ದ್ವೀಪವ ಬಯಸಿ
ಶ್ರೀಕಾಂತ ಮತ್ತು ವಾಣಿ ದೊಡ್ಡ ಕನಸು ಹೊತ್ತು, ಸಿಂಗಪೂರ ಹಾದು, ಅಮೇರಿಕಾದ ಲಾಸ್ ಏಂಜಲಿಸ್ ಇಂಟರ್-ನ್ಯಾಷನಲ್ ಏರ್-ಪೋರ್ಟ್ ತಲಪುವ ಸನ್ನಿವೇಶದೊಂದಿಗೆ ಕಾದಂಬರಿ ಶುರು. ಅವರು ಸಿಂಗಪೂರ ಏರ್-ಪೋರ್ಟಿನಲ್ಲೇ ಎರಡು ದಿನ ಕಳೆಯಬೇಕಾಯಿತು. ಯಾಕೆಂದರೆ, ಅವರು ಸಿಂಗಪೂರ ತಲಪಿದ ದಿನವೇ, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಎರಡೂ ಗಗನಚುಂಬಿ ಕಟ್ಟಡಗಳನ್ನು (ಅಪಹರಿಸಿದ ವಿಮಾನಗಳನ್ನು ಅವಕ್ಕೆ ಅಪ್ಪಳಿಸುವ ಮೂಲಕ) ಭಯೋತ್ಪಾದಕರು ಧ್ವಂಸ ಮಾಡಿದ್ದರು. ಅದರಲ್ಲೊಂದು ವಿಮಾನ ಇವರು ಪ್ರಯಾಣಿಸಬೇಕೆಂದಿದ್ದ, ಆದರೆ ಕೊನೆಯ ಕ್ಷಣದಲ್ಲಿ ಹೊಸ ಪ್ರಯಾಣದ ಪ್ಲಾನ್ ಅನುಸಾರ ಕೈಬಿಟ್ಟಿದ್ದ ವಿಮಾನ! ಆ ಸಂಗತಿ ತಿಳಿದಾಗ ಇಬ್ಬರಿಗೂ ಜೀವ ಬಾಯಿಗೆ ಬಂದಿತ್ತು.
ಅನಂತರ, ಲಾಸ್ ಏಂಜಲಿಸಿನ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡ ಶ್ರೀಕಾಂತ. ಹೊಸ ದೇಶ, ಹೊಸ ಊರು, ಹೊಸ ಕಂಪೆನಿ, ಹೊಸ ಉದ್ಯೋಗ - ಎಲ್ಲವೂ ಹೊಸತು. ಅಲ್ಲಿನ ಬದುಕಿನ ಪ್ರವಾಹದಲ್ಲಿ ಕೊಚ್ಚಿ ಹೋಗತೊಡಗಿದ. ಭಾರತದಲ್ಲೇ ಬದುಕಿ ಬಾಳುವವರು ಕನಸಿನಲ್ಲಿಯೂ ಕಲ್ಪಿಸಲಾಗದ ಸನ್ನಿವೇಶಗಳು ಅಲ್ಲಿ ಆಗಾಗ ಎದುರಾಗುತ್ತಿದ್ದವು. ಆ ಎಲ್ಲ ಸನ್ನಿವೇಶಗಳಲ್ಲಿ ನುಗ್ಗಿ ಬರುವ ತಲ್ಲಣಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಕಾದಂಬರಿಕಾರರು. ಇದೆಲ್ಲದರ ಜೊತೆಗೆ, ಕಥಾನಾಯಕ ಭಾರತದಲ್ಲಿದ್ದಾಗ ನಡೆದ ಘಟನಾವಳಿಗಳು ಹಾಸುಹೊಕ್ಕಾಗಿ ಕಾದಂಬರಿ ಬೆಳೆಯುತ್ತದೆ.
ಕೊನೆಗೆ, ಶ್ರೀಕಾಂತ ಅಲ್ಲಿನ ಉದ್ಯೋಗ ತೊರೆದು, ಭಾರತಕ್ಕೆ ಮರಳಲು ನಿರ್ಧರಿಸುತ್ತಾನೆ. ಅಲ್ಲಿನ ಬಾಡಿಗೆ ಮನೆಯಲ್ಲಿದ್ದ ಹಲವಾರು ಸೊತ್ತುಗಳನ್ನು ದಾನವಿತ್ತು, ಕಾರನ್ನು ಮಾರಿ ಅಮೇರಿಕಾ ತೊರೆಯುತ್ತಾನೆ. ಇವರು ಲಾಸ್ ಏಂಜಲಿಸ್ ತೊರೆಯುವ ಸಂದರ್ಭದಲ್ಲಿ ಅಲ್ಲಿ ಇನ್ನೊಂದು ಅನಾಹುತ ಘಟಿಸಿತು. ಪೂರ್ವದ ಮೊಹಾವಿ ಮರುಭೂಮಿಯಿಂದ ಪಶ್ಚಿಮದ ಶಾಂತ ಸಾಗರದೆಡೆಗೆ ಬೀಸಿ ಬರುವ “ಸಾಂಟಾ ಆಣಾ” ಎಂದು ಕರೆಸಿಕೊಳ್ಳುವ ಬಿರುಗಾಳಿ ಅಲ್ಲಿ ಬೆಂಕಿ ಎಬ್ಬಿಸಿತು. ಆಕಾಶದೆತ್ತರದ ಜ್ವಾಲೆಗಳಲ್ಲಿ ಎಲ್ಲವೂ ಸುಟ್ಟು ಕರಲಾಗುತ್ತಿದ್ದಂತೆ, ಮಹಾನಗರದಲ್ಲಿ ಸಹಿಸಲಾಗದ ಧಗೆ, ಎಲ್ಲಿಕಂಡರಲ್ಲಿ ಬೂದಿ. ಎರಡು ದಿನರಾತ್ರಿ ಧಗಧಗಿಸಿದ ಕಾಡುಬೆಂಕಿಗೆ ಬೆಂದುಹೋಯಿತು ಆ ಮಹಾನಗರ. ಯಾರು ಏನೇ ಪ್ರಯತ್ನ ಮಾಡಿದರೂ ನಿಯಂತ್ರಿಸಲಾಗದ ಬೆಂಕಿ, ಕೊನೆಗೆ ಸಣ್ಣ ಮಳೆ ಬಂದಾಗ ನಂದಿ ಹೋಯಿತು!
ಕಾದಂಬರಿಗೆ ಕನ್ನಡದ ಹೆಸರಾಂತ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ಬರೆದ ಬೆನ್ನುಡಿಯ ಆಯ್ದ ಭಾಗ ಹೀಗಿದೆ: “ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಊಂಟಾಗಿರುವ ಹೊಸ ಕಾಲಮಾನದ ಪ್ರಭಾವಗಳು, ಐಟಿ ಬೀಟಿ ಕ್ಷೇತ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ, ವಲಸೆಗೆ ಒತ್ತಾಯಿಸುವ ಬೀಸುಗಾಳಿಯ ಶಕ್ತಿ - ಸೂಕ್ಷ್ಮಸಂವೇದಿಗಳಾದ ನಮ್ಮ ತರುಣ ಜನಾಂಗದ ಮೇಲೆ ಯಾವ ಬಗೆಯ ಒತ್ತಡ ತರಬಲ್ಲವೆಂಬುದರ ಹೃದಯವೇಧಕ ಚಿತ್ರ ಎಂ. ಆರ್. ದತ್ತಾತ್ರಿಯವರ "ದ್ವೀಪವ ಬಯಸಿ” ಕಾದಂಬರಿಯಲ್ಲಿದೆ. ಇಲ್ಲಿನದು ಒಂದು ವಿಸ್ತೃತವಾದ ಪರಿಪ್ರೇಕ್ಷ್ಯ. ಭಾರತದಿಂದ ಅಮೆರಿಕೆಗೆ, ಅಮೆರಿಕೆಯಿಂದ ಭಾರತಕ್ಕೆ ತುಯ್ಯುವ ಕಥಾನಕವು ಈ ವಿರುದ್ಧ ಚಲನೆಗಳಿಂದಲೇ ಕರ್ಷಣದ್ರವ್ಯವನ್ನು ಪಡೆಯುತ್ತದೆ. ಶ್ರೀಕಾಂತ, ವಾಣಿ ಈ ಕರ್ಷಣೆಯ ಪ್ರಜ್ನಾಕೇಂದ್ರಗಳಾಗಿದ್ದಾರೆ. ಅವರ ಅನುಭವವನ್ನು ಶೋಧಿಸುವಲ್ಲಿ ಬಳಸಲಾಗುವ ಪಾತ್ರ ಮತ್ತು ಘಟನೆಗಳ ಪ್ರತಿಮಾ-ಸಮೂಹವು ಬೆರಗು ಪಡಿಸುವಷ್ಟು ಧ್ವನಿಪೂರ್ಣವಾಗಿದೆ. ..... ಇಡೀ ಕಾದಂಬರಿ ಧ್ವನಿಪೂರ್ಣಚಿತ್ರಿಕೆಗಳ ಮೂಲಕ ಮಾತಾಡುತ್ತದೆ. ಈ ಎಲ್ಲ ಚಿತ್ರಗಳು ಒಗ್ಗೂಡಿ ಕಟ್ಟುವ ಕಥಾನಕ ಮನಸ್ಸನ್ನು ತಲ್ಲಣಗೊಳಿಸುವಷ್ಟು ಪ್ರಭಾವಶಾಲಿಯಾಗಿ ಬಂದಿದೆ. ….."