ದ್ವನಿ ಕಾಪಾಡುವ‌ ಬಗೆ.

ದ್ವನಿ ಕಾಪಾಡುವ‌ ಬಗೆ.

ಧ್ವನಿ - ಅತಿಯಾದ ಬಳಕೆ - ದುಷ್ಪರಿಣಾಮ
ಹಲವಾರು ಪ್ರಖ್ಯಾತ ಗಾಯಕರು ಕೆಲಕಾಲ ತಮ್ಮ ಧ್ವನಿಗೆ ವಿರಾಮ ಕೊಟ್ಟಿದ್ದನ್ನು, ಹಾಡುವುದನ್ನು ನಿಲ್ಲಿಸದ್ದನ್ನೂ, ಗಂಟಲೊಳಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದನ್ನು ಕೇಳುತ್ತಲೇ ಇರುತ್ತೇವೆ.  ಎತ್ತರದ ಧ್ವನಿಯಲ್ಲಿ ಕಿರುಚಾಟ, ಚೀರಾಟ ಮಾಡಿದವರ ಧ್ವನಿ  ಬದಲಾಗುವುದನ್ನು ನೋಡಿದ್ದೇವೆ.  ಕಿರುಚಬೇಡ, ಗಟ್ಟಿಯಾಗಿ ಮಾತನಾಡಬೇಡ ಗಂಟಲು ಹಾಳಾಗುತ್ತದೆ ಇಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ.  ಇವರಿಗೆಲ್ಲಾ ಆಗುವುದಾದರೂ ಏನು ತೊಂದರೆ?

ಧ್ವನಿ  ಉತ್ಪತ್ತಿ
ಧ್ವನಿ  ಉತ್ಪತ್ತಿಗೆ ದೇಹದ ಬಹುತೇಕ ಅಂಗಾಂಗಗಳ ಸಹಕಾರ ಅತ್ಯಗತ್ಯ.  ಉಸಿರಾಟದ ಮೂಲಕ
ಧ್ವನಿ  ಉತ್ಪತ್ತಿ ಪ್ರಾರಂಭವಾಗುವುದು.  ಉಸಿರನ್ನು ಒಳಗೆ ತೆಗೆದುಕೊಂಡಾಗ ಡಯಾಫ್ರಮ್ ಎಂಬ ಸ್ನಾಯು ತನ್ನ ಸ್ಥಾನದಿಂದ ಕೆಳಗಿಳಿಯುತ್ತದೆ.  ಶ್ವಾಸಕೋಶಗಳು ಗಾಳಿಯಿಂದ ತುಂಬಿ ದೊಡ್ಡದಾಗುತ್ತವೆ.  ಉಸಿರನ್ನು ಹೊರ ಹಾಕುವ ಡಯಾಫ್ರಮ್ ಮೇಲೇರುತ್ತದೆ.  ಎದೆಯ ಗೂಡಿನ ಸ್ನಾಯುಗಳು ಶ್ವಾಸಕೋಶದಿಂದ ಗಾಳಿಯನ್ನು ಹೊರಹಾಕಲು ಸಹಕರಿಸುತ್ತವೆ.   ಧ್ವನಿ  ಉತ್ಪತ್ತಿ  ಮಾಡಲು ಶ್ವಾಸಕೋಶದಿಂದ ವೋಲಕ್ ಕಾರ್ಡ್ (ಧ್ವನಿ)ನ ಸ್ನಾಯುಗಳು ಚುರುಕಾಗಿ ಹೊರ ಹಾಕಲ್ಪಡುವ ಗಾಳಿಗೆ ಒತ್ತಡ ಹಾಗೂ ತಡೆಯನ್ನುಂಟು ಮಾಡುವವು.  ನಂತರ ಮುಚ್ಚಿರುವ ವೋಕಲ್ ಕಾರ್ಡ್‍ಗಳಿಂದ ಗಾಳಿ ರಭಸವಾಗಿ ಆಚೆ ಬಂದಾಗ ಅಲ್ಲಿನ ಒತ್ತಡ ಕಡಿಮೆಯಾಗಿ, ಕಂಪನ ಉಂಟಾಗಿ ವೋಕಲ್ ಕಾರ್ಡ್‍ಗಳು ಗಾಳಿಯಿಂದ ಒಂದಕೊಂದು ದೂರವಾಗುವುದು ನಂತರ ಮತ್ತೆ ಹತ್ತಿರಕ್ಕೆ ಬರುವ ಕ್ರಿಯೆ.  ಸಾವಿರಾರು ಅಥವ ನೂರಾರು ಸಲ ಕ್ಷಣಕ್ಕೊಮ್ಮೆ ಆಗುವುದೇ ನಮ್ಮ ಧ್ವನಿ  ಉತ್ಪತ್ತಿಗೆ ಕಾರಣ.  

ಈ ಧ್ವನಿಯು ನಂತರ ಗಂಟಲಿನ ಸ್ನಾಯುಗಳು, ಬಾಯಿಯಲ್ಲಿನ ತುಟಿ, ನಾಲಿಗೆ, ಅಂಗುಳ ಎಲ್ಲದರ ಸಹಕಾರದಿಂದ "ಮಾತು" ಅಥವಾ "ಭಾಷಣ" ವಾಗಿ ಪರಿವರ್ತನೆಗೊಳ್ಳುವುದು.  ಲ್ಯಾರಿಂಕ್ಸ್ ಅನ್ನು "ಧ್ವನಿ ಪೆಟ್ಟಿಗೆ" ಎನ್ನುತ್ತೇವೆ.  ಇದು ಗಂಟಲಿನಲ್ಲಿರುವ ಟ್ಯೂಬಿನಾಕಾರ, ಅಂಗ,  ಸ್ನಾಯುಗಳು, ಕಾರ್ಟಿಲೇಜ್ ಹಾಗೂ ಕನೆಕ್ಟಿವ್ ಟಿಶ್ಯೂಯಿಂದ ರಚಿತವಾದ ಅಂಗ.
ಇದರ ಜೊತೆಗೆ ಹಾಡುವವರು ಧ್ವನಿ  ಉತ್ಪತ್ತಿಗೆ ಹೊಟ್ಟೆಯ ಸ್ನಾಯುಗಳು, ಬೆನ್ನಿನ ಸ್ನಾಯುಗಳು, ಎದೆಗೂಡಿನ ಸ್ನಾಯುಗಳು, ಎಲ್ಲವನ್ನೂ ಉಪಯೋಗಿಸತ್ತಾರೆ.  ವೋಲಕ್ ಕಾರ್ಡ್‍ಗಳು ಪದರದಂತಿದ್ದು. ಮುಚ್ಚಿಕೊಳ್ಳುವುದು ತೆರೆಯುವುದು ಮಾಡುತ್ತಾ ಧ್ವನಿ ಉತ್ಪಾದಿಸುತ್ತವೆ.  ವೇಗವಾಗಿ ಇವು ಮುಚ್ಚುವುದು ತೆರೆಯುವುದು ಉತ್ಪತ್ತಿಯಾಗುವುದು.  ಮಾಮೂಲಿ ಭಾಷಣದ ವೇಳೆ ಇವು ಸೆಕೆಂಡಿಗೆ ನೂರುಸಲ ಮುಚ್ಚಿ ತೆಗೆಯುವುದು.

ವೋಲಕ್ ಕಾರ್ಡ್‍ನಾಡ್ಯೂಲ್ :
(ಧ್ವನಿ ಪಟಲದಲ್ಲಿನ ಗಂಟುಗಳು) ಹಾಡುಗಾರರ ಗಂಟು, ಉಪಾಧ್ಯಾಯರ ಗಂಟು, ಅರಚುವವರ ಗಂಟು ಎಂದೂ ಇದನ್ನು ಕರೆಯುವರು.  ವೋಕಲ್ ಕಾರ್ಡ್  ಮೇಲೆ ಚಿಕ್ಕದಾಗಿ ಕಾಣುವ ಗಂಟಿದು.  ಧ್ವನಿಗೆ ವಿರಾಮ ಕೊಡದೆ ಸದಾ ಗಟ್ಟಿಯಾಗಿ ಮಾತನಾಡುವ, ಪಾಠ ಮಾಡುವ ಉಪಾಧ್ಯಾಯರು, ಹಾಡು ಹೇಳುವ ಸಂಗೀತಗಾರರು ಹಾಗೂ ಇತರೇ ಕಾರಣಗಳಿಂದ ಧ್ವನಿಗೆ ಶ್ರಮ ಕೊಡುವವರಲ್ಲಿ ಇದು ಸಾಮಾನ್ಯ.  ಧ್ವನಿ ಪಟಲಕ್ಕೆ ಒತ್ತಡದಿಂದ ಉಂಟಾಗುವ ಗಾಯವೇ ಗಂಟಿಗೆ ಕಾರಣ.
ಸಿಗರೇಟ್ ಸೇದುವವರು, ಧ್ವನಿಪೆಟ್ಟಿಗೆಯ ಅಲರ್ಜಿಯಾದಾಗ, ಕೆಲಸ ಮಡುವ ಕಾರ್ಖಾನೆಗಳಲ್ಲಿನ ವಿಷಾನಿಲ ಸೇವಿಸಿದಾಗ ಹಾಗೂ ಥೈರಾಯಿಡ್ ಹಾಮೋನ್ ಉತ್ಪತ್ತಿ ಕಡಿಮೆಯಾದವರಲ್ಲಿ, ಅತಿಯಾಗಿ ಕಿರುಚಿ ಧ್ವನಿಯನ್ನು ಆಯಾಸಗೊಳಿಸಿದವರಲ್ಲಿ ಧ್ವನಿ ಪಟಲದ ಮೇಲೆ ಇನ್ನೊಂದು ರೀತಿಯ ಚಿಕ್ಕಾದಾದ ಗಂಟು (ಪಾಲಿಪ್) ಕಂಡು ಬರುವುದು.  

ರೋಗ ಲಕ್ಷಣಗಳು
ಧ್ವನಿ ಬದಲಾವಣೆ ಹಾಗೂ ಇಂಪಾದ ಧ್ವನಿಯ ಕರ್ಕಶವಾಗುವಿಕೆಯೇ ಮುಖ್ಯವಾದ ರೋಗಲಕ್ಷಣ.
ಗಂಟಲು ತಜ್ಞರು ಲ್ಯಾರಿಂಗೋಸ್ಕೋಪ್ ಹಾಗೂ ಇತರೇ ಸಲಕರಣಿಗಳ ಮುಖಾಂತರ ಪರೀಕ್ಷಿಸಿ, ಗಂಟಿನ ಬಗ್ಗೆ ಕೂಲಂಕುಶವಾದ ವಿವರಗಳನ್ನು ಅರಿಯುವರು.  ಈ ರೀತಿ ತೊಂದರೆಯಿಂದ ಮಾನಸಿಕ ಯಾತನೆಯನ್ನು ಅನುಭವಿಸುವವರು ಇಂತಹ ಗಂಟುಗಳು ಲಿಂಗಭೇದವಿಲ್ಲದೆ ಎಲ್ಲರಲ್ಲೂ ಕಾಣಬಹುದು.  ಚಿಕ್ಕಮಕ್ಕಳಲ್ಲೂ ಅಪರೂಪವಾಗಿ ಈ ರೀತಿ ತೊಂದರೆ ಕಾಣಬಹುದು.  

ಚಿಕಿತ್ಸೆ :
ಮೊಟ್ಟ ಮೊದಲನೆಯದಾಗಿ, ಇಂಥಹವರಲ್ಲಿ ಧ್ವನಿಗೆ ಹಲವಾರು ವಾರಗಳ ಕಾಲ ರೆಸ್ಟ್ ಅತ್ಯಗತ್ಯ.  ಹಾಡುವುದನ್ನು, ಪಾಠ ಮಾಡುವುದನ್ನೂ ನಿಲ್ಲಿಸಿ ಮೌನವ್ರತ ಆಚರಿಸಬೇಕು.  ನಂತರ ಸ್ಪೀಚ್ ಥೆರಪಿ, ಧ್ವನಿ ಸಂಸ್ಕರಣೆ ಕಾರ್ಯ ಬೇಕಾಗುವುದು.  ಹಲವಾರು ವಾರಗಳ ವಿರಾಮದ ನಂತರ ಅನೇಕರಲ್ಲಿ ಗಂಟಿನ ಗಾತ್ರ ಕಡಿಮೆಯಾಗುವುದು.  ಕೆಲವೊಮ್ಮೆ ಸ್ಪೀರಾಯಿಡ್ ಸ್ಪ್ರೇ ಬಳಸಲಾಗುವುದು.
ಶಸ್ತ್ರಚಿಕಿತ್ಸೆಯ ಮುಖಾಂತರ ಆ ಗಂಟನ್ನು ತೆಗೆದು, ನಂತರ ಹಿಸ್ಪೋಪೆಥಾಲಜಿ ಪರೀಕ್ಷೆಗೆ ಕಳುಹಿಸಲಾಗುವುದು.  ಧ್ವನಿಪಟಲದಲ್ಲಿ ಬರುವ ಮತ್ತೊಂದು ಭಯಾನಕ ಕಾಯಿಲೆಯೆಂದರೆ ಕ್ಯಾನ್ಸರ್.  ಹಿಸ್ಪ್ರೋಪೆಥಾಲಜಿ ಪರೀಕ್ಷೆಯ ನಂತರ ಖಚಿತವಾಗಿ ನಾವು ಗಂಟಿನ ನೈಜ ಸ್ವರೂಪವನ್ನು ತಿಳಿದು  ಮುಂದುವರೆಯಬಹುದು.  ಶಸ್ತ್ರಚಿಕಿತ್ಸೆಯೂ ಸಹ ಜೆನೆರಲ್ ಅನಸ್ತೀಶಿಯಾದಲ್ಲಿ ಮಾಡಲಾಗುವ ಅತೀ ಸರಳವಾದ ಚಿಕಿತ್ಸೆ.

ಧ್ವನಿ ಪಟಲದ ಗಂಟನ್ನು ತಡೆಯಬಹುದು.
ಧ್ವನಿಗೆ ಒತ್ತಡ, ತೊಂದರೆಯಾಗದಂತೆ ನೋಡಿಕೊಳ್ಳಿ.
ಎತ್ತರದ ಧ್ವನಿಯಲ್ಲಿ ಮಾತನಾಡುವುದು ಕಿರುಚುವುದನ್ನು ನಿಲ್ಲಿಸಬೇಕು.
ಸಹಜವಾದ, ಮಾಮೂಲಿ ಪಿಚ್‍ನಲ್ಲಿ ಮತನಾಡಬೇಕೇ ಹೊರತು, ಅತೀಜಾಸ್ತಿ, ಅತೀ ಕಡಿಮೆ ಪಿಚ್ ಬಳಸಿ ಮಾತನಾಡಬಾರದು.
ಕುತ್ತಿಗೆಯಲ್ಲಿ ಟೆನ್ಷನ್ ಕಡಿಮೆಯಾಗಲು ತಲೆಯನ್ನು ಆಚೀಚೆ ಆಡಿಸುತ್ತೀರಿ.  ನಿಮ್ಮ ಭುಜಗಳು ಕಡಿಮೆ ಎತ್ತರದಲ್ಲಿರಲಿ.
ಎರಡು ವಾರಕ್ಕಿಂತ ಹೆಚ್ಚಿನ ಅವಧಿ ನಿಮ್ಮ ಧ್ವನಿಯು ಒರಟಾಗಿದ್ದರೆ ಗಂಟಲಿನ ತಜ್ಞರನ್ನು ಭೇಟಿಮಾಡಲು ಮರೆಯದಿರಿ.

ನೆನಪಿಡಿ :
ಗಂಟಲಿನ ಹಾಗೂ ಸುತ್ತಮುತ್ತಲಿರುವ ಅಂಗಾಂಗಗಳ ಕ್ಯಾನ್ಸರ್ ನಿಂದ ಹಾಗೂ ಇತರೇ ಕಾರಣಗಳಿಂದ ಧ್ವನಿಪಟಲ ನಿಶ್ಚೇತನಗೊಂಡು ತನ್ನ ಕೆಲಸ ನಿರ್ವಹಿಸಲಾಗದಿರಬಹುದು.  ಇದಕ್ಕೆ ವೋಕಲ್ ಕಾರ್ಡ್ ಪ್ಯಾರಾಲಿಸಿಸ್ ಎನ್ನುತ್ತೇವೆ.
ಧ್ವನಿಪೆಟ್ಟಿಗೆಯ ನರ ದೌರ್ಬಲ್ಯ, ಅಥವಾ ಕ್ಯಾನ್ಸರ್ ನಿಂದ ಸದಾ ನರ ನಿಶ್ಚೇತನವಾದಾಗ ಧ್ವನಿಯನ್ನು ಕಳೆದುಕೊಳ್ಳಬಹುದು.  
ಯಾವುದೇ ಕಾರಣಕ್ಕಾಗಿ ಧ್ವನಿಯಲ್ಲಿನ ವ್ಯತ್ಯಾಸ ಬಹಳ ಸಮಯ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.
ದಿನನಿತ್ಯ ನೋಡುವ ಧ್ವನಿ ಬದಲಾವಣಿಗೆ ಸಾಮಾನ್ಯ ಕಾರಣ, ನೆಗಡಿ, ಕೆಮ್ಮು, ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕು.
ವೋಕಲ್ ಕಾರ್ಡ್ ನಾಡ್ಯೂಲ್ ಅನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದ ನಂತರ ಧ್ವನಿ ಮಾಮೂಲಿನಂತಾಗುವುದು.
ಮತ್ತೆ ಮರುಕಳಿಸದಂತೆ ಮಾಡಲು ಶಸ್ತ್ರ ಚಿಕಿತ್ಸೆಯ ಮುನ್ನ ಹಗೂ ನಂತರ ಸ್ಪೀಚ್ ಥೆರಪಿ ಅತ್ಯಗತ್ಯ.