ದ್ರೌಪದಿ ಮುರ್ಮು ಜನರ ರಾಷ್ಟ್ರಪತಿಯಾಗಲಿ

ದ್ರೌಪದಿ ಮುರ್ಮು ಜನರ ರಾಷ್ಟ್ರಪತಿಯಾಗಲಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಐದು ವರ್ಷಗಳ ಅವಧಿ ರವಿವಾರಕ್ಕೆ ಅಂತ್ಯವಾಗಿದ್ದು, ಸೋಮವಾರ ದೇಶದ ಹೊಸ ರಾಷ್ಟ್ರಪತಿಯ ಆಗಮನವಾಗಲಿದೆ. ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ, ಸುಪ್ರೀಂ ಕೋರ್ಟ್ ನ್ಯಾ। ಎನ್ ವಿ ರಮಣ ಅವರಿಂದ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ದೇಶದಲ್ಲಿ ಎಲ್ಲ ಧರ್ಮ, ಜಾತಿಯವರಿಗೂ ಅತ್ಯುನ್ನತ ಸ್ಥಾನಗಳಲ್ಲಿ ಮಾನ್ಯತೆ ಸಿಗುವುದು ನಮ್ಮ ಸಂವಿಧಾನದ ಹೆಮ್ಮೆಯೇ ಸರಿ. ಈ ದಿನದವರೆಗೆ ಇದ್ದ ರಾಷ್ಟ್ರಪತಿಗಳು, ದೇಶದಲ್ಲೇ ಅತ್ಯಂತ ಹಿಂದುಳಿದಿದೆ ಎಂದೇ ಗುರುತಿಸಿಕೊಂಡಿರುವ ದಲಿತ ಸಮುದಾಯದವರು. ಈಗ ಹೊಸದಾಗಿ ಬರುತ್ತಿರುವವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಒಡಿಶಾ ಮೂಲದವರು. ಹೀಗಾಗಿ ಅತ್ಯುನ್ನತ ಹುದ್ದೆಗಳು ಎಲ್ಲ ವರ್ಗ, ಸಮುದಾಯಕ್ಕೆ ಸೇರಿವೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ.

ರಾಮನಾಥ್ ಕೋವಿಂದ್ ಅವರು, ರಾಷ್ಟ್ರಪತಿ ಭವನದ ಘನತೆಯನ್ನು ಹಾಗೆಯೇ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಸಾರ್ವಜನಿಕರಿಗೂ ರಾಷ್ಟ್ರಪತಿ ಭವನ ಎಟಕಬೇಕು ಎಂಬ ಪ್ರಣವ್ ಮುಖರ್ಜಿ ಅವರ ಆಶಯವನ್ನು ಹಾಗೆಯೇ ಮುಂದುವರೆಸಿಕೊಂಡು ಹೋದವರು ಕೋವಿಂದ್. ಅಲ್ಲದೆ, ಈ ಐದು ವರ್ಷಗಳ ಕಾಲವೂ ಎಲ್ಲೂ ವಿವಾದಕ್ಕೆ ಆಸ್ಪದ ನೀಡದಂತೆ ಅಧಿಕಾರ ನಡೆಸಿಕೊಂಡು ಹೋಗಿದ್ದುದೂ ಅವರ ಹೆಗ್ಗಳಿಕೆ. ಹಾಗೆಯೇ, ಗಲ್ಲು ಶಿಕ್ಷೆಗೆ ಗುರಿಯಾದವರ ಕ್ಷಮಾದಾನ ನಿರಾಕರಣೆಯ ವಿಚಾರದಲ್ಲಿಯೂ ರಾಮನಾಥ್ ಕೋವಿಂದ್ ಅವರು ಮೃದು ನಿಲುವು ಹೊಂದಿರಲಿಲ್ಲ. ಇವರ ಐದು ವರ್ಷಗಳ ಆಳ್ವಿಕೆಯಲ್ಲಿ ಒಟ್ಟು ಆರು ಗಲ್ಲು ಶಿಕ್ಷೆಗಳ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದವು ನಿರ್ಭಯಾ ಹಂತಕರ ಕ್ಷಮಾದಾನ ಅರ್ಜಿಗಳು, ಆದರೆ, ಇವರಿಗಿಂತ ಹಿಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ೩೦ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ಆಡಳಿತಾತ್ಮಕ ವಿಚಾರಕ್ಕೆ ಬಂದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಡುವಿನ ಸಂಬಂಧ ಉತ್ತಮವಾಗಿಯೇ ಇತ್ತು. ಎಲ್ಲಿಯೂ ರಾಷ್ಟ್ರಪತಿ ಭವನ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟಗಳು ಕಂಡು ಬರಲಿಲ್ಲ.

ಈಗ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಮುಗಿದಿದೆ. ಸೋಮವಾರದಿಂದ ದ್ರೌಪದಿ ಮುರ್ಮು ಅವರ ಕಾಲ ಆರಂಭವಾಗಲಿದೆ. ದೇಶದ ಮಹಿಳೆಯರ ಸ್ವಾವಲಂಬನೆ ವಿಚಾರದಲ್ಲಿ ಮುರ್ಮು ಅವರ ಆಯ್ಕೆ ಅತ್ಯಂತ ಶ್ಲಾಘನೀಯ ಎಂದರೆ ತಪ್ಪಾಗಲಾರದು. ಕಾಲಕಾಲಕ್ಕೆ ದೇಶದ ಅತ್ಯುನ್ನತ ಪದವಿಗಳ ನೇತೃತ್ವ ಮಹಿಳೆಯರಿಗೆ ಸಿಗುತ್ತಿರಬೇಕು.

ಶಿಕ್ಷಕ ವೃತ್ತಿಯಿಂದ ಒಡಿಶಾದ ಕ್ಯಾಬಿನೆಟ್ ಸಚಿವೆ ಮತ್ತು ಝಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ದ್ರೌಪದಿ ಮುರ್ಮು ಅವರು, ಉತ್ತಮ ಆಡಳಿತಗಾರ್ತಿ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ನವೀನ್ ಪಟ್ನಾಯಕ್ ಸಂಪುಟದಲ್ಲಿ ಸಚಿವೆಯಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲೂ ಅತ್ಯುತ್ತಮ ಶಾಸಕಿ ಎಂಬ ಹೆಗ್ಗಳಿಕೆ ಪಡೆದವರು ಇವರು. ಝಾರ್ಖಂಡ್ ನ ರಾಜ್ಯಪಾಲರಾಗಿದ್ದಾಗಲೂ, ಜನ ವಿರೋಧಿ ತೀರ್ಮಾನಗಳ ವಿಚಾರದಲ್ಲಿ ಧೃಢ ನಿಲುವು  ತೆಗೆದುಕೊಂಡ ಹೆಚ್ಚುಗಾರಿಕೆಯೂ ಇವರಿಗಿದೆ. ಹೀಗಾಗಿ, ರಾಷ್ಟ್ರಪತಿ ಭವನ ಮುಂದೆಯೂ ಜನರಿಗೆ ಎಟಕುವ ಭವನವಾಗಲಿ. ಮುರ್ಮು ಅವರು ಜನರ ರಾಷ್ಟ್ರಪತಿಯಾಗಲಿ ಎಂಬುದು ಎಲ್ಲರ ಹಾರೈಕೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೫-೦೭-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ.