ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೧)


ದ್ರಾಕ್ಷಿಯ ದೇಹ ಪೋಷಣೆಗೆ ಬೇಕಾದ ಅವಶ್ಯ ಪೋಷಕಾಂಶಗಳನ್ನು ಒದಗಿಸಬಲ್ಲ ಹೆಚ್ಚು ರುಚಿಕರವಾದ ಹಣ್ಣಿನ ಬೆಳೆಯಾಗಿದ್ದು, ಇದು ಸುಲಭವಾಗಿ ಜೀರ್ಣವೂ ಆಗುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಮುಂತಾದ ಖನಿಜಾಂಶಗಳು ಇವೆ. ಕರ್ನಾಟಕದಲ್ಲಿ ದ್ರಾಕ್ಷಿ ಬೆಳೆಯಲು ವಿಜಯಪುರ, ಕೋಲಾರ, ಚಿತ್ರದುರ್ಗ, ಬಾಗಲಕೋಟೆ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಕಲಬುರ್ಗಿ ಪ್ರದೇಶಗಳು ಅತಿ ಸೂಕ್ತವಾಗಿದೆ. ಕರಾವಳಿ ಪ್ರದೇಶ ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶಗಳು ದ್ರಾಕ್ಷಿ ಬೆಳೆಯಲು ಯೋಗ್ಯವಲ್ಲ.
ಮಣ್ಣು: ದ್ರಾಕ್ಷಿಯನ್ನು ವಿವಿಧ ತರಹದ ಮಣ್ಣಿನಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಗೋಡು ಮಣ್ಣು ಅತ್ಯುತ್ತಮ. ಕಡಿಮೆ ಆಳದ ಮಧ್ಯಮ ಕಪ್ಪು ಗೋಡು ಮಣ್ಣು ಸ್ವಲ್ಪ ಭಾಗ ಸುಣ್ಣದ ಅಂಶದ ಅಂಶವಿದ್ದರೂ ದ್ರಾಕ್ಷಿಯನ್ನು ಬೆಳೆಯಬಹುದು. ಆಳವಾದ ಮರಳು ಮಿಶ್ರಿತ ಗೋಡು ಮಣ್ಣು ಕೂಡಾ ಈ ಬೆಳೆಗೆ ಸೂಕ್ತ.
ಹವಾಮಾನ: ದ್ರಾಕ್ಷಿ ಉಷ್ಣವಲಯದ ಬೆಳೆ ಸಮಶೀತೋಷ್ಣ ವಲಯದ ಪ್ರದೇಶಗಳಲ್ಲೂ ಸಹ ಇದನ್ನು ಯಶಸ್ವಿಯಾಗಿ ಬೆಳೆಯಲಾಗುತ್ತಿದೆ. ದ್ರಾಕ್ಷಿಯಲ್ಲಿ ಹವಾಗುಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಣ್ಣು ಬಿಡುವ ಕಾಲದಲ್ಲಿ ಇದಕ್ಕೆ ಮಳೆ ಇಲ್ಲದ ಹವಾಗುಣ ಅಗತ್ಯ. ಹೂವು ಬಿಟ್ಟ ನಂತರ ಹಣ್ಣು ಆಗುವವರೆಗಿನ ಕಾಲದಲ್ಲಿ ಮಳೆಯಾದರೆ ಇದನ್ನು ಭಾದಿಸುವ ರೋಗಗಳು ವೃದ್ಧಿಯಾಗುತ್ತವೆ.
ದ್ರಾಕ್ಷಿಯಲ್ಲಿ ವಿವಿಧ ಪೋಷಕಾಂಶಗಳ ಕಾರ್ಯ ಮತ್ತು ನಿರ್ವಹಣೆ: ಬೆಳೆಗಳ ಬೆಳವಣಿಗೆಗೆ ಅವಶ್ಯಕವಿರುವ ವಿವಿಧ ಪೋಷಕಾಂಶಗಳ ಸಮತೋಲನ ತುಂಬಾ ಅವಶ್ಯಕವಾದ ವಿಚಾರ. ಒಂದು ಪೋಷಕಾಂಶ ಇನ್ನೊಂದು ಪೋಷಕಾಂಶದೊಂದಿಗೆ ಹೊಂದಿರುವ ಸಂಬಂಧ ತುಂಬಾ ಕ್ಲಿಷ್ಟವಾಗಿದೆ. ಆದುದರಿಂದ ದ್ರಾಕ್ಷಿಯಲ್ಲಿ ಪೋಷಕಾಂಶಗಳ ಕೊರತೆ ಅಥವಾ ವಿಷಪೂರಕ ಪ್ರಮಾಣವನ್ನು ಹಾಗೂ ಲಕ್ಷಣಗಳನ್ನು ಗುರುತಿಸುವಾಗ ವಿವಿಧ ಪೋಷಕಾಂಶಗಳ ಮಧ್ಯದ ಸಂಬಂಧಗಳನ್ನು ಸಮರ್ಪಕವಾಗಿ ತಿಳಿದಿರುವುದು ಬಹುಮುಖ್ಯ
ಪ್ರಧಾನ ಪೋಷಕಾಂಶಗಳು:
ಸಾರಜನಕ: ಸಾರಜನಕವು ಒಂದು ಪ್ರಮುಖವಾದ ಪೋಷಕಾಂಶವಾಗಿದ್ದು ಬಳ್ಳಿಯಲ್ಲಿರುವ ವಿವಿಧ ಅಮಿನೋ ಆಮ್ಲಗಳ, ಲೆಸಿಥಿನ್ ಹಾಗೂ ಪತ್ರಹರಿತ್ತಿನ ಅಂಗಭಾಗವಾಗಿದೆ. ದ್ರಾಕ್ಷಿ ಬಳ್ಳಿಗಳು ಹೆಚ್ಚಿನ ಪ್ರಮಾಣದ ಸಾರಜನಕವನ್ನು ನೈಟ್ರೇಟ್ ರೂಪದಲ್ಲಿ ಪಡೆದುಕೊಳ್ಳುವವು. ಹೀಗೆ ಪಡೆದುಕೊಂಡ ಸಾರಜನಕವನ್ನು ಎಲೆಗಳಿಗೆ ಸಾಗಿಸುವವು. ಸಾರಜನಕವು ಎಲೆಗಳನ್ನು ತಲುಪಿದ ನಂತರ ಅದು ಪ್ರೋಟೀನ್ ಹಾಗೂ ವಿವಿಧ ಸಾರಜನಕದ ಕಂಪೌAಡಗಳಾಗಿ ಪರಿವರ್ತನೆ ಮಾಡುವುದು. ಸಾರಜಕನದ ಕೊರತೆಯಿರುವ ಬಳ್ಳಿಗಳು ಹೆಚ್ಚಾಗಿ ಬೆಳೆಯುವುದಿಲ್ಲ. ಸಾರಜನಕದ ಕೊರತೆಯು ತೀವ್ರವಾದಾಗ ಮಾತ್ರ ಕೊರತೆಯ ಲಕ್ಷಣಗಳು ಕಂಡುಬರುತ್ತವೆ. ಚಾಟನಿ ಮಾಡುವ ಹಂತದಲ್ಲಿ ಸಾರಜನಕದ ಕೊರತೆಯಾದರೆ ಮುಂದೆ ಫಲ ನೀಡುವ ಕಡ್ಡಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೆಚ್ಚಿನ ಪ್ರಮಾಣದ ಸಾರಜನಕವು ಬಳ್ಳಿಯಲ್ಲಿ ಶರ್ಕರಗಳ ಸಂಗ್ರಹವನ್ನು ಕಡಿಮೆಗೊಳಿಸುತ್ತದೆ. ಹಾಗೂ ಚಿಗುರುಗಳ ಇಂಟರ್‌ನೋಟ್ ಅಂತರ ಹೆಚ್ಚಾಗುತ್ತದೆಯಲ್ಲದೇ ಅವು ಚಪ್ಪಟೆಯಾಗುತ್ತವೆ.
ರಂಜಕ: ರಂಜಕವು ಪ್ರಮುಖವಾಗಿ ಬೇರುಗಳ ಬೆಳವಣಿಗೆ ಹಾಗೂ ಹಣ್ಣಿನ ಚಿಗುರುಗಳ ರೂಪಾಂತರಕ್ಕೆ ಅವಶ್ಯಕವಾಗಿದೆ. ರಂಜಕದ ಕೊರತೆಯಿಂದ ಗುಚ್ಛಗಳ ಬದಲಾಗಿ ಹೆಚ್ಚು ಸಂಖ್ಯೆಯಲ್ಲಿ ಟೆಂಡ್ರಿಲ್‌ಗಳು ಬೆಳೆಯುತ್ತವೆ. ರಂಜಕದ ಸೂಕ್ತ ಲಭ್ಯತೆಯಾದರೆ ಹಣ್ಣು ಗೊಂಚಲದ ತೂಕ ಹೆಚ್ಚುತ್ತದೆ. ಇದಲ್ಲದೇ ಇತ್ತೀಚಿನ ಸಂಶೋಧನೆಗಳ ಪ್ರಕಾರ ಸೂಕ್ತ ಪ್ರಮಾಣದಲ್ಲಿ ರಂಜಕದ ಸರಬರಾಜು ಮಾಡುವ ಮೂಲಕ ದ್ರಾಕ್ಷಿಯಲ್ಲಿ ಎಲೆ ತುಪ್ಪಟ ರೋಗ ಬಾಧೆಯನ್ನು ಕಡಿಮೆ ಮಾಡಬಹುದೆಂದು ತಿಳಿದುಬಂದಿದೆ.
ರಂಜಕವು ಒಂದು ಪ್ರಧಾನ ಪೋಷಕಾಂಶವಾಗಿದ್ದು, ಮಣ್ಣುಗಳಲ್ಲಿ ಇದು ಸ್ಥಿರೀಕರಣ ಹೊಂದಿರುತ್ತದೆ. ಆದುದರಿಂದ ದ್ರಾಕ್ಷಿ ಬೆಳೆಯುವ ಪ್ರದೇಶಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ನೀಡಲಾಗುತ್ತದೆ. ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಂಜಕ ಲಭ್ಯವಿದ್ದಾಗ್ಯೂ ತೇವಾಂಶದ ಕೊರತೆಯಾದರೆ ಹಣ್ಣು ಕಟ್ಟುವಿಕೆಯ ಪ್ರಮಾಣದಲ್ಲಿ ಕುಸಿತ ಕಂಡುಬರುವುದು. ರಂಜಕಕ್ಕೆ ಸಂಬಂಧಿಸಿದಂತೆ ಹೊಸ ಬೇರುಗಳ ಅಭಿವೃದ್ಧಿ, ಕುಡಿಗಳ ರೂಪಾಂತರ ಹಾಗೂ ಗೊಂಚಲುಗಳ ಅಭಿವೃದ್ಧಿಯ ಹಂತಗಳು ಪ್ರಮುಖವಾದವುಗಳಾಗಿವೆ.
ಸಾಮಾನ್ಯವಾಗಿ ಪ್ರತಿ ಸವರುವಿಕೆಯ ಹಂತದಲ್ಲಿ ಶಿಫಾರಸ್ಸು ಮಾಡಿದ ರಂಜಕದ ಅರ್ಧದಷ್ಟು ಪ್ರಮಾಣವನ್ನು ಸಾವಯವ ಮೂಲಕ ಗೊಬ್ಬರಗಳ ಜೊತೆಗೆ ನೇರವಾಗಿ ಮಣ್ಣಿನಲ್ಲಿ ಸೇರಿಸುವ ಮೂಲಕ (ಹನಿ ನೀರಾವರಿ ಇರುವಲ್ಲಿ) ದ್ರಾಕ್ಷಿ ಬಳ್ಳಿಗೆ ಅವಶ್ಯಕವಿರುವ ರಂಜಕ ಸರಬರಾಜು ಮಾಡಬಹುದಾಗಿದೆ. ರಂಜಕವನ್ನು ಭೂಮಿಗೆ ಸೇರಿಸುವಾಗ ಸಾವಯವ ಗೊಬ್ಬರದ ಮೂಲದ ಎರಡು ಪದರುಗಳ ನಡುವೆ ರಂಜಕ ಸೇರಿಸುವಂತೆ ನೀಡುವುದರಿಂದ ರಂಜಕದ ಸ್ಥಿರೀಕರಣದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.
ಪೊಟ್ಯಾಶಿಯಂ: ಎಲೆಗಳಲ್ಲಿರುವ ಪತ್ರರಂಧ್ರಗಳ ಮುಚ್ಚುವಿಕೆ ಹಾಗೂ ತೆರೆಯುವಿಕೆಯಲ್ಲಿ ಪ್ರಮುಖವಾದ ಪಾತ್ರ ಹೊಂದುವ ಮೂಲಕ ನೀರು ಸಂರಕ್ಷಣೆಯಲ್ಲಿ ತನ್ನದೇ ಆದ ಪಾತ್ರ ಹೊಂದಿದೆ. ದ್ರಾಕ್ಷಿಯ ಬಳ್ಳಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬುವಲ್ಲಿ ಪೊಟ್ಯಾಸಿಯಂ ಸಹಾಯಕವಾಗಿದೆ. ಅಸಮರ್ಪಕ ಪ್ರಮಾಣದಲ್ಲಿ ಪೊಟ್ಯಾಶ್ ಸರಬರಾಜು ಮಾಡಲ್ಪಟ್ಟ ದ್ರಾಕ್ಷಿ ಬಳ್ಳಿಗಳು ಬೂದುರೋಗಕ್ಕೆ ತುತ್ತಾಗುತ್ತವೆ.
ಪೊಟ್ಯಾಶ್‌ನ ಕೊರತೆಯ ಲಕ್ಷಣಗಳು ಸಾಮಾನ್ಯವಾಗಿ ಮಾಗಿದ ಎಲೆಗಳ ಮೇಲೆ ಕಂಡುಬರುತ್ತವೆ. ಕೊರತೆಯಿಂದಾಗಿ ಎಲೆಗಳ ಒಳಗೆ ಮುದುಡಿಕೊಳ್ಳುವುದು ಅಥವಾ ಸುರುಳಿ ಹೊಡೆಯುವ ಲಕ್ಷಣಗಳು ಬೆಳೆಯುವ ಬಳ್ಳಿಗಳಲ್ಲಿ ಕಂಡುಬರುವುದು. ಎಲೆಗಳಲ್ಲಿ ಕಮರುವಿಕೆ ಅಥವಾ ಕ್ಲೋರೋಸಿಸ್ ಲಕ್ಷಣಗಳು ಅಥವಾ ಹಳದಿಯಾಗುವಿಕೆಯ ಲಕ್ಷಣಗಳು ಎಲೆಗಳ ಬಣ್ಣ ಕ್ರಮೇಣ ಮಂಕಾಗುವುದು ಅಥವಾ ಹಳದಿಯಾಗುವುದು ಪೋಟ್ಯಾಶಿಯಂ ಕೊರತೆಯ ಲಕ್ಷಣವಾಗಿರುತ್ತದೆ. ಅತೀ ಹೆಚ್ಚಿನ ಪ್ರಮಾಣದ ಕೊರತೆ ಇರುವ ಪರಿಸ್ಥಿತಿಗಳಲ್ಲಿ ಎಲೆಯ ದಂಡೆಗಳು ಸುಟ್ಟಂತೆ ಕಂಡುಬರುತ್ತದೆ. ಮೇಲಿನ ೩ ಪೋಷಕಾಂಶಗಳನ್ನು ಮಣ್ಣಿನ ಸ್ಥಿತಿಗತಿ ಮತ್ತು ಬಳ್ಳಿಯ ಬೆಳವಣಿಗೆ ಮೇಲೆ ಉಪಯೋಗಿಸಬೇಕು.
ಸಾವಯವ ಗೊಬ್ಬರಗಳು: ನಾಟಿಯ ಸಮಯದಲ್ಲಿ ಪ್ರತಿ ಬಳ್ಳಿಗೆ ೨೦ ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಮತ್ತು ನಂತರ ಪ್ರತಿ ವರ್ಷ ಪ್ರತಿ ಬಳ್ಳಿಗೆ ೨೦ ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಕೊಡಬೇಕು. ಬೇವಿನ ಹಿಂಡಿ, ಎರೆಹುಳು ಗೊಬ್ಬರ ಹಾಗೂ ಬೊನ್‌ಮಿಲ್ (ಎಲುಬಿನ ಗೊಬ್ಬರ) ಇತ್ಯಾದಿ. ೧ ಕಿಲೋ ಕೊಟ್ಟಿಗೆ ಗೊಬ್ಬರದ ಜೊತೆಗೆ ಸೇರಿಸಬೇಕು. ರಸಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಕೊಯ್ಲಿನ ನಂತರ ಹಾಕುವುದು, ಗೊಬ್ಬರ ಹಾಕುವ ಸಮಯ: ಸವರುವ ೧೦-೧೨ ದಿವಸಗಳ ಪೂರ್ವದಲ್ಲಿ ಮಣ್ಣಿಗೆ ಹಾಕುವುದು.
ಪ್ರಮಾಣ ಪ್ರತಿ ಎಕರೆಗೆ : ಯೂರಿಯಾ ೨೫-೩೦ ಕೆ.ಜಿ. ಡೈ ಅಮೋನಿಯಾ ಪಾಸ್ಪೇಟ್ (ಡಿ.ಎ.ಪಿ.) ೪೦-೫೦ ಕೆ.ಜಿ. ಮೇಗ್ನಿಷಿಯಂ ಸಲ್ಫೇಟ್ ೨೦-೨೫ ಕೆ.ಜಿ. ಬೊರಿಕ್ ಅಸಿಡ್ ೫ ಕೆ.ಜಿ. ರಂಚಕ ಕರಗಿಸುವ ಬ್ಯಾಕ್ಷೀರಿಯಾ ೫ ಕೆ.ಜಿ. ಟ್ರೈಕೋಡರ್ಮಾ ೫ ಕೆ.ಜಿ. ಮತ್ತು ಕೊಟ್ಟಿಗೆ ಗೊಬ್ಬರ ಮೂರು ಟ್ರಾಕ್ಟರ ಲೋಡ್ ಹಾಕಬಹುದು.
ಮ್ಯಾಗ್ನೇಶಿಯಂ:- ಮ್ಯಾಗ್ನೇಶಿಯಂ ಕೂಡಾ ತುಂಬಾ ಅವಶ್ಯಕ ಪೋಷಕಾಂಶವಾಗಿದ್ದು ಇದು ಪತ್ರಹರಿತ್ತಿನ ಪ್ರಮುಖ ಅಂಶವಾಗಿದೆ. ಇದರಿಂದಾಗಿ ಮ್ಯಾಗ್ನೇಶಿಯಂ ದ್ಯುತಿಸಂಶ್ಲೇಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ಹೊಂದಿದೆ. ಮ್ಯಾಗ್ನೇಶಿಯಂನ ಕೊರತೆಯಾದಾಗ ಕೊರತೆಯ ಲಕ್ಷಣಗಳು ಪ್ರಥಮವಾಗಿ ಹಳೆಯ ಎಲೆಯ ಮೇಲೆ ಕಂಡುಬರುತ್ತವೆ. ಏಕೆಂದರೆ ಮ್ಯಾಗ್ನೇಶಿಯಂ ಸಸ್ಯ ಪದ್ಧತಿಯಲ್ಲಿ ಇದು ಚಲಿಸುವ ಸಾಮರ್ಥ್ಯ ಹೊಂದಿದೆ. ಎಲೆಗಳು ಮೊದಲು ಹಳದಿ ಬಣ್ಣಕ್ಕೆ ತಿರುಗುತ್ತವೆ. ತದನಂತರ ಮೇಲ್ಭಾಗದಲ್ಲಿರುವ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ. ಮ್ಯಾಗ್ನೇಶಿಯಂನ ಕೊರತೆಯಿಂದಾಗಿ ಮಮ್ಮಿಫಿಕೇಶನ್ ಅಥವಾ ಬಂಚ್ ಸ್ಟೆಮ್ ನೆಕ್ರೊಸಿಸ್ ಸಾಮಾನ್ಯವಾಗಿ ಕರಲು ಜಮೀನುಗಳಲ್ಲಿ ಕಂಡುಬರುವುದು.
ಎಲೆಗಳ ಮೇಲೆ ಮ್ಯಾಗ್ನೇಶಿಯಂ ನೈಟ್ರೇಟ್ ಅಥವಾ ಮ್ಯಾಗ್ನೇಶಿಯಂ ಸಲ್ಫೇಟ್‌ನ ೦.೫ ಶೇ. ದ್ರಾವಣದಿಂದ ಸಿಂಪರಣೆ ಮಾಡುವುದು ತುಂಬಾ ಪರಿಣಾಮಕಾರಿ ಎಂದು ಕಂಡುಬAದಿದೆ. ಶೇ. ೦.೫ ಕ್ಕಿಂತ ಹೆಚ್ಚಿನ ಪ್ರತಿಶತ ಮ್ಯಾಗ್ನೇಶಿಯಂ ಹೊಂದಿದ ದ್ರಾವಣದ ಸಿಂಪರಣೆ ಮಾಡಿದರೆ ಎಲೆ ಸುಡುವುದು ಕಂಡುಬರುವುದು. ಬಳ್ಳಿಯ ಹಣ್ಣು ಕಟ್ಟಿದ ನಂತರ ಮ್ಯಾಗ್ನೇಶಿಯಂ ಸಲ್ಫೇಟ್ ಸಿಂಪರಣೆ ಮಾಡಬಾರದು. ಏಕೆಂದರೆ ಇದು ಹಣ್ಣುಗಳ ಮೇಲೆ ಕಲೆಯನ್ನು ಉಂಟುಮಾಡಬಹುದಾಗಿದೆ.
ಸುಣ್ಣ (ಕ್ಯಾಲ್ಸಿಯಂ):- ಸುಣ್ಣವು ಪ್ರಮುಖವಾಗಿ ಸಸ್ಯಕೋಶದ ರಚನೆ ಹಾಗೂ ಸಸ್ಯಕೋಶದ ಪರದೆಯ ಛೇದಿಸಿ ರೋಗವು ಸಾಮರ್ಥ್ಯದ ಮೂಲವಾಗಿದೆ. ಸಸ್ಯಕೋಶದ ವಿಭಜನೆ ಹಾಗೂ ಉದ್ವಿಗುವಿಕೆಯಲ್ಲಿ ಸುಣ್ಣವೂ ಪ್ರಮುಖ ಪಾತ್ರ ಹೊಂದಿದೆ. ಸಸ್ಯದ ಪ್ಲೂಯಂನಲ್ಲಿ ಆಹಾರನಾಳ ಅಥವಾ ಸುಣ್ಣವೂ ಹರಿದಾಡುವುದರಿಂದ ಇದರ ಕೊರತೆ ಕಂಡುಬAದರೆ ಕೊರತೆಯ ಲಕ್ಷಣಗಳು ಸಾಮಾನ್ಯವಾಗಿ ತುದಿಯಲ್ಲಿರುವ ಕುಡಿಗಳಲ್ಲಿ ಹಾಗೂ ದೇಟುಗಳಲ್ಲಿ ಕಂಡುಬರುವುದು. ಪ್ರಮುಖವಾಗಿ ಚಳಿಗಾಲದಲ್ಲಿ ಸುಣ್ಣದ ಕೊರತೆಯ ಗೊಂಚಲುಗಳಲ್ಲಿ ಕಂಡುಬರಬಹುದು. ಬೆಳೆಯುತ್ತಿರುವ ಗುಚ್ಛಗಳ ತುದಿಯಿಂದ ಒಣಗಲು ಪ್ರಾರಂಭಿಸುತ್ತವೆ. ಈ ಲಕ್ಷಣಗಳು ಸ್ಟೆಮ್ ನೆಕ್ರೋಸಿಸ್ ತೀವ್ರತೆಯಲ್ಲಿ ಕಂಡುಬರುವ ಲಕ್ಷಣಗಳಿಗೆ ಸರಿಸಮಾನವಾಗಿರುತ್ತವೆ. ಆಂಧ್ರಪ್ರದೇಶದ ಹೈದರಾಬಾದ ಪ್ರದೇಶದಲ್ಲಿ ಕಂಡುಬರುವ ಬ್ಲಾಸಂ ಎಂಡರಾಟ್ ರೋಗವು ಸುಣ್ಣದ ಕೊರತೆಯಿಂದ ಕಂಡುಬರುವ ರೋಗವಾಗಿದೆ. ಕ್ಯಾಲ್ಸಿಯಂ ನೈಟ್ರೇಟ್ ಅಥವಾ ಕ್ಯಾಲ್ಸಿಯಂ ಕ್ಲೋರೈಡ್‌ನ ದ್ರಾವಣವನ್ನು ಶೇ. ೦.೨ ರಿಂದ ಶೇ. ೦.೫ ರಷ್ಟನ್ನು ಹಣ್ಣು ಅಭಿವೃದ್ಧಿ ಹೊಂದುವ ಹಂತದಲ್ಲಿ ನೀಡಬೇಕು.
(ಇನ್ನೂ ಇದೆ)
ಚಿತ್ರ ಮತ್ತು ಮಾಹಿತಿ ಸಹಕಾರ: ಪಾಂಡುರಂಗ ಮತ್ತು ವಿಠ್ಠಲ್ ಮಂಗಿ, ತೋಟಗಾರಿಕಾ ಕಾಲೇಜು, ಬಾಗಲಕೋಟೆ