ದ್ವಿದಳಧಾನ್ಯ: ಬಂಪರ್ ಬೆಳೆ, ಕುಸಿದ ಬೆಲೆ
೨೦೧೫ರ ಮೇ ತಿಂಗಳಿನಲ್ಲಿ ದ್ವಿದಳಧಾನ್ಯಗಳ ಬೆಲೆ ಏರಲು ಶುರುವಾಗಿತ್ತು. ಆ ದಾಖಲೆ ಬೆಲೆ ನೋಡಿ ಲಕ್ಷಗಟ್ಟಲೆ ರೈತರು ತಮ್ಮ ಹೊಲಗಳಲ್ಲಿ ದ್ವಿದಳಧಾನ್ಯಗಳ ಬೀಜ ಬಿತ್ತಿದರು.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಿಂಪ್ರಿಗಾವ್ಲಿ ಗ್ರಾಮದ ಸಣ್ಣ ರೈತ ಅನಿಲ್ ಮಂಡಗೆ ಅವರಲ್ಲೊಬ್ಬರು. ತನ್ನ ಮೂರು ಎಕ್ರೆ ಹೊಲದಲ್ಲಿ ಅವರು ಈ ಹಂಗಾಮಿನಲ್ಲಿ ಬೆಳೆದದ್ದು ಒಂದು ಟನ್ ಹೆಸರುಕಾಳು. ದುರದೃಷ್ಟದಿಂದ, ಯಾವ ವ್ಯಾಪಾರಿಯೂ ಅವರಿಂದ ಒಳ್ಳೇ ಬೆಲೆಗೆ ಖರೀದಿಸಲು ತಯಾರಿಲ್ಲ. ಯಾಕೆಂದರೆ, ಹೆಸರುಕಾಳಿನ ಈಗಿನ ರಖಂ ಬೆಳೆ ಟನ್ನಿಗೆ ರೂ.೩೦,೦೦೦ಕ್ಕಿಂತ ಕಡಿಮೆ. ಮಂಡಗೆ ತನ್ನ ಹೊಲದಲ್ಲಿ ಬೀಜ ಬಿತ್ತಿದ್ದಾಗ ಅದರ ಬೆಲೆ ಟನ್ನಿಗೆ ರೂ.೬೦,೦೦೦! ಸರಕಾರದ ಖರೀದಿ ಕೇಂದ್ರದಲ್ಲಾದರೂ ಮಾರೋಣ ಎಂದು ಮಂಡಗೆ ಹೋದರೆ ಇವರ ಫಸಲನ್ನು ಅಲ್ಲಿ ತಿರಸ್ಕರಿಸಿದರು. ಯಾಕೆಂದರೆ, ಮಂಡಗೆಯ ಹೆಸರುಕಾಳಿನಲ್ಲಿ ತೇವಾಂಶ ಜಾಸ್ತಿ ಇತ್ತು. “ಮಳೆಗಾಲ ಮುಗಿಯುತ್ತಿದ್ದಂತೆ ಮರಾಠವಾಡ ಪ್ರದೇಶದಲ್ಲಿ ಭಾರೀ ಮಳೆ ಸುರಿಯಿತು. ನಾನೇನು ಮಾಡಲಿ?” ಎಂದು ಅವಲತ್ತು ಕೊಳ್ಳುತ್ತಾರೆ ಮಂಡಗೆ. ಅಂತೂ, ಅಹ್ಮದ್ ನಗರ ಜಿಲ್ಲೆಯ ಏಳು ಗ್ರಾಮಗಳ ಸುಮಾರು ೭,೦೦೦ ರೈತರಿಂದ ಸರಕಾರ ಖರೀದಿ ಕೇಂದ್ರಗಳು ಖರೀದಿಸಿದ್ದು ಕೇವಲ ೧೨.೫ ಟನ್ ಹೆಸರುಕಾಳು!
ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಇದೇ ಕತೆ. ಮಧ್ಯಪ್ರದೇಶದ ಹಾರ್ದಾ ಜಿಲ್ಲೆಯಲ್ಲಿ ಈ ವರುಷ ಮೇ ತಿಂಗಳಲ್ಲಿ ಹೆಸರು ಕಾಳಿನ ಬೆಲೆ ಟನ್ನಿಗೆ ರೂ.೭೦,೦೦೦. ಕೇವಲ ಐದೇ ತಿಂಗಳಲ್ಲಿ, ಅಕ್ಟೋಬರಿನಲ್ಲಿ, ಅದು ಟನ್ನಿಗೆ ರೂ.೩೫,೦೦೦ಕ್ಕೆ ಕುಸಿಯಿತು. ದೇಶದ ಉದ್ದಗಲದಲ್ಲಿ ರೈತರು ಬೆಳೆದ ಹೆಸರುಕಾಳಿನ ಫಸಲನ್ನು ಖರೀದಿ ಕೇಂದ್ರಗಳು ತಿರಸ್ಕರಿಸುತ್ತಿವೆ. ಈ ಹಂಗಾಮಿನಲ್ಲಿ ಆ ಜಿಲ್ಲೆಯ ರೈತರು ಬೆಳೆದ ಹೆಸರುಕಾಳು ೩೯,೬೦೦ ಟನ್! “ಅಕ್ಟೋಬರಿನಲ್ಲಿ ೧,೦೬,೦೦೦ ರೈತರಿಂದ ಸರಕಾರದ ಖರೀದಿ ಕೇಂದ್ರಗಳು ಖರೀದಿಸಿದ್ದು ಕೇವಲ ೧೧೦ ಟನ್! ಅಂದರೆ ಸರಾಸರಿ ಒಬ್ಬೊಬ್ಬ ರೈತನಿಂದ ಒಂದು ಕಿಲೋ! ನಮ್ಮ ಫಸಲು ತಿರಸ್ಕರಿಸಲು ಒಂದಿಲ್ಲೊಂದು ನೆವನ ಹೇಳುತ್ತಾರೆ. ಇದರಿಂದಾಗಿ, ಪ್ರತಿ ದಿನವೂ ಖರೀದಿ ಕೇಂದ್ರಗಳಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ಜಗಳವಾಗುತ್ತಿದೆ” ಎನ್ನುತ್ತಾರೆ ಹಾರ್ದಾ ಜಿಲ್ಲೆಯ ರೈತ ಕೇದಾರ್ ಸಿಂಗ್. “ಮಾರುಕಟ್ಟೆಯಲ್ಲಿ ಬಹಳ ಒಳ್ಳೇ ಕ್ವಾಲಿಟಿಯ ಹೆಸರುಕಾಳಿಗೆ ಟನ್ನಿಗೆ ೪೦,೦೦೦ ರೂಪಾಯಿ ರೇಟಿದೆ. ಇದು ಕನಿಷ್ಠ ಬೆಂಬಲ ಬೆಳೆ ೫೨,೨೫೦ ರೂಪಾಯಿಗಿಂತ ಬಹಳ ಕಡಿಮೆ” ಎಂದೂ ತಿಳಿಸುತ್ತಾರೆ.
ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಹೆಸರುಕಾಳಿನ ಮಾರುಕಟ್ಟೆ ಬೆಲೆ ಟನ್ನಿಗೆ ರೂ.೩೦,೦೦೦ಕ್ಕೆ ಕುಸಿದಿದೆ. ಇಂಥ ಪರಿಸ್ಥಿತಿಯಲ್ಲಿ ಸರಕಾರವು ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ರೈತರನ್ನು ಬೆಂಬಲಿಸಬೇಕು. ಆದರೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ೨೦೦ ಸರಕಾರಿ ಖರೀದಿ ಕೇಂದ್ರಗಳಲ್ಲಿ ೩೩೦ ಬೆಳೆಗಾರರಿಂದ ಖರೀದಿ ಮಾಡಿರುವುದು ಕೇವಲ ೩,೩೦೦ ಟನ್ ಹೆಸರುಕಾಳು! ಅಂದರೆ, ಪ್ರತಿಯೊಂದು ಕೇಂದ್ರದಲ್ಲಿ ೧೬.೫ ಟನ್ ಮಾತ್ರ.
ಈ ಬಾರಿ ಬಂಪರ್ ಬೆಳೆ ರೈತರಿಗೆ ಶಾಪವಾಗಿದೆ. ಎಲ್ಲ ದ್ವಿದಳಧಾನ್ಯಗಳ ಉತ್ಪಾದನೆಯಲ್ಲಿ ಈ ಹಂಗಾಮಿನಲ್ಲಿ ಭಾರೀ ಹೆಚ್ಚಳ. ಹೆಸರುಕಾಳಿನ ಉತ್ಪಾದನೆ ೨೦೧೫ರ ಖಾರಿಫ್ನಲ್ಲಿದ್ದ ಒಂದು ದಶಲಕ್ಷ ಟನ್ನಿನಿಂದ ಈ ಹಂಗಾಮಿನಲ್ಲಿ ೧.೩೫ ದಶಲಕ್ಷ ಟನ್ನಿಗೆ, ತೊಗರಿಯ ಉತ್ಪಾದನೆ ಕಳೆದ ವರುಷದ ೨.೪೬ ದಶಲಕ್ಷ ಟನ್ನಿನಿಂದ ಈ ಹಂಗಾಮಿನಲ್ಲಿ ೪.೨೯ ದಶಲಕ್ಷ ಟನ್ನಿಗೆ ಏರಿದೆ. ಇದುವೇ ರೈತರಿಗೆ ಮುಳುವಾಗಿದೆ. ದೇಶದಲ್ಲಿ ೨೦೦ರಷ್ಟು ಮುಖ್ಯ ರಖಂ ಮಾರುಕಟ್ಟೆಗಳಲ್ಲಿ ಹೆಸರುಕಾಳಿನ ಈಗಿನ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ. ರೈತರ ಈ ಸಂಕಟದ ಸ್ಥಿತಿ ಬಿಗಡಾಯಿಸಲಿದೆ. ನವಂಬರ್ ತಿಂಗಳಲ್ಲಿ ತೊಗರಿ ಫಸಲು ಮಾರುಕಟ್ಟೆಗೆ ಬಂದಿದೆ. ಆದರೆ ಹಲವು ರಾಜ್ಯಗಳಲ್ಲಿ ತೊಗರಿಯ ಮಾರುಕಟ್ಟೆ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತ (ರೂ.೪೮,೫೦೦) ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ನಾವು ಗಮನಿಸಬೇಕಾದ ಅಂಶ: ಬಂಪರ್ ಬೆಳೆ ಬಂದಿದ್ದರೂ ದ್ವಿದಳಧಾನ್ಯಗಳ ಚಿಲ್ಲರೆ ಮಾರಾಟ ಬೆಲೆ ಕಡಿಮೆಯಾಗಿಲ್ಲ. ಜನಸಾಮಾನ್ಯರು ಈಗಲೂ ಹೆಸರುಕಾಳನ್ನು ಕಿಲೋಕ್ಕೆ ರೂ.೧೧೫ – ೧೨೫ ದರದಲ್ಲಿ, ತೊಗರಿಬೇಳೆಯನ್ನು ಕಿಲೋಕ್ಕೆ ರೂ.೧೨೦ – ೧೪೦ ದರದಲ್ಲಿ ಖರೀದಿಸುತ್ತಿದ್ದಾರೆ. ಕಳೆದ ವರುಷ ದ್ವಿದಳಧಾನ್ಯಗಳ ತೀವ್ರ ಬೆಲೆಯೇರಿಕೆ ಮುನ್ನ ಇವುಗಳ ಮಾರಾಟ ದರ ಹೀಗಿತ್ತು: ಹೆಸರುಕಾಳಿಗೆ ಕಿಲೋಕ್ಕೆ ರೂ.೫೦ ಮತ್ತು ತೊಗರಿ ಬೇಳೆಗೆ ಕಿಲೋಕ್ಕೆ ರೂ.೬೦. ಈಗ ಏನಾಗಿದೆ? ರೈತರಿಂದ ದ್ವಿದಳಧಾನ್ಯ ಖರೀದಿಸಲು ಸರಕಾರದ ಹಿಂದೇಟು. ಅದರಿಂದಾಗಿ, ರೈತರು ಹೆಸರುಕಾಳನ್ನು ಕಿಲೋಕ್ಕೆ ರೂ.೩೦ – ೩೫ ದರದಲ್ಲಿ ವ್ಯಾಪಾರಿಗಳಿಗೆ ಮಾರುವಂತಾಗಿದೆ.
ಇದಕ್ಕೆ ಕಾರಣವೇನು? ಕಳೆದ ವರುಷದ ವಿಪರೀತ ಪರಿಸ್ಥಿತಿಯಲ್ಲಿ ಸರಕಾರವು ದ್ವಿದಳಧಾನ್ಯಗಳನ್ನು ಆಮದು ಮಾಡಿಕೊಂಡು ತನ್ನ ಮೀಸಲು ಸಂಗ್ರಹ ಹೆಚ್ಚಿಸಿಕೊಂಡಿತು. ೨೦೧೫-೧೬ರಲ್ಲಿ ಆಮದು ಮಾಡಿದ ದ್ವಿದಳಧಾನ್ಯಗಳ ಪರಿಮಾಣ ೫.೮ ದಶಲಕ್ಷ ಟನ್ (೨೦೧೪-೧೫ರಲ್ಲಿ ಆಮದಾದದ್ದು ೪.೫ ದಶಲಕ್ಷ ಟನ್). ಈ ವರುಷ ಎಪ್ರಿಲ್- ಮೇಯಲ್ಲಿ ೧.೨೬ ದಶಲಕ್ಷ ಟನ್ ದ್ವಿದಳಧಾನ್ಯಗಳನ್ನು ರೂ.೬,೦೦೦ ಕೋಟಿ ವೆಚ್ಚದಲ್ಲಿ ಆಮದು ಮಾಡಿಕೊಳ್ಳಲಾಗಿದೆ. “ಬಂಪರ್ ಉತ್ಪಾದನೆಯ ವರುಷದಲ್ಲಿಯೂ ಸರಕಾರವು ನಮ್ಮ ದೇಶದ ರೈತರನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ” ಎನ್ನುತ್ತಾರೆ ದೇವಿಂದರ್ ಶರ್ಮಾ,ಆಹಾರ ಮತ್ತು ಕೃಷಿ ವಿಶ್ಲೇಷಕ.ರೈತರಿಂದ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ದ್ವಿದಳಧಾನ್ಯ ಖರೀದಿ ಮಾಡದಿರಲು ಒಂದು ಕಾರಣ: ಪ್ರತಿ ತಿಂಗಳೂ ಪರಿಷ್ಕರಣೆ ಮಾಡುತ್ತಿರುವ “ದಾಸ್ತಾನು ಮಿತಿ ಮಾರ್ಗದರ್ಶಿ ನಿಯಮಗಳು”. ಆಗಸ್ಟ್ ೨೦೧೬ರಲ್ಲಿ ವ್ಯಾಪಾರಿಗಳಿಗೆ ವಿವಿಧ ದ್ವಿದಳಧಾನ್ಯ ಉತ್ಪಾದನಾ ರಾಜ್ಯಗಳು ಹೇರಿದ್ದ ದಾಸ್ತಾನು ಮಿತಿ: ಒಂದರಿಂದ ೩.೫ ಟನ್. “ಇಂತಹ ನಿಯಮಗಳು ರೈಡಿನ ಭಯ ಹುಟ್ಟಿಸಿ, ವ್ಯಾಪಾರಿಗಳು ರೈತರಿಂದ ಖರೀದಿಸಿ ದಾಸ್ತಾನು ಮಾಡುವುದಕ್ಕೆ ಅಡ್ಡಿ ಮಾಡುತ್ತವೆ” ಎಂಬುದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಪಿ. ಚೆಂಗಪ್ಪ ಅವರ ಅಭಿಪ್ರಾಯ. ದ್ವಿದಳಧಾನ್ಯಗಳಿಗೆ ಕೀಟಗಳ ಧಾಳಿ ಸಾಮಾನ್ಯ. ಆದ್ದರಿಂದ ಅವುಗಳ ಶೇಖರಣೆಗೆ ಸೂಕ್ತ ವ್ಯವಸ್ಥೆ ಅಗತ್ಯ. ಸರಕಾರದ ಮೀಸಲು ದಾಸ್ತಾನಿನ ಸೂಕ್ತ ವಿತರಣೆಗೆ ದಕ್ಷ ವ್ಯವಸ್ಥೆಯೂ ಅವಶ್ಯ; ಇಲ್ಲವಾದರೆ, ಸರಕಾರದ ಈರುಳ್ಳಿ ದಾಸ್ತಾನು ಕೊಳೆತು ಹೋದಂತೆ, ಇವೂ ಹಾಳಾಗುತ್ತವೆ ಎನ್ನುತ್ತಾರೆ ಚೆಂಗಪ್ಪ. “ರೈತರಿಗೆ ಉತ್ತಮ ಬೆಲೆ ಸಿಗಬೇಕಾದರೆ ಸರಕಾರವು ದ್ವಿದಳಧಾನ್ಯಗಳನ್ನು ಆಮದು ಮಾಡಬಾರದು. ಅದರ ಬದಲಾಗಿ ನಮ್ಮ ದೇಶದ ರೈತರಿಂದಲೇ ಖರೀದಿಸಬೇಕು. ಜೊತೆಗೆ, ವರ್ತಕರ ಮೇಲೆ ಹೇರಿದ ದಾಸ್ತಾನು ಮಿತಿಯನ್ನು ಕಿತ್ತು ಹಾಕಬೇಕು” ಎನ್ನುತ್ತಾರೆ, ಮಿತೇಶ್ ಪಟೇಲ್, ಅಧ್ಯಕ್ಷ, ದ್ವಿದಳಧಾನ್ಯ ಉತ್ಪಾದನಾ ಅಸೋಸಿಯೇಷನ್, ಗುಜರಾತ್. ಇದೆಲ್ಲ ಸರಿ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?