ದ್ವಿ ಕ್ಷೇತ್ರದಲ್ಲಿ ಸ್ಪರ್ಧೆ ಸೂಕ್ತವೇ?

ದ್ವಿ ಕ್ಷೇತ್ರದಲ್ಲಿ ಸ್ಪರ್ಧೆ ಸೂಕ್ತವೇ?

ಪ್ರಜಾತಂತ್ರದಡಿ ಈ ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಒರ್ವ ಅಭ್ಯರ್ಥಿ ಎಷ್ಟು ಕ್ಷೇತ್ರಗಳಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದು ದೇಶದ ಪ್ರಜಾ ಪ್ರತಿನಿಧಿ ಕಾಯ್ದೆಯಲ್ಲಿ ಅಡಕವಾಗಿರುವ ನಿಯಮ.

ಇದು ಸಂವಿಧಾನಾತ್ಮಕ ಸೌಲಭ್ಯ ಎಂದು ಪರಿಗಣಿತವಾದರೂ ಇಂದಿನ ದುಬಾರಿ ದಿನಗಳಲ್ಲಿ ಒಬ್ಬ ನಾಯಕ ಎರಡೆರಡು ಕಡೆ ಚುನಾವಣೆಗೆ ಪೈಪೋಟಿ ನಡೆಸುವ ಸಂಪ್ರದಾಯವನ್ನು ಕೈಬಿಡುವುದೇ ಸೂಕ್ತ. ಸೋಲು ಅಥವಾ ಗೆಲುವು ಇದು ಯಾವುದಾದರೂ ಒಂದು ಕ್ಷೇತ್ರದಲ್ಲಿ ತೀರ್ಮಾನವಾದರೆ ಒಳಿತು. ಆದರೆ ಅಧಿಕಾರವನ್ನು ಬೆನ್ನುಹತ್ತುವ ದಿಸೆಯಿಂದ ನಾಯಕತ್ವದ ಮುಂಚೂಣಿಯಲ್ಲಿರುವ ಅಗ್ರ ನಾಯಕರು ಒಮ್ಮೊಮ್ಮೆ ತಮ್ಮ ಚುನಾವಣೆಯ ಭವಿಷ್ಯ ನಿರ್ಧರಿಸಿಕೊಳ್ಳಲು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಇಂದು ಪರಿಪಾಠವಾಗಿದೆ. ತುರ್ತು ಪರಿಸ್ಥಿತಿ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಯ್ ಬರೇಲಿ ಕ್ಷೇತ್ರದಲ್ಲಿ ಪರಾಜಯ ಕಂಡರು. ಪ್ರಾಯಶಃ ಇಂದಿರಾಗಾಂಧಿ ಅವರಿಗೆ ತಾವು ಈ ಕ್ಷೇತ್ರದಿಂದ ಸೋಲುವ ಅಪಾಯವಿದೆ ಎಂಬುದು ಚುನಾವಣೆಗೆ ಮುನ್ನವೇ ಗಮನಿಸಿದ್ದರೆ ಅವರು ಖಂಡಿತವಾಗಿಯೂ ದಕ್ಷಿಣ ಭಾರತದ ಕಾಂಗ್ರೆಸ್ ಭದ್ರಕೋಟೆಗಳ ಪೈಕಿ ಒಂದು ಕಡೆ ಪೈಪೋಟಿ  ನಡೆಸುತ್ತಿದ್ದರು. ಆದರೆ ಮಾಜಿ ಪ್ರಧಾನಿಗೆ ಜನತೆಯ ಒಲವು ತಮ್ಮ ಕಡೆಗಾಗಲಿ, ತಮ್ಮ ಪಕ್ಷದ ಕಡೆಯಾಗಲಿ ಇಲ್ಲ ಎಂಬುದು ಗೊತ್ತಾಗಿದ್ದು ಚುನಾವಣೆಯ ಫಲಿತಾಂಶ ಬಂದ ನಂತರವೇ! ಅದೇನೇ ಇರಲಿ. ಇಂದಿಗೂ ದೇಶದ ಕೆಲ ಅಗ್ರ ನಾಯಕರು ಎರಡು ಕ್ಷೇತ್ರಗಳತ್ತ ತಮ್ಮ ದೃಷ್ಟಿ ಇಟ್ಟಿರುವುದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ.

ತಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಪೂರ್ಣ  ಭರವಸೆ ಇಲ್ಲವೆಂದು ಕಂಗಾಲಾಗಿರುವ ನಾಯಕರ ಸಂಖ್ಯೆ ಇಂದು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಧಿಕವಾಗಿದೆ. ಬಹಳ ವರ್ಷಗಳಿಂದಲೂ ರಾಜಕೀಯವಾಗಿ ತಮ್ಮನ್ನು ಗುರುತಿಸಿಕೊಂಡ ನಾಯಕರಿಗೆ ಈಗ ಅನಿವಾರ್ಯವಾಗಿ ತವರು ನೆಲ ಬಿಟ್ಟು ಬೇರೆ ಕಡೆ  ಪೈಪೋಟಿ  ನಡೆಸುವಂತಹ ರಾಜಕೀಯ ಅನಿವಾರ್ಯತೆ ಕೂಡ ಉಂಟಾಗಿದೆ. ಆದರೆ ಈ ನಾಯಕರು ಕೊನೆ ಗಳಿಗೆಯವರೆಗೂ ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುವ ಪರಮ ರಹಸ್ಯವನ್ನು ಮಾತ್ರ ಲೋಕಕ್ಕೆ ಬಿಟ್ಟುಕೊಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಾದ ಮೈಸೂರಿನಲ್ಲಿಯೂ ಈ ಸಾರಿ ಪೈಪೋಟಿ ನಡೆಸುವ ಸ್ಥಿತಿಯಲ್ಲಿಲ್ಲ. ಹಾಗೆಯೇ ಕುರುಬ ಸಮುದಾಯವೇ ಅಧಿಕವಾಗಿರುವ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದಲೂ ಪೈಪೋಟಿಗಿಳಿಯುವುದು ಅನುಮಾನ. ಈಗ ಸಿದ್ದರಾಮಯ್ಯ ಅವರ ಅಷ್ಟೇ ಅಲ್ಲ ಗಡಿನಾಡಾದ ಕೋಲಾರದ ಕಡೆ ನೆಟ್ಟಿದೆ. ಅದೇನೇ ಇರಲಿ, ಸಿದ್ದರಾಮಯ್ಯನವರಂತಹ ಹಿರಿಯ ನಾಯಕರು ಯಾವುದಾದರೂ ಒಂದು ಕಡೆ ಸೆಣಸಾಡುವುದು ಸೂಕ್ತ. ನಾಯಕರೊಬ್ಬರ ಎರಡು ಕಡೆ ಪೈಪೋಟಿಯಿಂದ ಪ್ರಜಾತಂತ್ರಕ್ಕೆ ಒದಗುವ ಲಾಭಕ್ಕಿಂತ ನಷ್ಟವೇ ಅಧಿಕ. ಇದು ನಾಯಕನ ಸ್ವಹಿತಾಸಕ್ತಿಯನ್ನು ಕಾಪಾಡುವ ಮಾರ್ಗವೇ ವಿನಹ ಜನತೆಗೆ ಇದರಿಂದ ಯಾವ ಅನುಕೂಲವೂ ಇಲ್ಲ..

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿನಾಂಕ:೧೧-೧೧-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ