ದ್ವೀಪದ ಹಿಂದೆ ದೀಪವಿಲ್ಲ: ಖಾಸನೀಸರ ಕುರಿತೊಂದಿಷ್ಟು...

ದ್ವೀಪದ ಹಿಂದೆ ದೀಪವಿಲ್ಲ: ಖಾಸನೀಸರ ಕುರಿತೊಂದಿಷ್ಟು...

ಬರಹ

ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಸಾಗುತ್ತಾನೆ. ಇದು ಕತೆ- ಕನಸು- ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾಗಿದ್ದು ದಾರಿಯಲ್ಲಿ ಏನನ್ನೂ ಗುರುತಿಸಲಿಕ್ಕಾಗುವುದಿಲ್ಲ. ನಿರ್ಜನವಾದ ಈ ಪ್ರದೇಶದಲ್ಲಿ ತೆಳ್ಳಗಿನ ಹಿಮದ ಪದರಿನ ಮೇಲೆ ಕುದುರೆಯ ಖುರಪುಟದ ಸದ್ದೂ ಇಲ್ಲದೇ ಸಾಗಿರುವ ಈ ಕುದುರೆ ಸವಾರ ಕೊನೆಗೊಮ್ಮೆ ನೆರೆದಿದ್ದ ಜನರ ಚಿಕ್ಕ ಗುಂಪೊಂದನ್ನು ಗಮನಿಸಿ ಕುದುರೆಯನ್ನು ನಿಲ್ಲಿಸುತ್ತಾನೆ. ನೆರೆದಿದ್ದ ಜನ ಅವನನ್ನು ಸುತ್ತುಗಟ್ಟಿ, ತಬ್ಬಿಬ್ಬಾಗಿ ಒಬ್ಬ ಪವಾಡ ಪುರುಷನನ್ನು ನೋಡಿದಂತೆ ನೋಡುತ್ತಾರೆ. ತಾನು ಹುಡುಕುತ್ತಿರುವ ಸರೋವರವನ್ನು ಹೆಸರಿಸಿ `ಅದೆಲ್ಲಿ' ಎಂದು ಕೇಳುತ್ತಾನೆ. ನೆರೆದವರೆಲ್ಲಾ ಮೂಕವಿಸ್ಮಿತರಾದರು. ಅವರಲ್ಲೊಬ್ಬ ಹೇಳುತ್ತಾನೆ: `ನೀವು ಇದುವರೆಗೆ ಬಂದಿದ್ದೇ ಈ ಸರೋವರದ ಮೇಲಿಂದ. ಅದು ದಾರಿಯಲ್ಲ, ಮೇಲೆ ಕಾಣುವ ತೆಳ್ಳಗೆ ಹೆಪ್ಪುಗಟ್ಟಿದ ಹಿಮ'. ಅಶ್ವಾರೋಹಿ ಅವಾಕ್ಕಾದ. ತಾನು ಬಂದಿದ್ದು ನೀರಿನ ಮೇಲಿಂದ! ನಿಶ್ಚಿತವಾಗಿದ್ದ ಸಾವಿನ ಕಲ್ಪನೆಯನ್ನು ಅವನು ಸಹಿಸದಾದ. ಅದರಿಂದಾದ ಆಘಾತದಿಂದ ತತ್‌ಕ್ಷಣ ಅಲ್ಲಿಯೇ ಕುಸಿದು ಬಿದ್ದ.

(`ಅಶ್ವಾರೋಹಿ' ಕತೆಯಿಂದ)
***

ಅನಾದಿ ಕಾಲದಿಂದಲೂ ಮನುಷ್ಯನು ಪಾಪ ಪುಣ್ಯಗಳ ದಂತಕತೆಯಲ್ಲಿ ತೊಡಗಿದ್ದಾನೆ. ಪುಣ್ಯವು ಕಾಲಪ್ರವಾಹದಲ್ಲಿ ಮುಳುಗಿ ತಳ ಕಾಣುತ್ತದೆ. ಪಾಪ ಮಾತ್ರ ಅರೆ ಎದ್ದು ಜೊಂಡು- ಚಿಪ್ಪಿನಂತೆ ಚಿರಾಯುವಾಗಿ ಮೇಲೆ ತೇಲುತ್ತದೆ. ಮನುಷ್ಯ ಸಾಯುತ್ತಾನೆ. ಅವನ ಜತೆ ಪುಣ್ಯವೂ ಸಾಯುತ್ತದೆ. ಪಾಪದ ನೆನಪು ಮಾತ್ರ ಅವನು ಹೋದ ಮೇಲೂ ಅಜರಾಮರವಾಗಿ ಉಳಿದುಬಿಡುತ್ತದೆ.
...ಅವನು ಪಾಪಕ್ಕೆ ಬಲಿಯಾದ ಎಂದು ಹೇಳಿದರೆ ನಿನಗೇನು ತಿಳಿಯಬೇಕಾಗಿದೆ? ಅಲ್ಲದೇ ಪಾಪವೆಂದರೆ ನನಗಾದರೂ ಏನು ಗೊತ್ತು? ಆದರೆ ಇಷ್ಟು ಮಾತ್ರ ನನಗೆ ಚೆನ್ನಾಗಿ ಗೊತ್ತಿದೆ; ಪಾಪ ಭಯಾನಕವಿರುತ್ತದೆ. ಆದರ ತಿರುಗಣಿ ಮಡುವಿನಲ್ಲಿ ಸಿಕ್ಕ ಮನುಷ್ಯನಿಗೆ ಅದರಿಂದ ಮುಕ್ತಿಯಿಲ್ಲ. ಸುತ್ತಿಸುತ್ತಿ ಬಹಳ ವೇಗದಿಂದ ಅವನು ಅಧಃಪತನಕ್ಕಿಳಿಯುತ್ತಾನೆ.

(`ಅಲ್ಲಾವುದ್ದೀನನ ಅದ್ಭುತ ದೀಪ' ಕತೆಯಿಂದ)
***

ಸಾಂತಾಕ್ರೂಜ್‌ ಸ್ಟೇಷನ್ನಿನಲ್ಲಿ ತಾನೂ ಹಿಂದೊಮ್ಮೆ ಅಪಘಾತ ನೋಡಿದ್ದ. ಮಧ್ಯಾಹ್ನ ಪ್ಲಾಟ್‌ಫಾರ್ಮ್‌ ಮೇಲೆ ಬಂದಾಗ ಟೀಸ್ಟಾಲ್‌ ಎದುರಿಗೇ ಇದ್ದ ಎರಡು ಲೇನ್‌ಗಳ ಮಧ್ಯೆ ಅದು ಸಂಭವಿಸಿತ್ತು. ಫಿಶ್‌ಪ್ಲೇಟನ್ನು ಕೂಡಿಸಲು ಏರಿಸಿಟ್ಟ ಕಲ್ಲುಗುಂಪಿನ ಇಳಿಜಾರಿನ ಮೇಲೆ ದೇಹ ಬಿದ್ದಿತ್ತು. ...ಆ ಮುಖ ಅಕಸ್ಮಾತ್‌ ನನಗೆ ಪರಿಚಯವಿರಬಹುದೇ ಎನ್ನುವುದನ್ನು ನೋಡಲು ಪ್ಲಾಟ್‌ಫಾರ್ಮ್‌ ತುದಿವರೆಗೂ ಧಾವಿಸಿದ್ದೆ. ಆದರೆ ಮುಖ ಗುರುತಿನವರದಾಗಿರಲಿಲ್ಲ. ಅಲ್ಲಲ್ಲಿ ರಕ್ತವು ಕರಣಿ ಕರಣಿಯಾಗಿ ಹೆಪ್ಪುಗಟ್ಟಿ, ಮುಖವು ಜೇಡಿಮಣ್ಣಿನಲ್ಲಿ ಒತ್ತಿಟ್ಟ ಸದ್ದುಮುದ್ದಾದ ಮಣ್ಣಿನ ಗೊಂಬೆಯ ಮುಖದಂತೆ ಕಾಣಿಸುತ್ತಿತ್ತು. ಪೋರ್ಟರರಿಬ್ಬರೂ ಕಾಲುಗಳನ್ನೆಳೆದು ದೇಹವನ್ನೆತ್ತಲು ನೋಡಿದರು. ದೇಹವೆಳೆದಿದ್ದೇ ರುಂಡ ಬೇರೆಯಾಗಿ ಇಳಿಜಾರಿನ ಗುಂಟ ಉರುಳಿ ಕೆಳಗೆ ನಿಂತಿದ್ದ ಇನ್ನೊಬ್ಬ ಪೊಲೀಸನ ಕಾಲಿನ ಹತ್ತಿರ ಬಿತ್ತು.
...ಮುಂಬೈನ ಜೀವನದಲ್ಲಿ ಸಾವಿಗೆ ಏನೂ ಅರ್ಥವಿರಲಿಲ್ಲ. ಅದರ ಬಗ್ಗೆ ಯೋಚಿಸಲೂ ಅಲ್ಲಿ ಯಾರಿಗೂ ಪುರುಸೊತ್ತಿರುವುದಿಲ್ಲ. ಹಾಗೆ ನೋಡಿದರೆ ಬದುಕಿಗಾದರೂ ಏನು ಅರ್ಥ ಇದೆ ಅಲ್ಲಿ?

(`ಅಪಘಾತ' ಕತೆಯಿಂದ)
***

ಹೀಗೆ ಸಾವೋ, ಬದುಕೋ, ನಿಗೂಢವೋ, ಆಘಾತವೋ, ತಲ್ಲಣವೋ, ಪಾಪವೋ, ಪುಣ್ಯವೋ ಆಗಿ ತಮ್ಮನ್ನು ಕಾಡಿದ್ದನ್ನು ಆರ್ತವಾಗಿ ಬರೆದು ಓದುಗರನ್ನು ಕಾಡಿಸಿ, ಬಂದ ಗಮ್ಯಕ್ಕೇ ವಾಪಾಸಾಗಿದ್ದಾರೆ ಕತೆಗಾರ ರಾಘವೇಂದ್ರ ಖಾಸನೀಸ. `ಸಮಗ್ರ ಕತೆಗಳು' ಹೆಸರಲ್ಲಿ ಒಂಬತ್ತು ಕತೆಗಳು ಪ್ರಕಟವಾದರೂ ಇಪ್ಪತ್ತೈದು ಕತೆಗಳು ಪ್ರಕಟವೇ ಆಗಲಿಲ್ಲವಂತೆ ಎಂಬ ಸಾಹಿತ್ಯಿಕ ಊಹಾಪೋಹಗಳು ಖಾಸನೀಸರ ಬಗೆಗಿತ್ತು. ಅವರೊಬ್ಬ ಕಡುಮೌನಿ ಎಂಬ ಅಪವಾದವಿತ್ತು. ಗ್ರಂಥಪಾಲಕರಾಗಿದ್ದುಕೊಂಡು, ಸದ್ದುಗದ್ದಲವಿಲ್ಲದೇ ಕತೆಗಳನ್ನು ಬರೆದ ಬಗ್ಗೆ ಅಚ್ಚರಿಯಿತ್ತು. ಕಡೆಗಾಲದ ಅವರ ಅನಾರೋಗ್ಯ ಮತ್ತು ಇನ್ನಷ್ಟು ಕತೆ ಬರೆಯಬೇಕಿತ್ತೆಂಬ ಅವರ ಹಂಬಲ ಖಾಸನೀಸರ ಬಗೆಗಿನ ಮರುಕಕ್ಕೆ ಕಾರಣವಾಯಿತು.
ಅವರ ಜೀವನವನ್ನು ಹೊರತುಪಡಿಸಿದರೆ ಖಾಸನೀಸರ ಕತೆಗಳು ಒಂದು ಅದ್ಭುತ ದ್ವೀಪವೇ. ಅವರ ಕತೆಗಳನ್ನು ಓದುತ್ತಾ ಓದುತ್ತಾ ಒಂದು ಹಂತದಲ್ಲಿ ಪ್ರತಿ ಪಾತ್ರಗಳೂ ದ್ವೀಪದಂತೆ ಒಂಟಿಯಾಗಿ ಬಿಕ್ಕುತ್ತಿವೆಯೇನೋ ಎಂದು ಭಾಸವಾಗುತ್ತದೆ. ಇನ್ನೊಂದು ಹಂತದಲ್ಲಿ ಅಲ್ಲಾವುದ್ದೀನನ ದೀಪವನ್ನು ಮುಗ್ಧವಾಗಿ ಕಾಣುತ್ತಾ ಕುಳಿತುಬಿಡುವ ಮಗುವಾದಂತೆಯೂ ಓದುಗರಿಗೆ ಅನಿಸುತ್ತದೆ. ಆದರೆ ಬದುಕು ಮತ್ತು ಸಾವನ್ನು, ಪಾಪ ಮತ್ತು ಪುಣ್ಯವನ್ನು, ಬಯಲು ಮತ್ತು ನಿಗೂಢಗಳನ್ನು ಅವರು ತಾತ್ವಿಕವಾಗಿ ನೋಡಿದ ರೀತಿ ಅಸಾಧಾರಣವಾದುದು. ಕೇವಲ ಕೆಲವೇ ಕತೆಗಳಲ್ಲಿ, ವೈವಿಧ್ಯಮಯ ಪಾತ್ರಗಳಲ್ಲಿ, ನಮ್ಮನ್ನು ಕಂಗೆಡಿಸುವ ಸನ್ನಿವೇಶಗಳ ಮೂಲಕ ವಿಶ್ಲೇಷಿಸಿದ ರೀತಿ ನಿಜಕ್ಕೂ ಅದ್ಭುತ. ಅವರು ಮನುಷ್ಯನಿಗೆ ಮೀರಿದ `ಸ್ಥಿತಿ'ಯೊಂದನ್ನು, ಮಾನವ ಪ್ರಯತ್ನದಾಚೆಯೂ ಬೆಂಬಿಡದ ವೈಫಲ್ಯವನ್ನು ಗದ್ಗದಿತವಾಗಿ ನಿರೂಪಿಸಿದರು. ಹಾಗಾಗಿ ಸಿನಿಮಾಗಳ ವಿರಹ ಗೀತೆಗಳನ್ನು ಮತ್ತೆ ಮತ್ತೆ ಕೇಳುವಂತೆ ಅವರ ಕತೆಗಳನ್ನು ಮತ್ತೆ ಮತ್ತೆ ಓದೋಣ ಎನಿಸುತ್ತದೆ, ಯಾರಿಗೂ ತಿಳಿಯದಂತೆ ಕಣ್ಣೀರು ಒರೆಸಿಕೊಳ್ಳುತ್ತಾ.

ಸತ್ಯಬೋಧ ಎಂಬ ಕಕ್ಕನನ್ನು ಹುಡುಕಿಕೊಂಡು ಮುಂಬೈಗೆ ಬರುವ ವಾಸು `ಅಲ್ಲಾವುದ್ದೀನನ ಅದ್ಭುತ ದೀಪ'ದ ಒಂಟಿಜೀವಿ. ತಾನು ಸಣ್ಣವನಿರುವಾಗಲೇ ಮನೆಬಿಟ್ಟು ಓಡಿ ಬಂದಿರುವ ಕಕ್ಕನನ್ನು ಹುಡುಕಲು ಅವನ ಬಳಿ ಸರಿಯಾದ ವಿಳಾಸವಿಲ್ಲ. ಆದರೆ ಅವನ ಪಾಪ, ಪುಣ್ಯಗಳ ಬಗ್ಗೆ ಊರಲ್ಲಿ ಹರಡಿ, ಹೆಪ್ಪುಗಟ್ಟಿರುವ `ವಿಳಾಸ' ಮಾತ್ರ ಬಾಲ್ಯದಿಂದಲೂ ಅವನ ಬಳಿಯೇ ಜೋಪಾನವಾಗಿದೆ. ಆತ ಸಿಕ್ಕರೆ ಮಾತ್ರ ಸತ್ಯಬೋಧನ ಜೀವನದಲ್ಲಿ ನಡೆದದ್ದು ಪಾಪವೋ ಪುಣ್ಯವೋ ಎಂದು ತಿಳಿಯುತ್ತದೆ. ಆದರೆ ಅವನು ಸಿಕ್ಕುವುದೇ ಇಲ್ಲ ಎಂಬ ಸನ್ನಿವೇಶವನ್ನು ಸೃಷ್ಟಿಸುವ ಮೂಲಕ ಮನುಷ್ಯನ ಸ್ವರೂಪದಾಚೆಯ ನಿಗೂಢಗಳ ಅರ್ಥಪೂರ್ಣ ವ್ಯಾಖ್ಯೆಯನ್ನು ಖಾಸನೀಸರು ಕೊಡುತ್ತಾರೆ.

ಇದೇ ಥರದ ಪಾಪ, ಪುಣ್ಯಗಳನ್ನು `ಅಶ್ವಾರೋಹಿ'ಯಲ್ಲೂ ಕೊಡುತ್ತಾರೆ. ಅದರ ಜತೆ ಮನುಷ್ಯ ಸಂಬಂಧಗಳ ಅಸ್ಥಿರತೆ ಮತ್ತು ಕಾಲಾಂತರಗಳಲ್ಲಿ ಒಂದು ಸಂಬಂಧ ತಾನೇ ತಾನಾಗಿ ಮರುರಚನೆಯಾಗುವ `ಸಹಜತೆ'ಯನ್ನು ಆ ಕತೆಯಲ್ಲಿ ಅವರು ವಿಶ್ಲೇಷಿಸುತ್ತಾರೆ. ಅವರ `ತಬ್ಬಲಿಗಳು' ಮತ್ತು `ಮೋನಾಲೀಸ' ಕಥಾ ಪ್ರಪಂಚದಲ್ಲಿ ಅದ್ಭುತ ಸ್ಥಾನ ಪಡೆದುಕೊಂಡಿತಾದರೂ ಅಷ್ಟೇ ಒಳ್ಳೆಯ ಕತೆಗಳು ಅವರ ಸಂಕಲನದಲ್ಲಿ ಇವೆ. ಆದರೆ ಕ್ಲಾಸಿಕ್‌ ಎಂದು `ಬಿಂಬಿಸುವ' ವಿಮರ್ಶಕರ ಅವಸರಿಕೆಯಲ್ಲಿ ಒಬ್ಬ ಬರಹಗಾರನ ಕೆಲವೇ ಕೃತಿಗಳಿಗೆ `ಅಜರಾಮರ್ವ' ಪ್ರಾಪ್ತಿಯಾಗಿಬಿಡುತ್ತದೆ.

ಖಾಸನೀಸರು ಕಡಿಮೆ ಬರೆದು ಉಳಿದುಕೊಂಡರು. ಕಡಿಮೆ ಬರೆದ ಜಿಎಸ್‌ ಸದಾಶಿವ, ಯರ್ಮುಂಜೆ ರಾಮಚಂದ್ರ, ಬಾಗಿಲೋಡಿ ದೇವರಾಯರು ಇಂದಿಗೂ ಅಮರರಾದ ಹಾಗೆ. ಹಾಗಂತ ಅವರ ಪ್ರತಿ ಕತೆಗಳ ವಿಸ್ತೀರ್ಣ ಸುದೀರ್ಘ. ತಮ್ಮ ಕೇಂದ್ರಪಾತ್ರ ಎಲ್ಲೆಲ್ಲಿ ಹೋಗುತ್ತದೋ ಅಲ್ಲೆಲ್ಲಾ ಆ ಪಾತ್ರಕ್ಕೆ ಯಾರ್ಯಾರೋ ಸಿಗುತ್ತಾರೆ, ಯಾರ್ಯಾರ ಕಣ್ಣಲ್ಲಿ ಮತ್ಯಾರೋ ಕಾಣುತ್ತಾರೆ, ಕಂಡವರು ಆ ಪಾತ್ರಕ್ಕೆ ಯಾವ ಸತ್ಯವನ್ನೋ ಸಾಕ್ಷಾತ್ಕಾರಗೊಳಿಸುತ್ತಾರೆ. ಆ ಕತೆ ಕೊನೆಗೊಳ್ಳುವಾಗ ಕೇಂದ್ರ ಪಾತ್ರ ಒಂದೋ ಎಲ್ಲವನ್ನೂ ಗಳಿಸಿಕೊಂಡಿರುತ್ತದೆ, ಇಲ್ಲವೇ ಗಳಿಸಿಕೊಂಡಿದ್ದನ್ನೆಲ್ಲಾ ಕಳೆದುಕೊಂಡಿರುತ್ತದೆ.

ದ್ವೀಪವೆಂದರೆ ಅಗಮ್ಯ. ದೂರದಲ್ಲಿ ಕಂಡಾಗ ಅದರಲ್ಲಿ ಯಾರಾದರೂ ವಾಸವಾಗಿರಬಹುದೆಂಬ ಕುತೂಹಲ, ನಿರೀಕ್ಷೆಗಳಿರುತ್ತವೆ. ಖಾಸನೀಸರೆಂಬ `ದ್ವೀಪ' ಅನಾರೋಗ್ಯದಿಂದ ನರಳುತ್ತಿದ್ದರೂ ಎಂದಾದರೂ, ಏನಾದರೂ ಬರೆದಾರೆಂಬ ಆಸೆ ಇತ್ತು. ಈಗ ಆ ದ್ವೀಪವೂ ಮಾಯವಾಗಿದೆ, ದ್ವೀಪದ ಹಿಂದಿನ ದೀಪ ಆರಿಹೋಗಿದೆ. ಇನ್ನು ಯಾವ ಕುತೂಹಲಕ್ಕೆ ಕಾಯುವುದು?

-ವಿಕಾಸ ನೇಗಿಲೋಣಿ