ನಡವಳಿಕೆ ಇಷ್ಟವಾಗಿ ಸ್ವಲ್ಪ ಹೆಚ್ಚೇ ಟಿಪ್ಸ್‌ ಕೊಟ್ಟುಬಂದೆವು. ಜತೆಗೆ ಮಹಿಳೆಯರಿದ್ದರೆ ಶೌಚಾಲಯ ಸ್ವಚ್ಛವಾಗಿರಬಹುದಾದ ಸಾಮಾನ್ಯ ಹೋಟೆಲ್‌ಗಳನ್ನೇ ಆಯ್ಕೆ ಮಾಡಿಕೊಂಡರೆ ನಿಮ್ಮ ಪ್ರವಾಸ ರುಚಿಕರವಾಗಿರುತ್ತದೆ. ನಿಮ್ಮ ಪ್ರವಾಸದ ವೇಳೆಯಲ್ಲಿ ಅದ್ಯಾವುದೋ ಉತ್ತರ ಭಾರತ ಹಾಗೂ ವಿದೇಶಿ ಆಹಾರಗಳನ್ನು ತಿನ್ನುವ ಬದಲಿಗೆ ಸ್ಥಳೀಯ ಆಹಾರಗಳನ್ನೇ ಸವಿಯುತ್ತಿದ್ದರೆ, ನಿಮ್ಮ ಹೊಟ್ಟೆ ಕೂಡ ಪ್ರವಾಸದ ಎಲ್ಲ ದಿನಗಳಲ್ಲಿ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುತ್ತದೆ.

ಇಷ್ಟವಾದ ನಡವಳಿಕೆ: ಮಧುರೈನಲ್ಲಿ ನಾವು ತಂಗಿದ್ದ ರೂಮಿನ ಬಳಿಯೇ ಒಂದು ಹೋಟೆಲ್‌ಗೆ ಊಟಕ್ಕೆಂದು ಹೋದೆವು. ಊಟ, ಸಾಂಬಾರು ಹಾಗೂ ಅಲ್ಲಿಯ ಅವಿಯಲ್‌ ರುಚಿಗಿಂತ ಸರ್ವರ್‌, ಮಾಲೀಕರ ವರ್ತನೆ ತುಂಬಾ ಇಷ್ಟವಾಯಿತು. ನಾವು ಊಟ ಮುಗಿಸಿ ಏಳುವರೆಗೂ ನಮ್ಮ ಟೇಬಲ್‌ಗೆ ಬಿಲ್‌ನ್ನು ತಂದು ಇಡಲಿಲ್ಲ. ನೀವು ಆರಾಮಾಗಿ ಊಟ ಮಾಡಿ, ಆಮೇಲೆ ಬಿಲ್‌ ಮೇಲೆ ಗಮನವಹಿಸಿ ಎನ್ನುವ ಕಾಳಜಿಯು ಆ ಸರ್ವರ್‌ ವರ್ತನೆಯಲ್ಲಿ ಎದ್ದು ಕಾಣಿಸುತ್ತಿತ್ತು. ನಾವು ಕೈ ತೊಳೆಯಲು ಎದ್ದು ಹೊರಟಾಗ ನಿಧಾನವಾಗಿ ಬಿಲ್‌ನ್ನು ತಂದಿಟ್ಟರು. ಇದರ ಜತೆಗೆ ಪ್ರತಿಯೊಂದು ಆಹಾರವನ್ನು ಸರ್ವ್‌ ಮಾಡಿದ ಬಳಿಕ ಆಹಾರ ಹೇಗಿತ್ತು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲ ಹೋಟೆಲ್‌ಗಳಲ್ಲಿ ಬರುತ್ತಿತ್ತು. ʼನಲ್ಲ ಇರಕ್ಕುʼ ಎಂದು ನಾವು ಹೇಳಿದಾಗ ಅವರ ಮುಖದಲ್ಲಿ ಮೂಡುತ್ತಿದ್ದ ನಗುವು, ನಮಗೂ ಹೊಟ್ಟೆಯನ್ನು ಇನ್ನಷ್ಟು ತಣ್ಣದಾಗಿಸುತ್ತಿತ್ತು. ಒಂದೆರಡು ಹೋಟೆಲ್‌ ಬಿಟ್ಟರೆ ಉಳಿದೆಲ್ಲೆಡೆ ಇಂತಹ ಸೌಮ್ಯ ವರ್ತನೆಯನ್ನು ನಾವು ನೋಡಿದೆವು. 

ಹೋಟೆಲ್‌ನಲ್ಲಿ ಮಹಿಳೆಯರು: ತಮಿಳುನಾಡಿನಲ್ಲಿ ಐದು ದಿನ ಸುತ್ತಿದಾಗ ನಾವು ಗಮನಿಸಿದ ಇನ್ನೊಂದು ಪ್ರಮುಖ ವಿಚಾರವೆಂದರೆ ಹೋಟೆಲ್‌ನಲ್ಲಿನ ಮಹಿಳಾ ಸರ್ವರ್‌ಗಳು. ಬಹುತೇಕ ಕಡೆ ಮಹಿಳೆಯರೇ ಸರ್ವರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಇಂಗ್ಲಿಷ್‌ ಬರದಿದ್ದರೂ ಅಗತ್ಯಕ್ಕೆ ಬೇಕಾಗುವ ಒಂದಿಷ್ಟು ಶಬ್ದಗಳ ಜತೆಗೆ ನಗುಮುಖದಿಂದ ಸರ್ವ್‌ ಮಾಡುತ್ತಿದ್ದರು. ಅದರ ಜತೆಗೆ ಯಾವ ದೋಸೆಗೆ ಯಾವ ಚಟ್ನಿ, ಸಾಂಬಾರ್‌ ಕಾಂಬಿನೇಷನ್‌ ಇರಬೇಕು ಎನ್ನುವ ಮಾಹಿತಿಯನ್ನು ಕೂಡ ಕೊಡುತ್ತಿದ್ದರು. ಹೋಟೆಲ್‌ ವ್ಯವಹಾರದಲ್ಲಿ ಸಮಾಧಾನ ಕಡಿಮೆ ಇರುವ ಪುರುಷರಿಗಿಂತ ಮಹಿಳೆಯರಿದ್ದರೆ ಇನ್ನಷ್ಟು ಗ್ರಾಹಕ ಸ್ನೇಹಿ ವಾತಾವರಣ ಮೂಡಬಹುದು ಎಂದನಿಸಿತು. ಇದರ ಜತೆಗೆ ಸ್ಥಳೀಯವಾಗಿ ಒಂದಿಷ್ಟು ಉದ್ಯೋಗ ಸೃಷ್ಟಿಯೂ ಆಗುತ್ತದೆ. ರಾಜ್ಯದಲ್ಲಿನ ಸ್ತ್ರೀ ಶಕ್ತಿ ಸಂಘಟನೆಗಳು ಹೋಟೆಲ್‌ ಮಾಲೀಕರ ಸಂಘದ ಜತೆಗೆ ಈ ಬಗ್ಗೆ ಒಂದಿಷ್ಟು ಗಂಭೀರವಾದ ಚರ್ಚೆಯನ್ನು ಮಾಡಬಹುದು ಎನಿಸಿತು.

ಎಣ್ಣೆ ಅಂಗಡಿಗಳೇ ವಿರಳ: ಕರ್ನಾಟಕದಲ್ಲಿ ಕಣ್ಣೆತ್ತಿ ನೋಡಿದಲ್ಲೆಲ್ಲ ಎಣ್ಣೆ ಅಂಗಡಿ ಕಾಣಿಸುತ್ತದೆ. ಈ ರಾಜ್ಯದಲ್ಲಿ ಕುಡಿತನದಷ್ಟು ದೊಡ್ಡ ಬೇರೆ ಉದ್ಯಮವೇ ಇಲ್ಲವೆಂದು ರೋಸಿ ಹೋಗುವಷ್ಟು ಮದ್ಯದಂಗಡಿಗಳಿವೆ. ಆದರೆ ನಾವು ತಮಿಳುನಾಡಿನಲ್ಲಿ ಐದು ದಿನ ಸುತ್ತಾಡಿದಾಗ ಒಂದೆರಡು ವೈನ್‌ ಶಾಪ್‌ ಹಾಗೂ ಕೆಲವೇ ಕೆಲವು ಬಾರ್‌ & ರೆಸ್ಟೋರೆಂಟ್‌ಗಳು ಕಣ್ಣಿಗೆ ಬಿದ್ದವಷ್ಟೆ. ಕರ್ನಾಟಕದಲ್ಲಿ ಸಮಾಜವಾದಿ ನಾಯಕರಿಗೆ ಈ ವಿಚಾರ ಗಮನಕ್ಕೆ ತಂದಾಗಲೆಲ್ಲ, ʼಸರ್ಕಾರ ನಡೆಸುವುದು ಹೇಗೆ, ಅಭಿವೃದ್ಧಿ ಕಾರ್ಯಕ್ಕೆ ದುಡ್ಡು ಬೇಡ್ವಾ? ಶ್ರಮಿಕ ವರ್ಗದ ನೋವು ಕಡಿಮೆಯಾಗಲು ಎಣ್ಣೆ ಬೇಡ್ವಾ?ʼ ಎಂದು ಮಜಾವಾದದ ಹೇಳಿಕೆಗಳನ್ನು ವಿಧಾನಸೌಧದಲ್ಲೇ ಕೇಳಿಸಿಕೊಳ್ಳುವ ಪುಣ್ಯ ನಮ್ಮದಾಗಿತ್ತು. ಇದರ ಜತೆಗೆ ಶಾಲೆ, ಕಾಲೇಜು, ದೇವಸ್ಥಾನ, ಹೆದ್ದಾರಿ ಎಲ್ಲೆಂದರೆಲ್ಲಿ ಎಣ್ಣ ಅಂಗಡಿಗಳನ್ನು ತೆರೆಯಲಾಗಿದೆ. ಒಟ್ಟಿನಲ್ಲಿ ಶಾಲೆ, ಆಸ್ಪತ್ರೆ, ಬಸ‌ ನಿಲ್ದಾಣಗಳು ನಿಮ್ಮ ಮನೆಯ ಸಮೀಪ ಇಲ್ಲದೇ ಇರಬಹುದು. ಆದರೆ ಎಣ್ಣೆ ಅಂಗಡಿ ಮಾತ್ರ ಎಡವಿ ಬಿದ್ದರೆ ಸಿಗುವಂತಿರಬೇಕು ಎನ್ನುವುದು ಕರ್ನಾಟಕ ಅಬಕಾರಿ ಇಲಾಖೆಯ ಧ್ಯೇಯವಾಕ್ಯವಾಗಿದೆ. ಇದು ಸಾಲದೆಂಬಂತೆ ಅದ್ಯಾವ್ದೋ ಪುಣ್ಯಾತ್ಮ ಮನೆ ಮನೆಗೆ ಹಂಚುವ ದೂರದೃಷ್ಟಿ ಕೂಡ ಹಾಕಿಕೊಂಡಿದ್ದ. 

ಕೊನೆಯದಾಗಿ: ಪ್ರವಾಸಕ್ಕೆ ಹೋಗುವಾಗ, ನಮ್ಮ ಬಾಯಿಗೆ ರುಚಿಕರವಾಗಿರುವ ಆಹಾರ ಸಿಗುವುದು ತೀರಾ ಮುಖ್ಯ. ಅದರ ಜತೆಗೆ ಜತೆಗೆ ಮಹಿಳೆಯರಿದ್ದರೆ ಅವರಿಗೆ ಶುಚಿಯಾದ ಶೌಚಾಲಯವಿರುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ತೀರಾ ಸುಲಭವಾಗಿ ವೈರಲ್‌ ಇನ್ಫೆಕ್ಷನ್‌ ಆಗುವ ಸಾಧ್ಯತೆಯಿರುತ್ತದೆ. ಹೀಗಾಗಿ ರುಚಿಕರವಾದ ಸಾಮಾನ್ಯ ಹೋಟೆಲ್‌ ಜತೆಗೆ ಶುಚಿಯಾಗಿರುವ ಶೌಚಾಲಯ ಕೂಡ ನಿಮ್ಮ ಆದ್ಯತೆಯಾಗಿರಲಿ. ಈ ಬಗ್ಗೆ ಮಹಿಳೆಯರು ಕೂಡ ಹೆಚ್ಚು ವೋಕಲ್‌ ಆಗಿದ್ದಷ್ಟು ಅಲ್ಲಿಯ ಪರಿಸ್ಥಿತಿ ಸುಧಾರಿಸುವಲ್ಲೂ ನೆರವಾಗಬಹುದು. 

Image: representative from Google 

-ರಾಜೀವ ಹೆಗಡೆ